ಮುಂಬಯಿ: ಕಳೆದ ಮೂರು ದಶಕಗಳಿಗಿಂತಲೂ ಅಧಿಕ ಕಾಲ ಸಂಘದ ವಿವಿಧ ಹುದ್ದೆಗಳನ್ನು ಅಲಂಕರಿಸಿ ಪ್ರಾಮಾಣಿಕವಾಗಿ, ಶ್ರದ್ಧೆ, ನಿಷ್ಠೆಯಿಂದ ಕಾರ್ಯನಿರ್ವಹಿಸಿದ ನನ್ನನ್ನು ಸಂಘದ ನೂತನ ಅಧ್ಯಕ್ಷನನ್ನಾಗಿ ಆಯ್ಕೆ ಮಾಡಿದ ತಮಗೆಲ್ಲರಿಗೂ ಕೃತಜ್ಞನಾಗಿದ್ದೇನೆ. ನಮ್ಮೊಳಗೆ ಯಾವುದೇ ರೀತಿಯ ಭಿನ್ನತೆಗಳಿದ್ದರೂ ಅವೆಲ್ಲವನ್ನು ದೂರವಿಟ್ಟು ಸಂಘದ ಶ್ರೇಯಸ್ಸಿನಲ್ಲಿ ನಾವೆಲ್ಲರೂ ಭಾಗಿಯಾಗಬೇಕು. ಬಲಿಷ್ಠ ಸಂಘದ ನಿರ್ಮಾಣಕ್ಕಾಗಿ ಸಮಾಜದ ಬಂಧುಗಳು ಜನಸೇವಕರಾಗಿ ದುಡಿಯಬೇಕು ಎಂದು ಕುಲಾಲ ಸಂಘ ಮುಂಬಯಿ ಇದರ ನೂತನ ಅಧ್ಯಕ್ಷ ಪಿ. ದೇವದಾಸ್ ಎಲ್. ಕುಲಾಲ್ ನುಡಿದರು.
ನ. 10ರಂದು ಫೋರ್ಟ್ ಪರಿಸರದಲ್ಲಿರುವ ಕುಲಾಲ ಸಂಘ ಮುಂಬಯಿ ಇದರ ಕೇಂದ್ರ ಕಚೇರಿಯಲ್ಲಿ ನಡೆದ 2017-2019ನೇ ಸಾಲಿನ ನೂತನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮದಲ್ಲಿ ನೂತನ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ಮಾತನಾಡಿದ ಅವರು, ಕುಲಾಲ ಸಂಘದ ಮಹತ್ತರ ಯೋಜನೆಯಾದ ಮಂಗಳೂರಿನಲ್ಲಿ ನಿರ್ಮಾಣ ಹಂತದಲ್ಲಿರುವ ಕುಲಾಲ ಭವನದ ಯಶಸ್ಸಿಗಾಗಿ ನಾವು ಮುಂದಾಗಬೇಕು. ಸ್ಥಳೀಯ ಸಮಿತಿಗಳ ಮುಖಾಂತರ ಸಂಘದ ಸಮಾಜಪರ ಕಾರ್ಯಕ್ರಮಗಳನ್ನು ಸಮಾಜ ಬಾಂಧವರ ಮನೆ-ಮನಗಳಿಗೆ ತಲುಪಿಸುವ ಜವಾಬ್ದಾರಿ ನಮ್ಮ ಮೇಲಿದೆ. ನೂತನ ಸಮಿತಿಯು ಸಂಘಟನೆಯನ್ನು ಬಲಪಡಿಸುವುದರೊಂದಿಗೆ ಸಂಸ್ಥೆಯ ಯೋಜನೆಗಳನ್ನು ಸಂಪೂರ್ಣಗೊಳಿಸುವಲ್ಲಿ ಮುಂದಣ ಹೆಜ್ಜೆಯನ್ನಿಡಬೇಕು ಎಂದು ಕರೆ ನೀಡಿದರು.
