ಮುದಗಲ್ಲ: ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ (ನರೇಗಾ) ಯೋಜನೆಯ ಪರಿಣಾಮಕಾರಿಯಾಗಿ ಅನುಷ್ಠಾನ ಮಾಡಿದ್ದರಿಂದ ಬೇಸಿಗೆ ಕಾರಣ ಊರು ತೊರೆಯಲು ಸಿದ್ಧರಾಗಿದ್ದ ಕೂಲಿ ಕಾರ್ಮಿಕರಿಗೆ ಒಂದಿಷ್ಟು ನರೇಗಾ ಕಾಮಗಾರಿ ನೆರವಾಗಿದೆ.
ಮುದಗಲ್ಲ ಸಮೀಪದ ಕನ್ನಾಳ ಗ್ರಾಮ ಪಂಚಾಯಿತಿ ವ್ಯಾಪ್ತಿಯ ವ್ಯಾಸನಂದಿಹಾಳ ಕೆರೆ ಅಭಿವೃದ್ಧಿ ಕಾವåಗಾರಿಯಲ್ಲಿ ತಿಮ್ಮಾಪೂರ 425 ಜನ, ವ್ಯಾಸನಂದಿಹಾಳ 300 ಜನ, ಕನ್ನಾಳ ಗ್ರಾಮದ 300 ಜನ ಇದರಲ್ಲಿ 350 ಜನ ಪುರುಷರು, 675 ಜನ ಮಹಿಳೆಯರು ಒಟ್ಟು 1025 ಜನ ಕೂಲಿ ಕೆಲಸ ನಿರ್ವಹಿಸಿದ್ದಾರೆ. ಈ ಬಾರಿ ಅಂಗವಿಕಲ ಕೂಲಿಕಾರರಿಗೂ ಕೆಲಸ ನೀಡಿರುವುದು ವಿಶೇಷ.
ಒಟ್ಟು 6,88,380 ರೂ.ಗಳನ್ನು ಕೂಲಿ ರೂಪದಲ್ಲಿ ಪಾವತಿಸಲಾಗಿದೆ. 9 ಎಕರೆ ವಿಸ್ತೀರ್ಣ ಹೊಂದಿರುವ ಕೆರೆಯಲ್ಲಿ ನೀರು ಸಂಗ್ರವಾದರೆ, ಅಂತರ್ಜಲಮಟ್ಟ ಹೆಚ್ಚುವುದಲ್ಲದೇ, ರೈತರ ಕೊಳವೆಬಾವಿಗೆ ಜಲ ಮರುಪೂರಣವಾಗುವುದಲ್ಲದೆ ಬೇಸಿಗೆಯಲ್ಲಿ ಜನ-ಜಾನುವಾರುಗಳಿಗೆ ಉಪಯೋಗವಾಗಲಿದೆ.
ಸರಕಾರಿ ಜಾಲಿ ಮುಳ್ಳುಗಳಿಂದ ಕೆರೆಯ ದಂಡೆಗಳು ಮುಚ್ಚಿದ್ದವು. ಕೆರೆಯ ದಡಕ್ಕೆ ಇಲಿಗಳು, ಹೆಗ್ಗಣಗಳು, ರಂಧ್ರ ಹಾಕಿದ್ದರಿಂದ ಕೆರೆಯಲ್ಲಿ ಸಂಗ್ರಹವಾದ ನೀರು ಸೋರಿ ಹೋಗುತ್ತಿತ್ತು. ಆದರೆ ಈಗ ಮಣ್ಣು ಹಾಕಿದ್ದರಿಂದ ಕೆರೆಯ ಚಿತ್ರಣವೇ ಬದಲಾಗಿದೆ. 10 ಫೀಟ್ ಉದ್ದ, 5 ಫೀಟ್ ಅಗಲ ಹಾಗೂ ಒಂದೂವರೆ ಫೀಟ್ ಆಳದಂತೆ ಜೋಡಿಗೆ ಅಳತೆಯಂತೆ ಕೆಲಸ ಮಾಡಲು ತಿಳಿಸಲಾಗಿದೆ.
7 ದಿನ 220 ಜನ ಕೆಲಸಕ್ಕೆ ಹಾಜರಾಗಿದ್ದು ಕೂಲಿ ಕಾರ್ಮಿಕರಿಗೆ ಬ್ಯಾಂಕ್ ಖಾತೆಯ ಮೂಲಕ ಆಧಾರ ಬೇಸಡ್ ಕೂಲಿ ಪಾವತಿಸಲಾಗುತ್ತಿದೆ ಎಂದು ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಜೆ. ಮಲ್ಲಿಕಾರ್ಜುನ ಪತ್ರಿಕೆಗೆ ಮಾಹಿತಿ ನೀಡಿದ್ದಾರೆ.
ಕೆರೆ ಹೂಳು ತೆಗೆಯುವ ಕೆಲಸ ಕೊಟ್ಟಿದ್ದರಿಂದ ಬೇರೆ ಕಡೆ ಕೆಲಸ ಹುಡುಕಿಕೊಂಡು ಗುಳೆ ಹೋಗುವುದು ತಪ್ಪಿದ ಜತೆಗೆ ಮಕ್ಕಳ ಪಾಲನೆ-ಪೋಷಣೆಗೆ ಅನುಕೂಲವಾಗಿದೆ.
-ಗೌರಮ್ಮ ಬುದ್ದಿನ್ನಿ,ಕೂಲಿಯಾಳು
ಕೂಲಿ ಪಾವತಿಯಲ್ಲಿ ತಾಂತ್ರಿಕ ತೊಂದರೆ ಬಿಟ್ಟರೆ ನಿಗದಿತ ಸಮಯದಲ್ಲಿ ಕೂಲಿ ಕಾರ್ಮಿಕರಿಗೆ ಕೂಲಿ ಪಾವತಿಯಾಗುತ್ತಿದೆ. -ದುರುಗಪ್ಪ ಬಿಂಗಿ, ಗ್ರಾಕೂಸ ಸಂಘಟನೆ ಮುಖ್ಯಸ್ಥ
ನೆಲ-ಜಲಸಂರಕ್ಷಣೆಗೆ ಕೆರೆ ಕಾಮಗಾರಿ ನಡೆಯುತ್ತಿದೆ. ಗ್ರಾಮಕ್ಕೆ ಒಂದು ಆಸ್ತಿಯೂ ನಿರ್ಮಾಣವಾಗುತ್ತಿದೆ.
-ಅಮರೇಶ ಯಾದವ್, ಇಒ ತಾಪಂ ಮಸ್ಕಿ
-ದೇವಪ್ಪ ರಾಠೊಡ