Advertisement

Ullal: ಬಾವಿ, ಬೋರ್‌ವೆಲ್‌ನಲ್ಲಿ ತೈಲಮಿಶ್ರಿತ ನೀರು; ಸಮಸ್ಯೆ ಇರುವ ಮನೆಗಳಿಗೆ ಪೈಪ್‌ಲೈನ್‌

01:06 PM Nov 27, 2024 | Team Udayavani |

ಉಳ್ಳಾಲ: ಪಜೀರು ಗ್ರಾಮದ ಮುಡಿಪು ಸಮೀಪದ ಸಾಂಬಾರ್‌ ತೋಟ ಪರಿಸರದ ಬಾವಿ, ಕೊಳವೆ ಬಾವಿಗಳಲ್ಲಿ ತೈಲ ಮಿಶ್ರಿತ ನೀರು ಕಂಡುಬಂದಿದ್ದು, ಕಲುಷಿತ ನೀರಿನಿಂದ ಸ್ಥಳೀಯರು ಭಾರಿ ಸಮಸ್ಯೆ ಎದುರಿಸುತ್ತಿದ್ದಾರೆ. ಆರು ತಿಂಗಳ ಹಿಂದೆ ಒಂದು ಕೊಳವೆ ಬಾವಿಯಲ್ಲಿ ತೈಲ ಮಿಶ್ರಿತ ನೀರು ಕಂಡುಬಂದಿತ್ತು. ಇದೀಗ ಅದು ಪರಿಸರದ 10ಕ್ಕೂ ಹೆಚ್ಚು ತೆರೆದ ಬಾವಿ ಮತ್ತು ಕೊಳವೆ ಬಾವಿಗಳಿಗೆ ವ್ಯಾಪಿಸಿದೆ.

Advertisement

ಈ ಸಮಸ್ಯೆಯಿಂದ ಜನರು ಕುಡಿಯುವ ನೀರಿನ ಸಮಸ್ಯೆ ಎದುರಿಸುತ್ತಿದ್ದಾರೆ. ಮಾಲಿನ್ಯದ ಮೂಲ ಪತ್ತೆಗೆ ಮುಂದಾಗಿರುವ ಪಂಚಾಯತ್‌, ಸಮಸ್ಯೆಗೆ ಒಳಗಾಗಿರುವ ಮನೆಗಳಿಗೆ ಪೈಪ್‌ ಮೂಲಕ ನೀರು ಪೂರೈಸಲು ಮುಂದಾಗಿದೆ.

ಸಂಬಾರ ತೋಟ ಪ್ರದೇಶದಲ್ಲಿ ಸುಮಾರು 25ಕ್ಕೂ ಹೆಚ್ಚು ಮನೆಗಳಿದ್ದು, ಕೆಲವು ಮನೆಗಳಲ್ಲಿ ಮಾತ್ರ ಪಂಚಾಯತ್‌ ಕುಡಿಯುವ ನೀರಿನ ಸಂಪರ್ಕ ಕಲ್ಪಿಸಿದ್ದು, ಕೆಲವು ಮನೆಗಳಿಗೆ ಬಾವಿ ಇದ್ದ ಕಾರಣ ಪಂಚಾಯತ್‌ ನೀರಿನ ಮೊರೆ ಹೋಗಿರಲಿಲ್ಲ. ಆದರೆ ಕಳೆದ ಕೆಲವು ತಿಂಗಳಿನಿಂದ ನೀರು ತೈಲ ಕಲುಷಿತಗೊಂಡಿದ್ದರಿಂದ ಜನರು ಕುಡಿಯುವ ನೀರಿಗೆ ಇತರರ ಪಂಚಾಯತ್‌ನ ಪೈಪ್‌ನಲ್ಲಿ ಬರುವ ನೀರಿಗಾಗಿ ಕಾಯುವಂತಾಗಿದೆ.

ಕೊಳವೆ ಬಾವಿಯಲ್ಲಿ ಸಮಸ್ಯೆ ಆರಂಭ
ಸಂಬಾರತೋಟದ ಕೆಲವು ಕೊಳವೆ ಬಾವಿಗಳಲ್ಲಿ ಆರು ತಿಂಗಳ ಹಿಂದೆಯೇ ಇಂಧನ ಮಿಶ್ರಿತ ನೀರಿನ ಸಮಸ್ಯೆ ಕಾಣಿಸಿತ್ತು. ಆದರೆ ಬಾವಿಗಳಲ್ಲಿ ಈ ಸಮಸ್ಯೆ ಇರದ ಕಾರಣ ಬಾವಿಯ ನೀರನ್ನು ಬಳಸಿಕೊಳ್ಳುತ್ತಿದ್ದರು.ಇದೀಗ ಈ ಭಾಗದ ಹೆಚ್ಚಿನ ಬಾವಿಗಳ ನೀರಿನಲ್ಲೂ ಇಂಧನ ವಾಸನೆ ಬರುತ್ತಿದ್ದು, ಕುಡಿಯುವುದಕ್ಕೆ ಮಾತ್ರವಲ್ಲ ಸ್ನಾನ ಹಾಗೂ ಇತರ ಉಪಯೋಗಕ್ಕೂ ಬಳಸಿಕೊಳ್ಳಲಾಗದ ಸ್ಥಿತಿ ಎದುರಾಗಿದೆ.

