Advertisement

ಟೋಲ್‌ ಸಂಗ್ರಹಕ್ಕೆ ವಿರೋಧ ಇಂದು ಉಡುಪಿ ಬಂದ್‌: ವ್ಯಾಪಕ ಬೆಂಬಲ

03:45 AM Feb 13, 2017 | |

ಪಡುಬಿದ್ರಿ/ಉಡುಪಿ/ಕೋಟ: ಸಾರ್ವಜನಿಕ ಬೇಡಿಕೆಗಳನ್ನು ಈಡೇರಿಸದೆ ಟೋಲ್‌ ಸಂಗ್ರಹ ಆರಂಭಿಸಿದ್ದಕ್ಕೆ ಮತ್ತು ಉಡುಪಿ ಜಿಲ್ಲಾಧಿಕಾರಿಗಳ ಜನವಿರೋಧಿ ನೀತಿಯನ್ನು ಖಂಡಿಸಿ ನಾನಾ ಸಂಘಟನೆಗಳು ಜ. 13ರಂದು ಕರೆದಿರುವ ಉಡುಪಿ ಜಿಲ್ಲಾ ಬಂದ್‌ಗೆ ವ್ಯಾಪಕ ಬೆಂಬಲ ವ್ಯಕ್ತಧಿವಾಗಿದೆ. ಕಾಂಗ್ರೆಸ್‌, ಬಿಜೆಪಿ, ಜೆಡಿಎಸ್‌, ಸಿಪಿಎಂ, ಎಸ್‌ಡಿಪಿಐ ಪಕ್ಷಗಳು ತಮ್ಮ ಬೆಂಬಲವನ್ನು ಘೋಷಿಸಿವೆ.

Advertisement

ಹಾಲು, ಪತ್ರಿಕೆ, ಆ್ಯಂಬುಲೆನ್ಸ್‌, ವೈದ್ಯಕೀಯ ಸೇವೆಗಳಿಗೆ ಬಂದ್‌ನಿಂದ ವಿನಾಯಿತಿ ನೀಡಲಾಗಿದೆ. ಉಳಿದಂತೆ ಪಡುಬಿದ್ರಿ ಭಾಗದಲ್ಲಿ ಅಂಗಡಿ, ಮುಂಗಟ್ಟುಗಳು ಬಂದ್‌ ಇರಲಿವೆ ಎಂದು ಬಂದ್‌ಗೆ ಕರೆ ಕೊಟ್ಟವರು ತಿಳಿಸಿದ್ದಾರೆ. ಸಾಸ್ತಾನದಲ್ಲಿ ಹೋರಾಟಗಾರರು ಬಂದ್‌ಗೆ ಬೆಂಬಲ ನೀಡುವಂತೆ ಅಂಗಡಿಯವರಿಗೆ ತಿಳಿಸಿದ್ದಾರೆ.

ಫೆ. 12ಧಿರಂದು ಪಡುಬಿದ್ರಿಯಲ್ಲಿ ಟೋಲ್‌ ಹೋರಾಟ ಸಮಿತಿ ಹಾಗೂ ವಿವಿಧ ರಾಜಕೀಯ ಪಕ್ಷಗಳು, ವಿವಿಧ ಸಂಘ ಸಂಸ್ಥೆಗಳ ಸಹಯೋಗದೊಂದಿಗೆ ನಡೆದಿದ್ದ ಸಮಾಲೋಚನ ಸಭೆಯಲ್ಲಿ ಬಂದ್‌ ಸಿದ್ಧತೆ ಬಗ್ಗೆ ವಿಸ್ತೃತವಾಗಿ ಚರ್ಚೆ ನಡೆಯಿತು.

ಉಡುಪಿ ಜಿಲ್ಲಾ ಬಿಜೆಪಿ ಸಮಿತಿ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ ಮಾತನಾಡಿ, ಟೋಲ್‌ ಸಂಗ್ರಹ ಕುರಿತು ಜಿಲ್ಲಾಧಿಕಾರಿಗಳು ಮೌನ ಮುರಿಯಬೇಕು. ಸಾರ್ವಜನಿಕರ ಬೇಡಿಕೆ ಬಗ್ಗೆ ಶೀಘ್ರ ಪರಿಹಾರ ಸೂಚಿಸಬೇಕು. ಕಾನೂನು ಪ್ರಕಾರ ಟೋಲ್‌ ಗೇಟ್‌ನ 20 ಕಿ.ಮೀ. ವ್ಯಾಪ್ತಿಯಲ್ಲಿರುವವರಿಗೆ ಸಂಪೂರ್ಣ ರಿಯಾಯಿತಿ ನೀಡಬೇಕಿದೆ ಎಂದರು.

