Advertisement
ಪ್ರಾಚೀನ ಭಾರತದ ಸನಾತನ ಸಂಸ್ಕೃತಿಯ ಶಾಸ್ತ್ರವಚನದಂತೆ ಸೃಷ್ಟಿಯ ಆದಿಯ ದಿನವೇ ಯುಗಾದಿ. ಅಂದು ಸೂರ್ಯ, ಚಂದ್ರರು ಒಂದೇ ರಾಶಿ, ಒಂದೇ ನಕ್ಷತ್ರದಲ್ಲಿದ್ದು ಈ ಜಗತ್ತಿನ ಸೃಷ್ಟಿಯು ಪ್ರಾರಂಭವಾಯಿತು. ಈ ದಿನವನ್ನು ಸಂವತ್ಸರದ ಪ್ರಥಮ ದಿನವೆಂದು ಸಾರಲಾಯಿತು. ವತ್ಸರ, ಅನುವತ್ಸರ, ಪರಿವತ್ಸ, ಇಡಾವತ್ಸರ ಮತ್ತು ಸಂವತ್ಸರ ಎಂಬುದಾಗಿ ಐದು ತರಹದಲ್ಲಿ ವರ್ಷದ ಮೊದಲ ದಿನದ ಆಚರಣೆಯನ್ನು ಮಾಡಿಕೊಂಡು ಬಂದಿರುತ್ತೇವೆ. ಪ್ರಧಾನವಾಗಿ, ಅಮಾ ವಾಸ್ಯೆಯ ಮರುದಿನ ಪಾಡ್ಯದಿಂದ ಆರಂಭಿಸಿ, ಅಮಾ ವಾಸ್ಯೆಯ ಮುಕ್ತಾಯ ಪರ್ಯಂತ ಇರುವ ಒಂದು ಮಾಸವನ್ನು ಚಾಂದ್ರಮಾಸವೆಂತಲೂ ಸೂರ್ಯನ ರಾಶಿ ಚಲನೆಯ ದಿನಗಳನ್ನು ಚೈತ್ರಾದಿ ಸಂಕ್ರಾಂತಿ ಕಾಲಗಳು ಸೌರಮಾಸವೆಂದು ಕರೆಯಲ್ಪಡುತ್ತದೆ.
Related Articles
Advertisement
ಜಗತ್ತು ಸೃಷ್ಟಿಯಾಗಿ 1,97,29,49,123 ವರುಷಗಳು ಸಂದಿವೆ. ಈಗ ಕಲಿಯುಗದ 4,32,000 ವರುಷಗಳಲ್ಲಿ ಕೇವಲ 5,122 ಸಂದು, ಯುಧಿಷ್ಠಿರ ವಿಕ್ರಮ ಶಕ ಕಳೆದು, ಶಾಲಿವಾಹನ ಶಕ 1944ನೇ ಶುಭಕೃತ್ ಸಂವತ್ಸರವು ಪ್ರಾರಂಭವಾಗುವುದು. ಈ ಸಂವತ್ಸರದಲ್ಲಿ ಶನಿಯು ರಾಜನಾಗಿಯೂ, ಗುರುವು ಮಂತ್ರಿಯಾಗಿಯೂ, ಸೇನಾಧಿಪ ಬುಧ, ಸಸ್ಯಾಧಿಪ ಶನಿ, ಧಾನ್ಯಾಧಿಪ ಶುಕ್ರ, ಅರ್ಘ ಮೇಘಾಧಿಪ ಬುಧ, ರಸಾಧಿಪ ಚಂದ್ರ, ನಿರಸಾಧಿಪ ಶನಿ, ನಿಶಾಚರ ಬುಧ, ಸ್ವರ್ಣಪರೀಕ್ಷಕ ಬುಧ, ಗ್ರಾಮಾಧಿಪ ಶನಿ, ಗ್ರಾಮಕೂಟ ಚಂದ್ರ, ಗಣಕ ಮತ್ತು ಛತ್ರಧರ ಶನಿ-ಹೀಗೆ ವರುಷದ ನವನಾಯಕರು ಪ್ರಾಚೀನ ಸಿದ್ಧಾಂತ ಗಣಿತ ರೀತ್ಯಾ ಸೂಚಿತರಾಗಿದ್ದಾರೆ. ವಿಶೇಷವಾಗಿ ಶನಿಯು 29 ಎಪ್ರಿಲ್ 2022ರಂದು ಬೆಳಗ್ಗೆ ಗಂಟೆ 7.54ಕ್ಕೆ ಕುಂಭ ರಾಶಿಯನ್ನು ಪ್ರವೇಶಿಸುತ್ತಾನೆ. ಹಾಗೆ ಬೃಹಸ್ಪತಿಯು 13 ಎಪ್ರಿಲ್‌ರಂದು ಮಧ್ಯಾಹ್ನ ಗಂಟೆ 3.50ಕ್ಕೆ ಮೀನ ರಾಶಿಯನ್ನು ಪ್ರವೇಶಿಸುತ್ತಾನೆ. ಪ್ರಧಾನವಾಗಿ ಈ ಎರಡೂ ಗ್ರಹಗಳು ತಮ್ಮ ತಮ್ಮ ಸ್ವಕ್ಷೇತ್ರಾರೂಢರಾಗಿ ಇರುವುದರಿಂದ ಕೆಲವೊಂದು ಕಷ್ಟ ನಷ್ಟಗಳು ಉಂಟಾದರೂ ಅವುಗಳಿಂದ ಸಮತೋಲನ ಕಾಪಾಡುವಂತಾಗಿ ಉತ್ತಮ ರೀತಿಯ ಜೀವನವನ್ನು ನಡೆಸಲು ಸಕಲ ಚರಾಚರಗಳಿಗೆ ಕಾರಣರಾಗುವರು. ಎಲ್ಲರಲ್ಲೂ ಧರ್ಮಪ್ರಜ್ಞೆ, ಗುರುದೇವನಿಷ್ಠೆ ಹಾಗೂ ತನ್ನ ಸಂಸ್ಕೃತಿಯ ಅರಿವು ಮೂಡಿ ಉತ್ತಮ ಬಾಳ್ವೆಯೊಂದಿಗೆ ಬಾಳುವಂತಾಗುವರು.
-ಪಂಡಿತ ಎಂ. ನರಸಿಂಹ ಆಚಾರ್ಯಪಂಚಾಂಗಕರ್ತರು, ಮಂಗಳೂರು