ಕೊಳವೆ ಬಾವಿಗಳ ನೀರನ್ನು ಈಗಾಗಲೇ ಮಾಲಿನ್ಯ ನಿಯಂತ್ರಣ ಮಂಡಳಿಗೆ ಗುಣಮಟ್ಟ ಪರೀಕ್ಷೆಗೆ ಕಳುಹಿಸಿಕೊಡಲಾಗಿದ್ದು ಇನ್ನೆರಡು ದಿನಗಳಲ್ಲಿ ವರದಿ ಬರಲಿದೆ. ಬಳಿಕ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಸಭೆ ಕರೆದು ಸೂಕ್ತ ಕ್ರಮಕೈಗೊಳ್ಳಲಾಗುವುದು. ಸಮಸ್ಯೆ ಇರುವ ಮನೆಗೆ ಪೈಪ್‌ ನೀರು ಬಳಸಲು ಸೂಚಿಸಲಾಗಿದೆ.
ರಫೀಕ್‌, ಅಧ್ಯಕ್ಷರು ಪಜೀರು ಪಂಚಾಯತ್‌

Advertisement

ಈ ವ್ಯಾಪ್ತಿಯಲ್ಲಿ ಬಾವಿಯಲ್ಲಿ ಜನವರಿ ತಿಂಗಳವರೆಗೆ ನೀರು ಸಿಗುತ್ತದೆ. ಕಳೆದ 23 ವರುಷಗಳಿಂದ ಕೊಳವೆ ಬಾವಿಯನ್ನು ಬಳಸುತ್ತಿದ್ದು, ಆರು ತಿಂಗಳಿನಿಂದ ಕೊಳವೆಯ ನೀರು ತೆಗೆದಾಗ ತೈಲ ವಾಸನೆ ಬರಲು ಆರಂಭಿಸಿದೆ. ಬಾವಿಯನ್ನು ರಿಪೇರಿ ಮಾಡಿ ನೀರು ಬಳಸುತ್ತಿದ್ದು, ಇದೀಗ ಕಳೆದೆರಡು ವಾರಗಳಿಂದ ಬಾವಿಯಲ್ಲೂ ಇದೇ ಸಮಸ್ಯೆ ಆಗಿದೆ.
-ಎಸ್‌. ಕೆ. ಖಾದರ್‌, ಸಾಂಬಾರ್‌ತೋಟ ನಿವಾಸಿ

ಅಧಿಕಾರಿಗಳು ಬಂದರೂ ಪರಿಹಾರವಿಲ್ಲ
ನೀರಿನ ಸಮಸ್ಯೆ ಹೆಚ್ಚುತ್ತಿರುವುದರಿಂದ ಸ್ಥಳೀಯರು ಜಿಲ್ಲಾಧಿಕಾರಿ, ಪರಿಸರ ಇಲಾಖೆಯ ಅಧಿಕಾರಿಗೆ, ಉಸ್ತುವಾರಿ ಸಚಿವರಿಗೆ, ವಿಧಾನಸಭಾ ಅಧ್ಯಕ್ಷರಿಗೆ, ತಹಶೀಲ್ದಾರರಿಗೆ, ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ, ಪಜೀರು ಗ್ರಾ.ಪಂ.ಗೆ ತೆರಳಿ ಸಮಸ್ಯೆ ಪರಿಹಾರ ಕ್ರಮಕ್ಕೆ ಒತ್ತಾಯಿಸಿದ್ದರು. ಸ್ಪೀಕರ್‌ ಯು.ಟಿ.ಖಾದರ್‌ ಅವರ ನಿರ್ದೇಶನದಂತೆ ಉಳ್ಳಾಲ ತಹಶೀಲ್ದಾರ್‌, ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯ ಲಕ್ಷ್ಮೀಕಾಂತ್‌, ಪಜೀರು ಪಂ.ಅಧ್ಯಕ್ಷ ರಫೀಕ್‌ , ಕುರ್ನಾಡು ಆರೋಗ್ಯಾಧಿಕಾರಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ವಾಹನ ತೊಳೆಯದಂತೆ ಸೂಚನೆ
ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿ ಸ್ಥಳೀಯ ಪೆಟ್ರೋಲ್‌ ಪಂಪ್‌ನಲ್ಲಿ ಬಸ್‌ ಹಾಗೂ ಇತರ ವಾಹನಗಳನ್ನು ತೊಳೆಯದಂತೆ ಸೂಚನೆ ನೀಡಲು ಸ್ಥಳೀಯ ಪಂಚಾಯತ್‌ಗೆ ಆದೇಶ ನೀಡಿದ್ದಾರೆ. ಒಂದು ವಾರದ ಬಳಿಕ ನೀರಿನ ಪರೀಕ್ಷೆ ಮಾಡಿ ಸಮಸ್ಯೆ ಮುಂದುವರಿದರೆ ಮುಂದಿನ ಕ್ರಮ ಕೈಗೊಳ್ಳಲಾಗುವುದು. ಈಗ ತುಂಬಾ ಸಮಸ್ಯೆ ಇರುವ ಮನೆಗೆ ಪಂಚಾಯತ್‌ನಿಂದ ಪೈಪ್‌ಲೈನ್‌ ಅಳವಡಿಸಲು ಸೂಚಿಸಲಾಗಿದೆ ಎಂದು ಮಂಗಳೂರು ಉಪ ವಿಭಾಗ ಸಹಾಯಕ ಆಯುಕ್ತರಾದ ಹರ್ಷವರ್ಧನ್‌ ಎಸ್‌.ಜೆ. ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next