ಮಾಜಿ ಶಾಸಕ ಲಾಲಾಜಿ ಆರ್‌. ಮೆಂಡನ್‌ ಮಾತನಾಡಿ, ನಮ್ಮ ನ್ಯಾಯಯುತ ಬೇಡಿಕೆಗೆ ಸರಕಾರ ತುರ್ತಾಗಿ ಸ್ಪಂದಿಸಬೇಕು. ಜಿಲ್ಲಾಧಿಕಾರಿಗಳ ಬೇಜವಾಬ್ದಾರಿ ವರ್ತನೆ ಖಂಡನೀಯ. ಜಿಲ್ಲಾಧಿಕಾರಿಗಳು ಸಂಸದರು, ಉಸ್ತುವಾರಿ ಸಚಿವರು, ಶಾಸಕರು, ಹೋರಾಟಗಾರರು ಹಾಗೂ ಹೆದ್ದಾರಿ ಇಲಾಖೆ, ಟೋಲ್‌ನವರ ಜತೆ ಶೀಘ್ರ ಸಭೆ ನಡೆಸಿ ಸಮಸ್ಯೆ ಇತ್ಯರ್ಥಪಡಿಸಬೇಕು ಎಂದರು.

Advertisement

ಜೆಡಿಎಸ್‌ ಜಿಲ್ಲಾಧ್ಯಕ್ಷ ಯೋಗೀಶ್‌ ಶೆಟ್ಟಿ ಬಾಲಾಜಿ, ಕಾಪು ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ನವೀನ್‌ಚಂದ್ರ ಜೆ. ಶೆಟ್ಟಿ, ಜಿ.ಪಂ. ಸದಸ್ಯೆ ಗೀತಾಂಜಲಿ ಎಂ. ಸುವರ್ಣ ಮಾತನಾಡಿದರು. 

“ನಡೆಯಲಿದೆ ಪಾದಯಾತ್ರೆ’ 

ಸೋಮವಾರ ಬೆಳಗ್ಗೆ 10 ಗಂಟೆಗೆ ಪ್ರತಿಭಟನಕಾರರು ಪಡುಬಿದ್ರಿಯಿಂದ ಹೆಜಮಾಡಿ ಟೋಲ್‌ಗೇಟ್‌ ತನಕ ಪಾದಯಾತ್ರೆ ನಡೆಸಲಿದ್ದಾರೆ ಎಂದು ಹೋರಾಟದ ನೇತೃತ್ವ ವಹಿಸಿಧಿಧಿರುವ ಉಡುಪಿ ಜಿಲ್ಲಾ ಗ್ರಾ.ಪಂ. ಅಧ್ಯಕ್ಷರ ಒಕ್ಕೂಟದ ಅಧ್ಯಕ್ಷ ಡಾ| ದೇವಿಪ್ರಸಾದ್‌ ಶೆಟ್ಟಿ ತಿಳಿಸಿದ್ದಾರೆ.ಶಾಸಕ ಅಭಯಚಂದ್ರ ಅವರೂ ಬೆಂಬಲ ಸೂಚಿಸಿದ್ದಾರೆ.

“ಜಿಲ್ಲಾಧಿಕಾರಿ ವರ್ತನೆ- ಆಕ್ರೋಶ’
ಸಾರ್ವಜನಿಕರೊಂದಿಗೆ ಸಭೆ ನಡೆಸಲು ನಿರಾಕರಿಸುತ್ತಿರುವ ಜಿಲ್ಲಾಧಿಕಾರಿಯ ವರ್ತನೆಗೆ ಅನೇಕರು ಆಕ್ರೋಶ ವ್ಯಕ್ತಪಡಿಸಿದರು. ಅವರನ್ನು ತತ್‌ಕ್ಷಣ ಜಿಲ್ಲೆಯಿಂದ ವರ್ಗಾಯಿಸುವಂತೆ ಆಗ್ರಹಿಸಿದರು.

