Advertisement

War: ಯುದ್ಧ ಎಂದಿಗೂ ಪರಿಹಾರವಲ್ಲ

05:47 PM Sep 17, 2024 | Team Udayavani |

ಯುದ್ಧ ಎಂದಿಗೂ ಖುಷಿಯ ವಿಚಾರವಲ್ಲ, ಯುದ್ಧ ಎಂಬ ಪದ ಯಾವೊಬ್ಬರ ಮೈಯಲ್ಲೂ ನಡುಕ ಉಂಟುಮಾಡುವ ಶಬ್ದ. ಯುದ್ಧ ಎಲ್ಲಿಯೇ ನಡೆದರೂ ಇದರ ಪರಿಣಾಮ ಉಂಟಾಗುವುದು ಮಾತ್ರ ಸಾಮಾನ್ಯ ಜನರ ಮೇಲೆಯೇ. ಎರಡನೇ ಜಾಗತಿಕ ಯುದ್ಧದಲ್ಲಿ ಅಮೆರಿಕ ಹಿರೋಶಿಮಾ ಮತ್ತು ನಾಗಸಾಕಿ ಮೇಲೆ ಪ್ರಯೋಗ ಮಾಡಿದ ಅಣುಬಾಂಬ್‌ ದಾಳಿಯಿಂದ ಈಗಲೂ ಅಂಗವಿಕಲ ಮತ್ತು ಬುದ್ಧಿಮಾಂದ್ಯ ಮಕ್ಕಳು ಹುಟ್ಟುತ್ತಿದ್ದಾರೆ.

Advertisement

ಯಾರದೋ ಸಾರ್ವಭೌಮತ್ವಕ್ಕೆ ಅಥವಾ ಬಲಿಷ್ಟ ರಾಷ್ಟ್ರವೆಂದು ಅಹಂಕಾರದಿಂದ ಮೆರೆಯುವ ಹುಮ್ಮಸ್ಸಿನಲ್ಲಿ ಇನ್ನೂ ಕಣ್ಣು ಬಿಡದ ಕಂದಮ್ಮಗಳಿಗೆ ಶಿಕ್ಷೆ ನೀಡುವುದು ಯಾವ ನ್ಯಾಯ? ಇಂತಹದ್ದೇ ಭಯಾನಕ ಯುದ್ಧಗಳು ಇಂದಿಗೂ ನಡೆಯುತ್ತಲೇ ಇದೆ. ರಷ್ಯಾ ಮತ್ತು ಉಕ್ರೇನ್‌ ನಡುವಿನ ಯುದ್ಧವಾಗಿರಬಹುದು ಅಥವಾ ಇಸ್ರೇಲ್‌ ಪ್ಯಾಲಿಸ್ತೇನ್‌ ನಡುವೆ ನಡೆಯುತ್ತಿರುವ ಯುದ್ಧವೇ ಆಗಿರಬಹುದು. ಅದರ ಪರಿಣಾಮ ಮಾತ್ರ ಅಲ್ಲಿ ವಾಸ ಮಾಡುತ್ತಿರುವ ಸಾಮಾನ್ಯ ಜನರ ಮೇಲಾಗುತ್ತಿದೆ.

ಯುದ್ಧಗಳು ಕೇವಲ ಎರಡು ದೇಶಗಳ ಮಧ್ಯೆ ನಡೆದರೂ ಇದರ ಪರಿಣಾಮವನ್ನು ಇಡೀ ಪ್ರಪಂಚವೇ ಅನುಭವಿಸುತ್ತಿದೆ. ಯೂರೋಪಿನಾದ್ಯಂತ ಆರ್ಥಿಕತೆ ಕುಸಿತ ಕಂಡಿದೆ. ಏಷ್ಯಾ ಖಂಡದಲ್ಲಿ ಪೆಟ್ರೋಲಿಯಂ ಸಂಪತ್ತಿನ ಬೆಲೆ ಗಗನ ಮುಟ್ಟುತ್ತಿದೆ. ಹಣದುಬ್ಬರದ ಪ್ರಮಾಣ ಏರುಗತಿಯಲ್ಲೇ ಸಾಗುತ್ತಿದೆ. ಅದೆಷ್ಟೇ ಕ್ರಮಗಳಿಂದಲೂ ಇದನ್ನು ನಿಯಂತ್ರಣಕ್ಕೆ ತರಲು ಸಾಧ್ಯವಾಗುತ್ತಿಲ್ಲ.

ಇದು ಆರ್ಥಿಕತೆ ಮೇಲಷ್ಟೇ ಅಲ್ಲದೇ, ಪರಿಸರದ ಮೇಲೂ ಹಾನಿಯುಂಟು ಮಾಡುತ್ತಿದೆ. ಯುದ್ಧಕ್ಕೆ ಬಳಸುವ ಬಾಂಬುಗಳು ಅಥವಾ ಯುದ್ಧ ವಿಮಾನಗಳು ಹೀಗೆ ಹಲವಾರು ಯುದ್ಧ ಉಪಕರಣಗಳಿಂದ ಪರಿಸರ ನಾಶವಾಗುತ್ತಿದೆ. ಯುದ್ಧದಿಂದ ಉಂಟಾಗುತ್ತಿರುವ ಮಾಲಿನ್ಯದಿಂದಾಗಿ ಉಸಿರಾಡಲು ಸ್ವತ್ಛ ಗಾಳಿ ಸಿಗುತ್ತಿಲ್ಲ. ಅದೆಷ್ಟು ಪ್ರಾಣಿ ಪಕ್ಷಿಗಳು ಅಸುನೀಗಿದವೋ ಲೆಕ್ಕ ಇಟ್ಟವರು ಯಾರು? ಯುದ್ಧ ನಡೆಯುವ ಸ್ಥಳದಲ್ಲಿ ಮಹಿಳೆಯರು, ಮಕ್ಕಳು ಅಂತನೂ ನೋಡದೇ ಹೀನವಾಗಿ ಹತ್ಯೆ ಮಾಡುತ್ತಾರೆ.

ಇದು ಮಾನವನ ಬದುಕುವ ಹಕ್ಕಿನ ವಿರುದ್ಧವಾದದರೂ ಹಿಂಸೆ, ಕ್ರೂರತ್ವ ಎಂಬುದು ಮನುಷ್ಯ ಲೋಕದಲ್ಲಿ ತಾಂಡವವಾಡುತ್ತಿದೆ. ಭೂಮಿ ಮೇಲಿನ ಎಲ್ಲ ಜೀವಿಗಳಿಗೂ ಬದುಕುವ ಹಕ್ಕಿದೆ. ಯುದ್ಧ ಎಂಬ ಹೆಸರಿನಿಂದ ಅದನ್ನು ನಾಶಮಾಡದೇ ಜತನವಾಗಿ ಕಾಪಾಡಿಕೊಳ್ಳಬೇಕಿದೆ.

Advertisement

-ಅನಿತಾ ಹೂಗಾರ್‌

ಮಂಗಳೂರು

Advertisement

Udayavani is now on Telegram. Click here to join our channel and stay updated with the latest news.

Next