Advertisement

Udupi: ಉಡುಪಿಗೆ ಬರುವುದೆಂದು ವಾರಾಹಿ ನೀರು?; ಶೇ.90 ಕಾಮಗಾರಿ ಪೂರ್ಣ

02:49 PM Sep 20, 2024 | Team Udayavani |

ಉಡುಪಿ: ಪ್ರತೀ ವರ್ಷ ಬೇಸಗೆಗೆ ನಗರಸಭಾ ವ್ಯಾಪ್ತಿಯಲ್ಲಿ ನೀರಿಗೆ ಹಾಹಾಕಾರ ಆರಂಭವಾಗುತ್ತದೆ. ಆಗ ನೆನಪಾಗುವುದು ವಾರಾಹಿ ನೀರು.

Advertisement

ನಗರಕ್ಕೆ ಇದೀಗ ಸ್ವರ್ಣ ನದಿಯಿಂದ ಕುಡಿಯುವ ನೀರು ಪೂರೈಕೆಯಾಗುತ್ತಿದ್ದರೂ, ವಾರಾಹಿ ಕುಡಿಯುವ ನೀರಿನ ಯೋಜನೆ ಬಗ್ಗೆ ಪ್ರಸ್ತುತ ಗಂಭೀರ ಚಿಂತನೆ ನಡೆಸಬೇಕಾಗಿದೆ. ಈ ವರ್ಷವೂ ವಾರಾಹಿ ನೀರು ಬಾರದೇ ಇದ್ದರೆ ಇನ್ನಷ್ಟು ಸಮಸ್ಯೆಯಾಗುವ ಎಲ್ಲ ಸಾಧ್ಯತೆಯೂ ಇದೆ.

ನಗರಕ್ಕೆ 24 ಗಂಟೆ ಶುದ್ಧ ಕುಡಿಯುವ ನೀರು ಪೂರೈಸುವ ಮಹತ್ವದ ಯೋಜನೆ ಹಲವು ವರ್ಷಗಳಿಂದ ಕುಂಟುತ್ತಲೇ ಸಾಗುತ್ತಿದ್ದು, ಯಾವಾಗ ಪೂರ್ಣಗೊಳ್ಳುವುದು, ಯಾವಾಗ ನೀರು ಪೂರೈಕೆಯಾಗುವುದೋ ಎಂಬ ಗೊಂದಲದಲ್ಲಿ ಉಡುಪಿಯ ನಾಗರಿಕರಿದ್ದಾರೆ. ಕಳೆದ ಏಳೆಂಟು ವರ್ಷಗಳಿಂದ ಈ ಯೋಜನೆ ಆಮೆ ನಡಿಗೆಯಂತೆ ಸಾಗುತ್ತಿದೆ.

ನಗರಸಭೆ ಅಮೃತ್‌, ಎಡಿಬಿ ಅನುದಾನದಿಂದ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದ್ದು, ಹಾಲಾಡಿಯಿಂದ ನಗರಕ್ಕೆ ನೀರು ಪೂರೈಸುವ ಯೋಜನೆಯ ಕಾಮಗಾರಿಯನ್ನು ಕರ್ನಾಟಕ ನಗರ ಮೂಲಸೌಕರ್ಯ ಅಭಿವೃದ್ಧಿ ಮತ್ತು ಹಣಕಾಸು ನಿಗಮ (ಕೆಯುಐಡಿಎಫ್ಸಿ) ನಿರ್ವಹಿಸುತ್ತಿದೆ. 2017ರಲ್ಲಿ ಆರಂಭಗೊಂಡ ಈ ಯೋಜನೆ ಎರಡು ವರ್ಷಗಳಲ್ಲಿ ಪೂರ್ಣಗೊಂಡು ನೀರು ಪೂರೈಕೆಯಾಗಲಿದೆ ಎನ್ನಲಾಗಿತ್ತು.

