Advertisement

2ನೇ ಹಂತದ ಉಜ್ವ ಲಕ್ಕೆ  ಕೋಟಿ ಕುಟುಂಬ ತಲುಪುವ ಗುರಿ

12:28 PM Dec 27, 2018 | |

ಬೆಂಗಳೂರು: ಪ್ರಧಾನಮಂತ್ರಿ ಉಜ್ವಲ ಯೋಜನೆ-2ರನ್ವಯ 2019ರ ಏಪ್ರಿಲ್‌ ಅಂತ್ಯದೊಳಗೆ ರಾಜ್ಯದಲ್ಲಿ 1 ಕೋಟಿ ಎಲ್‌ಪಿಜಿ ಸಂಪರ್ಕದ ಗುರಿ ಹೊಂದಿದ್ದೇವೆ ಎಂದು ರಾಜ್ಯ ಪೆಟ್ರೋಲಿಯಂ ಸಂಸ್ಥೆಗಳ ಸಂಯೋಜಕ ಡಿ.ಎಲ್‌. ಪ್ರಮೋದ್‌ ಹೇಳಿದರು.

Advertisement

ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಧಾನ ಮಂತ್ರಿ ಉಜ್ವಲ ಯೋಜನೆ 2017ರ ಜೂನ್‌ನಲ್ಲಿ
ಕರ್ನಾಟಕದಲ್ಲಿ ಜಾರಿಗೆ ಬಂದಿತ್ತು. 2011ರ ಗಣತಿ ಆಧಾರದಲ್ಲಿ ರಾಜ್ಯದ ಎಲ್ಲ ಬಿಪಿಎಲ್‌ ಕುಟುಂಬಕ್ಕೆ ಎಲ್‌ಪಿಜಿ
ಸಂಪರ್ಕ ಕಲ್ಪಿಸುವ ಉದ್ದೇಶದಿಂದ ಇದನ್ನು ಜಾರಿಗೆ ತರಲಾಗಿತ್ತು. ಸದ್ಯ ಕರ್ನಾಟಕದಲ್ಲಿ 1.48 ಕೋಟಿ
ಮನೆಗಳಿವೆ ಎಂದು ಅಂದಾಜಿಸಲಾಗಿದೆ.

ಸಕ್ರಿಯಾ ಗ್ರಾಹಕರ ಸಂಖ್ಯೆ 1.43 ಕೋಟಿಯಿದ್ದು, ಅದರಲ್ಲಿ ಶೇ.96.75ರಷ್ಟು ಎಲ್‌ಪಿಜಿ ಬಳಕೆದಾರರಿದ್ದಾರೆ. 2014ರಲ್ಲಿ ಎಲ್‌ಪಿಜಿ ಗ್ರಾಹರ ಸಂಖ್ಯೆ 95.83 ಲಕ್ಷ ಇದ್ದು, 2018ರ ನವೆಂಬರ್‌ ಅಂತ್ಯಕ್ಕೆ 1.43 ಕೋಟಿಗೆ ಏರಿಕೆಯಾಗಿದೆ. ಒಟ್ಟಾರೆಯಾಗಿ ಎಲ್‌ಪಿಜಿ ಗ್ರಾಹಕರ ಸಂಖ್ಯೆ 47.87ಲಕ್ಷ ದಷ್ಟು ಏರಿಕೆಯಾಗಿದೆ
ಎಂದು ವಿವರಿಸಿದರು.

ಪ್ರಧಾನ ಮಂತ್ರಿ ಉಜ್ವಲ ಯೋಜನೆ- 2ಗೆ ಸಂಬಂಧಿಸಿದ ಆರ್ಥಿಕ ವ್ಯವಹಾರದ ಕುರಿತು ಸಚಿವ ಸಂಪುಟ ಸಮಿತಿ
ಅನುಮೋದನೆ ನೀಡಿದೆ. ಈ ಹಿಂದೆ ಎಲ್‌ಪಿಜಿ ಸಂಪರ್ಕ ಪಡೆಯದ ಬಡತನ ರೇಖೆಗಿಂತ ಕೆಳಗೆ ಇರುವ ಕುಟುಂಬದವರು ಇದರ ಪ್ರಯೋಜನ ಪಡೆದುಕೊಳ್ಳಬಹುದು. ಬಡ ಕುಟುಂಬದ ವಯಸ್ಕ ಮಹಿಳೆಯ ಹೆಸರಿನಲ್ಲಿ ಸಂಪರ್ಕ ನೀಡಲಿದ್ದೇವೆ. ವಯಸ್ಕ ಮಹಿಳೆ ಇಲ್ಲದ ಸಂದರ್ಭದಲ್ಲಿ ಬೇರೆಯವರ ಹೆಸರಿನಲ್ಲಿ ನೀಡಲು ಬೇಕಾದ ವ್ಯವಸ್ಥೆ ಮಾಡಲಿದ್ದೇವೆ ಎಂದರು.

