Advertisement
ಗೇರುಕಟ್ಟೆಯ ಸ್ವರ್ಣಶಿಲ್ಪಿ ಮೋನಪ್ಪ ಆಚಾರ್ಯ-ವಾರಿಜಾ ದಂಪತಿಯ ಪುತ್ರರಾಗಿ 1952ರಲ್ಲಿ ಜನಿಸಿದ ಉಮೇಶ ಆಚಾರ್ಯರು ಬಿ.ಎ ಪದವಿಯ ಬಳಿಕ ಸರಕಾರಿ ನೌಕರಿಗೆ ಸೇರಿದ್ದರು. ತಂದೆ ಯಕ್ಷಗಾನ ಕಲಾವಿದರಾಗಿದ್ದು ಇವರಲ್ಲಿ ಯಕ್ಷಗಾನದ ಬಗ್ಗೆ ಆಸಕ್ತಿಯನ್ನು ಮೂಡಿಸಿತ್ತು.
Related Articles
Advertisement
ಯಕ್ಷಗಾನ ರಸಋಷಿ ದಿ| ಅರ್ಕುಳ ಸುಬ್ರಾಯ ಆಚಾರ್ಯ ಶತಮಾನೋತ್ಸವ ಸ್ಮಾರಕ ಸಮಿತಿಯ ಕಾರ್ಯದರ್ಶಿ, “ಸ್ವರ್ಣಕಮಲ’ ಸಂಸ್ಮರಣಾ ಗ್ರಂಥದ ಸಂಪಾದಕ ಸಮಿತಿಯ ಸದಸ್ಯರಾಗಿ ಕ್ಷೇತ್ರ ಕಾರ್ಯವನ್ನು ನಡೆಸಿ ಅಮೂಲ್ಯ ದಾಖಲೆಗಳನ್ನು ಸಂಗ್ರಹಿಸಿದಲ್ಲದೆ ಅರ್ಕುಳ ಸುಬ್ರಾಯ ಆಚಾರ್ಯರು ಬರೆದ ಯಕ್ಷಗಾನ ಸಾಹಿತ್ಯದ ಮೊದಲ ಅರ್ಥಸಹಿತ ಕೃತಿ “ಶ್ರೀಕೃಷ್ಣ ಸಂಧಾನ’ವನ್ನು 1988ರಲ್ಲಿ ಮರು ಮುದ್ರಣಗೊಳಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.
ಶೇಣಿ ಸಹಸ್ರಚಂದ್ರ ದರ್ಶನ ಸಮಿತಿಯ ಸದಸ್ಯರಾಗಿ ಕಾರ್ಯನಿರ್ವಹಿಸಿದ ಇವರು ಯಕ್ಷಗಾನದ ಸ್ಮರಣ ಸಂಚಿಕೆ, ಅಭಿನಂದನಾ ಗ್ರಂಥಗಳಲ್ಲಿ ಲೇಖನಗಳನ್ನು ಬರೆದಿರುತ್ತಾರೆ. ಅರ್ಕುಳ ಸುಬ್ರಾಯ ಆಚಾರ್ಯರ ಜೀವನ ಚರಿತ್ರೆಯ ಬಗ್ಗೆ ಇವರು ಬರೆದ “ಯಕ್ಷಗಾನ ಆಚಾರ್ಯ’ ಕೃತಿಯು 2015ರಲ್ಲಿ ಕಾಂತಾವರದ ಕನ್ನಡ ಸಂಘದಿಂದ ಪ್ರಕಟವಾಗಿದೆ. ಮುಖ್ಯವಾಗಿ ಸ್ತ್ರೀಪಾತ್ರ ನಿರ್ವಹಣೆಯಲ್ಲಿ ಇವರ ಪ್ರತಿಭೆ ಅನನ್ಯವಾದುದು. ಪ್ರಭಾವತಿ, ದೇವಯಾನಿ, ಸೀತೆ, ಅಹಲೆ, ದ್ರೌಪದಿ ಅಲ್ಲದೆ ಶ್ರೀರಾಮ, ಕೃಷ್ಣ, ವಿದುರ, ನಾರದ, ಧರ್ಮರಾಯ, ಹನುಮಂತ ಮುಂತಾದ ಪಾತ್ರಗಳನ್ನು ನಿರ್ವಹಿಸಿದ್ದಾರೆ.
ಕೆ. ಗೋವಿಂದ ಭಟ್ಟರ ಮಾತುಗಾರಿಕೆಯಿಂದ ಪ್ರಭಾವಿತರಾಗಿರುವ ಇವರು ಶೇಣಿ, ಕುಂಬ್ಳೆ, ಜೋಶಿ, ಮಾರೂರು, ಸಿದ್ದಕಟ್ಟೆ, ಅಶೋಕ ಭಟ್, ಕುಕ್ಕುವಳ್ಳಿ, ಪೆರ್ಮುದೆ ಮೊದಲಾದವರೊಂದಿಗೆ ತಾಳಮದ್ದಳೆ ಮತ್ತು ಧ್ವನಿ ಸುರುಳಿಗಳಲ್ಲಿ ಭಾಗವಹಿಸಿದ್ದಾರೆ. ಸರಕಾರಿ ಸೇವೆಯಿಂದ 2012ರಲ್ಲಿ ನಿವೃತ್ತಿ ಹೊಂದಿದ ಇವರು ಪ್ರಸ್ತುತ ಕಾವೂರಿನಲ್ಲಿ ನೆಲೆಸಿದ್ದಾರೆ. ದಿವಾಕರ ಆಚಾರ್ಯ