Advertisement

ಉಮಾಲಯಪುರಂ ಶಿವರಾಮನ್‌ ಕೈಚಳಕ; ಬೆರಗು ಮೂಡಿಸುವ ಮಾಂತ್ರಿಕ

04:54 PM Dec 09, 2018 | |

ಗಂಭೀರ ಸ್ವರೂಪದ ದೈತ್ಯ ಪ್ರತಿಭೆ, ಎದುರು ಮೃದಂಗ ಇಟ್ಟು ಬೆರಳುಗಳ ಸಂಚಾರ ಆರಂಭಿಸಿತು ಎಂದರೆ ಪ್ರೇಕ್ಷಕರೆಲ್ಲ ಮಂತ್ರ ಮುಗ್ಧ, ಸಹ ಕಲಾವಿದರೂ ಹೊಸ ಲೋಕಕ್ಕೆ ಸಾಗುವುದರಲ್ಲಿ ಎರಡು ಮಾತಿಲ್ಲ. ಹೌದು ನಾವು ಹೇಳ ಹೊರಟಿರುವುದು ಕರ್ನಾಟಕ ಸಂಗೀತ ಕ್ಷೇತ್ರದ ಪ್ರಸಿದ್ಧ ಮೃದಂಗ ವಾದಕ ಡಾ.ಉಮಾಲಯಪುರಂ ಕಾಶಿ ವಿಶ್ವನಾಥ ಶಿವರಾಮನ್‌ ಅವರ ಕುರಿತಾಗಿ.

Advertisement

1935 ರಲ್ಲಿ  ತಮಿಳುನಾಡಿನ ಉಮಾಲಯಪುರಂನಲ್ಲಿ  ವೃತ್ತಿಯಲ್ಲಿ ವೈದ್ಯರಾಗಿದ್ದ ಕಾಶಿ ವಿಶ್ವನಾಥ ಐಯರ್‌ ಮತ್ತು ಕಮಲಾಬಾಯಿ ಅವರ ಪುತ್ರನಾಗಿ ಜನಸಿದ ಶಿವರಾಮನ್‌ ಅವರು ಬಿ.ಎ.ಬಿ.ಎಲ್‌ ಶಿಕ್ಷಣ ಪಡೆದು ದೊಡ್ಡ ಅಧಿಕಾರಿಯಾಗಬಹುದಿತ್ತು. ಆದರೆ ಸಂಗೀತ ಕ್ಷೇತ್ರದ ಅವರ ಆಸಕ್ತಿಗೆ ತಂದೆ ನೀರೆರದು ಪೋಷಿಸಿದರು. ಕಲಾ ಬದುಕಿಗೆ ಧುಮುಕಲು ಸಂಪೂರ್ಣ ಸಹಕಾರ ನೀಡಿದ್ದರಂತೆ.

ತನ್ನ ಚುರುಕಿನ ಕೈ ಬೆರಳುಗಳ ಸಂಚಾರದಲ್ಲಿ  ದೇಶಾದ್ಯಂತ ಅಪಾರ ಸಂಗೀತ ಪ್ರೇಮಿಗಳನ್ನು ರಂಜಿಸಿರುವ ಶಿವರಾಮನ್‌ ಅವರು 82 ರ ಹರೆಯದಲ್ಲೂ ಉತ್ಸಾಹಿಯಾಗಿ ಮೃದಂಗವನ್ನು ಬಾರಿಸಿ ಯುವಕರನ್ನೂ ನಾಚಿಸುತ್ತಾರೆ.

Advertisement

ದಿಗ್ಗಜ ಕರ್ನಾಟಕ ಮೃದಂಗವಾದಕರಾದ ಆರುಪತಿ ನಟೇಶ ಐಯ್ಯರ್‌, ತಂಜಾವೂರು ವೈದ್ಯನಾಥ ಐಯ್ಯರ್‌, ಪಾಲ್ಘಾಟ್‌ ಮಣಿ ಐಯ್ಯರ್‌ ಮತ್ತು ಕುಂಭಕೋಣಂ ರಂಗು ಐಯ್ಯಂಗಾರ್‌ ಅವರಿಂದ ವಾದನ ವಿದ್ಯೆಯನ್ನು ಕಲಿತರು.  