ಪರಿಶಿಷ್ಟ ಜಾತಿ, ಪಂಗಡದ ಕುಟುಂಬಗಳು, ಪ್ರಧಾನ ಮಂತ್ರಿ ವಸತಿ ಯೋಜನೆ ಫ‌ಲಾನುಭವಿಗಳು, ಅಂತ್ಯೋದಯ ಅನ್ನ ಯೋಜನೆ, ಅರಣ್ಯವಾಸಿಗಳು, ಅತಿ ಹಿಂದುಳಿದ ವರ್ಗ, ಚಹ-ಕಾಫಿ ತೋಟದ ಆದಿವಾಸಿಗಳು, ದ್ವೀಪ ಅಥವಾ ನದಿಯ ನಡುಗಡ್ಡೆಯಲ್ಲಿ ವಾಸಿಸುವವರು ಈ ಯೋಜನೆಯ ಲಾಭ ಪಡೆಯಬಹುದು. ಫ‌ಲಾನುಭವಿಗಳು ಅಗತ್ಯ ದಾಖಲೆ ನೀಡಬೇಕು ಎಂದರು.

Advertisement

ಶೀಘ್ರವೇ 5 ಕೆ.ಜಿ. ಎಲ್‌ಪಿಜಿ
ಬಡ ಕುಟುಂಬಕ್ಕೆ ಹೊರೆಯಾಗಬಾರದು ಎಂಬ ಉದ್ದೇಶದಿಂದ 14.50 ಕೆ.ಜಿ. ಎಲ್‌ಪಿಜಿ ಜತೆಗೆ 5 ಕೆ.ಜಿ. ಎಲ್‌ಪಿಜಿಯನ್ನು ಪರಿಚಯಿಸುತ್ತಿದ್ದೇವೆ. ಹೊಸ ಗ್ರಾಹಕರು ಅಥವಾ ಈಗಿರುವ ಫ‌ಲಾನುಭವಿಗಳು ಸಹ 5 ಕೆ.ಜಿ. ಎಲ್‌ಪಿಜಿ ಪಡೆಯಲು ಅರ್ಹರು. ಇದಕ್ಕೂ ಕೂಡ ಸಬ್ಸಿಡಿ ಇರುತ್ತದೆ. 5 ಕೆ.ಜಿ.ಯ ಎರಡು ಸಿಲೆಂಡರ್‌ ಕೂಡ ನೀಡಲಿದ್ದೇವೆ ಎಂದು ಪೆಟ್ರೋಲಿಯಂ ಸಂಸ್ಥೆಗಳ ಸಂಯೋಜಕ ಡಿ.ಎಲ್‌.ಪ್ರಮೋದ್‌ ಮಾಹಿತಿ ನೀಡಿದರು.

ಎಲ್‌ಪಿಜಿ ಪಂಚಾಯತಿ : ಯೋಜನೆ ಆರಂಭವಾಗಿ ಇಲ್ಲಿಯವರೆಗೆ 160 ಕೋಟಿ ರೂ. ಸಬ್ಸಿಡಿ ನೀಡಿದ್ದೇವೆ. ಎಲ್ಲ ಗ್ರಾಹಕರನ್ನು ಒಂದೇ ವೇದಿಕೆಯಡಿ ತರುವ ಉದ್ದೇಶದಿಂದ ಎಲ್‌ಪಿಜಿ ಪಂಚಾಯತಿ ಆರಂಭಿಸಲಿದ್ದೇವೆ. ರಾಜ್ಯದಲ್ಲಿ 1200 ಕಡೆಗಳಲ್ಲಿಎಲ್‌ಪಿಜಿ ಪಂಚಾಯತಿ ಆರಂಭಿಸಿ, ಫ‌ಲಾನುಭವಿಗಳಿಗೆ ಯೋಜನೆಯ ಉಪಯೋಗ ಮತ್ತು ಎಲ್‌ಪಿಜಿ ಬಳಕೆಯ ಬಗ್ಗೆ ಮಾಹಿತಿ ನೀಡಲಿದ್ದೇವೆ. ಗ್ರಾಮೀಣ ಭಾಗದಲ್ಲಿ ಮನೆಮನೆಗೂ ಎಲ್‌ಪಿಜಿ ತಲುಪಿಸುವ ಉದ್ದೇಶಕ್ಕಾಗಿ ಏಜೆಂಟರ್‌ ಸಂಖ್ಯೆಯನ್ನು ಏರಿಕೆಮಾಡಿದ್ದೇವೆ ಎಂದು ಸಂಯೋಜಕ ಡಿ.ಎಲ್‌.ಪ್ರಮೋದ್‌ ಹೇಳಿದರು.
 

Advertisement

Udayavani is now on Telegram. Click here to join our channel and stay updated with the latest news.

Next