Advertisement

ಉಳ್ಳಾಲ ಸೇತುವೆ: ರಕ್ಷಣಾ ಬೇಲಿಗೆ ಟೆಂಡರ್‌

10:56 PM May 05, 2020 | Sriram |

ಮಂಗಳೂರು: ರಾಷ್ಟ್ರೀಯ ಹೆದ್ದಾರಿ 66ರ ಉಳ್ಳಾಲ ಸೇತುವೆಯ ಮೇಲೆ ನಡೆಯುತ್ತಿರುವ ಅನಾಹುತಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಸೇತುವೆಯ ಇಕ್ಕೆಲಗಳಲ್ಲಿ ರಕ್ಷಣಾ ಬೇಲಿ ಅಳವಡಿಸುವ ಕಾಮಗಾರಿಗೆ ನಗರಾಭಿವೃದ್ಧಿ ಪ್ರಾಧಿಕಾರದ (ಮುಡಾ) ವತಿಯಿಂದ ಟೆಂಡರ್‌ ಕರೆಯಲಾಗಿದೆ. ಹಾಗಾಗಿ ಶೀಘ್ರದಲ್ಲಿಯೇ ಕಾಮಗಾರಿ ಆರಂಭವಾಗುವ ನಿರೀಕ್ಷೆ ಇದೆ.

Advertisement

ಕಳೆದ ಎ. 15ರಂದು ರಾತ್ರಿ ಕೊಲ್ಯದ ವಿಕ್ರಂ ಗಟ್ಟಿ ಅವರು ಈ ಸೇತುವೆಯ ಬಳಿ ತನ್ನ ಕಾರು ನಿಲ್ಲಿಸಿ ನಾಪತ್ತೆಯಾಗಿದ್ದು, ಎ. 17ರಂದು ಅವರ ಮೃತದೇಹ ಉಳ್ಳಾಲ ಹೊಯಿಗೆಯಲ್ಲಿ ನೇತ್ರಾವತಿ ನದಿಯ ತೀರದಲ್ಲಿ ಪತ್ತೆಯಾಗಿತ್ತು. ವಿಕ್ರಂ ಗಟ್ಟಿ ಉಳ್ಳಾಲ ಸೇತುವೆಯ ಮೇಲಿಂದ ನೇತ್ರಾವತಿ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದರು ಎನ್ನಲಾಗಿದೆ. ಈ ಸೇತುವೆ ಮೇಲಿಂದ ನದಿಗೆ ಹಾರಿ ಆತ್ಮಹತ್ಯೆ ಮಾಡುವವರ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸೇತುವೆಯ ಎರಡೂ ಬದಿ ರಕ್ಷಣಾ ಬೇಲಿ ನಿರ್ಮಾಣ ಮಾಡಬೇಕೆಂಬ ಬೇಡಿಕೆ 2019ರ ಆಗಸ್ಟ್‌ನಿಂದಲೇ ಬಲವಾಗಿ ಕೇಳಿ ಬಂದಿತ್ತು.

ಭರವಸೆ ಈಡೇರಿಕೆ
ವಿಕ್ರಂ ಗಟ್ಟಿ ಈ ಸೇತುವೆ ಬಳಿ ಕಾರು ನಿಲ್ಲಿಸಿ ನಾಪತ್ತೆಯಾದ ಬಗ್ಗೆ ಎ. 16ರಂದು ಸುದ್ದಿಯಾಗಿದ್ದು, ಈ ಸಂದರ್ಭದಲ್ಲಿ ಸ್ಥಳೀಯ ಶಾಸಕ ಡಿ. ವೇದವ್ಯಾಸ ಕಾಮತ್‌ ಅವರು 10 ದಿನಗಳಲ್ಲಿ ಸೇತುವೆಯ ಇಕ್ಕೆಲಗಳಲ್ಲಿ ಮುಡಾ ವತಿಯಿಂದ ರಕ್ಷಣಾ ಬೇಲಿ ನಿರ್ಮಾಣ ಹಾಗೂ ಸಿಸಿ ಕೆಮರಾ ಅಳವಡಿಸುವ ಕುರಿತಂತೆ ಟೆಂಡರ್‌ ಕರೆಯುವುದಾಗಿ ಭರವಸೆ ನೀಡಿದ್ದರು. ಇದೀಗ ಟೆಂಡರ್‌ ಮುಡಾ ಕರೆಯುವ ಮೂಲಕ ಶಾಸಕರು ತಮ್ಮ ಮಾತನ್ನು ಉಳಿಸಿಕೊಂಡಿದ್ದಾರೆ.