ಸ್ಥಳೀಯರ ವಾಹನಗಳಿಗೆ ಉಚಿತ ಪಾಸ್‌ ನೀಡಬೇಕು. ಹೆಜಮಾಡಿ ಮತ್ತು ಸುರತ್ಕಲ್‌ ಎನ್‌ಐಟಿಕೆ ಟೋಲ್‌ಗೇಟ್‌ ಈಗಲೇ ವಿಲೀನಗೊಳಿಸಬೇಕು. ಎರಡೆರಡು ಕಡೆ ಟೋಲ್‌ ನೀಡಲು ಸಾಧ್ಯವಿಲ್ಲ ಎಂಬ ಅಭಿಪ್ರಾಯ ಕೇಳಿಬಂತು.

ಕಾಪು ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ದಿವಾಕರ ಶೆಟ್ಟಿ, ಕಾಪು ಬಿಜೆಪಿ ಕ್ಷೇತ್ರ ಸಮಿತಿ ಅಧ್ಯಕ್ಷ ಪ್ರಕಾಶ್‌ ಶೆಟ್ಟಿ ಪಾದೆಬೆಟ್ಟು, ಗಣ್ಯರಾದ ಶಶಿಕಾಂತ್‌ ಪಡುಬಿದ್ರಿ, ಗುಲಾಂ ಮೊಹಮ್ಮದ್‌, ವಿಶ್ವಾಸ್‌ ವಿ. ಅಮೀನ್‌, ದುರ್ಗಾಪ್ರಸಾದ್‌ ಹೆಗ್ಡೆ, ಮುಸ್ತಫಾ, ಧನಂಜಯ ಕೋಟ್ಯಾನ್‌ ಮಟ್ಟು, ನಜೀರ್‌, ದಮಯಂತಿ ಅಮೀನ್‌, ವಿಶಾಲಾಕ್ಷಿ ಪುತ್ರನ್‌, ಜಿತೇಂದ್ರ ಫ‌ುರ್ಟಾಡೋ, ಡೇವಿಡ್‌ ಡಿ”ಸೋಜಾ, ನೀತಾ ಗುರುರಾಜ್‌, ರೇಣುಕಾ ಪುತ್ರನ್‌, ಶೇಖಬ್ಬ, ರಾಜೇಶ್‌ ಪಾಂಗಾಳ, ರವಿ ಶೆಟ್ಟಿ ಮತ್ತು ದೇವಣ್ಣ, ಹರೀಶ್‌ ಶೆಟ್ಟಿ, ದೀಪಕ್‌ಕುಮಾರ್‌ ಎರ್ಮಾಳ್‌, ನವೀನ್‌ಚಂದ್ರ ಸುವರ್ಣ,  ಅಬ್ದುಲ್‌ ಅಜೀಜ್‌ ಹೆಜಮಾಡಿ, ಮನೋಹರ ಶೆಟ್ಟಿ, ಉಸ್ಮಾನ್‌ ಕಾಪು, ಅಬ್ದುಲ್‌ ಕಾಪು, ವಾಸುದೇವ ರಾವ್‌, ಸುಧಾಕರ ಶೆಟ್ಟಿ, ರಮಾಕಾಂತ ದೇವಾಡಿಗ, ಅಶೋಕ್‌ ಸಾಲ್ಯಾನ್‌, ಗಣೇಶ್‌ ಕೋಟ್ಯಾನ್‌, ಸುಧೀರ್‌ ಕರ್ಕೇರ ಮತ್ತಿತರರು ಉಪಸ್ಥಿತರಿದ್ದರು.

ಬೆಂಬಲ ಇದೆ; ಬಸ್‌ ಬಂದ್‌ ಇಲ್ಲ
ಈ ಪ್ರತಿಭಟನೆಗೆ ಬಸ್‌ ಮಾಲಕರ ಸಂಘದಿಂದ ಬೆಂಬಲವಿದೆ ಯಾದರೂ ಬಸ್‌ ಸಂಚಾರ ನಿಲ್ಲಿಸಲಾಗುವುದಿಲ್ಲ. ಒಂದು ವೇಳೆ ಬಸ್‌ ಸಂಚಾರ ನಿಲ್ಲಿಸಬೇಕಾದ ಪರಿಸ್ಥಿತಿ ಉಂಟಾದಲ್ಲಿ ಅನಿವಾರ್ಯವಾಗಿ ಬಸ್‌ ಸಂಚಾರವನ್ನು ನಿಲ್ಲಿಸಬೇಕಾಗಬಹುದು.
– ರಾಜವರ್ಮ ಬಲ್ಲಾಳ್‌, ಅಧ್ಯಕ್ಷ, ಕೆನರಾ ಬಸ್‌ ಮಾಲಕರ ಸಂಘ

