ಮಣಿಪಾಲ: ಉಡುಪಿ ನಗರದ ಒಳಚರಂಡಿ ಯೋಜನೆಗೆ (ಯುಜಿಡಿ) ಸುಮಾರು 330 ಕೋ.ರೂ. ವೆಚ್ಚದ ಡಿಪಿಆರ್ ಸಿದ್ಧಪಡಿಸಲಾಗಿದೆ. ಹಾಗೆಯೇ ಕಲ್ಸಂಕ ಟ್ರಾಫಿಕ್ ಸಮಸ್ಯೆ ನಿವಾರಣೆಗೆ ಬೃಹತ್ ಸರ್ಕಲ್ ನಿರ್ಮಾಣಕ್ಕೂ ಯೋಜನೆ ರೂಪಿಸಿದ್ದೇವೆ. ಇದು ಸ್ಮಾರ್ಟ್ ಸಿಟಿ ಯೋಜ ನೆಯ ಒಂದು ಭಾಗ. ಇದರಿಂದ ಉಡುಪಿ ನಗರದ ಬಹುತೇಕ ಸಮಸ್ಯೆಗೆ ಪರಿಹಾರ ಸಿಗಲಿದೆ ಎಂದು ಶಾಸಕ ಕೆ.ರಘುಪತಿ ಭಟ್ ಹೇಳಿದರು.
ಉದಯವಾಣಿ ಮಣಿಪಾಲ ಕೇಂದ್ರ ಕಚೇರಿಯಲ್ಲಿ ಶನಿವಾರ ನಡೆದ ಶಾಸಕರ ಜತೆ ನಮ್ಮ ಮಾತುಕತೆ ಸರಣಿಯ ಮೊದಲ ಕಾರ್ಯಕ್ರಮದಲ್ಲಿ ಅವರು ಪಾಲ್ಗೊಂಡು ಈ ಮಾಹಿತಿ ಹಂಚಿಕೊಂಡರು.
ಮಲ್ಪೆ ಬಂದರು ವಿಸ್ತರಣೆ, ನಗರದ ಬೀದಿ ದೀಪದ ಸಮಸ್ಯೆಗೆ ಪ್ರತ್ಯೇಕ ಟೆಂಡರ್ ಕರೆದಿರುವುದು, ತಾಯಿ ಮತ್ತು ಮಕ್ಕಳ ಸರಕಾರಿ ಆಸ್ಪತ್ರೆಯ ಅಭಿವೃದ್ಧಿ ಮತ್ತು ಕೆಎಂಸಿ ಸಹಭಾಗಿತ್ವ, ಇಂದ್ರಾಣಿ ನದಿ ಶುಚಿತ್ವಕ್ಕೆ ಕೈಗೊಂಡಿರುವ ಕ್ರಮಗಳು, ಬಜೆ ಡ್ಯಾಂನಲ್ಲಿ ಹೆಚ್ಚುವರಿ ನೀರು ಪಂಪಿಂಗ್‌ಗೆ ತೆಗೆದುಕೊಳ್ಳಲಿರುವ ಕ್ರಮ, ಸ್ವರ್ಣಾ ನದಿಗೆ ಉಪ್ಪು ನೀರು ಬರುವುದನ್ನು ತಡೆಯಲು 165 ಕೋ.ರೂ. ವೆಚ್ಚದಲ್ಲಿ ಬ್ರಿಡ್ಜ್ ಕಂ ಬ್ಯಾರೇಜ್ ನಿರ್ಮಾಣ, ಮಣ್ಣಪಳ್ಳ ಸಹಿತ ಕೆಲವು ಕೆರೆಗಳಿಗೆ ನೀರು ತುಂಬಿಸುವ ಮತ್ತು ಕೃಷಿ ಪ್ರದೇಶಕ್ಕೆ ನೀರು ಹರಿಸುವ ಯೋಜನೆಗಳ ಬಗ್ಗೆ ವಿವರವಾದ ಮಾಹಿತಿ ನೀಡಿದರು.
ವಾರಾಹಿ ನೀರು ಮುಂದಿನ ಜನವರಿಯಲ್ಲಿ ಬರ ಲಿದ್ದು ಅನಂತರ ಉಡುಪಿ ನಗರದ ಕುಡಿಯುವ ನೀರಿನ ಸಮಸ್ಯೆ ಬಗೆಹರಿಯಲಿದೆ. ಆದ್ಯತೆ Êರೆಗೆ ರಸ್ತೆ ನಿರ್ಮಾಣ, ಗ್ರಾಮೀಣ ಭಾಗಗಳಲ್ಲಿನ 9/11 ಸಮಸ್ಯೆಗೆ ಪರಿಹಾರ, ಡೀಮ್ಡ್ ಫಾರೆಸ್ಟ್ ಸಮಸ್ಯೆ ಮುಕ್ತಿ, ಮೀನುಗಾರರಿಗೆ ಡೆಲಿವರಿ ಪಾಯಿಂಟ್‌ನಲ್ಲೇ ಡೀಸೆಲ್ ವಿತರಣೆ ಸಹಿತ ತಮ್ಮ ಅವಧಿಯಲ್ಲಿ ಆಗಿರುವ ಕಾರ್ಯಗಳು, ಮುಂದೆ ಮಾಡಲಿರುವ ಹಲವು ಯೋಜನೆಗಳ ಬಗ್ಗೆ ವಿವರ ನೀಡಿದರು.
ಜಿಲ್ಲಾಸ್ಪತ್ರೆಯನ್ನು ಮೇಲ್ದರ್ಜೆಗೇರಿಸುವುದು, ಹಳೆಯ ತಾಲೂಕು ಕಚೇರಿಯ ಸ್ಥಳದಲ್ಲಿ ನಗರಸಭೆಯ ಹೊಸ ಕಚೇರಿ ನಿರ್ಮಾಣ, ಇಡೀ ಕರಾವಳಿಗೆ ಸಂಬಂಧಿಸಿದ ಡೀಮ್ಡ್ ಫಾರೆಸ್ಟ್ ಸಮಸ್ಯೆ, ಸಕಾಲದಲ್ಲಿ ಭತ್ತಕ್ಕೆ ಬೆಂಬಲ ಬೆಲೆ ಘೋಷಣೆ, ಸಿಆರ್‌ಝಡ್ ನಿಯಮದ ಸರಳೀಕರಣವೇ ಮೊದಲಾದ ವಿಷಯಗಳ ಬಗ್ಗೆ ರಘುಪತಿ ಭಟ್ ಅವರು ಮಾತನಾಡಿದರು.
ಮಣಿಪಾಲ ಮೀಡಿಯಾ ನೆಟ್‌ವರ್ಕ್ ಲಿ.ನ ಎಂ.ಡಿ. ಮತ್ತು ಸಿಇಒ ವಿನೋದ್ ಕುಮಾರ್ ಅವರು ಶಾಸಕ ಭಟ್ ಅವರಿಗೆ ಸ್ಮರಣಿಕೆ ನೀಡಿ ಗೌರವಿಸಿದರು.