ಉಳ್ಳಾಲ: ಉಳ್ಳಾಲ ತಾಲೂಕು ತಹಶೀಲ್ದಾರ್ ಚಾಲಕ, ಸಜೀಪ ದೇರಾಜೆ ನಿವಾಸಿ ಕಿಶೋರ್ ಪೂಜಾರಿ (42) ಅವರು ಶನಿವಾರ ದೇರಳಕಟ್ಟೆಯ ಖಾಸಗಿ ಆಸ್ಪತ್ರೆಯಲ್ಲಿ ಶಂಕಿತ ಇಲಿ ಜ್ವರಕ್ಕೆ ಮೃತಪಟ್ಟಿದ್ದಾರೆ.
ನ. 3ರ ವರೆಗೂ ಉಳ್ಳಾಲ ತಾಲೂಕು ತಹಶೀಲ್ದಾರ್ ಪುಟ್ಟರಾಜು ಅವರ ವಾಹನ ಚಲಾಯಿಸಿದ್ದ ಕಿಶೋರ್ ಅವರು ನ. 4ರಂದು ತೀವ್ರ ಜ್ವರ ಹಿನ್ನೆಲೆಯಲ್ಲಿ ದೇರಳಕಟ್ಟೆ ಆಸ್ಪತ್ರೆಗೆ ದಾಖಲಾಗಿದ್ದರು. ಅಲ್ಲಿ ವೈದ್ಯಕೀಯ ವರದಿಯಲ್ಲಿ ಶಂಕಿತ ಇಲಿ ಜ್ವರ ಕಾಣಿಸಿಕೊಂಡಿತ್ತು. ಅದರಂತೆ ಚಿಕಿತ್ಸೆ ಪಡೆಯುತ್ತಿದ್ದ ಅವರು ಶನಿವಾರ ನಸುಕಿನ ಜಾವ ಸಾವನ್ನಪ್ಪಿದ್ದಾರೆ.
ಕಿಶೋರ್ ಅವರು ಹೊರಗುತ್ತಿಗೆ ಆಧಾರದಲ್ಲಿ ಚಾಲಕನಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ಮೃತರು ತಂದೆ, ತಾಯಿ, ಪತ್ನಿ ಹಾಗೂ ಇಬ್ಬರು ಮಕ್ಕಳನ್ನು ಅಗಲಿದ್ದಾರೆ.
ಕಂದಾಯ ಇಲಾಖೆಯಲ್ಲಿ ಹೊರ ಗುತ್ತಿಗೆ ಆಧಾರದಲ್ಲಿ ಕೆಲಸದಲ್ಲಿದ್ದು, ಅದನ್ನು ಕಳೆದುಕೊಂಡಿದ್ದರು.
ಬಳಿಕ ಉಳ್ಳಾಲ ಶಾಸಕ ಯು.ಟಿ. ಖಾದರ್ ಅವರು ಮತ್ತೆ ಉಳ್ಳಾಲ ತಾಲೂಕು ತಹಶೀಲ್ದಾರ್ ಅವರಿಗೆ ಚಾಲಕನಾಗಿ ಹುದ್ದೆಯನ್ನು ದೊರಕಿಸಿ ಕೊಟ್ಟಿದ್ದರು. ಅವರ ನಿಧನಕ್ಕೆ ಶಾಸಕ ಯು.ಟಿ. ಖಾದರ್ ಸಂತಾಪ ಸೂಚಿಸಿದ್ದಾರೆ.