Advertisement

Udupi: ಜಿಲ್ಲೆಗೆ ಇಎಸ್‌ಐ ಆಸ್ಪತ್ರೆ ಗಗನ ಕುಸುಮ

02:31 PM Dec 09, 2024 | Team Udayavani |

ಉಡುಪಿ: ಜಿಲ್ಲೆಗೆ 100 ಹಾಸಿಗೆಗಳ ಕಾರ್ಮಿಕ ರಾಜ್ಯ ವಿಮಾ ಆಸ್ಪತ್ರೆ (ಇಎಸ್‌ಐ) ಮಂಜೂರಾಗಿ ಮೂರು ವರ್ಷಗಳು ಕಳೆದರೂ ಕಟ್ಟಡ ನಿರ್ಮಾಣ ಕಾಮಗಾರಿ ಇನ್ನೂ ಆರಂಭವಾಗಿಲ್ಲ.

Advertisement

150 ಕೋಟಿ ರೂ. ವೆಚ್ಚದಲ್ಲಿ 32 ವಸತಿ ಗೃಹ ಸಹಿತ 100 ಬೆಡ್‌ಗಳ ಆಸ್ಪತ್ರೆ ನಿರ್ಮಾಣಕ್ಕೆ ವಾರಂಬಳ್ಳಿಯಲ್ಲಿ 6 ಎಕರೆ ಜಾಗ ಮೀಸಲಿಡಲಾಗಿದೆ. ಕಟ್ಟಡ ನಿರ್ಮಾಣಕ್ಕೆ ಸಂಬಂಧಿಸಿ ಟೆಂಡರ್‌ ಆರಂಭವಾಗಿದೆ ಎಂದು ಹೇಳಲಾಗುತ್ತಿದೆಯಾದರೂ ಕಾಮಗಾರಿ ಆರಂಭವಂತೂ ಆಗಿಲ್ಲ. ಜಿಲ್ಲೆಯಲ್ಲಿರುವ ಒಂದು ಲಕ್ಷಕ್ಕೂ ಅಧಿಕ ಕಾರ್ಮಿಕರು ತಮ್ಮ ಹಕ್ಕಿನ ಆಸ್ಪತ್ರೆಗಾಗಿ ಕಾಯುತ್ತಿದ್ದಾರೆ.

23ರ ಪೈಕಿ ಜಿಲ್ಲೆಗೆ ಒಲಿದಿತ್ತು ಸ್ಥಾನ: 2022ರ ಜೂನ್‌ನಲ್ಲಿ ನಡೆದ ಇಎಸ್‌ಐಸಿ 188ನೇ ಸಭೆಯಲ್ಲಿ ದೇಶದಾದ್ಯಂತ 23 ಇಎಸ್‌ಐ ಹೊಸ ಆಸ್ಪತ್ರೆ ಹಾಗೂ 62 ಚಿಕಿತ್ಸಾಲಯಗಳನ್ನು ತೆರೆಯಲು ಕೇಂದ್ರ ಸರಕಾರ ನಿರ್ಧರಿಸಿತ್ತು. ಕೇಂದ್ರ ಕಾರ್ಮಿಕ ಮತ್ತು ಉದ್ಯೋಗ ಸಚಿವ ಭೂಪೇಂದ್ರ ಯಾದವ್‌ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಪ್ರಸ್ತಾವನೆ ಅಂಗಿಕಾರಗೊಂಡಿತ್ತು. ಅದರಲ್ಲಿ ರಾಜ್ಯದ ತುಮಕೂರು ಮತ್ತು ಉಡುಪಿ ಈ ಎರಡು ಜಿಲ್ಲೆಗಳ ಇಎಸ್‌ಐ ಆಸ್ಪತ್ರೆಗಳು ಸೇರಿದ್ದವು. ಕೇಂದ್ರ ಸಚಿವೆಯಾಗಿದ್ದ ಶೋಭಾ ಕರಂದ್ಲಾಜೆ ಅವರ ಶಿಫಾರಸ್ಸಿನ ಮೇರೆಗೆ ಜಿಲ್ಲೆಗೆ ಇಎಸ್‌ಐ ಆಸ್ಪತ್ರೆ ಮಂಜೂರುಗೊಂಡಿತ್ತು. ಆದರೆ, ಕಟ್ಟಡ ನಿರ್ಮಾಣ ಕಾಮಗಾರಿ ಆರಂಭಕ್ಕೆ ಇನ್ನೂ ಮುಹೂರ್ತ ಸಿಕ್ಕಿಲ್ಲ.

