Advertisement

ಇಸ್ರೇಲ್‌, ಟರ್ಕಿ ಮೇಲೆ ಭರವಸೆ; ಎಲ್ಲವೂ ಅಂದುಕೊಂಡಂತೆ ನಡೆದರೆ ಶೀಘ್ರವೇ ಶಾಂತಿ ಸಂಧಾನ

12:34 AM Mar 14, 2022 | Team Udayavani |

ಕೀವ್‌: ರಷ್ಯಾದೊಂದಿಗೆ ಶಾಂತಿ ಸಂಧಾನ ನಡೆಸಲು ಪ್ರಯತ್ನಿಸುತ್ತಿರುವ ಉಕ್ರೇನ್‌, ಆ ಕೆಲಸಕ್ಕೆ ಇಸ್ರೇಲ್‌ ಹಾಗೂ ಟರ್ಕಿಯನ್ನು ಬಲವಾಗಿ ನಂಬಿದೆ ಎಂದು ಉಕ್ರೇನ್‌ ಅಧ್ಯಕ್ಷ ಸಲಹೆಗಾರ ಹಾಗೂ ಶಾಂತಿ ಸಂಧಾನಕಾರ ಮಿಖಾಯಿಲೊ ಪೊಡೊಲ್ಯಾಕ್‌ ತಿಳಿಸಿದ್ದಾರೆ.

Advertisement

ರಾಜಧಾನಿ ಕೀವ್‌ನಲ್ಲಿ ಸುದ್ದಿಗಾರ ರೊಂದಿಗೆ ಮಾತನಾಡಿದ ಅವರು, “”ಶಾಂತಿ ಸಂಧಾನ ಪ್ರಕ್ರಿಯೆ ಗಳು ಚಾಲ್ತಿಯಲ್ಲಿವೆ. ಎಲ್ಲವೂ ಅಂದುಕೊಂಡಂತೆ ನಡೆದರೆ, ಸದ್ಯದಲ್ಲೇ ಸಭೆ ನಡೆಸಲಾಗುತ್ತದೆ. ಯುದ್ಧ ನಿಲ್ಲಿಸಲು ಎಲ್ಲ ದೇಶಗಳು ಪ್ರಯತ್ನಿಸುತ್ತಿರುವ ಹಿನ್ನೆಲೆಯಲ್ಲಿ ಶಾಂತಿ ಸಂಧಾನ ಪ್ರಕ್ರಿ  ಯೆಗಳು ವೇಗವಾಗಿ ಮುಗಿದು ಸಂಧಾನ ಸಭೆಯ ದಿನಾಂಕ ಶೀಘ್ರವೇ ನಿಗದಿಯಾಗುವ ಸಾಧ್ಯತೆಯಿದೆ” ಎಂದಿದ್ದಾರೆ.

ಅತ್ತ, ಉಕ್ರೇನ್‌ ಪರವಾಗಿ ಇಸ್ರೇಲ್‌ ನಡೆಸುತ್ತಿರುವ ಶಾಂತಿ ಸಂಧಾನ ಪ್ರಕ್ರಿಯೆಗೆ ರಷ್ಯಾದಿಂದ ಸಕಾರಾತ್ಮಕ ಸ್ಪಂದನೆ ಸಿಕ್ಕಿದೆ ಎಂದು ಅಲ್ಲಿನ ಪ್ರಧಾನಿ ನೆಫ್ತಾಲಿ ಬೆನ್ನೆಟ್‌ ಅವರ ಕಚೇರಿ ಪ್ರಕಟಿಸಿದೆ. ರಷ್ಯಾ- ಉಕ್ರೇನ್‌ ನಡುವಿನ ಸಂಧಾನ ಸಭೆಗೆ ತಾನು ಮಧ್ಯಸ್ಥಿಕೆ ವಹಿಸುವುದಾಗಿ ಇಸ್ರೇಲ್‌, ರಷ್ಯಾ ಮುಂದೆ ಪ್ರಸ್ತಾವನೆಯಿಟ್ಟಿದ್ದು, ಅದನ್ನು ರಷ್ಯಾ ಒಪ್ಪಿಕೊಂಡಿದೆ ಎಂದು ಕಚೇರಿಯ ಮೂಲಗಳು ತಿಳಿಸಿವೆ.

