Advertisement

Udupi: ಉಚ್ಚಿಲ ದಸರಾ 2024; ಶಾರದೆ, ನವದುರ್ಗೆಯರ ಅದ್ದೂರಿ ಶೋಭಾಯಾತ್ರೆ

01:17 AM Oct 13, 2024 | Team Udayavani |

ಕಾಪು: ಉಡುಪಿ ಉಚ್ಚಿಲ ದಸರಾ ಉತ್ಸವ 2024ರ ವೈಭವದ ವಿಸರ್ಜನಾ ಶೋಭಾಯಾತ್ರೆಗೆ ಶನಿವಾರ ಉಚ್ಚಿಲ ಶ್ರೀ ಮಹಾಲಕ್ಷ್ಮೀ ದೇವಸ್ಥಾನದಲ್ಲಿ ನಾಡೋಜ ಡಾ| ಜಿ. ಶಂಕರ್‌ ಮತ್ತು ಶಾಲಿನಿ ಶಂಕರ್‌ ದಂಪತಿ ಪುಷ್ಪಾರ್ಚನೆಗೈದು ಚಾಲನೆ ನೀಡಿದರು.

Advertisement

ಕ್ಷೇತ್ರದ ಪ್ರಧಾನ ತಂತ್ರಿ ವೇ| ಮೂ| ಕುಕ್ಕಿಕಟ್ಟೆ ರಾಘವೇಂದ್ರ ತಂತ್ರಿ ಮತ್ತು ಪ್ರಧಾನ ಅರ್ಚಕ ವೇ| ಮೂ| ರಾಘವೇಂದ್ರ ಉಪಾಧ್ಯಾಯರ ನೇತೃತ್ವ ದಲ್ಲಿ ನವದುರ್ಗೆಯರು ಮತ್ತು ಶಾರದಾ ಮಾತೆಗೆ ಮಹಾಮಂಗಳಾರತಿ ಬೆಳಗಿ, ವಿಸರ್ಜನಾಪೂಜೆ ನಡೆಸಲಾಯಿತು. ವಿವಿಧ ಟ್ಯಾಬ್ಲೋಗಳೊಂದಿಗೆ 3.20ಕ್ಕೆ ಶ್ರೀ ಕ್ಷೇತ್ರ ಉಚ್ಚಿಲದಿಂದ ಹೊರಟ ಶೋಭಾಯಾತ್ರೆಯು ರಾಷ್ಟ್ರೀಯ ಹೆದ್ದಾರಿ 66ರ ಎರ್ಮಾಳು, ಉಚ್ಚಿಲ, ಮೂಳೂರು, ಕೊಪ್ಪಲಂಗಡಿವರೆಗೆ ಸಾಗಿ ಬಂದಿತು.

ಅಲ್ಲಿಂದ ಕಾಪು ಬೀಚ್‌ ರಸ್ತೆಯಲ್ಲಿ ಮೆರವಣಿಗೆ ಸಾಗಿ ಬಂದು ಕಾಪು ಬೀಚ್‌ನಲ್ಲಿರುವ ಓಶಿಯನ್‌ ಬೀಚ್‌ ರೆಸಾರ್ಟ್‌ ಬಳಿಯ ಸಮುದ್ರ ತೀರದಲ್ಲಿ ವಿಗ್ರಹಗಳನ್ನು ಜಲಸ್ತಂಭನಗೊಳಿಸಲಾಯಿತು. ಶೋಭಾಯಾತ್ರೆ ಆರಂಭಕ್ಕೆ ಮೊದಲು ಉಡುಪಿ ಪರಿಸರದಲ್ಲಿ ಭಾರೀ ಮಳೆ ಸುರಿದಿದ್ದರೂ ಉಚ್ಚಿಲ ದಲ್ಲಿ ಮಳೆಯ ಮುನ್ಸೂಚನೆ ಮಾತ್ರ ಇತ್ತು. ಶೋಭಾಯಾತ್ರೆ ಎರ್ಮಾಳು ವರೆಗೆ ಸಾಗಿದ ಬಳಿಕ ಮಳೆ ಹನಿಯ ಸಿಂಚನವಾಗಿತ್ತು. ಮಳೆಯ ನಡು ವೆಯೂ ಸಾವಿರಾರು ಮಂದಿ ಶೋಭಾ ಯಾತ್ರೆಯಲ್ಲಿ ಪಾಲ್ಗೊಂಡಿದ್ದರು.