 ಬಸ್‌ ಎಂದಿನಂತೆ ಸಂಚರಿಸಲಿದೆ
ಉಡುಪಿಯಲ್ಲಿ ಬಸ್‌ಗಳು ಎಂದಿನಂತೆ ಸಂಚರಿಸಲಿವೆ. ಒಂದು ದಿನದ ಬಂದ್‌ನಿಂದ ಟೋಲ್‌ ಸಮಸ್ಯೆಗೆ ಪರಿಹಾರ ಸಿಗುತ್ತದೆ ಎನ್ನುವ ವಿಶ್ವಾಸ ನಮಗಿಲ್ಲ. ಶಾಶ್ವತ ಪರಿಹಾರಕ್ಕಾಗಿ ಶಾಸಕರು, ಜಿಲ್ಲಾಡಳಿತ ಮತ್ತು ಸರಕಾರ ಗಮನಹರಿಸಬೇಕು.    – ಕುಯಿಲಾಡಿ ಸುರೇಶ್‌ ನಾಯಕ್‌
ಅಧ್ಯಕ್ಷರು, ಉಡುಪಿ ಸಿಟಿ ಬಸ್‌ ಮಾಲಕರ ಸಂಘ

ಸರಕಾರಿ ಬಸ್‌ ಇದೆ
ಬೆಳಗ್ಗಿನ ಬಸ್‌ ಸಂಚಾರದಲ್ಲಿ ಯಾವುದೇ ವ್ಯತ್ಯಯಗಳು ನಡೆಯುವುಧಿದಿಲ್ಲ. ಬಂದ್‌ ಹಿನ್ನೆಲೆಯಲ್ಲಿ ಸಂಚಾರ ನಿಲ್ಲಿಸಬೇಕಾದ ಅಗತ್ಯ ಉಂಟಾದಲ್ಲಿ ಅಲ್ಲಿನ ಡಿಪೋ, ಇಲಾಖಾಧಿಕಾರಿ, ಪೊಲೀಸರನ್ನು ಸಂಪರ್ಕಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು.    

– ವಿವೇಕಾನಂದ ಹೆಗಡೆ ವಿಭಾಗೀಯ ನಿಯಂತ್ರಕ, ಕೆಎಸ್‌ಆರ್‌ಟಿಸಿ, ಮಂಗಳೂರು 

ಶಾಲೆ ರಜೆಯ ಅಧಿಕಾರ ಎಚ್‌ಎಂಗೆ
ಜಿಲ್ಲಾಡಳಿತ ಸೋಮವಾರ ಶಾಲೆಗಳಿಗೆ ರಜೆ ನೀಡಿಲ್ಲ. ಪರಿಸ್ಥಿತಿ ನೋಡಿಧಿಕೊಂಡು ರಜೆ ಕೊಡುವ ಅಧಿಕಾರವನ್ನು ಮುಖ್ಯ ಶಿಕ್ಷಕರಿಗೆ ನೀಡಲಾಗಿದೆ.
– ದಿವಾಕರ ಶೆಟ್ಟಿ , ಡಿಡಿಪಿಐ, ಉಡುಪಿ

