Advertisement

ರಿಷಿ ವರ್ಸಸ್‌ ಜಾನ್ಸನ್‌? ಮಾಜಿ ಸಚಿವ, ಮಾಜಿ ಪಿಎಂ ನಡುವೆ ಸ್ಪರ್ಧೆ ಸಾಧ್ಯತೆ

08:50 PM Oct 22, 2022 | Team Udayavani |

ಲಂಡನ್‌: ಬ್ರಿಟನ್‌ನ ಮುಂದಿನ ಪ್ರಧಾನಮಂತ್ರಿ ಹುದ್ದೆಗೆ ಮಾಜಿ ಸಚಿವ ರಿಷಿ ಸುನಕ್‌ ಮತ್ತು ಮಾಜಿ ಪ್ರಧಾನಿ ಬೋರಿಸ್‌ ಜಾನ್ಸನ್‌ ನಡುವೆ ನಿಕಟ ಸ್ಪರ್ಧೆ ಏರ್ಪಡುವ ಸಾಧ್ಯತೆ ಇದೆ.

Advertisement

ಮಾಹಿತಿ ತಂತ್ರಜ್ಞಾನ ಸಂಸ್ಥೆ ಇನ್ಫೋಸಿಸ್‌ನ ಸಂಸ್ಥಾಪಕಡಾ.ಎನ್‌.ಆರ್‌.ನಾರಾಯಣಮೂರ್ತಿ ಅವರ ಅಳಿಯ, ವಿತ್ತ ಖಾತೆ ಮಾಜಿ ಸಚಿವ ರಿಷಿ ಸುನಕ್‌ ಅವರು ಅಧಿಕೃತವಾಗಿ ಪ್ರಧಾನಿ ಹುದ್ದೆಯ ರೇಸ್‌ನಲ್ಲಿ ಇರುವ ಬಗ್ಗೆ ಘೋಷಣೆ ಮಾಡದೇ ಇದ್ದರೂ, ಅವರ ಬೆಂಬಲಿಗರು 100ಕ್ಕೂ ಅಧಿಕ ಮಂದಿ ಸಂಸದರು, ಬೆಂಬಲ ಸೂಚಿಸಿದ್ದಾರೆ ಎಂದು ಹೇಳಿಕೊಂಡಿದ್ದಾರೆ. ಜತೆಗೆ ಅತ್ಯುನ್ನತ ಹುದ್ದೆಗೆ ಅತ್ಯಂತ ಫೇವರೇಟ್‌ ವ್ಯಕ್ತಿ ಎನಿಸಿಕೊಂಡಿದ್ದಾರೆ.

ರಿಷಿ ಸುನಕ್‌ ಅವರು ಕನ್ಸರ್ವೇಟಿವ್‌ ಪಕ್ಷದ ಟೋರಿ ಸಮಿತಿಯ ವಿವಿಧ ಸದಸ್ಯರು, ಸಂಸದರ ಬೆಂಬಲವನ್ನು ಈಗಾಗಲೇ ಪಡೆದುಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ. “ರಿಷಿ ಸುನಕ್‌ ಅವರು ಹಿಂದಿನ ಸಂದರ್ಭದಲ್ಲಿ ಕೂಡ ಸರಿಯಾದ ಯೋಜನೆಯನ್ನೇ ಹೊಂದಿದ್ದರು. ಸದ್ಯದ ಪರಿಸ್ಥಿತಿಯಲ್ಲಿ ಕೂಡ ಅದನ್ನೇ ಹೊಂದಿದ್ದಾರೆ. ದೇಶವನ್ನು ಮುನ್ನಡೆಸಲು ಅವರೇ ಸೂಕ್ತ ವ್ಯಕ್ತಿ’ ಎಂದು ಮಾಜಿ ಉಪ ಪ್ರಧಾನಿ ಡೊಮಿನಿಕ್‌ ರಾಬ್‌ ಹೇಳಿದ್ದಾರೆ.

ಲಂಡನ್‌ಗೆ ವಾಪಸ್‌:
ಇನ್ನೊಂದೆಡೆ, ಎರಡನೇ ಬಾರಿಗೆ ಅದೃಷ್ಟ ಪರೀಕ್ಷೆಗೆ ಇಳಿಯಬೇಕು ಎಂದು ಮನಸ್ಸು ಮಾಡಿರುವ ಮಾಜಿ ಪ್ರಧಾನಿ ಬೋರಿಸ್‌ ಜಾನ್ಸನ್‌ ಅವರು ಕೆರೆಬಿಯನ್‌ ದ್ವೀಪ ಸಮೂಹದ ಪ್ರವಾಸದಿಂದ ಲಂಡನ್‌ಗೆ ವಾಪಸಾಗಿದ್ದಾರೆ. ಬೆಂಬಲಿಗರ ಜತೆಗೆ ಸಮಾಲೋಚನೆ ನಡೆಸಿರುವ ಬೋರಿಸ್‌ ಜಾನ್ಸನ್‌ ಪರವಾಗಿಯೂ 100 ಸಂಸದರು ಬೆಂಬಲ ನೀಡಿದ್ದಾರೆ ಎಂಬ ವರ್ತಮಾನಗಳು ಈಗ ಲಭ್ಯವಾಗಿವೆ. ಆದರೆ, ರಿಷಿ ಸುನಕ್‌ ಬೆಂಬಲಿಗರು ಈ ಮಾಹಿತಿಯನ್ನು ಅಲ್ಲಗಳೆದಿದ್ದಾರೆ. ಶುಕ್ರವಾರ ಪ್ರಕಟವಾಗಿದ್ದ ಆನ್‌ಲೈನ್‌ ಸಮೀಕ್ಷೆಯಲ್ಲಿ ಬೋರಿಸ್‌ ಜಾನ್ಸನ್‌ ಮತ್ತೆ ಪ್ರಧಾನಿಯಾಗುವುದು ಬೇಡ ಎಂದು ಶೇ.52 ಮಂದಿ ಅಭಿಪ್ರಾಯಪಟ್ಟಿದ್ದರು. ಇದೇ ವೇಳೆ, ಮಾಜಿ ಸಚಿವೆ ಪ್ರೀತಿ ಪಟೇಲ್‌ ಜಾನ್ಸನ್‌ ಅವರಿಗೆ ಬೆಂಬಲ ವ್ಯಕ್ತಪಡಿಸಿದ್ದಾರೆ.

ಯಾರಿಗೆ ಬೆಂಬಲ ಹೇಗೆ?
357- ಕನ್ಸರ್ವೇಟಿವ್‌ ಪಕ್ಷದ ಒಟ್ಟು ಸಂಸದರು
186- ಸದ್ಯ ಬೆಂಬಲ ಘೋಷಣೆ ಮಾಡಿದವರು
114- ರಿಷಿ ಸುನಕ್‌
50- ಬೋರಿಸ್‌ ಜಾನ್ಸನ್‌
22- ಪೆನ್ನಿ ಮಾರ್ಡೆಂಟ್‌

Advertisement

 

Advertisement

Udayavani is now on Telegram. Click here to join our channel and stay updated with the latest news.

Next