ಬೃಹತ್‌ ಗಂಗಾರತಿ
ನವದುರ್ಗೆಯರು ಮತ್ತು ಶಾರದಾ ಮೂರ್ತಿಯ ಶೋಭಾಯಾತ್ರೆಯು ಕಾಪು ಬೀಚ್‌ಗೆ ತಲುಪಿದ ಬಳಿಕ ಕಾಶಿಯಲ್ಲಿ ಗಂಗಾನದಿ ತಟದಲ್ಲಿ ಗಂಗಾರತಿ ಬೆಳಗುವ ಮಾದರಿಯಲ್ಲಿ ಬೃಹತ್‌ ರಥಾರತಿ ಮತ್ತು ಗಂಗಾರತಿ ಬೆಳಗಲಾಯಿತು. ಗಂಗಾರತಿಗೂ ಮೊದಲು ಸಮುದ್ರ ತೀರದಲ್ಲಿ ಸಾವಿರಾರು ಮಂದಿ ಸುಮಂಗಲೆಯರಿಂದ ಸಾಮೂಹಿಕ ಮಹಾಮಂಗಳಾರತಿ ನೆರವೇರಿಸಲಾಯಿತು. ಸಂಗೀತ ರಸಮಂಜರಿ ಆಯೋಜಿಸಲಾಗಿದ್ದು ಈ ಬಾರಿಯ ವಿಶೇಷ. ಸಮುದ್ರ ಮಧ್ಯದಲ್ಲಿ ಬೋಟ್‌ಗಳನ್ನು ಜೋಡಿಸಿ ಕೃತಕ ದ್ವೀಪ ಸೃಷ್ಟಿಸಲಾಗಿದ್ದು, ಆಕರ್ಷಕ ಸುಡುಮದ್ದು ಪ್ರದರ್ಶನವೂ ಜನಾಕರ್ಷಣೆಗೆ ಕಾರಣವಾಯಿತು.

ಡ್ರೋನ್‌ ಮೂಲಕ ಪುಷ್ಪಾರ್ಚನೆ
ವಿಸರ್ಜನಾ ಪೂಜೆ ಬಳಿಕ ನವದುರ್ಗೆಯರು ಮತ್ತು ಶಾರದಾ ಮಾತೆಯನ್ನು ಮಹಾದ್ವಾರದ ಬಳಿ ತಂದು ನಿಲ್ಲಿಸಲಾಯಿತು. ಮಹಾಲಕ್ಷ್ಮೀ ದೇವರೊಂದಿಗೆ ಅಂಬಾರಿ ಹೊತ್ತ ಕರಿಯಾನೆಯ ಟ್ಯಾಬ್ಲೋ ಮತ್ತು ದೇವರನ್ನೊಳಗೊಂಡ ಟ್ಯಾಬ್ಲೋಗಳಿಗೆ ಗಣ್ಯರು ಪುಷ್ಪಾರ್ಚನೆಗೈದರು. ಈ ವೇಳೆ ಶಿವು ನೇತೃತ್ವದಲ್ಲಿ ಡ್ರೋನ್‌ ಮೂಲಕ ಮೂರ್ತಿ ಹೊತ್ತ ಟ್ಯಾಬ್ಲೋಗಳಿಗೆ ಪುಷ್ಪಾರ್ಚನೆ ಮಾಡಲಾಯಿತು.

Advertisement

ಅತ್ಯಾಕರ್ಷಕ ಟ್ಯಾಬ್ಲೋ
ಅಂಬಾರಿ ಹೊತ್ತ ಆನೆ, ನವದುರ್ಗೆಯರು ಮತ್ತು ಶಾರದೆಯ ವಿಗ್ರಹಗಳನ್ನೊಳಗೊಂಡ ಟ್ಯಾಬ್ಲೋಗಳ ಸಹಿತವಾಗಿ, ಸಾಮಾಜಿಕ ಜಾಗೃತಿಯ ಸಂದೇಶ ಸಾರುವ ಟ್ಯಾಬ್ಲೋಗಳು, ವಿವಿಧ ಕುಣಿತ ಭಜನ ತಂಡಗಳು, ತೆಯ್ಯಂ, ಕೇರಳ ಭೂತ, ಯಕ್ಷಗಾನ ವೇಷ ಭೂಷಣಗಳು, ಹುಲಿ ವೇಷ ತಂಡಗಳು, ಚೆಂಡೆ ಬಳಗ, ನಾದ ಸ್ವರ, ನಾಸಿಕ್‌ ಬ್ಯಾಂಡ್‌ ತಂಡಗಳು ಹಾಗೂ ವಿವಿಧ ಮನೋರಂಜನಾತ್ಮಕ ಟ್ಯಾಬ್ಲೋಗಳ ನ್ನೊಳಗೊಂಡ ಶೋಭಾಯಾತ್ರೆಯು ಸ್ಮರಣೀಯ ಕಾರ್ಯಕ್ರಮವಾಗಿ ಮೂಡಿಬಂದಿದೆ.

