Advertisement

ಉಳ್ಳಾಲ ಶ್ರೀನಿವಾಸ ಮಲ್ಯ ಅಂಚೆ ಲಕೋಟೆ ಬಿಡುಗಡೆ 

12:27 PM Jan 25, 2018 | Team Udayavani |

ಸುರತ್ಕಲ್‌ : ದಿವಂಗತ ಉಳ್ಳಾಲ ಶ್ರೀನಿವಾಸ ಮಲ್ಯ ಅವರ 115ನೇ ಜನ್ಮ ದಿನದ ನೆನಪಿಗಾಗಿ ಮಂಗಳೂರಿನ ಕಸ್ತೂರಿ ಬಾಲಕೃಷ್ಣ ಪೈ, ಗೋಪಾಲಕೃಷ್ಣ ಪ್ರಭು ಹಾಗೂ ಗುರುಚರಣ್‌ ಮಲ್ಯ ಅವರ ಸಾರಥ್ಯದಲ್ಲಿ ಅಂಚೆ ಇಲಾಖೆ ಸಹಕಾರದಲ್ಲಿ ಹೊರತಂದ ವಿಶೇಷ ಅಂಚೆ ಲಕೋಟೆ ಬಿಡುಗಡೆ ಸುರತ್ಕಲ್‌ನ ಎನ್‌ ಐಟಿಕೆ ಸಭಾಂಗಣದಲ್ಲಿ ಜರಗಿತು.

Advertisement

ದಕ್ಷಿಣ ಕರ್ನಾಟಕ ವಿಭಾಗ ಪೋಸ್ಟ್‌ ಮಾಸ್ಟರ್‌ ಜನರಲ್‌ ಎಸ್‌. ರಾಜೇಂದ್ರ ಕುಮಾರ್‌ ಬಿಡುಗಡೆಗೊಳಿಸಿದರು. ಮಾತನಾಡಿದ ಅವರು ಜಿಲ್ಲೆಯ ಅಭಿವೃದ್ಧಿಗೆ ನಿಸ್ವಾರ್ಥಿಯಾಗಿ ಶ್ರಮಿಸಿ ಮೇಲ್ಪಂಕ್ತಿ ಹಾಕಿಕೊಟ್ಟ ದಿ. ಮಲ್ಯರ ಗೌರವಾರ್ಥ ಅಂಚೆ ಲಕೋಟೆಯನ್ನು ಹೊರತಂದಿರುವುದು ಶ್ಲಾಘನೀಯ. ಅವರ ಅಂಚೆ ಚೀಟಿ ದೇಶಾದ್ಯಂತ ಮೌಲ್ಯವ ರ್ಧಿತವಾಗುವಂತೆ ನಾವೆಲ್ಲ ಶ್ರಮ ಪಡಬೇಕಾಗಿದೆ ಇದಕ್ಕೆ ಅಂಚೆ ಇಲಾಖೆಯೂ ಸಹಕಾರ ನೀಡಲಿದೆ ಎಂದರು. ಈಗಾಗಲೇ ಅವಿಭಜಿತ ಜಿಲ್ಲೆಗೆ ಸಂಬಂಧಪಟ್ಟಂತೆ ಟಿ.ಎಂ.ಎ. ಪೈ, ಡಾ| ಶಿವರಾಮ ಕಾರಂತ, ರಮಾಬಾಯಿ, ಸೈಂಟ್‌ ಅಲೋಶಿಯಸ್‌ ಚಾಪೆಲ್‌, ಕವಿ ಮುದ್ದಣ, ಅತ್ತೂರು ಚರ್ಚ್‌ ಹೀಗೆ ಐತಿಹಾಸಿಕ ಸ್ಥಳ ಹಾಗೂ ಸಾಧನೆಗೈದ ಮಹನೀಯರ ಸವಿನೆನಪಿಗಾಗಿ ಅಂಚೆ ಚೀಟಿ ಹೊರತರಲಾಗಿದೆ ಎಂದರು.

ನುಡಿದಂತೆ ನಡೆದರು
ಕೆಎಂಸಿ ಯೂರಾಲಜಿ ವಿಭಾಗದ ಮುಖ್ಯಸ್ಥ ಪ್ರೊ| ಡಾ| ಲಕ್ಷ್ಮಣ ಪ್ರಭು ಅವರು ಮಾತನಾಡಿ, ದಿ| ಮಲ್ಯರು ರಾಜಕಾರಣಿಯಾಗಿ ನುಡಿ ದಂತೆ ನಡೆದು, ಮಾಡಿದ ಸಾಧನೆಯಿಂದ ನಮ್ಮ ಜಿಲ್ಲೆ
ಇಂದು ವಿಶ್ವದ ಭೂಪಟದಲ್ಲಿ ಗುರುತಿಸಿಕೊಳ್ಳುವಂತಾಗಿದೆ ಎಂದರು.

