Advertisement

Udupi: ಯುಜಿಡಿ ಚೇಂಬರ್‌ ಅವ್ಯವಸ್ಥೆಗಿಲ್ಲ ಪರಿಹಾರ

03:04 PM Sep 19, 2024 | Team Udayavani |

ಉಡುಪಿ: ನಗರಸಭೆ ವ್ಯಾಪ್ತಿ ಕೆಲವು ಕಡೆಗಳಲ್ಲಿ ಡ್ರೈನೇಜ್‌ ಚೇಂಬರ್‌ ಅವ್ಯವಸ್ಥೆಯಾದರೆ ಶೀಘ್ರ ಪರಿಹಾರ ದೊರೆಯುವುದಿಲ್ಲ. ಚರಂಡಿ ಬ್ಲಾಕ್‌ ಆಗಿ ದಿನಗಟ್ಟಲೇ ರಸ್ತೆಗಳ ಮೇಲೆ ನೀರು ಹರಿಯುತ್ತ ದುರ್ವಾಸನೆಯಿಂದ ಕೂಡಿರುತ್ತದೆ.

Advertisement

ನಗರದ ನಿಟ್ಟೂರು ವಾರ್ಡ್‌ನಲ್ಲಿ ದುಗ್ಗಣಬೆಟ್ಟು ಮುಖ್ಯ ರಸ್ತೆ ಸಂಪೂರ್ಣ ಹದಗೆಟ್ಟು ಹೋಗಿದ್ದು, ಇನ್ನೊಂದೆದೆ ಡ್ರೈನೇಜ್‌ ಚೇಂಬರ್‌ ಅವ್ಯವಸ್ಥೆಯಿಂದಾ‌ಗಿ ಕೊಳಚೆ ನೀರು ಹೊರಬರುವ ಮೂಲಕ ಪರಿಸರ ದುರ್ವಾಸನೆಯಿಂದ ಕೂಡಿದೆ ಎಂದು ಸಾರ್ವಜನಿಕರು ಆರೋಪವಾಗಿದೆ. ಇಲ್ಲಿನ ಡ್ರೈನೈಜ್‌ ಚೇಂಬರ್‌ನಿಂದ ಹೊರಬರುವ ಕೊಳಚೆ ನೀರು ರಸ್ತೆಯ ಉದ್ದಕ್ಕೂ ಹರಿಯುತ್ತಿದೆ. ಸ್ಥಳೀಯರು ಮೂಗು ಮುಚ್ಚಿಕೊಂಡು ಅನಾರೋಗ್ಯ ಭೀತಿಯಿಂದ ಓಡಾಡುವ ಪರಿಸ್ಥಿತಿ ನಿರ್ಮಾಣಗೊಂಡಿದೆ. ಇಲ್ಲಿ ಓಡಾಡುವ ಸ್ಥಳೀಯರು ಮಾಸ್ಕ್ ಧರಿಸಿಯೇ ಆಚೀಚೆ ಹೋಗುವ ಪರಿಸ್ಥಿತಿ ನಿರ್ಮಾಣಗೊಂಡಿದೆ. ಪರಿಸರವು ಆರೋಗ್ಯಕ್ಕೆ ಮಾರಕವಾದ ಸೊಳ್ಳೆಗಳ ಉತ್ಪತ್ತಿಸುವ ಕಾರ್ಖಾನೆಯಂತಾಗಿದೆ. ಜನರಿಗೆ ಡೆಂಗ್ಯೊ, ಮಲೇರಿಯಾ ಜ್ವರಬಾಧೆಗಳ ಭೀತಿ ಎದುರಿಸುತ್ತಿದ್ದಾರೆ.

ಪರಿಸರದಲ್ಲಿ ಹರಡಿರುವ ವಾಕರಿಕೆ ತರಿಸುವ ಅಸಹ್ಯ ವಾಸನೆಯಿಂದಾಗಿ, ಆಹಾರವನ್ನೂ ಸೇವಿಸಲಾಗದ ಸ್ಥಿತಿಯಲ್ಲಿ ಸ್ಥಳೀಯರಿದ್ದಾರೆ ಎಂದು ಇಲ್ಲಿನ ನಾಗರಿಕರು ದೂರು ತೋಡಿಕೊಂಡಿದ್ದಾರೆ. ನಗರಸಭೆ ಬಳಿ ಅತ್ಯಾಧುನಿಕ ಜೆಟ್ಟಿಂಗ್‌ ಯಂತ್ರ ಸೌಕರ್ಯವಿದ್ದಿದ್ದರೆ ಈ ಸಮಸ್ಯೆಗೆ ಶೀಘ್ರ ಪರಿಹಾರ ಸಿಗುತ್ತಿತ್ತು ಎಂದು ನಗರಸಭೆ ಸದಸ್ಯರು ತಿಳಿಸಿದ್ದಾರೆ.