ಶಿಸ್ತುಬದ್ಧ ಶೋಭಾಯಾತ್ರೆ
10-13 ಕಿ.ಮೀ.ವರೆಗೆ ಸಾಗಿ ಬಂದ ಶೋಭಾಯಾತ್ರೆಯಲ್ಲಿ ಸಹಸ್ರಾರು ಮಂದಿ ಪಾಲ್ಗೊಂಡರು. ಟ್ಯಾಬ್ಲೋಗಳ ಸಹಿತವಾಗಿ ಕಾಲ್ನಡಿಗೆ ಮೂಲಕ ಸಾಗಿ ಬಂದ ಶೋಭಾಯಾತ್ರೆಯು ಶಿಸ್ತುಬದ್ಧವಾಗಿ ಹೆದ್ದಾರಿಯಲ್ಲಿ ಸಾಗಿ ಬಂದಿದೆ. ಜಿಲ್ಲೆಯ ಹಿರಿಯ ಪೊಲೀಸ್‌ ಅಧಿಕಾರಿಗಳು, ಎಎಸ್‌ಪಿ, ಡಿವೈಎಸ್ಪಿ, 4 ವೃತ್ತ ನಿರೀಕ್ಷಕರು, 15 ಮಂದಿ ಎಸ್‌ಐಗಳೂ ಸಹಿತ 350ಕ್ಕೂ ಅಧಿಕ ಮಂದಿ ಪೊಲೀಸರು ಬಿಗು ಬಂದೋಬಸ್ತ್ನ ಜವಾಬ್ದಾರಿ ವಹಿಸಿಕೊಂಡಿದ್ದರು.

ಗಣ್ಯರ ಉಪಸ್ಥಿತಿ
ಶಾಸಕರಾದ ಗುರ್ಮೆ ಸುರೇಶ್‌ ಶೆಟ್ಟಿ, ಯಶ್‌ಪಾಲ್‌ ಸುವರ್ಣ, ಮಾಜಿ ಸಚಿವ ವಿನಯ್‌ ಕುಮಾರ್‌ ಸೊರಕೆ, ಉದ್ಯಮಿ ಪ್ರಸಾದ್‌ರಾಜ್‌ ಕಾಂಚನ್‌, ದ. ಕ. ಮೊಗವೀರ ಮಹಾಜನ ಸಂಘದ ಅಧ್ಯಕ್ಷ ಜಯ ಸಿ. ಕೋಟ್ಯಾನ್‌, ಕ್ಷೇತ್ರಾಡಳಿತ ಸಮಿತಿ ಅಧ್ಯಕ್ಷ ಗಿರಿಧರ್‌ ಸುವರ್ಣ, ದಸರ ಸಮಿತಿ ಅಧ್ಯಕ್ಷ ವಿನಯ್‌ ಕರ್ಕೇರ, ಬೆಣ್ಣೆಕುದ್ರು ಕುಲಮಹಾಸ್ತ್ರೀ ಅಮ್ಮನವರ ದೇವಸ್ಥಾನದ ಕ್ಷೇತ್ರಾಡಳಿತ ಸಮಿತಿ ಅಧ್ಯಕ್ಷ ಆನಂದ ಸಿ. ಕುಂದರ್‌, ಕ್ಷೇತ್ರಾಡಳಿತ ಸಮಿತಿ ಮಾಜಿ ಅಧ್ಯಕ್ಷ ವಾಸುದೇವ ಸಾಲ್ಯಾನ್‌, ಜೀರ್ಣೋದ್ಧಾರ ಸಮಿತಿ ಮಾಜಿ ಅಧ್ಯಕ್ಷ ಗುಂಡು ಅಮೀನ್‌, ಮೊಗವೀರ ಯುವ ಸಂಘಟನೆಯ ಜಿಲ್ಲಾಧ್ಯಕ್ಷ ಜಯಂತ್‌ ಅಮೀನ್‌, ಶೋಭಾಯಾತ್ರೆ ಸಮಿತಿಯ ಹರಿಯಪ್ಪ ಕೋಟ್ಯಾನ್‌, ಸುಭಾಶ್ಚಂದ್ರ ಕಾಂಚನ್‌, ಸರ್ವೋತ್ತಮ ಕುಂದರ್‌, ಅನಿಲ್‌ ಕುಮಾರ್‌, ಗೌತಮ್‌ ಕೋಡಿಕಲ್‌, ಚೇತನ್‌ ಬೇಂಗ್ರೆ, ಸಂದೀಪ್‌ ಉಳ್ಳಾಲ, ಟ್ಯಾಬ್ಲೋ ನಿರ್ವಹಣೆ ಸಮಿತಿಯ ರವೀಂದ್ರ ಶ್ರೀಯಾನ್‌, ವಿಠಲ ಕರ್ಕೇರ, ರಾಜೇಂದ್ರ ಹಿರಿಯಡಕ, ಮಂಜುನಾಥ ಸುವರ್ಣ, ಸುರೇಶ್‌ ಕಾಂಚನ್‌, ಹರೀಶ್‌ ಕಾಂಚನ್‌, ಶ್ರೀಪತಿ ಭಟ್‌ ಹಾಗೂ ದ. ಕ. ಮೊಗವೀರ ಮಹಾಜನ ಸಂಘದ ಪದಾಧಿಕಾರಿಗಳು, ಮಹಿಳಾ ಸಂಘ, ನಾಲ್ಕು ಪಟ್ಣ ಮೊಗವೀರ ಮಹಾಸಭಾ, ಮಹಿಳಾ ಸಭಾದ ಪದಾಧಿಕಾರಿಗಳು ಮತ್ತು ಗಣ್ಯರು ಪಾಲ್ಗೊಂಡಿದ್ದರು. ಸತೀಶ್‌ ಆಮೀನ್‌ ಪಡುಕೆರೆ ಕಾರ್ಯಕ್ರಮ ಸಂಯೋಜಿಸಿದ್ದರು