ಸಂಘದ ನಿರ್ಗಮನ ಅಧ್ಯಕ್ಷ ಗಿರೀಶ್ ಬಿ. ಸಾಲ್ಯಾನ್ ಅವರು ನೂತನ ಅಧ್ಯಕ್ಷ ಪಿ. ದೇವದಾಸ್ ಎಲ್. ಕುಲಾಲ್ ಅವರನ್ನು ಪುಷ್ಪಗುತ್ಛವನ್ನಿತ್ತು ಅಭಿನಂದಿಸಿ ಅಧಿಕಾರ ಹಸ್ತಾಂತರಿಸಿದರು. ಸಂಸ್ಥೆಯ ಉಪಾಧ್ಯಕ್ಷರಾಗಿ ರಘು ಎ. ಮೂಲ್ಯ ಪಾದೆಬೆಟ್ಟು, ಗೌರವ ಪ್ರಧಾನ ಕಾರ್ಯದರ್ಶಿಯಾಗಿ ಕರುಣಾಕರ ಬಿ. ಸಾಲ್ಯಾನ್, ಗೌರವ ಕೋಶಾಧಿಕಾರಿಯಾಗಿ ಜಯ ಅಂಚನ್, ಜತೆ ಕಾರ್ಯದರ್ಶಿಯಾಗಿ ರಘು ಬಿ. ಮೂಲ್ಯ, ಅಣ್ಣಿ ಬಿ. ಮೂಲ್ಯ, ಜತೆ ಕೋಶಾಧಿಕಾರಿಯಾಗಿ ಚಂದ್ರಹಾಸ ಸಾಲ್ಯಾನ್, ಸಾಮಾಜಿಕ-ಆರ್ಥಿಕ ಸಮಿತಿಯ ಕಾರ್ಯಾಧ್ಯಕ್ಷರಾಗಿ ಆನಂದ ಕುಲಾಲ್ ಬಂಟ್ವಾಳ, ಸದಸ್ಯತ್ವ ನೋಂದಾವಣೆ ಸಮಿತಿಯ ಕಾರ್ಯಾಧ್ಯಕ್ಷರಾಗಿ ಪಾದೆಬೆಟ್ಟು ಶೇಖರ ಮೂಲ್ಯ, ವಿದ್ಯಾರ್ಥಿ ಬಳಗದ ಕಾರ್ಯಾಧ್ಯಕ್ಷರಾಗಿ ಉಮೇಶ್ ಎಂ. ಬಂಗೇರ, ವೈದ್ಯಕೀಯ ಕಲ್ಯಾಣ ಸಮಿತಿಯ ಕಾರ್ಯಾಧ್ಯಕ್ಷರಾಗಿ ಸುರೇಶ್ ಕೆ. ಕುಲಾಲ್, ಸ್ಥಿರಾಸ್ತಿ ಅಭಿವೃದ್ಧಿ ಸಮಿತಿಯ ಕಾರ್ಯಾಧ್ಯಕ್ಷರಾಗಿ ಕಲ್ಲಮಾರು ಗೋಪಾಲ್ ಬಂಗೇರ, ಧಾರ್ಮಿಕ ಮತ್ತು ಆಧ್ಯಾತ್ಮಿಕ ಸಮಿತಿಯ ಕಾರ್ಯಾಧ್ಯಕ್ಷರಾಗಿ ಸೀನ ಜಿ. ಮೂಲ್ಯ, ಕಟ್ಟಡ ನಿರ್ಮಾಣ ಸಮಿತಿಯ ಕಾರ್ಯಾಧ್ಯಕ್ಷರಾಗಿ ಮಾಜಿ ಅಧ್ಯಕ್ಷ ಗಿರೀಶ್ ಬಿ. ಸಾಲ್ಯಾನ್, ಉಪ ಕಾರ್ಯಾಧ್ಯಕ್ಷರಾಗಿ ಡಿ. ಐ. ಮೂಲ್ಯ, ಕಾರ್ಯದರ್ಶಿಯಾಗಿ ಸುರೇಶ್ ಕೆ. ಕುಲಾಲ್, ಸಂಘದ ತ್ತೈಮಾಸಿಕ ಅಮೂಲ್ಯದ ಸಂಪಾದಕರಾಗಿ ಶಂಕರ ವೈ. ಮೂಲ್ಯ ವಿರಾರ್, ಉಪ ಸಂಪಾದಕರಾಗಿ ಉದಯ ಮೂಲ್ಯ ಅವರನ್ನು ನೇಮಕಗೊಂಡಿದ್ದು, ಸಭೆಯಲ್ಲಿ ಉಪಸ್ಥಿತರಿದ್ದು ಅಧಿಕಾರ ಸ್ವೀಕರಿಸಿದರು.
ಕಾರ್ಯಕಾರಿ ಸಮಿತಿಯ ಸದಸ್ಯರಾದ ಆನಂದ ಬಿ. ಮೂಲ್ಯ ಡೊಂಬಿವಲಿ, ಜಯರಾಜ್ ಪಿ. ಸಾಲ್ಯಾನ್, ಆಶೀಷ್ ವಿ. ಕರ್ಕೇರ, ಗಣೇಶ್ ಬಿ. ಸಾಲ್ಯಾನ್, ಸುನೀಲ್ ಕೆ. ಕುಲಾಲ್, ಸಂಜೀವ ಎನ್. ಬಂಗೇರ, ಸುಂದರಿ ಎನ್. ಮೂಲ್ಯ, ಪುಷ್ಪಲತಾ ವಿ. ಸಾಲ್ಯಾನ್ ಅವರು ಉಪಸ್ಥಿತ
ರಿದ್ದರು. ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಮಮತಾ ಗುಜರಾನ್ ಅವರನ್ನು ಪುನರಾಯ್ಕೆಗೊಳಿಸಲಾಯಿತು. ನಿರ್ಗಮನ ಕಾರ್ಯದರ್ಶಿ ಡಿ. ಐ. ಮೂಲ್ಯ ಕಾರ್ಯಕ್ರಮ ನಿರ್ವಹಿಸಿದರು. ನೂತನ ಕಾರ್ಯದರ್ಶಿ ಕರುಣಾಕರ ಸಾಲ್ಯಾನ್ ವಂದಿಸಿದರು.