ಕರ್ನಾಟಕ ಮತ್ತು ಹಿಂದುಸ್ಥಾನಿ ಸಂಗೀತ ಲೋಕದ ದಿಗ್ಗಜ ಕಲಾವಿದರಾದ ಅರಿಯಾಕುಡಿ ರಾಮಾನುಜ ಐಯ್ಯಂಗಾರ್‌, ಮುಸಿರಿ ಸುಬ್ರಹ್ಮಣ್ಯ ಐಯರ್‌, ಪಲ್ಲಾದಮ್‌ ಸಂಜೀವ ರಾವ್‌, ಮೈಸೂರು ಚೌಡಯ್ಯ, ರಾಜಮಾಣಿಕ್ಯಂ ಪಿಳೈ, ಪಾಪ ವೆಂಕಟರಮಣಯ್ಯ, ದ್ವಾರಂ ವೆಂಕಟಸ್ವಾಮಿ ನಾಯ್ಡು , ಮುಡಿಕೊಂಡನ್‌ ವೆಂಕಟರಮಣ ನಾಯ್ಡು, ಜಿ.ಎನ್‌.ಬಾಲಸುಬ್ರಹ್ಮ ಣ್ಯಂ , ಮಧುರೈ ಮಣಿ ಐಯ್ಯರ್‌, ಮಹಾರಾಜಾಪುರ ವಿಶ್ವನಾಥ ಐಯ್ಯರ್‌, ಅಲತ್ತೂರು ಸಹೋದರರು, ಚೆಂಬೈ ವೈದ್ಯನಾಥ ಭಾಗವತರ್‌, ಡಾ.ಸೆಮ್ಮನ್‌ಗುಂಡಿ ಶ್ರೀನಿವಾಸ ಐಯ್ಯರ್‌, ಡಾ.ಎಂ. ಬಾಲಮುರಳಿ ಕೃಷ್ಣ , ನೆಡುನೂರಿ ಕೃಷ್ಣಮೂರ್ತಿ, ಎಸ್‌.ಬಾಲಚಂದರ್‌, ಟಿ.ಆರ್‌.ಮಹಾಲಿಂಗಂ ಅವರೊಂದಿಗೆ ಪಕವಾದ್ಯದಲ್ಲಿ ಕಾಣಿಸಿಕೊಂಡು ಖ್ಯಾತಿಯ ಉತ್ತುಂಗಕ್ಕೇರಿದವರು. 

ಚುರುಕಿನ ಗತಿಯಲ್ಲಿ  ಯಾರೂ ಬೆನ್ನಟ್ಟಲು ಸಾಧ್ಯವಿಲ್ಲದ ಶಿವರಾಮನ್‌ ಅವರು ತನ್ನದೆ ಆದ ಹೊಸ ಕೊಡುಗೆಗಳ ಮೂಲಕವೂ ಗಮನ ಸೆಳೆದವರು. ಹಲವು ಖ್ಯಾತ ತಬಲಾ ವಾದಕರು, ಘಟವಾದಕರೊಂದಿಗೆ ಇವರ ಜುಗಲ್‌ ಬಂದಿ ಅಪಾರ ಜನರನ್ನು ಹುಚ್ಚೆಬ್ಬಿಸುವಂತೆ ಮಾಡಿದೆ. 

