Advertisement

Karkala: ಎಚ್ಚರ, ಚಿನ್ನದಂಗಡಿ ಮೇಲಿದೆ‌ ಕಳ್ಳರ ಕಣ್ಣು !

03:03 PM Dec 31, 2024 | Team Udayavani |

ಕಾರ್ಕಳ: ಕಾರ್ಕಳ ನಗರದಲ್ಲಿ ಹಾಡಹಗಲೇ ಚಿನ್ನಾಭರಣ ಅಂಗಡಿಗಳಿಂದ ಚಿನ್ನ ಕಳವು ಮಾಡುವ ಘಟನೆಗಳು ಹೆಚ್ಚುತ್ತಿದ್ದು, ಆತಂಕಕ್ಕೆ ಕಾರಣವಾಗಿದೆ. ಜುವೆಲ್ಲರಿ ಗಳು ತಮ್ಮ ಕಣ್ಗಾವಲು ವ್ಯವಸ್ಥೆಯನ್ನು ಉನ್ನತೀಕರಿ ಸಿಕೊಳ್ಳುವಂತೆ ಪೊಲೀಸರು ಸಲಹೆ ನೀಡಿದ್ದಾರೆ.

Advertisement

2ತಿಂಗಳ ಹಿಂದಷ್ಟೇ ಕಾರ್ಕಳ ಪೇಟೆಯಲ್ಲಿ ಚಿನ್ನದಂಗಡಿಯಲ್ಲಿ ಕಳ್ಳತನ ಮಾಡಲಾಗಿತ್ತು. ಕೆಲವು ದಿನಗಳ ಹಿಂದೆ ಮತ್ತೂಂದು ಪ್ರಕರಣ ಸಂಭವಿಸಿದೆ. ಪೊಲೀಸರು ಎರಡೂ ಪ್ರಕರಣ ಗಳಲ್ಲಿ ಆರೋಪಿಗಳನ್ನು ಬಂಧಿಸಿ ದ್ದಾರೆ. ಆದರೆ, ಎಚ್ಚರಿಕೆ ವಹಿಸುವಂತೆ ಸೂಚಿಸಿದ್ದಾರೆ.

ಕಾರ್ಕಳದಲ್ಲಿ 20ಕ್ಕೂ ಅಧಿಕ ಸಣ್ಣ ಮತ್ತು ದೊಡ್ಡ ಚಿನ್ನಾಭರಣ ಮಾರಾಟ ಸಂಸ್ಥೆಗಳಿದ್ದು, ಹಲವು ವರ್ಷಗಳಿಂದ ವ್ಯಾಪಾರ ಚಟುವಟಿಕೆ ನಡೆಸುತ್ತಿರುವ ಇಲ್ಲಿನ ಸ್ವರ್ಣೋದ್ಯಮ ಉತ್ತಮ ವಹಿವಾಟು ಹೊಂದಿದೆ. ಸುತ್ತಮುತ್ತಲಿನ ಗ್ರಾಮೀಣ ಭಾಗದ ಹೆಚ್ಚಿನವರು ಶುಭಾ ಸಮಾರಂಭ ಸಹಿತ ಇನ್ನಿತರೆ ಕಾರ್ಯಗಳಿಗೆ ಚಿನ್ನಾಭರಣ ಖರೀದಿಗೆ ಕಾರ್ಕಳವನ್ನೇ ಅವಲಂಬಿಸಿದ್ದಾರೆ. ಈ ಘಟನೆಗಳಿಂದ ಸಣ್ಣ ವ್ಯಾಪಾರಿಗಳು ಆತಂಕಗೊಳ್ಳುತ್ತಾರೆ.2ತಿಂಗಳ ಹಿಂದೆ ಉಷಾ ಜುವೆಲ್ಲರ್ಸ್‌ನಲ್ಲಿ ವ್ಯಕ್ತಿಯೊಬ್ಬ ಗ್ರಾಹಕನ ಸೋಗಿನಲ್ಲಿ ಪ್ರವೇಶಿಸಿ ಸರ ಕದ್ದು ಓಡಿ ಹೋಗುವಾಗ ಸಿಕ್ಕಿಬಿದ್ದಿದ್ದ. ಈ ವ್ಯಕ್ತಿ ಸ್ಥಳೀಯನೇ ಆಗಿದ್ದು ಪೊಲೀಸರು ಕ್ರಮ ಕೈಗೊಂಡಿದ್ದರು. ಅನಂತರ ಡಿ.27ರಂದು ರಥಬೀದಿ ಪ್ರಣವ್‌ ಜುವೆಲ್ಲರ್ಸ್‌ನಲ್ಲಿ ಗ್ರಾಹಕನ ಸೋಗಿನಲ್ಲಿ ಹೋಗಿ 2 ಲಕ್ಷಕ್ಕೂ ಅಧಿಕ ಮೌಲ್ಯದ ಉಂಗುರ, ಜುಮ್ಕಿ ತೆಗೆದುಕೊಂಡು ಪರಾರಿಯಾಗಿದ್ದಾರೆ. ಈ ಕಳ್ಳನನ್ನು ಪೊಲೀಸರು ಕ್ಷಿಪ್ರ ಕಾರ್ಯಚರಣೆ ನಡೆಸಿ ಪತ್ತೆ ಮಾಡಿದ್ದು, ವಿಚಾರಣೆ ನಡೆಸುತ್ತಿದ್ದಾರೆ.