ಉಡುಪಿಗೆ ಇಎಸ್‌ಐ ಆಸ್ಪತ್ರೆ ಯಾಕೆ ಅಗತ್ಯ?
60 ಸಾವಿರಕ್ಕಿಂತ ಹೆಚ್ಚು ಇಎಸ್‌ಐ ಸದಸ್ಯರಿದ್ದ ಜಿಲ್ಲೆಯಲ್ಲಿ ಆಸ್ಪತ್ರೆ ನಿರ್ಮಿಸಲು ಅವಕಾಶವಿದೆ. ಜಿಲ್ಲೆಯಲ್ಲಿ ನೂರಾರು ಸಣ್ಣ, ಮಧ್ಯಮ ಹಾಗೂ ಬೃಹತ್‌ ಕೈಗಾರಿಕೆಗಳಿವೆ. ಲಕ್ಷಾಂತರ ಮಂದಿ ಕಾರ್ಮಿಕರು ಇಎಸ್‌ಐ ಸೌಲಭ್ಯ ಹೊಂದಿದ್ದಾರೆ. ಆದರೆ, ಅವರಿಗೆ ಇಎಸ್‌ಐ ಆಸ್ಪತ್ರೆಗೆ ದಾಖಲಾಗಿ ಸೂಕ್ತ ಚಿಕಿತ್ಸೆ ಪಡೆಯಲು ಅವರಿಗೆ ಸಾಧ್ಯವಾಗುತಿಲ್ಲ. ಇಎಸ್‌ಐ ಆಸ್ಪತ್ರೆ ಆರಂಭಿಸಿ, ಮೂಲ ಸೌಕರ್ಯ ಕೂಡ ಒದಗಿಸಿದರೆ ಬಡ ಕಾರ್ಮಿಕರಿಗೆ ಅನುಕೂಲವಾಗಲಿದೆ ಎನ್ನುವುದು ಕಾರ್ಮಿಕ ಸಂಘಟನೆಗಳ ಅಭಿಮತ.

ರಾಜ್ಯ ಸರಕಾರವೇ ವಹಿಸಿಕೊಳ್ಳಲಿ
ಇಎಸ್‌ಐ ಆಸ್ಪತ್ರೆಗಳನ್ನು ಬಹುತೇಕ ಕಡೆ ರಾಷ್ಟ್ರ ಮಟ್ಟದ ಇಎಸ್‌ಐ ನಿಗಮದಿಂದಲೇ ನಿರ್ವಹಣೆ ಮಾಡಲಾಗುತ್ತಿದೆ. ಆದರೆ, ಜಿಲ್ಲೆಯಲ್ಲಿ ಹೊಸದಾಗಿ ನಿರ್ಮಾಣವಾಗುತ್ತಿರುವ ಆಸ್ಪತ್ರೆಯ ನಿರ್ವಹಣೆಯನ್ನು ರಾಜ್ಯ ಸರಕಾರ ಹೊತ್ತುಕೊಳ್ಳಬೇಕು ಎಂಬ ಬೇಡಿಕೆ ಇದೆ. ರಾಷ್ಟ್ರಮಟ್ಟದಲ್ಲಿ ನೇಮಕಾತಿ ನಡೆದರೆ ಸ್ಥಳೀಯರಿಗೆ ಅವಕಾಶ ಸಿಗುವುದಿಲ್ಲ. ರಾಜ್ಯ ಸರಕಾರ ವಹಿಸಿಕೊಂಡರೆ ಸ್ಥಳೀಯ ನೇಮಕಾತಿಗೆ ಅವಕಾಶ ಸಿಗಲಿದೆ ಎನ್ನುವುದು ಕಾರ್ಮಿಕರ ಅಭಿಮತ.

Advertisement

ಹಣವಿದೆ, ವೇಗ ಸಿಗುವುದಷ್ಟೇ ಬಾಕಿ
ಕಾರ್ಮಿಕ ವಿಮಾ ಯೋಜನೆಯಲ್ಲಿ ಹಣದ ಕೊರತೆ ಇಲ್ಲ. ಶೇ.40ಕ್ಕಿಂತ ಹೆಚ್ಚು ಹಣ ಇಎಸ್‌ಐ ಕಾರ್ಪೋರೇಶನ್‌ನಲ್ಲಿ ಲಭ್ಯವಿದೆ. ಆದರೂ ವಿಳಂಬ ಧೋರಣೆ ಯಾಕೆ ಎನ್ನುವುದು ಕಾರ್ಮಿಕರ ಪ್ರಶ್ನೆ.

