Advertisement

ರಾಜ್ಯದ ಫ‌ಲಾನುಭವಿಗಳಿಗೆ ಇನ್ನೂ ಸಿಕ್ಕಿಲ್ಲ  “ಉಜ್ವಲ ಭಾಗ್ಯ’

03:45 AM Feb 20, 2017 | Team Udayavani |

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿಯವರ ಮಹತ್ವಾಕಾಂಕ್ಷೆಯ “ಉಜ್ವಲ’ ಯೋಜನೆ ಘೋಷಣೆಯಾಗಿ ಹತ್ತು ತಿಂಗಳಾಗುತ್ತಾ ಬಂದಿದ್ದರೂ, ರಾಜ್ಯದ ಫ‌ಲಾನುಭವಿಗಳಿಗೆ ಇನ್ನೂ ಅದರ ಫ‌ಲ ಸಿಗುತ್ತಿಲ್ಲ.

Advertisement

ಕೇಂದ್ರ ಸರ್ಕಾರದ ಮಾರ್ಗಸೂಚಿಗಳಂತೆ ತೈಲ ಕಂಪನಿಗಳು ಮನೆ-ಮನೆ ಸಮೀಕ್ಷೆ ನಡೆಸಿ ಉಜ್ವಲ ಯೋಜನೆಗಾಗಿ ರಾಜ್ಯದ 8 ಲಕ್ಷ ಫ‌ಲಾನುಭವಿಗಳ ಪಟ್ಟಿ ಸಿದ್ಧಪಡಿಸಿಕೊಂಡಿವೆ. ಅಲ್ಲದೇ “ಉಜ್ವಲ’ ಯೋಜನೆಯಡಿ ಆಯ್ಕೆಯಾಗುವ ರಾಜ್ಯದ ಫ‌ಲಾನುಭವಿಗಳಿಗೆ ಸಾವಿರ ರೂ. ಸಹಾಯಧನದಲ್ಲಿ “ಎರಡು ಬರ್ನರ್‌ ಇರುವ ಗ್ಯಾಸ್‌ ಸ್ಟೌವ್‌’ ನೀಡಲು
ರಾಜ್ಯ ಸರ್ಕಾರ ತೀರ್ಮಾನಿಸಿದೆ. ಆದರೆ, ಕೇಂದ್ರ ಸರ್ಕಾರದಿಂದ ಯೋಜನೆ ಜಾರಿಗೆ ಹಸಿರು ನಿಶಾನೆ ಸಿಗದಿರುವುದರಿಂದ ಅಡುಗೆ ಅನಿಲ ಸಂಪರ್ಕ ಹೊಂದಿಲ್ಲದ ರಾಜ್ಯದ ಬಿಪಿಎಲ್‌ ಕುಟುಂಬಗಳಿಗೆ “ಉಜ್ವಲ ಭಾಗ್ಯ’ ಸಿಕ್ಕಿಲ್ಲ.

ಈಗಾಗಲೇ ಮಧ್ಯಪ್ರದೇಶ, ಉತ್ತರ ಪ್ರದೇಶ, ಹಿಮಾಚಲ ಪ್ರದೇಶ, ಉತ್ತರಾಖಂಡ್‌, ಜಾರ್ಖಂಡ್‌ ಸೇರಿ ಬಹುತೇಕ ಉತ್ತರ ಭಾರತದ ಹಲವು ರಾಜ್ಯಗಳಲ್ಲಿ “ಉಜ್ವಲ’ ಯೋಜನೆ ಜಾರಿಗೆ ಬಂದಿದೆ. ದಕ್ಷಿಣ ಭಾರತದಲ್ಲಿ ಕೇರಳ ರಾಜ್ಯ ಹೊರತುಪಡಿಸಿ, ಬೇರಾವ ರಾಜ್ಯದಲ್ಲೂ ಈ ಯೋಜನೆ ಇನ್ನೂ ಜಾರಿಗೆ ಬಂದಿಲ್ಲ. ದೇಶದ ಪ್ರತಿ ಕುಟುಂಬಕ್ಕೂ ಅಡುಗೆ ಅನಿಲ ಸಂಪರ್ಕ ಸಿಗಬೇಕು. ಅದರಲ್ಲೂ ಮುಖ್ಯವಾಗಿ ಯಾವ ಬಿಪಿಎಲ್‌ ಕುಟುಂಬವೂ ಅಡುಗೆ ಅನಿಲ ಸಂಪರ್ಕದಿಂದ ವಂಚಿತವಾಗಬಾರದು ಎಂಬ ಸದುದ್ದೇಶದಿಂದ ಪ್ರಧಾನಿ ಮೋದಿಯವರು 2016ರ ಮೇ 1ರಂದು “ಪ್ರಧಾನಮಂತ್ರಿ ಉಜ್ವಲ ಯೋಜನೆ’ಗೆ ಚಾಲನೆ ನೀಡಿದ್ದರು. 2011ರ ಸಾಮಾಜಿಕ, ಆರ್ಥಿಕ ಮತ್ತು ಜಾತಿಗಣತಿ ಪಟ್ಟಿಯಲ್ಲಿ (ಎಸ್‌ಇಸಿಸಿ-2011) ಹೆಸರು ಇರುವ ಹಾಗೂ ಅಡುಗೆ ಅನಿಲ ಸಂಪರ್ಕ ಇಲ್ಲದ ವ್ಯಕ್ತಿಯು “ಉಜ್ವಲ’ ಯೋಜನೆ ವ್ಯಾಪ್ತಿಗೆ ಬರುತ್ತಾರೆ ಎಂದು ಕೇಂದ್ರ ಸರ್ಕಾರ ಮಾನದಂಡಗಳನ್ನು ನಿಗದಿಪಡಿಸಿತ್ತು. ಆ ಪ್ರಕಾರ ರಾಜ್ಯದಲ್ಲಿ 36 ಲಕ್ಷ ಫ‌ಲಾನುಭವಿಗಳು ಆಗುತ್ತಾರೆ. ಅದರಲ್ಲಿ ಮನೆ-ಮನೆ ಸಮೀಕ್ಷೆ ನಡೆಸಿ ತೈಲ ಕಂಪನಿಗಳು 8 ಲಕ್ಷ ಫ‌ಲಾನುಭವಿಗಳ ಪಟ್ಟಿ ಸಿದ್ಧಪಡಿಸಿಕೊಂಡಿವೆ.

“ಉಜ್ವಲ’ ಯೋಜನೆಯ ಪ್ರತಿಯೊಬ್ಬ ಫ‌ಲಾನುಭವಿಗೆ ಕೇಂದ್ರ ಅಡುಗೆ ಅನಿಲ ಸಂಪರ್ಕ ಪಡೆದುಕೊಳ್ಳಲು ಬೇಕಾದ ಠೇವಣಿ, ಮೊದಲ ಬಾರಿಯ ಸಿಲಿಂಡರ್‌ μಲ್ಲಿಂಗ್‌ ಹಾಗೂ ಸಂಪರ್ಕ ನಳಿಕೆಗೆ ಬೇಕಾಗುವ 1,600 ರೂ. ಒಂದು ಬಾರಿಗೆ
ಸಹಾಯಧನದ ರೂಪದಲ್ಲಿ ನೀಡುತ್ತದೆ. ರಾಜ್ಯದಿಂದ ಉಚಿತ “ಸ್ಟೌವ್‌’: ಉಜ್ವಲ ಯೋಜನೆಯಡಿ ಆಯ್ಕೆಯಾಗುವ ರಾಜ್ಯದ ಫ‌ಲಾನುಭವಿಗಳಿಗೆ 5 ಕೆ.ಜಿ. ಸಾಮರ್ಥಯದ ಒಂದು ಎಲ್‌ಪಿಜಿ ಸಿಲಿಂಡರ್‌ ನೀಡಬೇಕು ಎಂದು ರಾಜ್ಯ
ಸರ್ಕಾರ ತೀರ್ಮಾನಿಸಿತ್ತು. ಆದರೆ, ಕೇಂದ್ರ ಇದಕ್ಕೆ ಒಪ್ಪಿಗೆ ನೀಡಲಿಲ್ಲ. ಹೀಗಾಗಿ, ಫ‌ಲಾನುಭವಿಗಳಿಗೆ ಕೇಂದ್ರ ಸರ್ಕಾರ ಗ್ಯಾಸ್‌ ಸ್ಟವ್‌ ನೀಡುವುದಿಲ್ಲ ಎಂದು ಅರಿತ ರಾಜ್ಯ ಸರ್ಕಾರ, 5 ಕೆ.ಜಿ ಸಿಲಿಂಡರ್‌ ಬದಲು ರಾಜ್ಯದ ಪ್ರತಿ ಫ‌ಲಾನುಭವಿಗೆ ಗರಿಷ್ಠ 1 ಸಾವಿರ ರೂ. ಸಹಾಯಧನ ರೂಪದ ಮೊತ್ತದಲ್ಲಿ ಎರಡು ಬರ್ನರ್‌ ಹೊಂದಿರುವ ಗ್ಯಾಸ್‌ ಸ್ಟೌವ್‌ ನೀಡಲು ತೀರ್ಮಾನಿಸಿದೆ. ಅದಕ್ಕೆ ಕೇಂದ್ರ ಸರ್ಕಾರದ ಒಪ್ಪಿಗೆಯೂ ಸಿಕ್ಕಿದೆ.

ಆದರೆ, ಕೇಂದ್ರ ಸರ್ಕಾರದಿಂದ ದಿನಾಂಕ ನಿಗದಿ ಆಗದೇ ಇರುವುದರಿಂದ ರಾಜ್ಯದಲ್ಲಿ ಯೋಜನೆ ಅನುಷ್ಠಾನಕ್ಕೆ ಬಂದಿಲ್ಲ. 

Advertisement

 2.5 ಲಕ್ಷ ಜನರಿಗೆ ಮಾತ್ರ ಅಡುಗೆ ಅನಿಲ “ಉಜ್ವಲ’ ಯೋಜನೆಗೆ ಕೇಂದ್ರ ಸರ್ಕಾರ ನಿಗದಿಪಡಿಸಿರುವ ಮಾನದಂಡಗಳ ಪ್ರಕಾರ ರಾಜ್ಯದಲ್ಲಿ 36 ಲಕ್ಷ ಮಂದಿ ಈ ಯೋಜನೆ ವ್ಯಾಪ್ತಿಗೆ ಬರುತ್ತಾರೆ. ಆದರೆ, ಇವರಲ್ಲಿ ಬಹುತೇಕರು ಈಗಾಗಲೇ ಅಡುಗೆ ಅನಿಲ ಸಂಪರ್ಕ ಪಡೆದುಕೊಂಡಿದ್ದಾರೆ. ಹಾಗಾಗಿ ತೈಲ ಕಂಪನಿಗಳು ಸಮೀಕ್ಷೆ ನಡೆಸಿ 8 ಲಕ್ಷ ಅರ್ಹ ಫ‌ಲಾನುಭವಿಗಳ ಪಟ್ಟಿ ಸಿದ್ದಪಡಿಸಿಕೊಂಡಿವೆ. ಆದರೂ, 2017-18ರಲ್ಲಿ ರಾಜ್ಯದ 2.5 ಲಕ್ಷ ಫ‌ಲಾನುಭವಿಗಳಿಗೆ ಮಾತ್ರ “ಉಜ್ವಲ’ ಭಾಗ್ಯ ನೀಡಲು ಕೇಂದ್ರ ಸರ್ಕಾರ ಗುರಿ ಇಟ್ಟುಕೊಂಡಿದೆ ಎಂದು ಆಹಾರ ಇಲಾಖೆ ಮೂಲಗಳು ತಿಳಿಸಿವೆ.

Advertisement

Udayavani is now on Telegram. Click here to join our channel and stay updated with the latest news.

Next