Advertisement

ಉಜಿರೆ ಎಸ್‌ಡಿಎಂ ಕಾಲೇಜು: ಹಸುರು ಚಾಂಪಿಯನ್‌ ಪ್ರಶಸ್ತಿಯ ಗರಿ

12:59 AM Feb 05, 2022 | Team Udayavani |

ಬೆಳ್ತಂಗಡಿ: ಭಾರತ ಸರಕಾರದ ಶಿಕ್ಷಣ ಸಚಿವಾಲಯ, ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಶಿಕ್ಷಣ ಪರಿಷತ್‌, ಉನ್ನತ ಶಿಕ್ಷಣ ಇಲಾಖೆಯಿಂದ ಸ್ವಚ್ಛತಾ ಕಾರ್ಯ ಯೋಜನೆಯಡಿಯಲ್ಲಿ ನೀಡುವ ಜಿಲ್ಲಾ ಹಸುರು ಚಾಂಪಿಯನ್‌ 2021-22 ಪ್ರಶಸ್ತಿಯನ್ನು ಉಜಿರೆಯ ಎಸ್‌ಡಿಎಂ ಕಾಲೇಜು (ಸ್ವಾಯತ್ತ) ಪಡೆದುಕೊಂಡಿದೆ.

Advertisement

ಕಾಲೇಜಿನಲ್ಲಿ ಸ್ವಚ್ಛತೆ ಮತ್ತು ನೈರ್ಮಲ್ಯವನ್ನು ವೃದ್ಧಿಸುವ ನಿಟ್ಟಿನಲ್ಲಿ ಕೈಗೊಂಡ ಉಪಕ್ರಮಗಳನ್ನು ಗುರುತಿಸಿ ಈ ಪ್ರಶಸ್ತಿಯನ್ನು ನೀಡಲಾಗಿದೆ. ಶೈಕ್ಷಣಿಕ ಸಂಸ್ಥೆಗಳು ಕಾಲೇಜು ಕ್ಯಾಂಪಸ್‌ನಲ್ಲಿ ಸ್ವಚ್ಛತೆ ಮತ್ತು ತ್ಯಾಜ್ಯ ನಿರ್ವಹಣೆಯ ಕುರಿತು ಕೈಗೊಳ್ಳುವ ಕಾರ್ಯಯೋಜನೆಗಳನ್ನು ಗುರುತಿಸಲು ಈ ಸ್ಪರ್ಧೆಯನ್ನು ನಡೆಸಲಾಗುತ್ತದೆ. ದೇಶದ ಎಲ್ಲ ರಾಜ್ಯಗಳ ಶಿಕ್ಷಣಸಂಸ್ಥೆಗಳು ತಮ್ಮ ಕ್ಯಾಂಪಸ್‌ನಲ್ಲಿ ನಿರ್ವಹಿಸುವ ಸ್ವಚ್ಛತಾ ಕ್ರಮಗಳ ಬಗ್ಗೆ ಸಮಗ್ರ ವರದಿ ಹಾಗೂ ಸಾಕ್ಷ್ಯಚಿತ್ರವನ್ನು ಕಳುಹಿಸುತ್ತವೆ. ಅದರಲ್ಲಿ ಉಜಿರೆಯ ಎಸ್‌ಡಿಎಂ ಶಿಕ್ಷಣ ಸಂಸ್ಥೆ ಪ್ರಶಸ್ತಿ ಗಳಿಸಿದೆ.

ಎಸ್‌ಡಿಎಂನಲ್ಲಿ ಸ್ವಚ್ಛತೆ ಮತ್ತು ತ್ಯಾಜ್ಯ ನಿರ್ವಹಣೆಗೆ ರಚನಾತ್ಮಕ ಉಪಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಪ್ರತೀ ತರಗತಿ ಮತ್ತು ಹಾಸ್ಟೆಲ್‌ನಿಂದ ಕಸವನ್ನು ಸಂಗ್ರಹಿಸಿ, ತ್ಯಾಜ್ಯ ವಿಂಗಡಣೆ ಘಟಕಕ್ಕೆ ವರ್ಗಾಯಿಸಲಾಗುತ್ತದೆ. ಅಲ್ಲಿ ಉಪಯೋಗಕ್ಕೆ ಯೋಗ್ಯ, ಮರುಬಳಕೆ ಮಾಡಬಹುದಾದ ವಸ್ತುಗಳನ್ನು ಪ್ರತ್ಯೇಕವಾಗಿ ವಿಂಗಡಿಸಲಾಗುತ್ತದೆ. ಉಜಿರೆ ಎಸ್‌ಡಿಎಂ ನ್ಪೋರ್ಟ್ಸ್ ಕ್ಲಬ್‌ನ ದೈಹಿಕ ಶಿಕ್ಷಣ ನಿರ್ದೇಶಕಿ ಶಾರದಾ ಅವರ ನೇತೃತ್ವದಲ್ಲಿ ಕ್ರೀಡಾ ವಿದ್ಯಾರ್ಥಿಗಳು, ಜತೆಗೆ ಸಾಮಾಜಿಕ ಜವಾಬ್ದಾರಿ ಉಪಕ್ರಮಗಳ ಸಮಿತಿಯ ಗಣೇಶ್‌ , ಎನ್ನೆಸ್ಸೆಸ್‌ ಅಧಿಕಾರಿಗಳಾದ ಲಕ್ಷ್ಮೀನಾರಾಯಣ ಕೆ.ಎಸ್‌., ದೀಪಾ ಆರ್‌.ಪಿ, ಎನ್ನೆಸ್ಸೆಸ್‌ ಸ್ವಯಂಸೇವಕರು ಮತ್ತು ವಿದ್ಯಾರ್ಥಿಗಳು ಈ ತ್ಯಾಜ್ಯ ವಿಂಗಡನೆ ಕಾರ್ಯದಲ್ಲಿ ತೊಡಗಿ ಸಂಸ್ಥೆಯ ಸ್ವತ್ಛತೆಯ ಕೈಂಕರ್ಯದಲ್ಲಿ ಕೈಜೋಡಿಸಿದ್ದಾರೆ. ಇದರ ಜತೆ ಪ್ರತೀ ತರಗತಿಯಿಂದ ಸ್ವಚ್ಛತಾ ರಾಯಭಾರಿಯನ್ನು ಆಯ್ಕೆ ಮಾಡಿ ತರಗತಿ ಸ್ವಚ್ಛತೆ ಬಗ್ಗೆಯೂ ಗಮನಹರಿಸಲಾಗುತ್ತಿದೆ.