ಕಾರ್ಮಿಕರಿಗೆ ಅನಾರೋಗ್ಯ ಕಾಡಿದಾಗ, ಅಪಘಾತ, ತುರ್ತು ಚಿಕಿತ್ಸೆ ಅಗತ್ಯವಿದ್ದಾಗ ಇಎಸ್‌ಐ ವ್ಯವಸ್ಥೆಯಿರುವ ಆಸ್ಪತ್ರೆಗಳಲ್ಲಿ ಉಚಿತವಾಗಿ ಚಿಕಿತ್ಸೆ ದೊರಕುತ್ತದೆ. ಇಂಥ ವ್ಯವಸ್ಥೆ ಜಿಲ್ಲೆಯ ಕಾರ್ಮಿಕರಿಗೆ ಆದಷ್ಟು ಬೇಗನೆ ಸಿಗಲಿ ಎಂದು ಆಶಿಸಿದ್ದಾರೆ ಕಾರ್ಮಿಕರು.

4 ಕಡೆ ಚಿಕಿತ್ಸಾಲಯಗಳಲ್ಲೂ ಸೌಲಭ್ಯಗಳಿಲ್ಲ
ಉಡುಪಿ, ಮಣಿಪಾಲ, ಕಾರ್ಕಳ ಮತ್ತು ಕುಂದಾಪುರದಲ್ಲಿ ಇಎಸ್‌ಐ ಚಿಕಿತ್ಸಾಲಯವಿದೆ. ಇಲ್ಲಿ ಪೂರ್ಣ ಪ್ರಮಾಣದ ಸಿಬಂದಿಯೂ ಇಲ್ಲ. ಔಷಧ ಮತ್ತು ದಾಖಲಾತಿಗಾಗಿ ಇರುವ ಕನಿಷ್ಠ ಸಿಬಂದಿಯೇ ಇಲ್ಲಿ ನಿರ್ವಹಣೆ ಮಾಡುತ್ತಿದ್ದಾರೆ. ಚಿಕಿತ್ಸಾಲಯಗಳಿಗೆ ಪೂರ್ಣ ಪ್ರಮಾಣದ ವೈದ್ಯರ ನೇಮಕದ ಅವಶ್ಯವಿದೆ.

ಡಿ.1ರಿಂದ ರಾಜ್ಯವ್ಯಾಪಿ ಜನರಲ್‌ ದಾಖಲಾತಿ ಸ್ಥಗಿತ
ಕಾರ್ಮಿಕ ವಿಮಾ ಯೋಜನೆಯ (ಇಎಸ್‌ಐ) ಜನರಲ್‌ ಸೇವೆಯನ್ನು ಸರಕಾರ ನವೀಕರಣಗೊಳಿಸದ ಪರಿಣಾಮ ಡಿ.1ರಿಂದ ರಾಜ್ಯದಲ್ಲಿ ದಾಖಲಾತಿ ಸ್ಥಗಿತಗೊಂಡಿದ್ದು , ಜಿಲ್ಲೆಯ ಕಾರ್ಮಿಕರಿಗೂ ಅದರ ಬಿಸಿ ತಟ್ಟಿದೆ. 2023ರಲ್ಲಿ ಮಾಡಿಕೊಂಡ ಜನರಲ್‌ ಆರೋಗ್ಯ ಸೇವೆ ಒಪ್ಪಂದ 2014ರ ನ.30ಕ್ಕೆ ಅಂತ್ಯವಾಗಿದ್ದು, ಎಂ.ಒ.ಯು. ಮರು ನವೀಕರಣ ಪ್ರಕ್ರಿಯೆಗಳು ಪ್ರಾರಂಭವಾಗದೆ ಕಾರ್ಮಿಕ ವಲಯದ ವೈದ್ಯಕೀಯ ಸೇವೆ ಅಸ್ತವ್ಯಸ್ತಗೊಂಡಿದೆ.

ಶೀಘ್ರ ಕಾಮಗಾರಿ ಆರಂಭ
ಹಿಂದಿನ ಗುತ್ತಿಗೆದಾರ ಸರಿಯಾಗಿ ಕಾರ್ಯನಿರ್ವಹಿಸದೆ ಇದ್ದ ಕಾರಣ ಮರು ಟೆಂಡರ್‌ ಕರೆಯಲಾಗಿದೆ. ಇತ್ತೀಚೆಗಷ್ಟೆ ಕಾರ್ಮಿಕ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳ ಜತೆ ಚರ್ಚಿಸಿದ್ದು ಇನ್ನು 45 ದಿನಗಳಲ್ಲಿ ಟೆಂಡರ್‌ ಪ್ರಕ್ರಿಯೆ ಪೂರ್ಣಗೊಂಡು ಕಾಮಗಾರಿ ಆರಂಭಿಸಲಾಗುವುದು.
– ಕೋಟ ಶ್ರೀನಿವಾಸ ಪೂಜಾರಿ, ಸಂಸದರು

-ಬಾಲಕೃಷ್ಣ ಭೀಮಗುಳಿ

Advertisement

Udayavani is now on Telegram. Click here to join our channel and stay updated with the latest news.

Next