Advertisement

Kundapura ತಾಲೂಕು ಕಚೇರಿ ಅವ್ಯವಸ್ಥೆ ಈಗ ವಿದ್ಯುತ್‌ ಇಲ್ಲ ನಾಳೆ ಬನ್ನಿ

06:27 PM Sep 11, 2024 | Team Udayavani |

ಕುಂದಾಪುರ: ಮಂಗಳವಾರದಂದು ಇಲ್ಲಿನ ತಾಲೂಕು ಕಚೇರಿಗೆ ಸಾರ್ವಜನಿಕರು ಭೇಟಿ ನೀಡಿದರೆ ಕೇಳುವ ಮಾತೆಂದರೆ, ಕರೆಂಟ್‌ ಇಲ್ಲ ನಾಳೆ ಬನ್ನಿ ಎಂದು. ಸಾರ್ವಜನಿಕರ ಯಾವುದೇ ಕೆಲಸ ಮಾಡಿಕೊಡಲು ಇಲ್ಲಿನ ಸಿಬಂದಿ ನಿರಾಕರಿಸಿ ನಾಳೆ ಬನ್ನಿ ಎಂದು ಕಳುಹಿಸುತ್ತಾರೆ. ಇನ್ನು ಮುಂದೆ ಸಾರ್ವಜನಿಕರ ಕೆಲಸ ಕಾರ್ಯಗಳಿಗೆ ಸರಕಾರಿ ಕಚೇರಿಯಲ್ಲಿ ತೊಂದರೆಯಾಗಬಾರದು ಎಂದು ಇಲ್ಲಿನ ಸಾಮಾಜಿಕ ಕಾರ್ಯಕರ್ತರು ತಾಲೂಕು ಕಚೇರಿಯಲ್ಲಿ ಜನರೇಟರ್‌ ಅಳವಡಿಕೆ ಗಾಗಿ ಸಾರ್ವಜನಿಕವಾಗಿ ಭಿಕ್ಷಾಟನೆಗೆ ಮುಂದಾಗಿದ್ದಾರೆ.

Advertisement

ವಿದ್ಯುತ್‌ ಕಡಿತ
ಅನೇಕ ಸಮಯಗಳಿಂದ ನಿಶ್ಚಿತವಾಗಿ ಮಂಗಳವಾರ ತಾಲೂಕಿನ ವಿವಿಧೆಡೆ ನಿರ್ವಹಣೆ ಸಲುವಾಗಿ ವಿದ್ಯುತ್‌ ವ್ಯತ್ಯಯ ಮಾಡಲಾಗುತ್ತದೆ. ಈ ಬಗ್ಗೆ ಮುಂಚಿತ ಪ್ರಕಟನೆಯನ್ನೂ ನೀಡಲಾಗುತ್ತದೆ. ನಿರ್ವಹಣೆಯ ತುರ್ತು ಇಲ್ಲದಿದ್ದಲ್ಲಿ ವಿದ್ಯುತ್‌ ನೀಡಿ, ಎಲ್ಲಿ ಅವಶ್ಯವೋ ಅಲ್ಲಿಯಷ್ಟೇ ಕಡಿತ ಮಾಡಲಾಗುತ್ತದೆ.

ರಜೆ ಕೊಡಲಿ
ಇದು ಇಂದು ನಿನ್ನೆಯ ಸಮಸ್ಯೆ ಅಲ್ಲ. ಹೀಗೆ ಬರಿಗೈಲಿ ಮರಳಿ ಕಳುಹಿಸುವುದಾದರೆ ವಿದ್ಯುತ್‌ ಕಡಿತದ ದಿನ ತಾಲೂಕು ಕಚೇರಿಗೆ ರಜೆ ಕೊಟ್ಟು ಬಿಡಿ ಇದರಿಂದ ಜನರಿಗೆ ಅನುಕೂಲ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದರು. ಆಹಾರ ಶಾಖೆ ಸೇರಿದಂತೆ ವಿವಿಧೆಡೆಯಿಂದ ಪಡಿತರ ಚೀಟಿ, ಆಧಾರ್‌ ಹೀಗೆ ಬೇರೆ ಬೇರೆ ಕೆಲಸಗಳಿಗಾಗಿ ಬಂದವರು ಬಂದ ದಾರಿಗೆ ಸುಂಕ ಇಲ್ಲ ಎಂದು ಮರಳಿ ಹೋಗುತ್ತಿದ್ದರು. ಅದೆಷ್ಟೋ ಬಡ ಜನರು ತಮ್ಮ ನಿತ್ಯದ ಕೆಲಸ ಕಾರ್ಯ ಬಿಟ್ಟು, ಕಚೇರಿಯ ಕೆಲಸದ ನಿಮಿತ್ತ ಎಷ್ಟೋ ದೂರದ ಹಳ್ಳಿಯಿಂದ ತಾಲೂಕು ಕಚೇರಿಗೆ ಬಂದರೆ ಇಲ್ಲಿ ಕರೆಂಟ್‌ ಇಲ್ಲ ನಾಳೆ ಬನ್ನಿ ಎಂಬ ಸಿದ್ಧ ಉತ್ತರ. ಕಚೇರಿಯ ಒಳಗೆ ಅಧಿ ಕಾರಿಗಳು ಕೂಡ ಕತ್ತಲಲ್ಲೇ ಕುಳಿತಿರುತ್ತಾರೆ.

