Advertisement
ಆಚೆಗೂ ಉತ್ತಮ ಡಬಲ್ ರೋಡ್, ಈಚೆಗೂ ಉತ್ತಮ ಡಬಲ್ ರೋಡ್ ಇರುವ ಈ ಮಧ್ಯದ 350 ಮೀಟರ್ ರಸ್ತೆಯ ಡಾಮರು ಸಂಪೂರ್ಣ ಕಿತ್ತು ಹೋಗಿದೆ. ವಾಹನಗಳು ಗುಂಡಿಗೆ ಬಿದ್ದೇಳುವುದು ಒಂದೆಡೆಯಾದರೆ ಗುಂಡಿಗಳಿಂದ ಎದ್ದಿರುವ ಪುಡಿ ಪುಡಿ ಗಾತ್ರದ ಕಲ್ಲುಗಳು ದ್ವಿಚಕ್ರ ವಾಹನ ಸವಾರರಿಗೆ ಅಪಾಯಕಾರಿಯಾಗಿದೆ. ಈ ರಸ್ತೆ ಮಣಿಪಾಲಕ್ಕೆ ಉದ್ಯೋಗ, ಶಿಕ್ಷಣಕ್ಕೆ ಬರುವ ಸಾವಿರಾರು ಮಂದಿಗೆ ಅನುಕೂಲವಾಗಿದ್ದು ಚತುಷ್ಪಥ ಹೊಸ ರಸ್ತೆ ಎಂಬ ಕಾರಣಕ್ಕೆ ವಾಹನಗಳ ವೇಗವು ಹೆಚ್ಚಿರುತ್ತದೆ. ವೇಗದ ವಾಹನಗಳು ಗುಂಡಿ ನೋಡಿ ಬ್ರೇಕ್ ಹಾಕಿದಾಗ ನಿಯಂತ್ರಣ ತಪ್ಪಿ ಅಪಘಾತ ಸಂಭವಿಸಿದ್ದೂ ಇದೆ. ಈಗಾಗಲೆ ಕೆಲವರು ಬಿದ್ದು ಪೆಟ್ಟು ಮಾಡಿಕೊಂಡಿದ್ದಾರೆ. ವರ್ಷದಿಂದ ವರ್ಷಕ್ಕೆ ಗುಂಡಿಗಳ ಗಾತ್ರ ದೊಡ್ಡದಾಗುತ್ತಿದೆಯೇ ಹೊರತು, ಶಾಶ್ವತ ಪರಿಹಾರ ಸಿಕ್ಕಿಲ್ಲ ಇಲ್ಲಿ ಸಂಚರಿಸುವ ವಾಹನ ಸವಾರರು ಆತಂಕ ವ್ಯಕ್ತಪಡಿಸುತ್ತಾರೆ.
ಗುಂಡಿಗಳಿಗಿಂತಲೂ ಈ ವೆಟ್‌ಮಿಕ್ಸ್ ತೀರ ಅಪಾಯಕಾರಿಯಾಗಿದೆ ಎನ್ನುತ್ತಾರೆ ಇಲ್ಲಿ ಸಂಚರಿಸುವ ವಾಹನ ಸವಾರರು. ವೆಟ್‌ಮಿಕ್ಸ್ ಗುಂಡಿಗಳನ್ನು ಮುಚ್ಚುವುದಕ್ಕಿಂತ ಅಪಾಯ ಸೃಷ್ಟಿಸಿದ್ದೇ ಹೆಚ್ಚು. ವೆಟ್‌ಮಿಕ್ಸ್‌ನಲ್ಲಿ ದೊಡ್ಡಕಲ್ಲುಗಳಿದ್ದು, ದ್ವಿಚಕ್ರ ವಾಹನಗಳಿಗೆ ಅಪಾಯಕಾರಿಯಾಗಿದೆ. ಕಾರಿನ ಚಕ್ರಕ್ಕೆ ಸಿಲುಕಿ ಪಕ್ಕದಲ್ಲಿ ಚಲಿಸುವ ವಾಹನಕ್ಕೆ ಬಡಿದರೆ ಮತ್ತಷ್ಟು ಅಪಾಯ ಸಂಭವಿಸುವ ಸಾಧ್ಯತೆ ಹೆಚ್ಚಿದೆ. ಅಲ್ಲದೆ ಈ ವೆಟ್‌ಮಿಕ್ಸ್ ಕಾರ್ಯವು ವ್ಯವಸ್ಥಿತ ಫಿನಿಶಿಂಗ್ ಇಲ್ಲದೆ ಕಾಟಚಾರಕ್ಕೆ ಎಂಬಂತಾಗಿದೆ. ಮಳೆಬಿಟ್ಟ ಕೂಡಲೆ ವ್ಯವಸ್ಥಿತ ರಸ್ತೆ ನಿರ್ಮಿಸುವಂತೆ ಜನರ ಆಗ್ರಹವಾಗಿದೆ.
