Advertisement

Udupi: ಪ್ರವಾಸೋದ್ಯಮ ಅಭಿವೃದ್ಧಿ ಪ್ರಸ್ತಾವ: ಕೇಂದ್ರಕ್ಕೆ ಸಲ್ಲಿಸಲು ನಿರ್ಧಾರ

07:52 PM Sep 02, 2024 | Team Udayavani |

ಉಡುಪಿ: ಕೃಷಿ, ಮೀನು ಗಾರಿಕೆಯ ಜತೆಗೆ ಜಿಲ್ಲೆಯ ಸ್ಥಳೀಯ ಆರ್ಥಿಕ ಅಭಿವೃದ್ಧಿ ಮೂಲಗಳಲ್ಲಿ ಪ್ರವಾ ಸೋದ್ಯಮವೂ ಒಂದಾಗಿದೆ. ಆದರೆ, ಪ್ರವಾಸೋದ್ಯಮ ಅಭಿವೃದ್ಧಿಗೆ ಕಳುಹಿಸಿ ರುವ ಪ್ರಸ್ತಾವನೆಗೆ ಮಾತ್ರ ರಾಜ್ಯ ಸರಕಾರ ದಿಂದ ಈವರೆಗೂ ಅನುಮತಿ ಸಿಗದೇ ಇರುವುದರಿಂದ ಕೇಂದ್ರ ಸರಕಾರಕ್ಕೆ ಇದೇ ಪ್ರಸ್ತಾವನೆಯನ್ನು ಸಲ್ಲಿಸಲು ಜಿಲ್ಲಾ ಪ್ರವಾ ಸೋದ್ಯಮ ಇಲಾಖೆ ಸಿದ್ಧತೆ ನಡೆಸುತ್ತಿದೆ.

Advertisement

ಜಿಲ್ಲೆಯ ಪ್ರವಾಸೋದ್ಯಮ ಅಭಿವೃದ್ಧಿ ಹಾಗೂ ಪ್ರವಾಸಿ ಸ್ಥಳಗಳಿಗೆ ಪ್ರವಾಸಿಗರನ್ನು ಆಕರ್ಷಿಸಲು ಹಲವು ಕಾರ್ಯಕ್ರಮಗಳನ್ನು ರೂಪಿಸಲಾಗುತ್ತಿದೆ. ಜಿಲ್ಲೆಯ ಬೀಚ್‌, ದೇವಸ್ಥಾನ, ಜಲಪಾತ, ಸಹಿತವಾಗಿ ವಿವಿಧ ಪ್ರವಾಸಿ ಸ್ಥಳಗಳಿಗೆ ಒಂದೇ ವರ್ಷದಲ್ಲಿ 1.5 ಕೋಟಿಗೂ ಅಧಿಕ ಪ್ರವಾಸಿಗರು ಭೇಟಿ ನೀಡಿದ್ದಾರೆ.

ಸಮೃದ್ಧ ಕಡಲ ತೀರ(ಬೀಚ್‌), ದ್ವೀಪಗಳು, ದೇವಸ್ಥಾನಗಳು, ಧಾರ್ಮಿಕ ಕೇಂದ್ರಗಳು, ಜಲಪಾತ, ಚಾರಣ, ಜಲಸಾಹಸ ಕ್ರೀಡೆಗೆ ಬೇಕಾದ ಪೂರಕ ವಾತಾವರಣ ಜಿಲ್ಲೆಯಲ್ಲಿದೆ. ಆದರೆ, ಪ್ರವಾಸೋದ್ಯಮ ಅಭಿವೃದ್ಧಿಗೆ ನಿರೀಕ್ಷಿತ ಪ್ರಮಾಣದಲ್ಲಿ ಅನುದಾನ ಮಾತ್ರ ಸಿಗುತ್ತಿಲ್ಲ.