Advertisement

ಕಾಮಗಾರಿ ಸ್ವರೂಪ ಹೀಗಿದ್ದು, ಹಾಲಾಡಿ ಭರತ್‌ಕಲ್‌ನಲ್ಲಿ ಡಬ್ಲ್ಯುಟಿಪಿ ಘಟಕ ನಿರ್ಮಿಸಿ ನಿತ್ಯ 45 ಎಂಎಲ್‌ಡಿ ನೀರನ್ನು ಪಂಪ್‌ ಮಾಡಿ ನೀರನ್ನು ಮಣಿಪಾಲಕ್ಕೆ ಪೈಪ್‌ಲೈನ್‌ ಮೂಲಕ ಹಾಯಿಸುವುದು. ಈ ನೀರನ್ನು ಮಣಿಪಾಲದಲ್ಲಿರುವ 25 ಎಂಎಲ್‌ಡಿ ಸಾಮರ್ಥ್ಯದ ಎರಡು ಜಿಎಲ್‌ಎಸ್‌ಆರ್‌ ಟ್ಯಾಂಕ್‌ಗಳಲ್ಲಿ ಸಂಗ್ರಹಿಸಿ, ಆ ಬಳಿಕ 7 ಓವರ್‌ಹೆಡ್‌ ಟ್ಯಾಂಕ್‌ಗಳಿಗೆ ನೀರು ಪೂರೈಸುವುದು. ಇಲ್ಲಿಂದ ಈಗಾಗಲೆ ಸಂಪರ್ಕ ಪಡೆದಿರುವ 21 ಸಾವಿರ ನೀರಿನ ಸಂಪರ್ಕ ಪಡೆದ ವಾಣಿಜ್ಯ ಉದ್ದೇಶ ಮತ್ತು ಮನೆಗಳಿಗೆ 24 ಗಂಟೆ ನೀರು ಪೂರೈಸುವುದು.

ಆಗಬೇಕಿರುವ ಕಾಮಗಾರಿಗಳು
ಹಾಲಾಡಿ ಭರತ್‌ಕಲ್‌ನಲ್ಲಿ ನಿರ್ಮಿಸಲಾಗುವ ಡಬ್ಲ್ಯುಟಿಪಿ ಘಟಕದ ಸಿವಿಲ್‌ ವರ್ಕ್‌ ಪ್ರಗತಿಯಲ್ಲಿದೆ. ಇಲ್ಲಿ ನೀರು ಶುದ್ಧಗೊಳಿಸುವ ಘಟಕದ ಫಿಲ್ಟರ್‌ಬೆಡ್‌ ವರ್ಕ್‌ ನಡೆಯುತ್ತಿದ್ದು, ಕೆಲವು ತಾಂತ್ರಿಕ ಕೆಲಸಗಳು ಬಾಕಿ ಇದೆ. ಕೆಲವೇ ದಿನಗಳಲ್ಲಿ ಕಾಮಗಾರಿ ಪೂರ್ಣಗೊಳ್ಳಲಿದೆ. ಕಕ್ಕುಂಜೆ ಓವರ್‌ಹೆಡ್‌ ಟ್ಯಾಂಕ್‌ ಕೆಲಸ ಬಾಕಿ ಇದ್ದು, ಮಳೆ ಪೂರ್ಣ ಬಿಟ್ಟರೆ 20 ದಿನಗಳಲ್ಲಿ ಕೆಲಸ ಪೂರ್ಣಗೊಳ್ಳಲಿದೆ. ಉಳಿದಂತೆ ನಗರದ ಕೆಲವು ಕಡೆಗಳಲ್ಲಿ ಮನೆಗಳಿಗೆ ಸಂಪರ್ಕಿಸುವ ಕಲ್ಪಿಸುವ ಪೈಪ್‌ಲೈನ್‌ ಕೆಲಸ ಅಲ್ಲಲ್ಲಿ ನಡೆಯುತ್ತು. ಶೇ.10ರಷ್ಟು ಪೈಪ್‌ಲೈನ್‌ ಕೆಲಸ ಬಾಕಿ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮಳೆಯಿಂದ ವಿಳಂಬ
ಮಳೆಯಿಂದ ಕಾಮಗಾರಿಗೆ ಸ್ವಲ್ಪ ತಡೆಯಾಗಿ ವಿಳಂಬವಾಯಿತು. ಸದ್ಯಕ್ಕೆ ನೀರು ಪೂರೈಕೆ ಮಾಡುವ ಎಲ್ಲ ಪ್ರಮುಖ ಕೆಲಸಗಳು ಪೂರ್ಣಗೊಂಡಿದ್ದು. ಈಗಾಗಲೇ ಪ್ರಾಯೋಗಿಕವಾಗಿ ನೀರು ಪಂಪಿಂಗ್‌ ಮಾಡಿ ಪರೀಕ್ಷೆ ಮಾಡಿದ್ದೇವೆ. ಹಾಲಾಡಿ ಡಬ್ಲ್ಯುಟಿಪಿ ಘಟಕದ ಕೆಲವು ಕಾಮಗಾರಿ ಮತ್ತು ಕಕ್ಕುಂಜೆ ವಾಟರ್‌ ಟ್ಯಾಂಕ್‌ ಕೆಲಸ ಮಾತ್ರ ಪ್ರಮುಖವಾಗಿದ್ದು, ಶೀಘ್ರ ಪೂರ್ಣಗೊಳಿಸಲಾಗುತ್ತದೆ. ಅಕ್ಟೋಬರ್‌ ಅಂತ್ಯದೊಳಗೆ ನೀರು ಪೂರೈಕೆ ಮಾಡಬಹುದು.
-ಅರಕೇಶ್‌, ಎಇಇ, ಕೆಯುಐಡಿಎಫ್ಸಿ