ಬಂದ್‌ಗೆ ಸಂಘ ಸಂಸ್ಥೆಗಳ ಬೆಂಬಲ
ಕೆನರಾ ಬಸ್‌ ಚಾಲಕ ಮಾಲಕರ ಸಂಘ, ಸಿಟಿ ಬಸ್‌ ಚಾಲಕ ಮಾಲಕ ಸಂಘ, ಜಿಲ್ಲಾ ಟ್ಯಾಕ್ಸಿಮೆನ್‌ ಮತ್ತು ಮ್ಯಾಕ್ಸಿಕ್ಯಾಬ್‌ ಚಾಲಕ ಮಾಲಕ ಸಂಂಘ, ಲಾರಿ ಮಾಲಕರ ಸಂಘ, ವರ್ತಕರ ಸಂಘ, ಆಲ್‌ ಕಾಲೇಜ್‌ ಸ್ಟೂಡೆಂಟ್‌ ಅಸೋಸಿಯೇಶನ್‌, ಎಬಿವಿಪಿ ಮತ್ತು ಎನ್‌ಎಸ್‌ಯುಐ, ಉಡುಪಿ ಜಿಲ್ಲಾ ಡಾಕ್ಟರ್ ಪೋರಮ್  ಅಸೋಸಿಯೇಶನ್‌, ಮೊಗವೀರ ಮಹಾಜನ ಸಂಘ ಉಚ್ಚಿಲ, ಮೊಗವೀರ ಮಹಾಸಭಾ ಕಾಡಿಪಟ್ಣ, ಎಸ್‌ಡಿಪಿಐ ಉಡುಪಿ ಜಿಲ್ಲೆ, ಜಿಲ್ಲಾ ಜೈ ಕರ್ನಾಟಕ, ತುಳುನಾಡ ರಕ್ಷಣಾ ವೇದಿಕೆ, ಕರ್ನಾಟಕ ರಕ್ಷಣಾ ವೇದಿಕೆ, ಡಿಎಸ್‌ಎಸ್‌ ಒಕ್ಕೂಟ, ನವೋದಯ ಸ್ವಸಹಾಯ ಸಂಘಗಳ ಒಕ್ಕೂಟ, ಬಂಟರ ಯಾನೆ ನಾಡವರ ಮಾತೃ ಸಂಘ, ಬಿಲ್ಲವರ ಮಹಾಮಂಡಲ, ಮುಸ್ಲಿಮ್‌ ಒಕ್ಕೂಟ, ಕುಲಾಲ ಸಂಘ, ವಿಶ್ವಕರ್ಮ ಒಕ್ಕೂಟ,ದಲಿತ ಸಮಾಜ ಸಂಘ,ಮುಂಡಾಲ ಸಮಾಜ, ದೇವಾಡಿಗ ಮಹಾಮಂಡಲ, ದ್ರಾವಿಡ ಬ್ರಾಹ್ಮಣ ಸಭಾ ಮತ್ತಿತರ ಸಂಘಟನೆಗಳು ಬಂದ್‌ ಬೆಂಬಲ ಸೂಚಿಸಿವೆ ಎಂದು ಡಾ| ದೇವಿಪ್ರಸಾದ್‌ ಶೆಟ್ಟಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

ಉಡುಪಿಯಲ್ಲಿಯೂ ವಿವಿಧ ಪಕ್ಷಗಳ ಸಹಿತ ಶಾರದಾ ಅಟೋ ಯೂನಿಯನ್‌, ಆಶ್ರಯದಾತ ಆಟೋ ಯೂನಿಯನ್‌, ಜಿಲ್ಲಾ ಆಟೋರಿಕ್ಷಾ ಚಾಲಕರ ಮತ್ತು ಮಾಲಕರ ಸಂಘಗಳ ಒಕ್ಕೂಟ ಬಂದ್‌ ಅನ್ನು ಬೆಂಬಲಿಸಿದ್ದು, ರಿಕ್ಷಾ ಬಂದ್‌ ಇರುವುದಿಲ್ಲ. ಬಸ್‌ಗಳು ಸಂಪೂರ್ಣ ಬಂದ್‌ ಆದರೆ ನಾವೂ ಬಂದ್‌ ಮಾಡಲು ಸಿದ್ಧರಾಗಿದ್ದೇವೆ ಎಂದು ರಿಕ್ಷಾ ಸಂಘಟನೆಗಳು ಹೇಳಿವೆ.