ಅಗತ್ಯ ಸುರಕ್ಷತಾ ಕ್ರಮ ಪಾಲಿಸಿರಿ
ಕಳ್ಳತನ ಮಾಡುವರು ಸೆಕ್ಯೂರಿಟಿ ಇಲ್ಲದ, ಒಬ್ಬರೇ ಇರುವ ಸಣ್ಣಪುಟ್ಟ ಶಾಪ್‌ಗ್ಳನ್ನು ಗಮನಿಸುತ್ತಾರೆ. ಹೇಗಾದರೂ ಆಭರಣಗಳನ್ನು ತೆಗೆದುಕೊಂಡು ಸುಲಭದಲ್ಲಿ ಪರಾರಿಯಾಗಬಹುದು ಎಂಬ ಉದ್ದೇಶ ಇವರದ್ದಾಗಿರುತ್ತದೆ. ಗುಣಮಟ್ಟದ ಸಿಸಿಟಿವಿ ಕೆಮರಾ ವ್ಯವಸ್ಥೆ ಸಹಿತ ಅಗತ್ಯ ಸುರಕ್ಷತಾ ಕ್ರಮವನ್ನು ಚಿನ್ನಾಭರಣ ಮಾರಾಟಗಾರರು ಪಾಲಿಸಬೇಕು. ಎಲ್ಲ ಚಿನ್ನಾಭರಣ ವ್ಯಾಪಾರಿಗಳಿಗೆ ಈ ನಿಟ್ಟಿನಲ್ಲಿ ಪೊಲೀಸ್‌ ಇಲಾಖೆಯಿಂದ ಅರಿವು ಮೂಡಿಸುವ ಕಾರ್ಯ ಮಾಡಲಾಗುವುದು. ಘಟನೆ ನಡೆದ ಬಳಿಕ ಪೊಲೀಸ್‌ ಇಲಾಖೆ ಕ್ಷಿಪ್ರ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಿದೆ.
-ಅರವಿಂದ್‌ ಕಲಗುಜ್ಜಿ,ಡಿವೈಎಸ್‌ಪಿ ಕಾರ್ಕಳ

ಪೊಲೀಸ್‌ ಇಲಾಖೆ ತತ್‌ಕ್ಷಣ ತನಿಖೆ
ಕಾರ್ಕಳದಲ್ಲಿ ಜರಗಿದ ಎರಡು ಘಟನೆಗಳಲ್ಲಿಯೂ ಮಹಿಳೆ, ಯುವತಿ ಒಬ್ಬರೇ ಇದ್ದ ಶಾಪ್‌ಗೆ ಕಳ್ಳರು ಕಣ್ಣಿಟ್ಟಿದ್ದಾರೆ. ಈ ಬಗ್ಗೆ ಎಲ್ಲ ಆಯಾಮಗಳಿಂದಲೂ ತಿಳಿದುಕೊಂಡೇ ಕಳ್ಳರು ಇಂಥ ಕೃತ್ಯ ನಡೆಸಿರುವ ಸಾಧ್ಯತೆ ಇರುತ್ತದೆ. ಇಂಥ ಘಟನೆಗಳಿಂದ ಕೆಲಕಾಲ ವ್ಯಾಪಾರಿಗಳಲ್ಲಿ ಆತಂಕವಿರುತ್ತದೆ. ಪೊಲೀಸ್‌ ಇಲಾಖೆ ತತ್‌ಕ್ಷಣ ತನಿಖೆ ನಡೆಸಿ ಆರೋಪಿಯನ್ನು ಬಂಧಿಸಿದೆ. ಜುವೆಲ್ಲರಿ ಶಾಪ್‌ ನಡೆಸುವರು ಈ ಬಗ್ಗೆ ಹೆಚ್ಚಿನ ಜಾಗರೂಕತೆ ವಹಿಸಬೇಕಿದೆ.
-ಮುಹಮ್ಮದ್‌ ಅಸ್ಲಾಮ, ಅಧ್ಯಕ್ಷರು, ಜುವೆಲ್ಲರ್ಸ್‌ ಅಸೋಸಿಯೇಶನ್‌ ಕಾರ್ಕಳ

Advertisement

-ಅವಿನ್‌ ಶೆಟ್ಟಿ

Advertisement

Udayavani is now on Telegram. Click here to join our channel and stay updated with the latest news.

Next