1988 ರಲ್ಲಿ ಪದ್ಮಶ್ರೀ ,2003ರಲ್ಲಿ ಪದ್ಮ ಭೂಷಣ,  ಕೇಂದ್ರ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ, ಕಲೈಮಾಮಣಿ ಬಿರುದು, ಕಂಚಿ ಶಂಕರ ಮಠದ ಆಸ್ಥಾನ ವಿದ್ವಾನ್‌ ಬಿರುದು, ಶೃಂಗೇರಿ ಮಠದಿಂದ ಮೃದಂಗ ಕಲಾನಿಧಿ , ಲಯ ಜ್ಯೋತಿ, ಲಯ ಜ್ಞಾನ ಭಾಸ್ಕರ , ಸಂಗೀತ ಕಲಾ ಶಿಖಾಮಣಿ, ಮೃದಂಗ ನಾದಮಣಿ ಮೊದಲಾದ ಬಿರುದುಗಳೊಂದಿಗೆ ಸಾವಿರಾರು ಸನ್ಮಾನಗಳು ಸಂದಿವೆ. 

ಸಾಧನೆಯ ಶಿಖರವೇರಿದ ಶಿವರಾಮನ್‌ ಅವರಿಗೆ 2010 ರ ಜನವರಿ 26 ರ ಗಣರಾಜ್ಯೋತ್ಸವದಂದು ಉನ್ನತ ಪ್ರಶಸ್ತಿಯಾಗಿರುವ ಪದ್ಮವಿಭೂಷಣ ನೀಡಿ ಪುರಸ್ಕರಿಸಲಾಗಿದೆ. ಕೇರಳ ವಿಶ್ವವಿದ್ಯಾಲಯ 2010 ರಲ್ಲಿ ಗೌರವ ಡಾಕ್ಟರೇಟ್‌ ನೀಡಿ ಪುರಸ್ಕರಿಸಿದೆ.

ದೇಶಾದ್ಯಂತ ಸಾವಿರಾರು ಕಾಯಕ್ರಮಗಳ ಮೂಲಕ ಕೋಟ್ಯಂತರ ಜನರನ್ನು ಮಂತ್ರ ಮುಗ್ಧಗೊಳಿಸಿರುವ ಶಿವರಾಮನ್‌ ಅವರು ಬೋಧನಾ ಪ್ರವೀಣರೂ ಆಗಿದ್ದಾರೆ. ಇಳಿ ವಯಸ್ಸಿನಲ್ಲಿ ಯುವಕನಂತೆ ಉತ್ಸಾಹ ಹೊಂದಿರುವ ಅವರು  ನೂರಾರು ವಿದ್ಯಾರ್ಥಿಗಳಿಗೆ ತಮ್ಮಲ್ಲಿರುವ ವಿದ್ಯೆಯನ್ನು ನಿರ್ವಂಚನೆಯಿಂದ ದಾನ ಮಾಡುತ್ತಿದ್ದಾರೆ. 

ಶಿವರಾಮನ್‌ ಅವರ ಕಲಾ ಸೇವೆ ಇನ್ನಷ್ಟು ಕಾಲ ಮುಂದುವರಿಯಲಿ, ಸಂಗೀತ ಕ್ಷೇತ್ರದ ಲಯ ಲೋಕ ಇನ್ನಷ್ಟು ಶ್ರೀಮಂತಗೊಳ್ಳಲಿ ಎನ್ನುವುದು ಆಶಯ.

ಶಿವರಾಮನ್‌ ಹೆಸರನ್ನು “ಉಮಾಲಯಪುರಂ ಶಿವರಾಮನ್‌’ ಎಂಬುದಾಗಿ ಬರೆಯಲಾಗುತ್ತದೆ. ವಾಸ್ತವವಾಗಿ “ಉಮಾಲಯಪುರಂ’ ಎಂಬುದೇ ಸರಿ. “ಉಮಾಲಯಪುರಂ’ ಎಂಬುದು ತಮಿಳಿನಲ್ಲಿ “ಉಮೈ ಆಲಯಪುರಂ’ ಆಗಿ ಅನಂತರ “ಉಮಯಾಲಪುರಂ’ ಎಂದು ರೂಪಾಂತರಗೊಂಡಿತು. ಈಗ ಅದನ್ನು ಸರಿಯಾಗಿ ಬರೆದರೆ ತಪ್ಪು ಎಂದು ತಿಳಿಯುವವರಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next