ಹತ್ತು ದಿನಗಳ ಕಾಲ ಜರಗಿದ ಉಡುಪಿ ಉಚ್ಚಿಲ ದಸರಾ ಉತ್ಸವದಲ್ಲಿ ಲಕ್ಷಾಂತರ ಮಂದಿ ಪಾಲ್ಗೊಳ್ಳುವ ಮೂಲಕ ಯಶಸ್ವಿಗೊಳಿಸಿಕೊಟ್ಟಿದ್ದಾರೆ. ದಸರಾ, ಸಾಮೂಹಿಕ ಚಂಡಿಕಾಯಾಗ, ಅನ್ನಸಂತರ್ಪಣೆ, ವಿಸರ್ಜನೆ ಶೋಭಾಯಾತ್ರೆ ಪ್ರಯುಕ್ತ ಶನಿವಾರ ಎರಡು ಲಕ್ಷಕ್ಕೂ ಅಧಿಕ ಮಂದಿ ಕ್ಷೇತ್ರಕ್ಕೆ ಆಗಮಿಸಿದ್ದು, 50 ಸಾವಿರಕ್ಕೂ ಅಧಿಕ ಮಂದಿ ಅನ್ನಪ್ರಸಾದ ಸ್ವೀಕರಿಸಿದ್ದಾರೆ. ಶಿಸ್ತುಬದ್ಧವಾಗಿ ನಡೆದ ಶೋಭಾಯಾತ್ರೆಯು ಯಶಸ್ವಿಯಾಗುವಲ್ಲಿ ಪೊಲೀಸ್‌ ಇಲಾಖೆ, ಸ್ವಯಂಸೇವಕರ ಸಹಕಾರ ಸ್ಮರಣೀಯವಾಗಿದೆ. ಉಚ್ಚಿಲ ದಸರಾ ಯಶಸ್ವಿಯಾಗಲು ಸಹಕರಿಸಿದ ಎಲ್ಲರಿಗೂ ಕೃತಜ್ಞತೆ ಸಮರ್ಪಿಸುತ್ತೇವೆ.
– ಜಿ. ಶಂಕರ್‌, ಉಚ್ಚಿಲ ದಸರಾ ರೂವಾರಿ

Advertisement

Udayavani is now on Telegram. Click here to join our channel and stay updated with the latest news.

Next