ಕಾಮಗಾರಿ ಶೀಘ್ರ
ಸೇತುವೆಯ ಇಕ್ಕೆಲ ಬೇಲಿ ನಿರ್ಮಾಣ ಮಾಡುವ ಬಗ್ಗೆ 58 ಲಕ್ಷ ರೂ. ಮೊತ್ತದ ಟೆಂಡರ್‌ ಆಹ್ವಾನಿಸಲಾಗಿದ್ದು, ಕನಿಷ್ಠ ಮೊತ್ತದ ಬಿಡ್‌ದಾರರಿಗೆ ಟೆಂಡರ್‌ ವಹಿಸಿ ಶೀಘ್ರ ಕಾಮಗಾರಿ ಆರಂಭಿಸಲಾಗುವುದು ಎಂದು ಶಾಸಕರು ತಿಳಿಸಿದ್ದಾರೆ.

ಸಿ.ಸಿ. ಕೆಮರಾ ಅಳವಡಿಕೆಗೂ ಟೆಂಡರ್‌
ಸೇತುವೆಯ ಎರಡೂ ದಿಕ್ಕುಗಳಲ್ಲಿ ಸಿ.ಸಿ. ಕೆಮರಾ ಅಳವಡಿಸುವ ಕಾಮಗಾರಿಗೆ 5 ಲಕ್ಷ ರೂ. ಮೊತ್ತದ ಟೆಂಡರ್‌ ಆಹ್ವಾನಿಸಲಾಗುವುದು. ಸಿ.ಸಿ. ಕೆಮರಾದ ಮಾನಿಟರಿಂಗ್‌ ಪೊಲೀಸರ ಕೈಯಲ್ಲಿ ಇರುವುದರಿಂದ ಇದಕ್ಕೆ ಪೊಲೀಸ್‌ ಇಲಾಖೆಯ ಪೂರ್ವಾನುಮತಿ ಬೇಕಾಗುತ್ತದೆ. ಅನುಮತಿಗಾಗಿ ಪೊಲೀಸ್‌ ಇಲಾಖೆಗೆ ಬರೆಯಲಾಗಿದ್ದು, ಒಂದೆರಡು ದಿನಗಳಲ್ಲಿ ಅನುಮತಿ ಲಭಿಸುವ ನಿರೀಕ್ಷೆ ಇದೆ. ಪೊಲೀಸ್‌ ಇಲಾಖೆಯ ಅನುಮತಿ ಲಭಿಸಿದ ಕೂಡಲೇ ಕಾಮಗಾರಿಗೆ ಟೆಂಡರ್‌ ಕರೆಯಲಾಗುವುದು ಎಂದು ಶಾಸಕ ವೇದವ್ಯಾಸ ಕಾಮತ್‌ ಅವರು ಪತ್ರಿಕೆಗೆ ಮಾಹಿತಿ ನೀಡಿದ್ದಾರೆ.

Advertisement

ಇಂದು ಟೆಂಡರ್‌ ಓಪನ್‌
58 ಲಕ್ಷ ರೂ. ಮೊತ್ತದ ಟೆಂಡರ್‌ ಕರೆಯಲಾಗಿದ್ದು, ಮೇ 6ರಂದು ಟೆಂಡರ್‌ ಓಪನ್‌ ಮಾಡಿ ಅತ್ಯಂತ ಕಡಿಮೆ ಮೊತ್ತದ ಬಿಡ್‌ ಸಲ್ಲಿಸಿದವರಿಗೆ ಟೆಂಡರ್‌ ವಹಿಸಿಕೊಡಲಾಗುವುದು. ಬಳಿಕ ಒಪ್ಪಂದವನ್ನು ಮಾಡಿಕೊಂಡು ಆದಷ್ಟು ಶೀಘ್ರದಲ್ಲಿ ಕಾಮಗಾರಿ ಆರಂಭಿಸಲಾಗುವುದು.
– ಡಿ. ವೇದವ್ಯಾಸ ಕಾಮತ್‌,
ಶಾಸಕರು, ಮಂಗಳೂರು ದಕ್ಷಿಣ

Advertisement

Udayavani is now on Telegram. Click here to join our channel and stay updated with the latest news.

Next