ನವದೆಹಲಿ: ಇನ್ನು 15 ದಿನಗಳ ಒಳಗೆ ಗ್ರಾಹಕರಿಂದ ಪಡೆಯಲಾದ ಆಧಾರ್ ಮೂಲದ ಇಕೆವೈಸಿಯ ಸೇವೆಯ ಬಳಕೆ ಸ್ಥಗಿತ ಮಾಡಲು ಯಾವ ಯೋಜನೆ ಹಾಕಿಕೊಂಡಿದ್ದೀರಿ ಎಂಬ ಬಗ್ಗೆ ವಿವರಣೆ ಕೊಡಿ ಎಂದು ವಿಶಿಷ್ಟ ಗುರುತಿನ ಚೀಟಿ ಪ್ರಾಧಿಕಾರ(ಯುಐಡಿಎಐ) ಎಲ್ಲ ಟೆಲಿಕಾಂ ಸೇವಾದಾರ ಕಂಪನಿಗಳಿಗೆ ಸೂಚನೆ ನೀಡಿದೆ.
ಯಾವುದೇ ಕಾರಣಕ್ಕೂ ಟೆಲಿಕಾಂ ಕಂಪನಿಗಳು ಮತ್ತು ಬ್ಯಾಂಕುಗಳು ಆಧಾರ್ ಬಳಕೆ ಮಾಡಿಕೊಳ್ಳಬಾರದು ಎಂಬ ಸುಪ್ರೀಂಕೋರ್ಟ್ ತೀರ್ಪಿನ ಹಿನ್ನೆಲೆಯಲ್ಲಿ ಈ ಸುತ್ತೋಲೆ ಕಳುಹಿಸಲಾಗಿದೆ. ಅ.15ರ ಒಳಗೆ ಸವಿವರ ಯೋಜನೆ ಕಳುಹಿಸಿ ಎಂದೂ ಸೂಚಿಸಲಾಗಿದೆ. ಈ ಸುತ್ತೋಲೆಯು ಏರ್‌ಟೆಲ್, ರಿಲಯನ್ಸ್ ಜಿಯೋ, ವೋಡಾಫೋನ್ ಐಡಿಯಾ ಮತ್ತು ಇತರೆ ಕಂಪನಿಗಳಿಗೆ ಹೋಗಿದೆ.
ಸುತ್ತೋಲೆಯಲ್ಲಿ ಏನಿದೆ?: ಸೆ.26ರ ಸುಪ್ರೀಂ ಕೋರ್ಟ್ ತೀರ್ಪಿನಂತೆ ದೂರಸಂಪರ್ಕ ಸೇವಾದಾರ ಕಂಪನಿಗಳು, ಆಧಾರ್ ಮೂಲದ ಗ್ರಾಹಕರ ದೃಢೀಕರಣ ವ್ಯವಸ್ಥೆ ಸ್ಥಗಿತ ಮಾಡಲು ಯಾವ ಕ್ರಮ ಕೈಗೊಳ್ಳುತ್ತಿದ್ದೀರಿ? ಈ ಸಂಬಂಧ ಕ್ರಿಯಾ ಯೋಜನೆ ಮತ್ತು ಬಿಡುಗಡೆ ಹೊಂದುವ ಯೋಜನೆ ಬಗ್ಗೆ ಸವಿವರವಾಗಿ 15 ದಿನಗಳಲ್ಲಿ ವರದಿ ಸಲ್ಲಿಸಿ ಎಂದು ಯುಐಡಿಎಐ ಸೂಚನೆ ನೀಡಿದೆ. ಸರಳ ಮತ್ತು ಸುಸೂತ್ರವಾಗಿ ಆಧಾರ್ ಸಂಖ್ಯೆಯಿಂದ ಬಿಡುಗಡೆ ಪಡೆಯುವಂತೆ ಟೆಲಿಕಾಂ ಕಂಪನಿಗಳಿಗೆ ಸೂಚಿಸಲಾಗಿದೆ. ಅವರು ತಮ್ಮ ಕ್ರಿಯಾ ಯೋಜನೆ ನೀಡಲಿ. ನಂತರ ನಮ್ಮ ಕಡೆಯಿಂದ ಅವರಿಗೆ ಬೇಕಾಗುವ ಸೇವೆಗಳನ್ನು ನೀಡುವ ಬಗ್ಗೆ ಚಿಂತನೆ ನಡೆಸುತ್ತೇವೆ ಎಂದು ಪ್ರಾಧಿಕಾರದ ಸಿಇಓ ಅಜಯ್ ಭೂಷಣ್ ಪಾಂಡೆ ಹೇಳಿದ್ದಾರೆ.
ಟೆಲಿಕಾಂ ಕಂಪನಿಗಳು ಏನು ಮಾಡಬಹುದು?: 15 ದಿನಗಳಲ್ಲಿ ಟೆಲಿಕಾಂ ಕಂಪನಿಗಳು ಆಧಾರ್ ಮೂಲದ ದೃಢೀಕರಣ ವ್ಯವಸ್ಥೆಯನ್ನು ಸ್ಥಗಿತ ಮಾಡಬೇಕಾಗುತ್ತದೆ. ಅ.15ರ ನಂತರ ಹಳೇ ಮಾದರಿಯಲ್ಲೇ ಗ್ರಾಹಕರಿಂದ ಸಹಿಯುಳ್ಳ ಅರ್ಜಿ, ಭಾವಚಿತ್ರವನ್ನು ಪರಿಶೀಲನಾ ಕೇಂದ್ರಕ್ಕೆ ಕಳುಹಿಸುವುದು. ಈ ಪ್ರಕ್ರಿಯೆ ಮುಗಿದ ನಂತರ ಗ್ರಾಹಕರು ಕಸ್ಟಮರ್ ಕೇರ್ ಕೇಂದ್ರಗಳಿಗೆ ಕರೆ ಮಾಡಿ ಅರ್ಜಿ ದೃಢೀಕರಣದ ಬಗ್ಗೆ ಖಚಿತಪಡಿಸಿಕೊಳ್ಳಬೇಕಾಗುತ್ತದೆ. ಈ ಎಲ್ಲ ಪ್ರಕ್ರಿಯೆ ಮುಗಿಯಲು ಹಿಂದಿನ ಹಾಗೆಯೇ 24 ರಿಂದ 36 ಗಂಟೆಗಳು ಬೇಕಾಗಲಿವೆ.