ಆನೇಕಲ್: ಭಾನುವಾರ ರಾತ್ರಿ ಕರ್ಪೂರು ಬಳಿ ಅಪಘಾತದಲ್ಲಿ ಮೃತ ಪಟ್ಟ ಮಗುವಿನ ಶವ ದ್ವಿಚಕ್ರ ವಾಹನದಲ್ಲಿ ಸಾಗಾಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸೋಮವಾರ ಆನೇಕಲ್ ಸರ್ಕಾರಿ ಆಸ್ಪತ್ರೆಗೆ ಮಹಿಳಾ ಮತ್ತು ಮಕ್ಕಳ ದೌರ್ಜನ್ಯ ತಡೆ ಮತ್ತು ಅತ್ಯಾಚಾರ ತಡೆ ಸಮಿತಿ ಅಧ್ಯಕ್ಷ ಉಗ್ರಪ್ಪ ಭೇಟಿ ನೀಡಿ ಮುಖ್ಯವೈದ್ಯಾಧಿಕಾರಿಗಳನ್ನು ತೀವ್ರ ತರಾಟೆಗೆ ತೆಗೆದುಕೊಂಡರು.
ಆಸ್ಪತ್ರೆಯಲ್ಲಿ ರೋಗಿಗಳ ಯೋಗ ಕ್ಷೇಮ ವಿಚಾರಿಸುವಾಗ ಶಾಂತಮ್ಮ ಎಂಬುವರು ಹೆರಿಗೆಗೆ 6 ಸಾವಿರ ರೂ. ನೀಡಿದ್ದಾಗಿ ಹೇಳಿದಾಗ ವೈದ್ಯ ಮುರಳಿ ಅವರನ್ನು ತೀವ್ರ ತರಾಟೆಗೆ ತೆಗೆದು ಕೊಂಡರು. ಸ್ವತ್ಛತೆ ಇಲ್ಲದೆ ಇಲ್ಲೆಂದರಲ್ಲಿ ಕಸದ ರಾಶಿಯನ್ನು ಕಂಡು, ನೂರು ಹಾಸಿಗೆಯ ಆಸ್ಪತ್ರೆಯನ್ನು ಈ ರೀತಿ ಇಟ್ಟುಕೊಂಡಿದ್ದೀರಲ್ಲ, ಪ್ರತಿ ದಿನ ಬರುವವರು ರೋಗಿಗಳು ಎಂದು ತಿಳಿದಿದ್ದೀರಾ ಅಥವಾ ಪ್ರಾಣಿಗಳು ಎಂದುಕೊಂಡಿರುವಿರಾ ಎಂದು ಕಿಡಿಕಾರಿದರು.
ಆಸ್ಪತ್ರೆಯಲ್ಲಿ ಸಿ.ಸಿ ಟಿವಿ ಇದ್ದು ಅದರಲ್ಲಿ ರೆಕಾರ್ಡರ್ ಇಲ್ಲದೆ ಇರುವುದನ್ನು ಕಂಡು ಕೆಂಡಾಮಂಡಲ ರಾದ ಉಗ್ರಪ್ಪ ಜಿಲ್ಲಾ ಆರೋಗ್ಯಾಧಿಕಾರಿಯನ್ನು ತೀವ್ರ ತರಾಟೆಗೆ ತೆಗೆದು ಕೊಂಡರಲ್ಲದೆ ರಾತ್ರಿ ಪಾಳಿಯಲ್ಲಿ ಕೇವಲ ಒಬ್ಬರು ವೈದ್ಯರು ಮಾತ್ರ ಯಾಕೆ ನಿಯೋಜಿಸಿದ್ದೀರಾ ಏಳು ವೈದ್ಯರಲ್ಲಿ ಮೂವರನ್ನಾದರೂ ನೇಮಿಸಬಹುದಿತ್ತಲ್ಲ ಎಂದು ಕಿಡಿಕಾರಿದರು.
ನಂತರ ಅಧಿಕಾರಿಗಳ ಸಭೆ ಕರೆದು ಅವರೊಂದಿಗೆ ಮಗು ಸಾವಿನ ವಿವರದ ಸಂಪೂರ್ಣ ಮಾಹಿತಿ ಪಡೆದು, ಸುದ್ದಿಗಾರರೊಂದಿಗೆ ಮಾತ ನಾಡಿ, ಆಸ್ಪತ್ರೆಗೆ ಬರುವ ಮಕ್ಕಳು ಅಥವಾ ರೋಗಿಗಳನ್ನು ಸರಿಯಾಗಿ ನೋಡಬೇಕು. ಕರ್ಪೂರಿನಲ್ಲಿ ನಡೆದ ಅಪಘಾತದಲ್ಲಿ ಮಗು ಸಾವಿನ ಬಗ್ಗೆ ಅಧ್ಯಯನ ಮಾಡಿ ನೋಡಿದಾಗ ಮಗು ಆಸ್ಪತ್ರೆಗೆ ತರುವ ಮೊದಲೇ ಸಾವನ್ನಪ್ಪಿದೆ ಎಂದು ಹೇಳಿದ್ದಾರೆ. ಆದರೆ ನೂರು ಹಾಸಿಗೆಯ ಆಸ್ಪತ್ರೆಯಲ್ಲಿ ಎಂಬತ್ತು ಜನ ಸಿಬ್ಬಂದಿ ಇದ್ದಾರೆ,
ತಿಂಗಳಿಗೆ ನೂರು ಹೆರಿಗೆ ಆಗುತ್ತಿದೆ, ಅಪಘಾತಗಳ ರೋಗಿಗಳು ಬರುತ್ತಾರೆ ಆದರೆ ರಾತ್ರಿ ಪಾಳಿಯಲ್ಲಿ ಕೇವಲ ಒಬ್ಬ ಡಾಕ್ಟರ್ ಮಾತ್ರ ಇದ್ದರು ಎಂದರೆ ಇದು ಇಲ್ಲಿನ ಆಡಳಿತವ ವೈಫಲ್ಯ ಎತ್ತಿ ತೋರಿಸುತ್ತಿದೆ. ರಾಜ್ಯದ ಮರ್ಯಾದೆ ತೆಗೆದಿರುವ ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳಲಾಗು ವುದು ಎಂದರು. ಮಾಜಿ ಸಚಿವರಾದ ಮೋಟಮ್ಮ, ರಾಣಿ ಸತೀಶ್ ಹಾಗೂ ಬೆಂಗಳೂರು ಗ್ರಾಮಾಂತರ ಎಸ್ಪಿ ಅಮಿತ್ ಸಿಂಗ್ ಮತ್ತು ಆನೇಕಲ್ ಶಾಸಕ ಬಿ.ಶಿವಣ್ಣ ಭೇಟಿ ಇತರರು ಇದ್ದರು.