ಕೀವ್: ಶಸ್ತ್ರಾಸ್ತ್ರ ತ್ಯಜಿಸಿ ಶರಣಾಗಿ ಎಂಬ ರಷ್ಯಾ ಪಡೆಯ ಅಂತಿಮ ಗಡುವನ್ನು ಉಕ್ರೇನ್ ನ ಮರಿಯುಪೋಲ್ ಬಂದರು ನಗರಿ ತಿರಸ್ಕರಿಸಿರುವುದಾಗಿ ದೇಶದ ಉಪಪ್ರಧಾನಿ ಮಾಧ್ಯಮಕ್ಕೆ ತಿಳಿಸಿರುವುದಾಗಿ ವರದಿ ಹೇಳಿದೆ.
ಇದನ್ನೂ ಓದಿ:ಕಾಪು : ಗುಜರಿ ಅಂಗಡಿಯಲ್ಲಿ ಸಿಲಿಂಡರ್ ಸ್ಫೋಟ ಇಬ್ಬರು ಸಜೀವ ದಹನ
ಶಸ್ತ್ರಾಸ್ತ್ರ ತ್ಯಜಿಸುವ ಬಗ್ಗೆ ಯಾವುದೇ ಮಾತುಕತೆ ಸಾಧ್ಯವಿಲ್ಲ ಎಂದು ನಾವು ಈಗಾಗಲೇ ರಷ್ಯಾ ಪಡೆಗೆ ತಿಳಿಸಿರುವುದಾಗಿ ಐರ್ಯಾನಾ ವೆರೆಶ್ಚುಕ್ ಉಕ್ರೇನ್ ನ ಪ್ರಾವ್ಡಾ ದೈನಿಕಕ್ಕೆ ತಿಳಿಸಿದ್ದಾರೆ.
ಉಕ್ರೇನ್ ನ ಮುಖ್ಯ ಬಂದರು ನಗರಿಯಾಗಿರುವ ಮರಿಯುಪೋಲ್ ಅನ್ನು ವಶಕ್ಕೆ ಪಡೆಯಬೇಕೆಂದು ರಷ್ಯಾಪಡೆ ಹೆಣಗಾಡುತ್ತಿದ್ದು, ಏತನ್ಮಧ್ಯೆ ಉಕ್ರೇನ್ ಸೇನೆ ರಷ್ಯಾ ಸೇನೆಗೆ ತೀವ್ರ ಪ್ರತಿರೋಧ ಒಡ್ಡುತ್ತಿರುವುದಾಗಿ ವರದಿ ತಿಳಿಸಿದೆ.
ಫೆಬ್ರುವರಿ 24ರಿಂದ ರಷ್ಯಾ ಸೇನೆ ನಿರಂತರವಾಗಿ ಉಕ್ರೇನ್ ಮೇಲೆ ದಾಳಿ ನಡೆಸುತ್ತಿದ್ದು, ಈಗಾಗಲೇ ಮರಿಯುಪೋಲ್ ಸೇರಿದಂತೆ ಹಲವಾರು ಮುಖ್ಯನಗರಗಳ ಮೇಲೆ ರಷ್ಯಾಸೇನೆಯ ಬಾಂಬ್ ದಾಳಿಗೆ ನಲುಗಿ ಹೋಗಿವೆ. ಅಂದಾಜು 4,00,000 ಉಕ್ರೇನ್ ನಿವಾಸಿಗಳು ಅನ್ನ, ನೀರು, ವಸತಿ ಇಲ್ಲದೆ ಪರದಾಡುತ್ತಿರುವುದಾಗಿ ವರದಿ ವಿವರಿಸಿದೆ.
ಉಕ್ರೇನ್ ಗೆ ಅಂತಾರಾಷ್ಟ್ರೀಯ ಬೆಂಬಲ ನೀಡುವ ನಿಟ್ಟಿನಲ್ಲಿ ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಶುಕ್ರವಾರ ಪೋಲ್ಯಾಂಡ್ ಗೆ ತೆರಳಿ ಮಾತುಕತೆ ನಡೆಸಿದ್ದಾರೆ. ನಿಮ್ಮ ತಪ್ಪುಗಳನ್ನು ಸರಿಪಡಿಸಿಕೊಳ್ಳಲು ಶಾಂತಿ ಮಾತುಕತೆಯೊಂದೇ ನಿಮಗೆ ಉಳಿದಿರುವ ಕೊನೆಯ ಅವಕಾಶವಾಗಿದೆ ಎಂದು ಉಕ್ರೇನ್ ಅಧ್ಯಕ್ಷ ಝೆಲೆನ್ ಸ್ಕಿ ರಷ್ಯಾಕ್ಕೆ ತಿಳಿಸಿರುವುದಾಗಿ ವರದಿ ಹೇಳಿದೆ.