ಉಡುಪಿ: ವಿವಿಧ ಬೇಡಿಕೆ ಈಡೇರಿಸಲು ಒತ್ತಾಯಿಸಿ ರಾಜ್ಯಾದ್ಯಂತ ಗ್ರಾ. ಪಂ. ಅಧಿಕಾರಿ, ಸಿಬಂದಿ ಮುಷ್ಕರದಲ್ಲಿ ಭಾಗಿಯಾಗಿರುವುದರಿಂದ ಜಿಲ್ಲೆಯಲ್ಲಿಯೂ ಎಲ್ಲ ಗ್ರಾ. ಪಂ. ಸಿಬಂದಿ ಪ್ರತಿಭಟನೆಯಲ್ಲಿ ಭಾಗವಹಿಸಿ, ಕೆಲವರು ಗೈರಾಗಿ ಬೆಂಬಲ ಸೂಚಿಸಿದ್ದಾರೆ. ಪರಿಣಾಮ ಎಲ್ಲ ಗ್ರಾ. ಪಂ. ಗಳಲ್ಲಿ ಜನ ಸಮಾನ್ಯರಿಗೆ ಸೇವೆ ಸ್ತಬ್ಧಗೊಂಡಿದೆ.
ಜಿಲ್ಲೆಯಲ್ಲಿ ಸಾವಿರಕ್ಕೂ ಅಧಿಕ ಮಂದಿ ಪಿಡಿಒ, ಕಾರ್ಯದರ್ಶಿ, ಎಸ್‌ಡಿಎ, ವಾಟರ್‌ವೆುನ್, ಬಿಲ್ ಕಲೆಕ್ಟರ್, ಸ್ವತ್ಛತಾ ಸಿಬಂದಿ ಕೆಲಸ ನಿರ್ವಹಿಸುತ್ತಿದ್ದು, ಸದ್ಯಕ್ಕೆ 300ಕ್ಕೂ ಅಧಿಕ ಮಂದಿ ಬೆಂಗಳೂರಿನಲ್ಲಿ ಫ್ರೀಡಂ ಪಾರ್ಕ್‌ನಲ್ಲಿ ನಡೆಯುವ ಪ್ರತಿಭಟನೆಯಲ್ಲಿ ಭಾಗವಹಿಸಿದ್ದಾರೆ. ಕೆಲವರು ಗೈರಾಗಿ ಮನೆಯಲ್ಲೆ ಇದ್ದುಕೊಂಡು ಮುಷ್ಕರದಲ್ಲಿ ಭಾಗವಹಿಸಿದ್ದಾರೆ. ಸರಕಾರ ಬೇಡಿಕೆ ಈಡೇರಿಸದ ವರೆಗೂ ಪ್ರತಿಭಟನೆಯಿಂದ ಹಿಂದೆ ಸರಿಯುವ ಮಾತೇ ಇಲ್ಲ ಎಂದು ಸಂಘಟನೆ ಪದಾಧಿಕಾರಿಗಳು ತಿಳಿಸಿದ್ದಾರೆ. ಅಗತ್ಯ ಸೇವೆಗಾಗಿ ಗ್ರಾ. ಪಂ. ಭೇಟಿ ಕೊಡುವ ಜನರು ಕಚೇರಿಯಲ್ಲಿ ಅಧಿಕಾರಿ, ಸಿಬಂದಿ ಇಲ್ಲದೆ ಹಿಂದಕ್ಕೆ ಹೋಗುತ್ತಿದ್ದಾರೆ.
ಸಕಾಲದಲ್ಲಿ ಸೇವೆ ಪಡೆಯಲು ಸಾಧ್ಯವಾಗದೆ ಕೆಲಸ ಕಾರ್ಯಬಿಟ್ಟು ಜನರು ದಿನ ಅಲೆಯುವಂತ ಪರಿಸ್ಥಿತಿ ಎದುರಾಗಿದೆ. ಗ್ರಾ. ಪಂ. ಕಚೇರಿಗಳಲ್ಲಿ ಸದ್ಯಕ್ಕೆ ಅಧ್ಯಕ್ಷರು, ಸದಸ್ಯರು ಆಗಾಗ ಭೇಟಿ ಕೊಡುತ್ತಿದ್ದಾರೆ. ಸಿಬಂದಿ ಮುಷ್ಕರಕ್ಕೆ ಗ್ರಾ. ಪಂ. ಸದಸ್ಯರ ಒಕ್ಕೂಟವು ಬೆಂಬಲ ಸೂಚಿಸಿದೆ.
ಬೆಂಗಳೂರು ಫ್ರೀಡಂ ಪಾರ್ಕ್‌ನಲ್ಲಿ ಜರಗಿದ ಪ್ರತಿಭಟನೆಯಲ್ಲಿ ಪಿಡಿಒ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಮಂಜುನಾಥ್ ಶೆಟ್ಟಿ, ಮಾಜಿ ಅಧ್ಯಕ್ಷ ಮಹೀಮ್ ಶೆಟ್ಟಿ, ಕುಂದಾಪುರ ತಾಲೂಕು ಅಧ್ಯಕ್ಷ ಚಂದ್ರ ಬಿಲ್ಲವ, ಪ್ರ. ಕಾರ್ಯದರ್ಶಿ ಜಯರಾಮ ಶೆಟ್ಟಿ, ಬೈಂದೂರು ತಾಲೂಕು ಅಧ್ಯಕ್ಷ ರುಕ್ಕನಗೌಡ, ಬ್ರಹ್ಮಾವರ ಅನಿಲ್ ಶೆಟ್ಟಿ, ಉಡುಪಿ ಸಂತೋಷ್ ಜೋಗಿ, ಕಾರ್ಕಳ ತಿಲಕ್‌ರಾಜ್, ಪರಿಷತ್ ಸದಸ್ಯ ಸಿದ್ದೇಶ್, ಸಂಘಟನೆ ಪ್ರಮುಖರಾದ ಸತೀಶ್ ವಡ್ಡರ್ಸೆ, ದಿವ್ಯಾ ಶೇಖರ್, ಸತೀಶ್ ತೋಳಾರ್, ಪೂರ್ಣಿಮಾ, ಹರೀಶ್ ಮೊದಲಾದವರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
ಇದನ್ನೂ ಓದಿ: Kalaburagi: ಕಲ್ಯಾಣ ಕರ್ನಾಟಕ ಭಾಗದ ಸಮಗ್ರ ಶೈಕ್ಷಣಿಕ ಅಭಿವೃದ್ಧಿಗೆ ತಜ್ಞರ ಸಮಿತಿ ರಚನೆ