ಉಳ್ಳಾಲ: ತೊಕ್ಕೊಟ್ಟು ಒಳಪೇಟೆಯಲ್ಲಿರುವ ಸಿಪಿಐಎಂನ ಉಳ್ಳಾಲವಲಯ ಕಚೇರಿಯ ಬಾಗಿಲು ಮುರಿದು ಬೆಂಕಿ ಹಾಕಿದ ಘಟನೆ ಬುಧವಾರ ತಡರಾತ್ರಿ ಸಂಭವಿಸಿದೆ. ಫೆ. 25ರಂದು ನಡೆಯುವ ಕರಾವಳಿ ಸೌಹಾರ್ದ ರ್ಯಾಲಿಯಲ್ಲಿ ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಭಾಗವಹಿಸುತ್ತಿರುವುದನ್ನು ವಿರೋಧಿಸಿ ಬೆಂಕಿ ಹಾಕಲಾಗಿದೆ ಎಂಬ ಸಂಶಯವನ್ನು ಪೊಲೀಸರು ವ್ಯಕ್ತಪಡಿಸಿದ್ದಾರೆ.
ದುಷ್ಕರ್ಮಿಗಳು ಕಪಾಟು, ಟಿ.ವಿ., ಮರದ ಕುರ್ಚಿ, ದಾಖಲೆಗಳು ಸೇರಿದಂತೆ ಕಾರ್ಯಕ್ರಮಕ್ಕೆ ಅಳವಡಿಸಲು ಇಡಲಾಗಿದ್ದ ಫ್ಲೆಕ್ಸ್‌ಗಳಿಗೆ ಸೀಮೆ ಎಣ್ಣೆ ಸುರಿದು ಬೆಂಕಿ ಹಚ್ಚಿದ ಘಟನಾ ಸ್ಥಳಕ್ಕೆ ಡಿಸಿಪಿ ಸಂಜೀವ ಪಾಟೀಲ್ , ಉಳ್ಳಾಲ ಠಾಣಾಧಿಕಾರಿ ಗೋಪಿಕೃಷ್ಣ , ಎಸ್.ಐ.ರಾಜೇಂದ್ರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸ್ಥಳಕ್ಕೆ ಶ್ವಾನದಳ ಭೇಟಿ ನೀಡಿ ಮಾಹಿತಿಯನ್ನು ಸಂಗ್ರಹಿಸಿದೆ.
ಸಚಿವ ಖಾದರ್ ಭೇಟಿ : ಸಿಪಿಐಎಂ ಕಚೇರಿಗೆ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಯು.ಟಿ.ಖಾದರ್ ವಿವಿಧ ಪಕ್ಷಗಳ ಮುಖಂಡರಾದ ಚಂದ್ರ ಹಾಸ್ ಉಳ್ಳಾಲ್, ಸಂತೋಷ್ ಶೆಟ್ಟಿ, ಹುಸೈನ್ ಕುಂಇಮೋನು, ಸಿಪಿಎಂ ಮುಖಂಡರಾದ ಕೆ.ಆರ್.ಶ್ರೀಯಾನ್, ಕೃಷ್ಣಪ್ಪ ಸಾಲಿಯಾನ್, ಬಾಲಕೃಷ್ಣ ಶೆಟ್ಟಿ, ವಸಂತ ಆಚಾರಿ ಭೇಟಿ ನೀಡಿ ಘಟನೆಯನ್ನು ಖಂಡಿಸಿದ್ದಾರೆ.
ಬ್ಯಾನರ್‌ಗಳಿಗೂ ಹಾನಿ: ದೇರಳಕಟ್ಟೆ, ಕುತ್ತಾರು, ಪಂಡಿತ್ ಹೌಸಿನಲ್ಲಿ ಕೇರಳದ ಮುಖ್ಯಮಂತ್ರಿಗಳಿಗೆ ಶುಭಕೋರಿ ಹಾಕಲಾದ ಬ್ಯಾನರ್ ಗಳಿಗೆ ದುಷ್ಕರ್ಮಿಗಳು ಹಾನಿ ಮಾಡಿದ್ದಾರೆ. ಈ ಕುರಿತು ಉಳ್ಳಾಲ ಹಾಗೂ ಕೊಣಾಜೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ.
ಬಿಗಿ ಬಂದೋಬಸ್ತ್ : ಘಟನೆ ನಡೆದ ತೊಕ್ಕೊಟ್ಟಿನಲ್ಲಿರುವ ಉಳ್ಳಾಲ ವಲಯ ಸಿಪಿಐಎಂ ಕಚೇರಿಗೆ ಮತ್ತು ಉಳ್ಳಾಲ ಬ್ಲಾಕ್ ಕಾಂಗ್ರೆಸ್ ಕಚೇರಿಗೆ ಪೊಲೀಸ್ ಭದ್ರತೆಯನ್ನು ಹಾಕಲಾಗಿದೆ. ಘಟನೆಗೆ ಸಂಬಂಧಿಸಿದಂತೆ ಆರೋಪಿಗಳನ್ನು ಬಂಧಿಸುವ ಭರವಸೆಯನ್ನು ಉಳ್ಳಾಲ ಪೊಲೀಸರು ನೀಡಿದ್ದಾರೆ.