ಎನ್‌ಐಟಿಕೆ ನಿರ್ದೇಶಕ ಪ್ರೊ| ಕರಣಂ ಉಮಾಮಹೇಶ್ವರ ರಾವ್‌ ಅಧ್ಯಕ್ಷತೆ ವಹಿಸಿ ಎನ್‌ಐಟಿಕೆ, ಬಂದರು ಸಹಿತ ಅವಿಭಜಿತ ಜಿಲ್ಲೆಯ ಅಭಿವೃದ್ಧಿಯ ಹರಿಕಾರ ದಿ| ಮಲ್ಯರನ್ನು ಈ ಮೂಲಕ ದೇಶಾದ್ಯಂತ ನೆನಪಿಸಿಕೊಳ್ಳುವಂತೆ ಮಾಡುವ ಕಾರ್ಯಕ್ರಮ ನಿಜಕ್ಕೂ ಮಾದರಿ ಎಂದರು.

ದೂರದೃಷ್ಟಿ
ಕಸ್ತೂರಿ ಬಾಲಕೃಷ್ಣ ಪೈ ಮಾತನಾಡಿ ಬಂದರು, ಎಂಜಿನಿಯರಿಂಗ್‌ ಕಾಲೇಜು, ಸೇತುವೆಗಳು, ವಿಮಾನ ನಿಲ್ದಾಣ ಮತ್ತಿತರ ದೂರದೃಷ್ಟಿಯ ಅಭಿವೃದ್ಧಿ ಕಾರ್ಯಗಳಿಂದ ಜನರು ಇಂದಿಗೂ ಅವರನ್ನು ನೆನೆಯುತ್ತಿದ್ದಾರೆ. ಇದೀಗ ಅವರ 115ನೇ ಜನ್ಮದಿನ ಹಾಗೂ ಅವರ ಐತಿಹಾಸಿಕ ಅಭಿವೃದ್ಧಿ ಸಾಧನೆಗಳ ಬಗ್ಗೆ ತಿಳಿವಳಿಕೆ ಮೂಡಿಸುವ ಸಲುವಾಗಿ ಅಂಚೆ ಇಲಾಖೆಯ ಸಹಕಾರದಲ್ಲಿ ವಿಶೇಷ ಲಕೋಟೆ ಹೊರ ತಂದಿದ್ದೇವೆ ಎಂದರು.

Advertisement

ಕಾಲೇಜಿನ ನಿವೃತ್ತ ಡೀನ್‌ ಪ್ರೊ| ಬಿ.ಆರ್‌. ಸಾಮಗ, ಶ್ರೀನಿವಾಸ ರೈ, ಗೋಪಾಲಕೃಷ್ಣ ಪ್ರಭು, ಗುರುಚರಣ್‌ ಮಲ್ಯ ಉಪಸ್ಥಿತರಿದ್ದರು. ಶ್ವೇತಾ ಕಾರ್ಯಕ್ರಮ ನಿರೂಪಿಸಿದರು.

ಸಾಧನೆಯ ಪ್ರತೀಕ
 ಮಲ್ಯರ ವಿಶೇಷ ಲಕೋಟೆಯಲ್ಲಿ ಮಲ್ಯ ಭಾವಚಿತ್ರದೊಂದಿಗೆ ಅವರ ಸಾಧನೆಯ ಪ್ರತೀಕವಾದ ಎನ್‌ ಐಟಿಕೆ, ಹೆದ್ದಾರಿ, ಸೇತುವೆ, ಬಂದರು, ಪಾರ್ಕ್‌ ಮತ್ತಿತರ ಚಿತ್ರಗಳನ್ನು ಮುದ್ರಿಸಲಾಗಿದೆ. ಪ್ರಸ್ತುತ ಮಲ್ಯರ ಈ ವಿಶೇಷ ಲಕೋಟೆಗಳು ಹಂಪನಕಟ್ಟ ಅಂಚೆ ಕಚೇರಿಯಲ್ಲಿ ಲಭ್ಯವಿದ್ದು, ಸ್ಪೀಡ್‌ ಪೋಸ್ಟ್‌ ಮತ್ತಿತರ ಸೇವೆಗಳಿಗೆ ಬಳಸಬಹುದಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next