144 ಸೆಕ್ಷನ್‌ ಹೊಸ ಅಧಿಸೂಚನೆ
ಹೆಜಮಾಡಿ ಮತ್ತು ಸಾಸ್ತಾನ ಟೋಲ್‌ಗೇಟ್‌ ಪ್ರದೇಶದಲ್ಲಿ ಈ ಹಿಂದೆಯೇ 144 ಸೆಕ್ಷನ್‌ ಅನ್ನು ಜಿಲ್ಲಾಧಿಕಾರಿಗಳು ಜಾರಿಗೊಳಿಸಿದ್ದರು. ಫೆ. 12ರಂದು ಇನ್ನೊಂದು ಅಧಿಸೂಚನೆ ಹೊರಡಿಸಿರುವ ಅಪರ ಜಿಲ್ಲಾ ದಂಡಾಧಿಕಾರಿಗಳು ಉಡುಪಿ ತಾಲೂಕಿನಾದ್ಯಂತ, ಉಡುಪಿ ನಗರಸಭೆ ವ್ಯಾಪ್ತಿ ಹಾಗೂ ತೆಕ್ಕಟ್ಟೆಯಿಂದ ಶಿರೂರು ರಾಷ್ಟ್ರೀಯ ಹೆದ್ದಾರಿ 66ರ ಇಕ್ಕೆಲ 2 ಕಿ.ಮೀ. ವ್ಯಾಪ್ತಿಯ ತನಕ ಫೆ. 12ರ ಮಧ್ಯರಾತ್ರಿ 11 ಗಂಟೆಯಿಂದ ಫೆ. 13ರ ಮಧ್ಯರಾತ್ರಿ 12 ಗಂಟೆಯವರೆಗೆ ಪ್ರತಿಬಂಧಕಾಜ್ಞೆ ಜಾರಿಗೊಳಿಸಲಾಗಿದೆ ಎಂದು ಪ್ರಕಟನೆ ತಿಳಿಸಿದೆ.

ಜಿಲ್ಲಾ ದಂಡಾಧಿಕಾರಿಗಳ ಆದೇಶ ಹೊರಬೀಳುತ್ತಿದ್ದಂತೆಯೇ ಆಯಾ ಭಾಗದ ಜನರಿಗೆ ತಿಳಿಯಪಡಿಸಲು ಪೊಲೀಸರು ತಮ್ಮ ವಾಹನಗಳ ಮೈಕ್‌ನಲ್ಲಿ ಸೆಕ್ಷನ್‌ 144 ಇರುವ ಬಗ್ಗೆ ಮಾಹಿತಿ ನೀಡಿದರು. ಯಾವುದೇ ಸಭೆ, ಸಮಾರಂಭ, ಮೆರವಣಿಗೆಗೆ ಅವಕಾಶವಿಲ್ಲ ಎಂದು ಪ್ರಕಟಿಸಿದರು.

ಜಾಥಾ ನಡೆಸಿದರೆ ಕಠಿನ ಕ್ರಮ
ಎಎಸ್‌ಪಿ ಸೆಕ್ಷನ್‌ 144 ಜಾರಿ ಇರುವ ಪ್ರದೇಶದಲ್ಲಿ ಪ್ರತಿಭಟನೆ, ಜಾಥಾ ನಡೆಸಿದರೆ ಕಠಿನ ಕಾನೂನು ಕ್ರಮ ಕೈಗೊಳ್ಳಲೇಬೇಕಾಗುತ್ತದೆ ಎಂದು ಹೆಚ್ಚುವರಿ ಎಸ್‌ಪಿ ಎನ್‌. ವಿಷ್ಣುವರ್ಧನ ಅವರು ತಿಳಿಸಿದ್ದಾರೆ. ಅಗತ್ಯ ಸ್ಥಳಗಳಲ್ಲಿ ಬಿಗಿ ಪೊಲೀಸ್‌ ಬಂದೋಬಸ್ತ್ ಅನ್ನು ಹಾಕಲಾಗಿದೆ. ಇಬ್ಬರು ಡಿವೈಎಸ್‌ಪಿ, 6 ಇನ್ಸ್‌ಪೆಕ್ಟರ್‌, 28 ಪಿಎಸ್‌ಐ ಮತ್ತು 400ಕ್ಕೂ ಅಧಿಕ ಪೊಲೀಸ್‌ ಸಿಬಂದಿಯವರನ್ನು ನಿಯೋಜಿಸಲಾಗಿದೆ. ಪಡುಬಿದ್ರಿ ಹೆಜಮಾಡಿ ಮತ್ತು ಕೋಟ ಸಾಸ್ತಾನದಲ್ಲಿ ಹೆಚ್ಚಿನ ಬಂದೋಬಸ್ತ್ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಎಎಸ್‌ಪಿ ತಿಳಿಸಿದ್ದಾರೆ.  

Advertisement

Udayavani is now on Telegram. Click here to join our channel and stay updated with the latest news.

Next