Related Articles
Advertisement
ದೇಹಕ್ಕೂ ಪೆಟ್ಟು, ವಾಹನಕ್ಕೂ ಪೆಟ್ಟುಕೇವಲ 350 ಮೀಟರ್ ರಸ್ತೆ ಸಂಚಾರ ಎಂದು ನಿರ್ಲಕ್ಷ್ಯ ಮಾಡುವಂತಿಲ್ಲ. ಈ ರಸ್ತೆಯಲ್ಲಿ ವಾಹನ ಚಲಾಯಿಸುವರಿಗೆ, ಪ್ರಯಾಣಿಕರಿಗೆ ಮಾತ್ರ ಇಲ್ಲಿ ಸಂಚರಿಸುವ ನೋವು ತಿಳಿದಿದೆ. ಈ ಗುಂಡಿಗಳಿರುವ ರಸ್ತೆಯಲ್ಲಿ ಸಂಚರಿಸಿದಾಗ ವಾಹನದಲ್ಲಿರುವ ನಾಗರಿಕರ ಸೊಂಟ, ಬೆನ್ನು ಮೂಳೆಗೆ ಹಾನಿಯಾದರೆ ವಾಹನದ ಸಸ್ಪೆನ್ಶನ್, ಟಯರ್, ಶಾಕ್ ಅಬ್ಸಾರ್ಬರ್‌ನಂಥ ಪ್ರಮುಖ ಬಿಡಿಭಾಗಗಳು ಹಾನಿಯಾಗುವ ಪರಿಸ್ಥಿತಿ ಇದೆ ಎಂದು ನಾಗರಿಕರು ಅಳಲು ತೋಡಿಕೊಂಡಿದ್ದಾರೆ. ಇರುವಷ್ಟೇ ಜಾಗದಲ್ಲಿ ಶಾಶ್ವತ ರಸ್ತೆ
ಪೆರಂಪಳ್ಳಿ ಬಾಕಿ ಇರುವ 350 ಮೀ. ರಸ್ತೆ ಅಭಿವೃದ್ಧಿ ಕಾರ್ಯವು ಖಾಸಗಿ ಭೂಮಿ ಭೂಸ್ವಾಧೀನ ಸಂಬಂಧಪಟ್ಟ ಆಕ್ಷೇಪದಿಂದ ವಿಳಂಬವಾಗಿತ್ತು. ಇತ್ತೀಚೆಗೆ ಚರಂಡಿ ಕಾರ್ಯ ನಡೆಸಲು ಆಕ್ಷೇಪ ಬಂದಿದ್ದರಿಂದ ಕೆಲಸ ಕೈಬಿಡಲಾಗಿತ್ತು. ಸುಗಮ ಸಂಚಾರಕ್ಕಾಗಿ ತಾತ್ಕಾಲಿಕ ತೇಪೆ, ವೆಟ್‌ಮಿಕ್ಸ್ ಹಾಕುವ ಕಾರ್ಯ ಮಾಡಲಾಗುತ್ತಿದೆ. ಇನ್ನೂ ಮುಂದುವರಿದು ವೆಟ್‌ಮಿಕ್ಸ್ ಮತ್ತು ತೇಪೆ ಕಾರ್ಯ ಮಾಡುವುದಿಲ್ಲ. ಅನುದಾನ ಮಂಜೂರಾದ ಕೂಡಲೇ ಪ್ರಸ್ತುತ ಹಳೆ ರಸ್ತೆ ಅಳತೆ ಇದ್ದಷ್ಟೇ ಶಾಶ್ವತವಾಗಿ ರಸ್ತೆ ಅಭಿವೃದ್ಧಿಗೊಳಿಸಲಾಗುತ್ತದೆ.
– ಮಂಜುನಾಥ್, ಎಇಇ, ಪಿಡಬ್ಲ್ಯೂಡಿ ಕಾಟಾಚಾರದ ತೇಪೆಕಾರ್ಯಕ್ಕೆ ಕೊನೆ ಎಂದು?
ನಾಲ್ಕೈದು ವರ್ಷಗಳಿಂದ ಈ ರಸ್ತೆ ಅವ್ಯವಸ್ಥೆಯಿಂದ ಕೂಡಿದೆ. ಇದಕ್ಕೆ ಶಾಶ್ವತ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ಗಂಭೀರ ಪ್ರಯತ್ನಗಳು ನಡೆಯಲೇ ಇಲ್ಲ. ರಸ್ತೆ ಅಗಲೀಕರಣಕ್ಕೆ ಖಾಸಗಿ ವ್ಯಕ್ತಿಗಳು ಜಾಗ ಬಿಟ್ಟುಕೊಡಲು ಅಕ್ಷೇಪಣೆ ಮಾಡಿದ್ದರು. ಅದರಂತೆ ಅಗಲೀಕರಣ ಕೆಲಸ ಸ್ಥಗಿತಗೊಂಡು ಹಲವು ವರ್ಷಗಳೇ ಕಳೆದಿದೆ. ಸದ್ಯ ಇರುವ ರಸ್ತೆಯಷ್ಟೇ ಉತ್ತಮ ಡಾಮರು ಅಥವಾ ಕಾಂಕ್ರೀಟ್ ರಸ್ತೆ ನಿರ್ಮಿಸುವುದು ಬಿಟ್ಟು ಪ್ರತೀವರ್ಷ ಮಳೆಗಾಲಕ್ಕೆ ಎರಡು ಮೂರು ಸಲ ವೆಟ್‌ಮಿಕ್ಸ್ ಹಾಕುತ್ತಾರೆ. ಬೇಸಗೆಯಲ್ಲಿ ಪ್ಯಾಚ್ ವರ್ಕ್ ಮಾಡುತ್ತಾರೆ. ಈ ವೆಟ್‌ಮಿಕ್ಸ್, ಪ್ಯಾಚ್ ವರ್ಕ್‌ಗೆ ವ್ಯಯ ಮಾಡಿದ ಲಕ್ಷಾಂತರ ರೂ. ಅನುದಾನದಲ್ಲಿಯೇ ಹೊಸದಾಗಿ ಅಚ್ಚುಕಟ್ಟಾದ ರಸ್ತೆ ನಿರ್ಮಿಸಬಹುದಿತ್ತು ಎಂದು ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ.