ಉಡುಪಿ: ಜಿಲ್ಲೆಯಲ್ಲಿ ಮಳೆ ಕೊರತೆ ಇರುವುದರಿಂದ 2024ರ ಫೆಬ್ರವರಿ ಅನಂತರದಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗುವ ಸಾಧ್ಯತೆಯಿದೆ. ಹೀಗಾಗಿ ವಾರಾಹಿ ಕುಡಿಯುವ ನೀರು ಸರಬರಾಜು ಯೋಜನೆಯನ್ನು ಡಿಸೆಂಬರ್ ಅಂತ್ಯದೊಳಗೆ ಪೂರ್ಣಗೊಳಿಸಿ, ಜನವರಿಯಿಂದ ಉಡುಪಿ ನಗರಕ್ಕೆ ನೀರು ಪೂರೈಕೆಯಾಗುವಂತೆ ನೋಡಿಕೊಳ್ಳಬೇಕು ಎಂದು ವಾರಾಹಿ ಯೋಜನೆಯ ಎಂಜಿನಿಯರ್‌ಗಳಿಗೆ ಜಿಲ್ಲಾಧಿಕಾರಿ ಡಾ| ವಿದ್ಯಾ ಕುಮಾರಿ ನಿರ್ದೇಶನ ನೀಡಿದರು.
ನಾಲ್ಕು ದಶಕ ಕಳೆದರೂ ವಾರಾಹಿ ಯೋಜನೆ ಪೂರ್ಣಗೊಂಡಿಲ್ಲ ಮತ್ತು ನೀರು ಪೂರೈಕೆಯೂ ಸಮರ್ಪಕವಾಗಿ ಆಗದೇ ಇರುವ ಬಗ್ಗೆ “ಉದಯವಾಣಿ’ ಇತ್ತೀಚೆಗೆ ವಿಸ್ತೃತ ವರದಿ ಪ್ರಕಟಿಸಿತ್ತು. ಅದರಂತೆ ಜಿಲ್ಲಾಧಿಕಾರಿ ಡಾ| ಕೆ. ವಿದ್ಯಾಕುಮಾರಿ ಅವರು ಅಧಿಕಾರಿಗಳೊಂದಿಗೆ ವಾರಾಹಿ ಯೋಜನೆಗಳ ಕಾಮಗಾರಿ ನಡೆಯುತ್ತಿರುವ ಸ್ಥಳಗಳಾದ ಶಿಂಬ್ರಾ, ಆರೂರು, ಕೊಕ್ಕರ್ಣೆ, ಆವರ್ಸೆ, ಹಾಲಾಡಿಯಲ್ಲಿ ಮಂಗಳವಾರ ಪರಿಶೀಲನೆ ನಡೆಸಿದರು.
ಈ ಕುರಿತು “ಉದಯವಾಣಿ’ಯೊಂದಿಗೆ ಮಾತನಾಡಿದ ಅವರು, ಜಿಲ್ಲೆಯಲ್ಲಿ ಸಾಕಷ್ಟು ಮಳೆ ಕೊರತೆಯಿದೆ. ಹೀಗಾಗಿ ಮುಂದೆ ನಿರೀಕ್ಷಿತ ಪ್ರಮಾಣದಲ್ಲಿ ಮಳೆ ಬಾರದೇ ಇದ್ದಲ್ಲಿ ಕುಡಿಯುವ ನೀರಿನ ಸಮಸ್ಯೆ ಹೆಚ್ಚಾಗಲಿದೆ.
ವಾರಾಹಿ ಕಾಮಗಾರಿಯನ್ನು ಆದ್ಯತೆಯಲ್ಲಿ ಪೂರ್ಣಗೊಳಿಸಲು ಕರ್ನಾಟಕ ನೀರಾವರಿ ನಿಗಮದ ಕಾರ್ಯಪಾಲಕ ಅಭಿಯಂತರು, ಸಹಾಯಕ ಕಾರ್ಯಪಾಲಕ ಅಭಿಯಂತರಿಗೆ ನಿರ್ದೇಶನ ನೀಡಲಾಗಿದೆ ಎಂದರು.
ಡೀಮ್ಡ್ ಫಾರೆಸ್ಟ್ ಪ್ರದೇಶ ತಾಂತ್ರಿಕ ಸಮಸ್ಯೆಗೆ ಸಂಬಂಧಿಸಿದಂತೆ ಈಗಾಗಲೇ ಅರಣ್ಯ ಇಲಾಖೆಗೆ ಪತ್ರ ಬರೆದಿದ್ದೇವೆ. ಕೇಂದ್ರ ಕಚೇರಿಯಿಂದ ಅನುಮತಿ ಸಿಕ್ಕ ಕೂಡಲೇ ತತ್‌ಕ್ಷಣದಿಂದಲೇ ಆ ಭಾಗದಲ್ಲೂ ಕಾಮಗಾರಿ ಆರಂಭಿಸಬೇಕು. ಅರಣ್ಯ ಇಲಾಖೆಯಿಂದ ಅನುಮತಿ ಪಡೆಯುವ ನಿಟ್ಟಿನಲ್ಲಿಯೂ ಎಲ್ಲ ರೀತಿಯ ಪ್ರಯತ್ನ ನಡೆಸಲಿದ್ದೇವೆ ಎಂದು ಹೇಳಿದರು.
ನೀರಿನ ಮಿತಬಳಕೆ ಸೂಕ್ತ
ಜಿಲ್ಲೆಯ ಸಾರ್ವಜನಿಕರು ನೀರಿನ ಮಿತ ಬಳಕೆ ಸಂಬಂಧಿಸಿದಂತೆ ಈಗಿಂದಲೇ ಜಾಗೃತರಾಗಬೇಕು. ಮಳೆ ನೀರನ್ನು ಸರಿಯಾದ ಕ್ರಮದಲ್ಲಿ ಇಂಗಿಸುವ ಮತ್ತು ನೀರನ್ನು ಆವಶ್ಯಕತೆಗೆ ತಕ್ಕಂತೆ ಬಳಸುವುದನ್ನು ರೂಢಿಸಿಕೊಳ್ಳಬೇಕು. ಮುಂದೆ ಕುಡಿಯುವ ನೀರಿನ ಸಮಸ್ಯೆ ಎದುರಾಗುವ ಸಾಧ್ಯತೆ ಇದೆ. ಹೀಗಾಗಿ ಜಿಲ್ಲೆಯ ಸಾರ್ವಜನಿಕರು ಈಗಿಂದಲೇ ಜಾಗೃತರಾಗಬೇಕು ಎಂದು ತಿಳಿಸಿದರು.