Advertisement

Udupi ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಮಹತ್ತರ ತೀರ್ಪು

09:57 PM Sep 04, 2024 | Team Udayavani |

ಉಡುಪಿ: ಗ್ರಾಹಕನು ಸ್ಥಿರಾಸ್ತಿ ಅಡಮಾನ ಸಾಲ ಪಡೆದು ಸುಸ್ತಿದಾರನಾದಾಗ ಅದೇ ಸಂಸ್ಥೆಯಲ್ಲಿ ಅಡಮಾನವಿರಿಸಿದ ಬಂಗಾರದ ಸಾಲ ಸಂದಾಯ ಮಾಡಿದರೂ, ಅಡವಿರಿಸಿದ ಬಂಗಾರ ಹಿಂದೆ ಪಡೆಯಲು ಅರ್ಹನಲ್ಲ ಎಂದು ಉಡುಪಿ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ ಮಹತ್ತರ ತೀರ್ಪು ನೀಡಿದೆ.

Advertisement

ಉಡುಪಿಯ ಗುರುಮಾಚಿದೇವ ವಿವಿಧೋದ್ದೇಶ ಸಹಕಾರ ಸಂಘದ ಕೇಂದ್ರ ಕಚೇರಿಯ ಶಾಖೆಯಲ್ಲಿ 2015ರ ಎ. 30ರಂದು ಸಂಸ್ಥೆಯ ಗ್ರಾಹಕರೊಬ್ಬರು 25 ಲ.ರೂ.ಆಸ್ತಿ ಅಡಮಾನ ಸಾಲ ಪಡೆದಿದ್ದರು. ಈ ಸಾಲವು ಸುಸ್ತಿಯಾಗಿದ್ದು, ಸಂಸ್ಥೆಯು ಸಾಲ ವಸೂಲಾತಿಗಾಗಿ ಕ್ರಮ ಕೈಗೊಂಡಿತ್ತು. ಈ ಬಗ್ಗೆ ಸಹಕಾರ ಸಂಘಗಳ ಉಪನಿಬಂಧಕರ ನ್ಯಾಯಾಲಯದಲ್ಲಿ ಅಸಲು ಮತ್ತು ಬಡ್ಡಿ ಪಾವತಿಸಲು ಸಾಲಗಾರನ ವಿರುದ್ಧ ಆದೇಶವಾಗಿದ್ದು, ಈ ಪ್ರಕರಣವು ಅಮಲ್ಜಾರಿ ಪ್ರಕ್ರಿಯೆಯಲ್ಲಿದೆ.

ಇದೇ ಗ್ರಾಹಕರು 2018ರ ಮಾ. 24ರಂದು ಸುಮಾರು 630 ಗ್ರಾಂ. ಬಂಗಾರದ ಒಡವೆಗಳನ್ನು ಅಡಮಾನವಿರಿಸಿ 16 ಲ.ರೂ. ಸಾಲ ಪಡೆದಿದ್ದು, ಆ ಸಾಲವನ್ನು ಚುಕ್ತ ಮಾಡಿ ತಾನು ಅಡವಿರಿಸಿದ ಬಂಗಾರವನ್ನು ತನಗೆ ನೀಡಬೇಕೆಂದು ಕೋರಿಕೊಂಡರು. ಆದರೆ ಸಂಸ್ಥೆಯು ಆಸ್ತಿ ಅಡಮಾನ ಸಾಲ ಸಂಪೂರ್ಣ ಸಂದಾಯ ಮಾಡಿದರೆ ಮಾತ್ರ ಅಡವಿರಿಸಿದ ಬಂಗಾರವನ್ನು ಹಿಂಪಡೆಯಲು ಅವಕಾಶವಿದೆ ಎಂದು ಹೇಳಿ ಗ್ರಾಹಕನ ಬೇಡಿಕೆಯನ್ನು ತಿರಸ್ಕರಿಸಿತ್ತು. ಈ ಬಗ್ಗೆ ಗ್ರಾಹಕನು ಉಡುಪಿಯ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಮುಂದೆ ಸಂಸ್ಥೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮತ್ತು ಅಧ್ಯಕ್ಷರ ಮೇಲೆ ದೂರು ದಾಖಲಿಸಿ, ತಾನು ಅಡಮಾನವಿಸಿರಿದ ಬಂಗಾರವನ್ನು ಹಿಂದಿರುಗಿಸಬೇಕು ಮತ್ತು ತನಗೆ 3 ಲ.ರೂ. ಮಾನಸಿಕ ವೇದನೆಯೊಂದಿಗೆ 10,000 ರೂ. ನೋಟಿಸಿನ ಖರ್ಚು ನೀಡಬೇಕೆಂದು ಕೇಳಿಕೊಂಡಿದ್ದರು.

ಉಭಯ ವಾದಗಳನ್ನು ಆಲಿಸಿದ ಆಯೋಗವು ದೂರುದಾರರು ಅಡವಿರಿಸಿದ ಚಿನ್ನಾಭರಣವನ್ನು ಸಂಸ್ಥೆಯಿಂದ ಹಿಂದೆ ಪಡೆಯಲು ಅರ್ಹರಲ್ಲವೆಂದು ಆ ದೂರನ್ನು ವಜಾಗೊಳಿಸಿ ಆದೇಶ ನೀಡಿದೆ. ಗುರುಮಾಚಿದೇವ ಸಂಸ್ಥೆಯ ಪರವಾಗಿ ಉಡುಪಿಯ ವಕೀಲ ಎಸ್‌. ಗುರುರಾಜ್‌ ಐತಾಳ್‌ ವಾದ ಮಂಡಿಸಿದ್ದರು.

ಸಂಸ್ಥೆಗೆ ಅಧಿಕಾರವಿದೆ: ಅಧ್ಯಕ್ಷರು
ಭಾರತೀಯ ಕರಾರು ಅಧಿನಿಯಮ ಕಲಂ 171ರಂತೆ ಯಾವುದೇ ಹಣಕಾಸು ಸಂಸ್ಥೆಯಲ್ಲಿ ಗ್ರಾಹಕನು ಸಾಲ ಪಡೆದು ಸುಸ್ತಿದಾರನಾದರೆ ಅಂತಹ ವ್ಯಕ್ತಿಗೆ ಸೇರಿದ ಚರ ಸೊತ್ತುಗಳನ್ನು ಕಾನೂನು ರೀತಿಯಲ್ಲಿ ಮುಟ್ಟಗೋಲು ಹಾಕಲು ಸಾಲ ನೀಡಿದ ಸಂಸ್ಥೆಗೆ ಅಧಿಕಾರವಿದೆ ಎಂದು ವಕೀಲ ಹಾಗೂ ಗುರುಮಾಚಿದೇವ ವಿ.ಸ.ಸ ನಿ. ಅಧ್ಯಕ್ಷ ಎಚ್‌. ಆನಂದ ಮಡಿವಾಳ ತಿಳಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next