ಜನಪ್ರತಿನಿಧಿಗಳು, ಅಧಿಕಾರಿಗಳು ಸಮಸ್ಯೆ ಬಗ್ಗೆ ಶೀಘ್ರ ಸ್ಪಂದಿಸಿ ಪರಿಹಾರ ನೀಡುವಂತೆ ನಗರಸಭೆ ಆಡಳಿತವನ್ನು ಒತ್ತಾಯಿಸಿದ್ದಾರೆ. ನಗರದಲ್ಲಿ ಒಳಚರಂಡಿ ವ್ಯವಸ್ಥೆಯನ್ನು ಪೂರ್ಣಪ್ರಮಾಣದಲ್ಲಿ ವ್ಯವಸ್ಥಿತವಾಗಿ ನಡೆಸಿದರೆ ಮಾತ್ರ ಸಮಸ್ಯೆಗೆ ಪರಿಹಾರ ಎಂಬುದು ನಾಗರಿಕರ ಸಲಹೆಯಾಗಿದೆ.

ಶೀಘ್ರ ದುರಸ್ತಿಗೆ ಕ್ರಮ
ದುಗ್ಗಣಬೆಟ್ಟು ಮುಖ್ಯ ರಸ್ತೆ, ಒಳ ಚರಂಡಿ ವ್ಯವಸ್ಥೆ ಅಭಿವೃದ್ಧಿ ಕಾಮಗಾರಿ ಅನುದಾನ ಮೀಸಲಿರಿಸಿ ಹಂತಹಂತವಾಗಿ ಕಾಮಗಾರಿ ನಡೆಯುತ್ತಿದೆ. ಯುಜಿಡಿ ಮುಖ್ಯಪೈಪ್‌ ಲೈನ್‌ 22 ಆಳದಲ್ಲಿದ್ದು, 7 ಚೇಂಬರ್‌ ಹೊಂದಿದೆ. ಜತೆಗೆ ಹಳೆಯ ಪೈಪ್‌ಲೈನ್‌ ಸಂಪರ್ಕವು ಇರುವುದರಿಂದ ಕೆಲವೆಡೆ ಬ್ಲಾಕ್‌ ಆಗಿ ಚೇಂಬರ್‌ನಿಂದ ಕೊಳಚೆ ನೀರು ಹೊರಬರುತ್ತಿದ್ದು, ಇದನ್ನು ಶೀಘ್ರ ಸರಿಪಡಿಸುವ ಬಗ್ಗೆ ಕ್ರಮ ವಹಿಸಿದ್ದೇವೆ. ರಸ್ತೆಯ ನಿರ್ಮಾಣಕ್ಕೂ ಅನುದಾನವಿದ್ದು, ಯುಜಿಡಿ ವ್ಯವಸ್ಥೆ ಸಮರ್ಪಕವಾದ ಬಳಿಕ ಉತ್ತಮ ರಸ್ತೆ ನಿರ್ಮಿಸಲಾಗುತ್ತದೆ.
– ಸಂತೋಷ್‌ ಜತ್ತನ್ನ, ನಗರಸಭೆ ಸದಸ್ಯರು

Advertisement

ಬರಲಿದೆ ಅತ್ಯಾಧುನಿಕ ಜೆಟ್ಟಿಂಗ್‌ ಯಂತ್ರ
ಮ್ಯಾನ್‌ಹೋಲ್‌ ಬ್ಲಾಕ್‌ ಸರಿಪಡಿಸಲು ಅತ್ಯಾಧುನಿಕ ಜೆಟ್ಟಿಂಗ್‌ ಯಂತ್ರ ಅವಶ್ಯವಾಗಿದೆ. ಸದ್ಯ ನಮ್ಮ ಬಳಿ ಇರುವುದು 15 ವರ್ಷ ಹಳೆ ಯಂತ್ರವಾಗಿದ್ದು, ಹೊಸ ಯಂತ್ರ ಖರೀದಿ ಟೆಂಡರ್‌ ಪ್ರಕ್ರಿಯೆ ಪೂರ್ಣಗೊಂಡಿದೆ. ಶೌಚಾಲಯ ಪಿಟ್‌ನಲ್ಲಿ ತ್ಯಾಜ್ಯ ಎಸೆಯುವುದು ಮ್ಯಾನ್‌ಹೋಲ್‌ ಬ್ಲಾಕ್‌ ಆಗಲು ಪ್ರಮುಖ ಕಾರಣವಾಗಿದೆ, ಸ್ಯಾನಿಟರಿ ಪ್ಯಾಡ್ಸ್‌, ಹಳೆಚಪ್ಪಲಿ, ಬಟ್ಟೆ ಯುಜಿಡಿ ಪೈಪ್‌ನಲ್ಲಿ ಸಿಲುಕಿ ಬ್ಲಾಕ್‌ ಆಗುತ್ತಿದೆ. ತ್ಯಾಜ್ಯವನ್ನು ಶೌಚಫಿಟ್‌ನಲ್ಲಿ ಎಸೆಯದಂತೆ ಅರಿವು ಹೊಂದಿರಬೇಕು. – ಸ್ನೇಹಾ, ಪರಿಸರ ಎಂಜಿನಿಯರ್‌, ಉಡುಪಿ ನಗರಸಭೆ

Advertisement

Udayavani is now on Telegram. Click here to join our channel and stay updated with the latest news.

Next