ಕಾಲೇಜಿನಲ್ಲಿ ಸ್ವಚ್ಛತೆ ಮತ್ತು ನೈರ್ಮಲ್ಯಕ್ಕೆ ಸಂಬಂಧಿಸಿದ ಹಲವು ಕಾರ್ಯ-ಯೋಜನೆಗಳನ್ನು ಅನುಷ್ಠಾನ ಮಾಡಿದ್ದೇವೆ. ಇದರಿಂದಾಗಿ ಈ ಪ್ರತಿಷ್ಠಿತ ಪ್ರಶಸ್ತಿಯನ್ನು ಗಳಿಸಲು ಸಾಧ್ಯವಾಗಿದೆ. ಈ ಹಂತದಲ್ಲಿ ಸಹಕರಿಸಿದ ಎಸ್‌ಡಿಎಂ ಕ್ರೀಡಾ ವಿದ್ಯಾರ್ಥಿಗಳು, ಎನ್ನೆಸ್ಸೆಸ್‌ ಘಟಕದ ವಿದ್ಯಾರ್ಥಿಗಳು, ಯೋಜನಾಧಿಕಾರಿಗಳು, ಉಪನ್ಯಾಸಕರು ಮತ್ತು ವಿದ್ಯಾರ್ಥಿಗಳಿಗೆ ಧನ್ಯವಾದ.

ಇಂತಹ ಮಹತ್ತರ ಕಾರ್ಯಕ್ಕೆ ಸದಾ ಬೆಂಬಲವಾಗಿ ನಿಂತು ಸಂಸ್ಥೆಯ ಅಭ್ಯುದಯಕ್ಕೆ ಕಾರಣರಾದ ಎಸ್‌ಡಿಎಂ ಶಿಕ್ಷಣ ಸಂಸ್ಥೆಯ ಅಧ್ಯಕ್ಷರು ಮತ್ತು ಧರ್ಮಸ್ಥಳದ ಧರ್ಮಾಧಿಕಾರಿಗಳಾಗಿರುವ ಡಾ| ಡಿ. ವೀರೇಂದ್ರ ಹೆಗ್ಗಡೆಯವರು, ಎಸ್‌ಡಿಎಂ ಶಿಕ್ಷಣ ಸಂಸ್ಥೆಗಳ ಉಪಾಧ್ಯಕ್ಷರು, ಕಾರ್ಯದರ್ಶಿಗಳು ಹಾಗೂ ಆಡಳಿತ ಮಂಡಳಿಯ ಸದಸ್ಯರಿಗೆ ಕೃತಜ್ಞತೆ. ಅವರೆಲ್ಲರ ಮಾರ್ಗದರ್ಶನದಂತೆ ಈ ಸ್ವಚ್ಛತೆಯ ಕಾರ್ಯವನ್ನು ಕಾಲೇಜು ಪರಿಸರಕ್ಕಷ್ಟೇ ಸೀಮಿತಗೊಳಿಸದೆ ಉಜಿರೆ ಗ್ರಾಮದಲ್ಲೂ ಸಾಮುದಾಯಿಕ ಸ್ವಚ್ಛತೆಗೆ ಆದ್ಯತೆ ನೀಡಲಾಗುತ್ತಿದೆ ಎಂದು ಸಂಸ್ಥೆಯ ಪ್ರಾಂಶುಪಾಲ ಡಾ| ಉದಯಚಂದ್ರ ಪಿ.ಎನ್‌. ಈ ಕುರಿತು ಪ್ರತಿಕ್ರಿಯಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next