ಆಶ್ರಯ ಕೊಟ್ಟರೆ ಅನುದಾನ: ಉಕ್ರೇನ್‌ನಿಂದ ಬರುವ ನಿರಾಶ್ರಿತರಿಗೆ ಆಶ್ರಯ ನೀಡುವ ಇಟಲಿಯ ಕುಟುಂಬಗಳಿಗೆ ಮಾಸಿಕ ತಲಾ 300 ಪೌಂಡ್‌ (ಅಂದಾಜು 30 ಸಾವಿರ ರೂ.) ನೀಡುವುದಾಗಿ ಇಟಲಿ ಸರಕಾರ ಘೋಷಿಸಿದೆ. ಈ ಸೌಕರ್ಯವನ್ನು ಮುಂದಿನ 6 ತಿಂಗಳವರೆಗೆ ನೀಡುವುದಾಗಿ ಸರಕಾರ ತಿಳಿಸಿದೆ.

ಉಕ್ರೇನಿಯರಿದ್ದ ಬಸ್‌ ಅಪಘಾತ: ರಷ್ಯಾ ದಾಳಿ ನಡೆಸುತ್ತಿರುವ ಉಕ್ರೇನ್‌ನಿಂದ ತಪ್ಪಿಸಿಕೊಂಡು ಬಂದಿದ್ದ ಉಕ್ರೇನ್‌ ನಾಗರಿಕರನ್ನು ಹೊತ್ತೂಯ್ಯುತ್ತಿದ್ದ ಬಸ್‌ ಇಟಲಿಯ ಪ್ರಮುಖ ಹೆದ್ದಾರಿಯೊಂದರಲ್ಲಿ ಉರುಳಿ ಬಿದ್ದಿದೆ. ಬಸ್ಸಿನಲ್ಲಿ 50 ಉಕ್ರೇನಿಯರಿದ್ದು, ಅದರಲ್ಲಿ ಓರ್ವ ಸಾವನ್ನಪ್ಪಿದ್ದು, ಹಲವರು ಗಾಯಾಳುಗಳಾಗಿರುವುದಾಗಿ ವರದಿಯಾಗಿದೆ. “ಬಸ್‌ಪೆಸ್ಕಾರಾ ನಗರದತ್ತ ತೆರಳುತ್ತಿತ್ತು. ಫೋರ್ಲಿ ನಗರದ ಬಳಿ ಈ ಅಪಘಾತ ಸಂಭವಿಸಿದೆ’ ಎಂದು ಇಟಲಿಯ ಆಂತರಿಕ ಸಚಿವಾಲಯ ತಿಳಿಸಿದೆ. ಯುದ್ಧಪೀಡಿತ ಉಕ್ರೇನ್‌ನಿಂದ ಒಟ್ಟು 35 ಸಾವಿರಕ್ಕೂ ಅಧಿಕ ಮಂದಿ ಇಟಲಿಗೆ ಸ್ಥಳಾಂತರಗೊಂಡಿದ್ದಾರೆ.

Advertisement

800 ಮಂದಿಯನ್ನು ಕರೆತಂದ 24ರ ಯುವತಿ
ಯುದ್ಧಪೀಡಿತ ಉಕ್ರೇನ್‌ನಿಂದ 800ಕ್ಕೂ ಅಧಿಕ ಭಾರತೀಯರನ್ನು “ಆಪರೇಷನ್‌ ಗಂಗಾ’ ಮೂಲಕ ತಾಯ್ನಾಡಿಗೆ ವಾಪಸು ಕರೆತರಲಾಗಿದೆ. ವಿಶೇಷವೆಂದರೆ ಈ ಆಪರೇಷನ್‌ನಲ್ಲಿ ಕೋಲ್ಕತಾ ಮೂಲದ 24 ವರ್ಷದ ಪೈಲಟ್‌ ಮಹಾಶ್ವೇತ ಚಕ್ರವರ್ತಿ ಪ್ರಮುಖ ಪಾತ್ರ ವಹಿಸಿದ್ದಾರೆ. ಪೋಲೆಂಡ್‌ನಿಂದ ಭಾರತಕ್ಕೆ ಬಂದ ಭಾರತೀಯರನ್ನು ಕರೆತಂದ ನಾಲ್ಕು ಮತ್ತು ಹಂಗೇರಿಯಿಂದ ಬಂದ 2 ವಿಮಾನಗಳಿಗೆ ಮಹಾಶ್ವೇತ ಪೈಲಟ್‌ ಆಗಿ ಕೆಲಸ ಮಾಡಿದ್ದಾರೆ. ಸಾಮಾನ್ಯ ವರ್ಗದ ಕುಟುಂಬದ ಏಕೈಕ ಮಗಳಾಗಿರುವ ಮಹಾಶ್ವೇತ ಅತೀ ಚಿಕ್ಕ ವಯಸ್ಸಿನಲ್ಲಿ ದೇಶದ 2 ಪ್ರಮುಖ ಆಪರೇಷನ್‌ಗಳಿಗಾಗಿ ಕೆಲಸ ಮಾಡಿದ್ದಾರೆ. ಅವರ ಮೊದಲ ಆಪರೇಷನ್‌ ಕೊರೊನಾ ಸಮಯದಲ್ಲಿ ನಡೆದ “ವಂದೇ ಭಾರತ್‌’ ಆಪರೇಷನ್‌ ಆಗಿತ್ತು.

ಹರೇ ಕೃಷ್ಣ ಮಂತ್ರ ಪಠಿಸಿದ ಯೋಧ
ಉಕ್ರೇನ್‌ ಯೋಧರು ರಷ್ಯಾದ ದಾಳಿಯನ್ನು ತಡೆಯಲು ಸಕಲ ಪ್ರಯತ್ನ ನಡೆಸುತ್ತಿದ್ದಾರೆ. ಅದೇ ರೀತಿ ಅಲ್ಲಿನ ಆ್ಯಂಡ್ರೆ ಹೆಸರಿನ ಯೋಧ “ಹರೇ ಕೃಷ್ಣ ಹರೇ ರಾಮ’ ಮಂತ್ರವನ್ನು ಪಠಿಸಿ, ಶತ್ರುಗಳ ವಿರುದ್ಧ ಹೋರಾಡಲು ಚೈತನ್ಯ ತುಂಬಿಸಿಕೊಳ್ಳುತ್ತಿದ್ದಾರಂತೆ.

ಹೌದು ಈ ವಿಚಾರವಾಗಿ “ಇಂಡಿಯಾ ಟುಡೇ’ ಸಂಸ್ಥೆಯ ವರದಿಗಾರರು ಆ್ಯಂಡ್ರೇ ಅವ ರನ್ನು ಮಾತನಾಡಿಸಿದ್ದಾರೆ. ಆ್ಯಂಡ್ರೆ ಪ್ರತಿನಿತ್ಯ ಮಂತ್ರ ಪಠಿಸಿ, ಯುದ್ಧಕ್ಕಾಗಿ ಹೊರಡುತ್ತಿರುವು ದಾಗಿ ಹೇಳಿಕೊಂಡಿದ್ದಾರೆ. ಕೀವ್‌ ಮೂಲದವ ರಾಗಿರುವ ಅವರು 25 ವರ್ಷಗಳ ಹಿಂದೆ ಕೀವ್‌ನಲ್ಲಿ ನಡೆದ ಕೃಷ್ಣ ಆಂದೋಲನದಲ್ಲಿ ಭಾಗವಹಿಸಿ ಆ ಮಂತ್ರವನ್ನು ಕಲಿತಿದ್ದರಂತೆ. ಅದೇ ರೀತಿ ಭಗವದ್ಗೀತೆಯಲ್ಲಿ ಅರ್ಜುನನಿಗೆ ಕೃಷ್ಣ ಧೈರ್ಯ ತುಂಬುವುದನ್ನೇ ನೆನಪಿಸಿಕೊಂಡು ನಾನೀಗ ಯುದ್ಧಕ್ಕೆ ಸಿದ್ಧನಾಗುತ್ತಿದ್ದೇನೆ ಎಂದು ಅವರು ತಿಳಿಸಿದ್ದಾರೆ. ಮಾಜಿ ಕ್ರೀಡಾಪಟುವಾಗಿದ್ದು, ರಷ್ಯಾ ವಿರುದ್ಧ ಹೋರಾಡುವುದಕ್ಕಾಗಿಯೇ ಸೇನೆ ಸೇರಿರುವ ಅವರು 2 ಬಾರಿ ಭಾರತಕ್ಕೆ ಭೇಟಿ ಕೊಟ್ಟಿರುವುದಾಗಿಯೂ ತಿಳಿಸಿದ್ದಾರೆ.