ಕಳೆದ ಒಂದು ವರ್ಷದಲ್ಲಿ 10ಕ್ಕೂ ಅಧಿಕ ಪ್ರಸ್ತಾವನೆಯನ್ನು ಜಿಲ್ಲೆಯಿಂದ ರಾಜ್ಯ ಪ್ರವಾಸೋದ್ಯಮ ಇಲಾಖೆಯ ಕೇಂದ್ರ ಕಚೇರಿಗೆ ಕಳುಹಿಸಲಾಗಿದೆ. ಆದರೆ ಯಾವುದಕ್ಕೂ ಇನ್ನೂ ಅನುಮತಿ ಸಿಕ್ಕಿಲ್ಲ. ಹೀಗಾಗಿಯೇ ಕೇಂದ್ರ ಸರಕಾರದ ಸ್ವದೇಶಿ ದರ್ಶನ ಯೋಜನೆಯಡಿ ಅನುದಾನ ಕೋರಲು ಇದೇ ಪ್ರಸ್ತಾವನೆಯನ್ನು ಪರಿಷ್ಕರಿಸಿ ನೀಡಲು ಜಿಲ್ಲೆಯಿಂದ ನಿರ್ಧರಿಸಲಾಗಿದೆ.

ಪ್ರಮುಖ ಪ್ರಸ್ತಾವನೆ
ಕಾಪು ಬೀಚ್‌ನ ಲೈಟ್‌ಹೌಸ್‌ ಇರುವ ಬಂಡೆ ಮತ್ತು ಸಮೀಪದ ಬಂಡೆ ನಡುವೆ ಗ್ಲಾಸ್‌ ಬ್ರಿಡ್ಜ್ ನಿರ್ಮಾಣ, ಕುಂದಾಪುರದ ಕೋಡಿ ಬೀಚ್‌ ಉನ್ನತೀಕರಣ, ತ್ರಾಸಿ-ಮರವಂತೆ ಕಡಲ ತೀರದಲ್ಲಿ ವ್ಯೂವ್‌ ಪಾಯಿಂಟ್‌ ನಿರ್ಮಾಣ ಹಾಗೂ ಅಗತ್ಯ ಸೌಲಭ್ಯ ಕಲ್ಪಿಸುವುದು, ಮರೈನ್‌ ಡ್ರೈವ್‌ ರಚನೆ, ಮಲ್ಪೆ ಹಾಗೂ ಸೈಂಟ್‌ ಮೇರಿಸ್‌ ದ್ವೀಪದಲ್ಲಿ ಇನ್ನಷ್ಟು ಅಭಿವೃದ್ಧಿ ಕಾರ್ಯ, ಜಿಲ್ಲೆಯ ಪ್ರಮುಖ ಜಲಪಾತಗಳಲ್ಲಿ ಅಗತ್ಯ ಮೂಲಸೌಕರ್ಯ ಒದಗಿಸುವುದು ಸೇರಿದಂತೆ ಪ್ರವಾಸೋದ್ಯಮಕ್ಕೆ ಪೂರಕವಾದ ಪ್ರಸ್ತಾವನೆಯನ್ನು ಕೇಂದ್ರಕ್ಕೆ ಕಳುಹಿಸಲಾಗುವುದು.

