Advertisement

Udupi Ucchila Dasara: ಸಾರ್ವಜನಿಕ ದಾಂಡಿಯಾ, ಗರ್ಭಾ ನೃತ್ಯ ಸಂಭ್ರಮ

01:28 AM Oct 07, 2024 | Team Udayavani |

ಕಾಪು: ಉಚ್ಚಿಲ ಶ್ರೀ ಮಹಾಲಕ್ಷ್ಮೀ ದೇವಸ್ಥಾನದಲ್ಲಿ ಜರಗುತ್ತಿರುವ ಉಡುಪಿ ಉಚ್ಚಿಲ ದಸರಾ ಪ್ರಯುಕ್ತ ರವಿವಾರ ರಾತ್ರಿ ಸಾರ್ವಜನಿಕರಿಗಾಗಿ ದಾಂಡಿಯಾ ಮತ್ತು ಗರ್ಭಾ ನೃತ್ಯ ಕಾರ್ಯಕ್ರಮ ನಡೆಯಿತು.

Advertisement

ಶ್ರೀ ಕ್ಷೇತ್ರದ ರಥಬೀದಿಯಲ್ಲಿ ಸುಮಧುರ ಸಂಗೀತದೊಂದಿಗೆ ನಡೆದ ಈ ಕಾರ್ಯಕ್ರಮ ಭಾರೀ ಜನಾಕರ್ಷಣೆಗೆ ಕಾರಣವಾಯಿತು. ಸಾವಿರಾರು ಮಂದಿ ಮಹಿಳೆಯರು, ಪುರುಷರು ಮತ್ತು ಮಕ್ಕಳೆಲ್ಲರೂ ಗರ್ಭಾ ಮತ್ತು ದಾಂಡಿಯಾಕ್ಕೆ ಹೆಜ್ಜೆ ಹಾಕಿ ಸಂಭ್ರಮಿಸಿದರು.

ಇಂದು ಶತವೀಣಾ ವಲ್ಲರಿ ಕಾರ್ಯಕ್ರಮ
ಶರನ್ನವರಾತ್ರಿ ಮಹೋತ್ಸವ ಪ್ರಯುಕ್ತ ಅ. 7ರಂದು ಲಲಿತಾ ಪಂಚಮಿ ಸಂಭ್ರಮ ನಡೆಯಲಿದೆ. ಆ ಪ್ರಯುಕ್ತ ಮಧ್ಯಾಹ್ನ 2ರಿಂದ ಪುರುಷರು ಮತ್ತು ಮಹಿಳೆಯರಿಗಾಗಿ ರಂಗೋಲಿ ಸ್ಪರ್ಧೆ, ಸಂಜೆ 4ರಿಂದ ಮಣಿಪಾಲದ ವಿ| ಪವನಾ ಬಿ. ಆಚಾರ್‌ ಇವರ ನಿರ್ದೇಶನದಲ್ಲಿ ಏಕಕಾಲದಲ್ಲಿ ನೂರ ಒಂದು ವೀಣಾ ವಾದಕರ ಸಹಭಾಗಿತ್ವದೊಂದಿಗೆ ಶತವೀಣಾವಲ್ಲರಿ ಕಾರ್ಯಕ್ರಮ ನಡೆಯಲಿದೆ.

ಲಲಿತಾ ಪಂಚಮಿ ವಿಶೇಷ
ಲಲಿತಾ ಪಂಚಮಿ ಪ್ರಯುಕ್ತ ಬೆಳಗ್ಗೆ ಉದಯ ಪೂಜೆ, ನಿತ್ಯ ಚಂಡಿಕಾ ಹೋಮ, ಭಜನೆ, ಮಧ್ಯಾಹ್ನ 12 ನವದುರ್ಗೆಯರಿಗೆ ಮಹಾಮಂಗಳಾರತಿ, ಮಹಾಪೂಜೆ, ಅನ್ನಸಂತರ್ಪಣೆ, ಸಂಜೆ 5 ರಿಂದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ರಶ್ಮೀ ಪರ್ವದಿ ಅವರಿಂದ ಧಾರ್ಮಿಕ ಉಪನ್ಯಾಸ, 5.45 ರಿಂದ ಸುಮಂಗಲೆಯರಿಂದ ಸಾಮೂಹಿಕ ಕುಂಕುಮಾರ್ಚನೆ ನಡೆಯಲಿದೆ.

ಭಾರೀ ಜನಸಾಗರ
ಉಚ್ಚಿಲ ದಸರಾಕ್ಕೆ ರವಿವಾರ ಭಾರೀ ಜನಸಾಗರ ಹರಿದು ಬಂದಿದೆ. ಬೆಳಗ್ಗಿನಿಂದಲೇ ನಾಡಿನಾದ್ಯಂತದಿಂದ ಲಕ್ಷಾಂತರ ಮಂದಿ ಉಚ್ಚಿಲಕ್ಕೆ ಬಂದಿದ್ದು ಸಂಜೆಯ ವೇಳೆಗೆ ದೇವಸ್ಥಾನದ ಸುತ್ತಮುತ್ತಲಿನಲ್ಲಿ ಕಾಲಿಡಲೂ ಅವಕಾಶವಿಲ್ಲದಂತೆ ಜನಸಂದಣಿಯುಂಟಾಯಿತು. ಜನರನ್ನು ಮತ್ತು ವಾಹನಗಳನ್ನು ನಿಯಂತ್ರಿಸಲು ಪೋಲೀಸರು ಮತ್ತು ಸ್ವಯಂ ಸೇವಕರು ನಿರಂತರ ಶ್ರಮ ವಹಿಸಿದರು.

Advertisement

ವೈಶಿಷ್ಟಪೂರ್ಣ ವಿವಿಧ ನೃತ್ಯ ಸೇವೆಗೆ ಒತ್ತು
ಶಾರದೆ ಕಲಾಪ್ರಿಯೆಯಾಗಿದ್ದು ಶಾರದೆಯನ್ನು ಒಲಿಸಿಕೊಳ್ಳುವುದಕ್ಕಾಗಿ ಉಚ್ಚಿಲ ದಸರಾದಲ್ಲಿ ಗ್ರಾಮೀಣ ಮಹಿಳೆಯರು ಮತ್ತು ಸ್ಥಳೀಯ ಮಟ್ಟದಿಂದ ಹಿಡಿದು ರಾಷ್ಟ್ರಮಟ್ಟದ ಕಲಾವಿದರನ್ನೊಳಗೊಂಡ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಜೋಡಿಸಲಾಗಿದೆ. ನೃತ್ಯ ಪ್ರಿಯೆ ಶಾರದೆಯ ಮುಂಭಾಗದಲ್ಲಿ ದಾಂಡಿಯಾ ನೃತ್ಯ ಕಾರ್ಯಕ್ರಮವೂ ನಡೆದಿದ್ದು ಸಾವಿರಾರು ಮಂದಿ ಪಾಲ್ಗೊಂಡಿದ್ದಾರೆ. ಮುಂದಿನ ವರ್ಷಗಳಲ್ಲಿ ಇನ್ನಷ್ಟು ವೈಶಿಷ್ಟಪೂರ್ಣವಾದ ವಿವಿಧ ನೃತ್ಯ ಸೇವೆಗೆ ಒತ್ತು ನೀಡಲಾಗುವುದು ಎಂದು ಡಾ| ಜಿ. ಶಂಕರ್‌ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next