Advertisement
11 ಕೇಂದ್ರಗಳಲ್ಲಿ ನಡೆದ ಪರೀಕ್ಷೆಯಲ್ಲಿ 500ಕ್ಕೂಅಧಿಕ ವಿದ್ಯಾರ್ಥಿಗಳು ಪಾಲ್ಗೊಂಡಿದ್ದಾರೆ. ವಿಜ್ಞಾನ ವಿಭಾಗದ ವಿದ್ಯಾರ್ಥಿಗಳಿಗೆ ಪ್ರಾಯೋಗಿಕ ಪರೀಕ್ಷೆ ಫೆ. 17ರಿಂದ ಆರಂಭವಾಗಬೇಕಿತ್ತು. ತಾಂತ್ರಿಕ ಕಾರಣ ದಿಂದ ಉಡುಪಿ ಜಿಲ್ಲೆಯಲ್ಲಿ ಮಾತ್ರ ಆಗಿ ರಲಿಲ್ಲ. ಶುಕ್ರವಾರ ಜಿಲ್ಲೆಯಲ್ಲಿ ಗುರುತಿಸಿರುವ ಎಲ್ಲ ಕೇಂದ್ರಗಳಲ್ಲೂ ಪ್ರಾಯೋಗಿಕ ಪರೀಕ್ಷೆ ನಡೆದಿದೆ. ನ್ಯಾಯಾಲಯದ ಮಧ್ಯಾಂತರ ಆದೇಶ ಕಟ್ಟುನಿಟ್ಟಾಗಿ ಪಾಲಿಸಲು ಸೂಚನೆ ನೀಡಲಾಗಿದೆ. ಎಲ್ಲ ಪರೀಕ್ಷಾ ಕೇಂದ್ರದಲ್ಲೂ ನಿಯಮ ಪಾಲನೆಯಾಗಿದೆ ಎಂದು ಡಿಡಿಪಿಯು ಮಾರುತಿ ಮಾಹಿತಿ ನೀಡಿದರು.
ಹಿಜಾಬ್ ಧರಿಸಿ ಬಂದಿರುವ ವಿದ್ಯಾರ್ಥಿನಿಯರಿಗೆ ಪರೀಕ್ಷಾ ಕೊಠಡಿಯೊಳಗೆ ಪ್ರವೇಶ ನೀಡಿರಲಿಲ್ಲ. ಇದರಿಂದ ಕೆಲವು ವಿದ್ಯಾರ್ಥಿನಿಯರು ವಾಪಸ್ ಹೋಗಿದ್ದು, ಕೆಲವರು ಹಿಜಾಬ್ ತೆಗೆದಿಟ್ಟು ಪರೀಕ್ಷೆ ಬರೆದಿದ್ದಾರೆ. ಜಿಲ್ಲೆಯ ಎಲ್ಲ ಶಾಲಾಕಾಲೇಜುಗಳಲ್ಲೂ ಶೈಕ್ಷಣಿಕ ಚಟುವಟಿಕೆ ಎಂದಿನಂತೆ ನಡೆದಿದೆ. ದ್ವಿತೀಯ ಪಿಯುಸಿ ವಾರ್ಷಿಕ ಪ್ರಾಯೋಗಿಕ ಪರೀಕ್ಷೆ, ಎಸೆಸೆಲ್ಸಿ ಪೂರ್ವ ಸಿದ್ಧತಾ ಪರೀಕ್ಷೆಗೆ ಹಿಜಾಬ್ ಧರಿಸಿ ಬಂದವರಿಗೆ ಅವಕಾಶ ನೀಡಿರಲಿಲ್ಲ. ಪರೀಕ್ಷೆಗೆ ಅವಕಾಶ ನೀಡಬೇಕು
ಹಿಜಾಬ್ ವಿವಾದದ ಹಿನ್ನೆಲೆಯಲ್ಲಿ ಕೆಲವು ವಿದ್ಯಾರ್ಥಿನಿಯರು ಪರೀಕ್ಷೆಗೆ ಮತ್ತು ತರಗತಿಗೆ ಗೈರಾಗುತ್ತಿದ್ದಾರೆ. ನ್ಯಾಯಾಲಯದ ಅಂತಿಮ ತೀರ್ಪು ಬಂದ ಕೂಡಲೇ ಪರೀಕ್ಷೆ ಹಾಗೂ ತರಗತಿಗೆ ಗೈರಾಗಿರುವ ವಿದ್ಯಾರ್ಥಿನಿಯರಿಗೆ ಪರೀಕ್ಷೆ ಬರೆಯಲು ಮತ್ತು ಹಾಜರಾತಿ ನೀಡಲು ಸರಕಾರ ಅವಕಾಶ ಕಲ್ಪಿಸಬೇಕು. ಹೆಣ್ಣುಮಕ್ಕಳ ಶಿಕ್ಷಣ ಅತೀ ಮುಖ್ಯವಾಗಿದೆ. ಈ ನಿಟ್ಟಿನಲ್ಲಿ ಸರಕಾರವೇ ಸೂಕ್ತ ಕ್ರಮ ತೆಗೆದುಕೊಳ್ಳಬೇಕು. ಯಾರೂ ಶಿಕ್ಷಣದಿಂದ ವಂಚಿತರಾಗಬಾರದು ಎಂದು ಶಾಸಕ ರಘುಪತಿ ಭಟ್ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.