ಲಂಡನ್: ಕೋವಿಡ್-19 ಸೋಂಕು ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ ಗೂ ಕಂಟಕವಾಗಿ ಪರಿಣಮಿಸಿದ್ದು ಆರೋಗ್ಯ ತೀವ್ರ ಹದಗೆಟ್ಟ ಹಿನ್ನಲೆಯಲ್ಲಿ ಅವರನ್ನು ತುರ್ತು ನಿಗಾ ಘಟಕಕ್ಕೆ (ಐಸಿಯು) ಸ್ಥಳಾಂತರಿಸಲಾಗಿದೆ ಎಂದು ವರದಿ ತಿಳಿಸಿದೆ.
ಕೋವಿಡ್ 19 ವೈರಸ್ ದೃಢಪಟ್ಟಿದ್ದರಿಂದ ಬೋರಿಸ್ ಜಾನ್ಸನ್ ಸೆಲ್ಫ್ ಕ್ವಾರಂಟೈನ್ ಗೆ ಒಳಗಾಗಿದ್ದರು, ಆದರೆ ಭಾನುವಾರ ಸಂಜೆ ವಿಪರೀತ ಜ್ವರದ ಕಾರಣ ಲಂಡನ್ ನ ಸೇಂಟ್ ಥಾಮಸ್ ಆಸ್ಪತ್ರೆಗೆ ದಾಖಲಾಗಿದ್ದರು. ಅವರ ಆರೋಗ್ಯ ತೀವ್ರ ಹದಗೆಟ್ಟಿದ್ದರಿಂದ ಐಸಿಯುಗೆ ಅವರನ್ನು ಶಿಫ್ಟ್ ಮಾಡಲಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.
“ಬೋರಿಸ್ ಅವರನ್ನು ಆಸ್ಪತ್ರೆಗೆ ಸೇರ್ಪಡೆ ಮಾಡಲಾಗಿದ್ದು ಚಿಕಿತ್ಸೆ ನೀಡಲಾಗುತ್ತಿದೆ. ಸೋಮವಾರ ಮಧ್ಯಾಹ್ನ ಅವರ ಆರೋಗ್ಯ ತೀವ್ರ ಗಂಭೀರವಾಗಿತ್ತು. ಹೀಗಾಗಿ ಆಸ್ಪತ್ರೆ ವೈದ್ಯರು ವಿಶೇಷ ಚಿಕಿತ್ಸೆ ನೀಡುತ್ತಿದ್ದಾರೆ,” ಎಂದು ಪಿಎಂ ಕಚೇರಿ ತಿಳಿಸಿದೆ.
ಈ ನಡುವೆ ಪ್ರಧಾನಿ ನರೇಂದ್ರ ಮೋದಿ ಸಹ ಟ್ವೀಟ್ ಮಾಡಿದ್ದು, ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿರುವ ಬೋರಿಸ್ ಜಾನ್ಸನ್ ಅವರ ಶೀಘ್ರ ಚೇತರಿಕೆಗೆ ಪ್ರಾರ್ಥಿಸಿದ್ದಾರೆ.
ಮಾರಣಾಂತಿಕ ಕೋವಿಡ್-19 ವೈರಸ್ ಅನೇಕ ದೇಶಗಳಲ್ಲಿ ಮರಣಮೃದಂಗವನ್ನು ಬಾರಿಸಿದ್ದು ಜಗತ್ತಿನಾದ್ಯಂತ 13 ಲಕ್ಷಕ್ಕಿಂತ ಹೆಚ್ಚು ಜನರು ಸೋಂಕಿಗೆ ತುತ್ತಾಗಿದ್ದಾರೆ. ಮಾತ್ರವಲ್ಲದೆ 74 ಸಾವಿರಕ್ಕಿಂತ ಹೆಚ್ಚು ಜನರು ಬಲಿಯಾಗಿದ್ದಾರೆ.