ತ್ವರಿತ ಕಾಮಗಾರಿಗೆ ಸೂಚನೆ
ವಾರಾಹಿ ಕುಡಿಯುವ ನೀರು ಯೋಜನೆ ಕಾಮಗಾರಿ ವ್ಯವಸ್ಥಿತವಾಗಿ ವಿಳಂಬವಿಲ್ಲದೆ ಪೂರ್ಣಗೊಳಿಸಲು ಎಂಜಿನಿಯರ್‌ಗಳಿಗೆ ನಿರ್ದೇಶನ ನೀಡಲಾಗಿದೆ. ನಗರದೊಳಗಿನ ಕಕ್ಕುಂಜೆ ಟ್ಯಾಂಕ್‌ ಮತ್ತು ಹಾಲಾಡಿ ಡಬ್ಲ್ಯುಟಿಪಿ ಘಟಕದ ಕಾಮಗಾರಿ ಶೀಘ್ರ ಮುಗಿಸಲು ಸೂಚಿಸಲಾಗಿದೆ.
– ಪ್ರಭಾಕರ್‌ ಪೂಜಾರಿ, ಅಧ್ಯಕ್ಷರು, ನಗರಸಭೆ

ಅನುದಾನ ವಿವರ
7 ಓವರ್‌ಹೆಡ್‌ ಟ್ಯಾಂಕ್‌ ನಿರ್ಮಾಣ, ಪೈಪ್‌ಲೈನ್‌ಗೆ 102 ಕೋ. ರೂ. ವೆಚ್ಚ

ಹಾಲಾಡಿ ಭರತ್‌ಕಲ್‌ನಲ್ಲಿ ಡಬ್ಲ್ಯುಟಿಪಿ ಘಟಕ ನಿರ್ಮಾಣಕ್ಕೆ 65 ಕೋ. ರೂ. ವೆಚ್ಚ

ಭರತ್‌ಕಲ್‌ನಿಂದ ಮಣಿಪಾಲ ಮುಖ್ಯ ಪೈಪ್‌ಲೈನ್‌ ಕಾಮಗಾರಿಗೆ 115 ಕೋ. ರೂ. ವೆಚ್ಚ

ಯೋಜನೆ 8 ವರ್ಷಗಳ ನಿರ್ವಹಣೆಗೆ 70 ಕೋ. ರೂ. ಯೋಜನಾ ವೆಚ್ಚ

Advertisement

Udayavani is now on Telegram. Click here to join our channel and stay updated with the latest news.

Next