ಯುಪಿಎಸ್‌ ಕಡಿಮೆ ಅವಧಿ
ಇಡೀ ದಿನ ಕರೆಂಟ್‌ ಇಲ್ಲದಾಗ ತಾಲೂಕು ಕಚೇರಿಯ ಯುಪಿಎಸ್‌ ಅವಧಿ ಕಡಿಮೆಯಾದಾಗ ಸಮಸ್ಯೆಯಾಗುತ್ತದೆ. ತುಂಬಾ ಕೆಲಸ ಕಾರ್ಯಗಳಿದ್ದರೆ ಜನರೇಟರ್‌ ಹಾಕುತ್ತೇವೆ. ಇವತ್ತು ಅನೇಕ ಅಧಿಕಾರಿಗಳು ಬೇರೆ ಬೇರೆ ಕಾರಣಗಳಿಂದ ಕಚೇರಿಯಲ್ಲಿ ಇಲ್ಲದ ಕಾರಣ ಗೊಂದಲ ಆಗಿರಬಹುದು. ಸಾರ್ವಜನಿಕರಿಗೆ ತೊಂದರೆ ಮಾಡುವುದಿಲ್ಲ.
-ಶೋಭಾಲಕ್ಷ್ಮೀ, ತಹಶೀಲ್ದಾರ್‌, ಕುಂದಾಪುರ

ಎರಡು ತಿಂಗಳಾದರೂ ಸರಿಯಾಗದ ವ್ಯವಸ್ಥೆ
ಎರಡು ತಿಂಗಳ ಹಿಂದೆಯೂ ತಾಲೂಕು ಕಚೇರಿಯಲ್ಲಿ ಕರೆಂಟ್‌ ಇಲ್ಲದೆ ಅದೆಷ್ಟೋ ಜನ ಅರ್ಜಿ ಹಿಡಿದುಕೊಂಡು ಹೊರಗಡೆ ಕಾಯುತ್ತಾ ನಿಲ್ಲುವಂತಹ ಪರಿಸ್ಥಿತಿ ಉಂಟಾಗಿತ್ತು. ಈ ಬಗ್ಗೆ ತಹಶೀಲ್ದಾರ್‌ ಕಚೇರಿಗೆ ಹೋಗಿ ಸಮಸ್ಯೆ ಹೇಳಿದಾಗ ಜನರೇಟರ್‌ ಡೀಸೆಲ್‌ಗೆ ಸರಕಾರದಿಂದ ಹಣ ಬರುವುದಿಲ್ಲ, ಹಣ ಹೊಂದಿಸಲು ಸಾಧ್ಯವಿಲ್ಲ ಎಂದು ಉತ್ತರ ಬಂತು. ಸಾರ್ವಜನಿಕರು ಸಾಲುಗಟ್ಟಲೆ ಅರ್ಜಿ ಹಿಡಿದು ನಿಂತದ್ದನ್ನು ನೋಡಿ ಕಚೇರಿಯ ಸಿಬಂದಿ ಅರ್ಧ ಗಂಟೆ ಜನರೇಟರ್‌ ಚಾಲೂ ಮಾಡಿಸಿದ್ದರು. ಈ ಘಟನೆ ನಡೆದು ತಿಂಗಳೆರಡಾದರೂ ಇಲ್ಲಿಯ ತನಕ ಈ ಸಮಸ್ಯೆ ಬಗೆ ಹರಿಯಲೇ ಇಲ್ಲ.

Advertisement

ಡೀಸೆಲ್‌ಗಾಗಿ ಹಣ ಹೊಂದಿಸುವ ನಿರ್ಧಾರ
ಈ ಮಂಗಳವಾರ ಕೂಡ ಜನ ಕಾಯುತ್ತಿದ್ದಾರೆ. ಅರ್ಜಿಗಳನ್ನು ತಂದಿದ್ದಾರೆ. ಕರೆಂಟ್‌ ಇಲ್ಲ ನಾಳೆ ಬನ್ನಿ ಎಂಬ ಉತ್ತರ ಪಡೆದಿದ್ದಾರೆ. ಹಾಗಾಗಿ ಇದಕ್ಕೆ ಪರಿಹಾರ ಒಂದೇ ಎಂದು ಸಾರ್ವಜನಿಕರು ಒಟ್ಟಾಗಿ ಜನರೇಟರ್‌ಗೆ ಡೀಸೆಲ್‌ ಹಾಕಲು ಹಣ ಹೊಂದಿಸಲು ಮುಂದಾಗಿದ್ದಾರೆ.

ಒಂದಿಷ್ಟು ಸಾರ್ವಜನಿಕರು ಒಟ್ಟು ಸೇರಿಕೊಂಡು ತಾಲೂಕು ಕಚೇರಿಯ ಹೊರಗೆ ಇಲ್ಲಿಯ ಸಮಸ್ಯೆಗಳನ್ನು ಹೇಳಿ ಜನರೇಟರಿಗೆ ಡೀಸೆಲ್‌ ಹಾಕಲು ಹಣ ಒಟ್ಟುಗೂಡಿಸಿ ತಾಲೂಕು ಕಚೇರಿಗೆ ನೀಡುವುದೆಂದು ತೀರ್ಮಾನ ಮಾಡಿದ್ದಾರೆ. ಮುಂದಿನ ಮಂಗಳವಾರವೂ ಇದೇ ರೀತಿ ಇದ್ದರೆ ಪರಿಸ್ಥಿತಿ ಬಿಗಡಾಯಿಸುವ ಸಾಧ್ಯತೆ ಇದೆ.

Advertisement

Udayavani is now on Telegram. Click here to join our channel and stay updated with the latest news.