ರಷ್ಯಾಕ್ಕೆ ಗೂಗಲ್‌ ಬರೆ
ಉಕ್ರೇನ್‌ ಮೇಲೆ ರಷ್ಯಾ ದಾಳಿ ನಡೆಸಿರುವುದನ್ನು ಖಂಡಿಸಿ ಗೂಗಲ್‌ ಸಂಸ್ಥೆ ರಷ್ಯಾ ವಿರುದ್ಧ ಕ್ರಮ ಕೈಗೊಂಡಿದೆ. ರಷ್ಯಾ ನಾಗರಿಕರಿಗೆ ಗೂಗಲ್‌ ಪ್ಲೇನಲ್ಲಿ ಆ್ಯಪ್‌ ಖರೀದಿ ಮಾಡುವುದಕ್ಕೆ ಮತ್ತು ಚಂದಾದಾರಿಕೆ ಪಡೆದುಕೊಳ್ಳುವುದಕ್ಕೆ ನಿಷೇಧ ಹೇರಲಾಗಿದೆ. ಉಚಿತ ಆ್ಯಪ್‌ಗ್ಳು ಎಂದಿನಂತೆ ಲಭ್ಯವಿರಲಿವೆ.

ಸಮರಾಂಗಣದಲ್ಲಿ
-ಲೀವ್‌ ನಗರದಲ್ಲಿನ ವಾಯುನೆಲೆ ಮೇಲೆ ರಷ್ಯಾ ವಾಯುಪಡೆ ದಾಳಿ; 35 ಸಾವು.
-ಕೀವ್‌ ನಗರದಲ್ಲಿರುವ ಭಾರತದ ರಾಜತಾಂತ್ರಿಕ ಕಚೇರಿ ಪೋಲೆಂಡ್‌ಗೆ ಸ್ಥಳಾಂತರ.
-ಇರ್ಪಿನ್‌ನಲ್ಲಿ ಡ್ಯಾನಿಲೋ ಶಪಾವಲೊವ್‌ ಎಂಬ
-ಅಮೆರಿಕದ ಪತ್ರಕರ್ತನನ್ನು ಹತ್ಯೆಗೈದ ರಷ್ಯಾ ಪಡೆಗಳು.
-ಇಟಲಿಯಲ್ಲಿ ಉಕ್ರೇನ್‌ ನಿರಾಶ್ರಿತರಿದ್ದ ಬಸ್‌ ಅಪಘಾತ; ಒಬ್ಬ ಸಾವು, ಹಲವರಿಗೆ ಗಾಯ.
-ರಷ್ಯಾ ಸೈನಿಕರಿಂದ ಝಪೋರಾ ಝಿಯಾ ನಗರದ ಮೇಯರ್‌, ಎವ್ಹೆನ್‌ ಮ್ಯಾಟ್ವಿವ್‌ ಅಪಹರಣ.
– ಉಕ್ರೇನ್‌ ನಿರಾಶ್ರಿತರಿಗೆ ಆಶ್ರಯ ನೀಡುವ ಕುಟುಂಬಗಳಿಗೆ ಮಾಸಿಕ 300 ಪೌಂಡ್‌: ಇಟಲಿ ಘೋಷಣೆ

Advertisement

Udayavani is now on Telegram. Click here to join our channel and stay updated with the latest news.

Next