ಬೆಂಗಳೂರು: ನಟ ಶ್ರೀಮುರಳಿಗೆ ಬಣ್ಣದ ಲೋಕದಲ್ಲಿ ಮರುಜನ್ಮ ಕೊಟ್ಟ ʼಉಗ್ರಂʼ ರಿಲೀಸ್ ಆಗಿ 8 ವರ್ಷಗಳು ಸಂದಿವೆ. ಈಗ ಚಿತ್ರದ ಬಗ್ಗೆ ಮತ್ತೊಮ್ಮೆ ಮಾತುಗಳು ಕೇಳಿ ಬರುತ್ತಿದೆ.
2014 ರಲ್ಲಿ ಪ್ರಶಾಂತ್ ನೀಲ್ ಚೊಚ್ಚಲವಾಗಿ ನಿರ್ದೇಶನ ಮಾಡಿದ್ದ ʼಉಗ್ರಂʼ ಸ್ಯಾಂಡಲ್ ವುಡ್ ನಲ್ಲಿ ದೊಡ್ಡ ಮಟ್ಟದ ಸದ್ದು ಮಾಡಿತ್ತು. ಆ ಬಳಿಕ ಶ್ರೀಮುರಳಿ ಮತ್ತೆ ಹಿಂದೆ ತಿರುಗಿ ನೋಡಿಲ್ಲ, ಒಂದಾದ ಮೇಲೊಂದು ಹಿಟ್ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ.
ನಿರ್ದೇಶಕ ಪ್ರಶಾಂತ್ ನೀಲ್ ʼಕೆಜಿಎಫ್ ಚಾಪ್ಟರ್ -1ʼ, ಚಾಪ್ಟರ್ -2 ಮೂಲಕ ಇಡೀ ದಕ್ಷಿಣ ಭಾರತ ಮಾತ್ರವಲ್ಲದೆ ಇಡೀ ಚಿತ್ರರಂಗದಲ್ಲಿ ದೊಡ್ಡ ಹೆಸರುಗಳಿಸಿದರು. ಸದ್ಯ ಪ್ರಭಾಸ್ ನಟನೆಯ ʼಸಲಾರ್ʼ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದಾರೆ.
ʼಉಗ್ರಂʼ ಚಿತ್ರ ಮತ್ತೊಮ್ಮೆ ಬಣ್ಣದ ಲೋಕದಲ್ಲಿ ಅಬ್ಬರಿಸಲಿದೆ. ಅದು ಮರಾಠಿ ಭಾಷೆಯಲ್ಲಿ. ಕನ್ನಡದ ಉಗ್ರಂ ಮರಾಠಿಗೆ ರಿಮೇಕ್ ಆಗುತ್ತಿದ್ದು, ಸುಮಿತ್ ಕಕ್ಕಡ್ ಎನ್ನುವವರು ಚಿತ್ರನ್ನು ನಿರ್ದೇಶನ ಮಾಡುತ್ತಿದ್ದಾರೆ.
ವರದಿಯ ಪ್ರಕಾರ ಈಗಾಗಲೇ ಚಿತ್ರದ ಪಾತ್ರ ವರ್ಗ ಕೂಡ ಅಂತಿಮವಾಗಿದ್ದು, ಉಗ್ರಂನಲ್ಲಿ ಹರಿಪ್ರಿಯ ನಟಿಸಿದ್ದ ಪಾತ್ರವನ್ನು ಮರಾಠಿಯಲ್ಲಿ ಶಾನ್ವಿ ಶ್ರೀವಾತ್ಸವ್ ಮಾಡುತ್ತಿದ್ದಾರೆ. ಆ ಮೂಲಕ ಶಾನ್ವಿ ಮರಾಠಿ ಚಿತ್ರರಂಗಕ್ಕೂ ಎಂಟ್ರಿ ಕೊಡಲಿದ್ದಾರೆ. ನಾಯಕನಾಗಿ ಶರಣ್ ಖೇಳ್ಕರ್ ನಟಿಸುತ್ತಿದ್ದಾರೆ. ಚಿತ್ರಕ್ಕೆ ಮರಾಠಿಯಲ್ಲಿ ʼರಾಂತಿʼ ಎನ್ನುವ ಟೈಟಲ್ ಫಿಕ್ಸ್ ಆಗಿದೆ ಎನ್ನಲಾಗಿದೆ.
ಸ್ಯಾಂಡಲ್ ವುಡ್ ನಲ್ಲಿ ಬಾಕ್ಸ್ ಆಫೀಸ್ ಕಲೆಕ್ಷನ್ ನಲ್ಲಿ ಸೌಂಡ್ ಮಾಡಿದ್ದ ʼಉಗ್ರಂʼ ಮರಾಠಿಯಲ್ಲಿ ಹೇಗೆ ರೆಸ್ಪಾನ್ಸ್ ಪಡೆದುಕೊಳ್ಳುತ್ತದೆ ಎನ್ನುವುದನ್ನು ಕಾದು ನೋಡಬೇಕಿದೆ.