Advertisement

ಇದರ ಜತೆಗೆ ಬೀಚ್‌ ಹಾಗೂ ದೇವಸ್ಥಾನಗಳನ್ನು ಒಳಗೊಂಡ ಸರ್ಕ್ನೂಟ್‌ ವ್ಯವಸ್ಥೆ ರೂಪಿಸುವ ಯೋಜನೆ ಕಡತದಲ್ಲೇ ಬಾಕಿಯಾಗಿದೆ. ಪ್ರವಾಸಿ ತಾಣಗಳನ್ನು ಸಂದರ್ಶಿಸಲು ಪ್ರವಾಸಿಗರಿಗೆ ಅನುಕೂಲ ಆಗುವಂತೆ ಅಲ್ಲಲ್ಲಿ ಮಾಹಿತಿ ಕೇಂದ್ರ, ಡಿಜಿಟಲ್‌ ಬೋರ್ಡ್‌ ಹಾಕಬೇಕು ಎಂಬುದೂ ಅನುಷ್ಠಾನಕ್ಕೆ ಬಂದಿಲ್ಲ. ಪ್ರವಾಸೋದ್ಯಮದ ಸಮಗ್ರ ಅಭಿವೃದ್ಧಿಗೆ ರೂಪಿಸಿದ ಮಾಸ್ಟರ್‌ ಪ್ಲಾನ್‌ ಕೂಡ ಅನುಷ್ಠಾನಕ್ಕೆ ಬರಲೇ ಇಲ್ಲ

ಪ್ರವಾಸೋದ್ಯಮ ಅಭಿವೃದ್ಧಿಗೆ ಅನುದಾನ ನಿರೀಕ್ಷೆ
ಜಿಲ್ಲೆಯ ಪ್ರವಾಸೋದ್ಯಮ ಅಭಿವೃದ್ಧಿಗೆ ಸಂಬಂಧಿಸಿದಂತೆ ರಾಜ್ಯ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದೇವೆ. ಅನುದಾನ ನಿರೀಕ್ಷಿಸಲಾಗಿದೆ. ಈ ಮಧ್ಯೆ ಕೇಂದ್ರ ಸರಕಾರದ ಸ್ವದೇಶಿ ಯೋಜನೆಯಡಿಯಲ್ಲೂ ಕೆಲವು ಸ್ಥಳಗಳ ಅಭಿವೃದ್ಧಿಗೆ ಪೂರಕವಾಗಿ ಪ್ರಸ್ತಾವನೆಯನ್ನು ಸಿದ್ಧಪಡಿಸುತ್ತಿದ್ದೇವೆ. ತಿಂಗಳೊಳಗೆ ಕೇಂದ್ರ ಸರಕಾರಕ್ಕೂ ಪ್ರಸ್ತಾವನೆ ಸಲ್ಲಿಸಲಿದ್ದೇವೆ. -ಕುಮಾರ್‌ ಸಿ.ಯು., ಸಹಾಯಕ ನಿರ್ದೇಶಕ, ಪ್ರವಾಸೋದ್ಯಮ ಇಲಾಖೆ, ಉಡುಪಿ

ಖಾಸಗಿ ಸಹಭಾಗಿತ್ವ:
ಸಾಹಸ ಪ್ರವಾಸೋದ್ಯಮ, ಕೃಷಿ ಪ್ರವಾಸೋದ್ಯಮ, ಕ್ಯಾರವಾನ್‌ ಪಾರ್ಕ್‌, ಹೋಂ ಸ್ಟೇ, ವಸ್ತು ಸಂಗ್ರಹಾಲಯ ಮತ್ತು ಗ್ಯಾಲರಿ, ರೋಪ್‌ ವೇ, ಪಾರಂಪರಿಕ ನಡಿಗೆ, ಥೀಮ್‌ ಪಾರ್ಕ್‌, ಪ್ರವಾಸಿ ವಿವರಣ ಕೇಂದ್ರ ಸ್ವಾಸ್ಥ್ಯ ಕೇಂದ್ರ, ಟೆಂಟ್‌ ಹೌಸ ಸಹಿತ ಸುಮಾರು 26 ಅಂಶಗಳ ಯೋಜನೆಯನ್ನು ಖಾಸಗಿ ಸಹಭಾಗಿತ್ವದಲ್ಲಿ ರೂಪಿಸಲಾಗಿದ್ದರೂ ಇನ್ನೂ ಅನುಷ್ಠಾನಕ್ಕೆ ಬಂದಿಲ್ಲ.

Advertisement

Udayavani is now on Telegram. Click here to join our channel and stay updated with the latest news.