Advertisement

ಉಡುಪಿಯಲ್ಲಿ 5 ಕೋ.ರೂ. ವೆಚ್ಚದಲ್ಲಿ ವಿದ್ಯಾರ್ಥಿನಿಯರ ಹಾಸ್ಟೆಲ್‌

08:45 PM Feb 12, 2022 | Team Udayavani |

ಉಡುಪಿ: ಜಿಲ್ಲೆಯ ಮೆಟ್ರಿಕ್‌ ಅನಂತರದ ವಿದ್ಯಾರ್ಥಿನಿಯರ ಅನುಕೂಲಕ್ಕಾಗಿ  ಐದು ಕೋ.ರೂ. ವೆಚ್ಚದಲ್ಲಿ ಸುಸಜ್ಜಿತವಾದ ನೂತನ ವಸತಿ ನಿಲಯ (ಹಾಸ್ಟೆಲ್‌) ಅಜ್ಜರಕಾಡು ಪರಿಸರದಲ್ಲಿ ನಿರ್ಮಾಣವಾಗಲಿದೆ.

Advertisement

ವಿದ್ಯಾರ್ಥಿನಿಯರ ಹಾಸ್ಟೆಲ್‌ಗೆ ಸಾಕಷ್ಟು ಬೇಡಿಕೆಯಿದೆ. ಜಿಲ್ಲೆಯಲ್ಲಿರುವ ವಿದ್ಯಾರ್ಥಿನಿಯರ 18 ಹಾಸ್ಟೆಲ್‌ ಭರ್ತಿಯಾದ ಅನಂತರವೂ ನೂರಾರು ಅರ್ಜಿಗಳು ಬಾಕಿ ಇವೆ. ಇದಕ್ಕೆ ಶಾಶ್ವತ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ಜಿಲ್ಲಾ ಕೇಂದ್ರದಲ್ಲಿ ಬಹುಮಹಡಿ ಕಟ್ಟಡದ ಮಾದರಿಯಲ್ಲಿ ನೂತನ ಹಾಸ್ಟೆಲ್‌ ನಿರ್ಮಾಣಕ್ಕೆ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ನಿರ್ಧರಿಸಿದೆ. ಸರಕಾರವೂ ಬಜೆಟ್‌ನಲ್ಲಿ ಇದಕ್ಕೆ ಅನುಮೋದನೆ ನೀಡಲಿದೆ ಎಂದು ಇಲಾಖೆಯ ಮೂಲಗಳು ಖಚಿತಪಡಿಸಿವೆ.

200 ವಿದ್ಯಾರ್ಥಿಗಳ ಪ್ರವೇಶ :

ಅಜ್ಜರಕಾಡು ಪರಿಸರದಲ್ಲಿ ಈಗಾಗಲೇ ಲಭ್ಯವಿರುವ ಇಲಾಖೆಯ ಜಮೀನಿನಲ್ಲೇ ಹಾಸ್ಟೆಲ್‌ ನಿರ್ಮಾಣವಾಗಲಿದೆ. ಒಂದೇ ಹಾಸ್ಟೆಲ್‌ನಲ್ಲಿ ಸುಮಾರು 200 ವಿದ್ಯಾರ್ಥಿನಿಯರಿಗೆ ಅವಕಾಶ ಕಲ್ಪಿಸಲಾಗುತ್ತದೆ. ಐದು ಮಹಡಿಯ ಕಟ್ಟಡ ಇದಾಗಿರಲಿದೆ. ವಿದ್ಯಾರ್ಥಿನಿಯರ ಅಧ್ಯಯನಕ್ಕೆ ಅನುಕೂಲವಾಗುವಂತೆ ಕಂಪ್ಯೂಟರ್‌ ಕೊಠಡಿ, ಗ್ರಂಥಾಲಯ, ಸಭಾಂಗಣ, ಕ್ರೀಡಾ ಚಟುವಟಿಕೆಗೆ ಬೇಕಾದ ಪರಿಕರ ಹೀಗೆ ಎಲ್ಲವೂ ಇರಲಿದೆ.

ತಾತ್ಕಾಲಿಕ ವ್ಯವಸ್ಥೆ:

Advertisement

ಈ ವರ್ಷ ಅರ್ಜಿ ಸಲ್ಲಿಸಿ, ಹಾಸ್ಟೆಲ್‌ ಸಿಗದೆ ಇರುವ ವಿದ್ಯಾರ್ಥಿನಿಯರಿಗೆ ತೆಂಕನಿಡಿ ಯೂರಿನಲ್ಲಿರುವ ಸರಕಾರಿ ಕಟ್ಟಡದಲ್ಲಿ 50 ವಿದ್ಯಾರ್ಥಿನಿಯರಿಗೆ, ಮಣಿಪಾಲದ ರಾಜೀವ ನಗರದಲ್ಲಿರುವ ಸರಕಾರಿ ಪಾಲಿಟೆಕ್ನಿಕ್‌ ಕಟ್ಟಡ ದಲ್ಲಿ 75 ವಿದ್ಯಾರ್ಥಿನಿಯರಿಗೆ ತಾತ್ಕಾಲಿಕವಾಗಿ ಹಾಸ್ಟೆಲ್‌ ವ್ಯವಸ್ಥೆ ಮಾಡಲಾಗುತ್ತಿದೆ. ಇದಕ್ಕೆ ಸರಕಾರದ ಅನುಮತಿಯೂ ದೊರೆತಿದೆ.

ಈಗಾಗಲೇ ಅರ್ಜಿ ಸಲ್ಲಿಸಿರುವ ವಿದ್ಯಾರ್ಥಿನಿ ಯರ ಪಟ್ಟಿ ಇಲಾಖೆಯಲ್ಲಿ ಲಭ್ಯವಿದೆ. ಅದರಂತೆ ಮೆರಿಟ್‌ ಆಧಾರದಲ್ಲಿ ಪ್ರವೇಶ ಪ್ರಕ್ರಿಯೆ ನಡೆಯಲಿದೆ. ಮುಂದಿನ ವರ್ಷವೂ ಈ ಎರಡು ಹಾಸ್ಟೆಲ್‌ ಮುಂದುವರಿಯುವ ಸಾಧ್ಯತೆಯಿದೆ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.

ಹೊಸ ಹಾಸ್ಟೆಲ್‌ಗೆ ಪ್ರಸ್ತಾವನೆ :

ಈ ಬಾರಿ ಬಜೆಟ್‌ನಲ್ಲಿ ಜಿಲ್ಲೆಗೆ ಮೂರು ಹಾಸ್ಟೆಲ್‌ ಮಂಜೂರಾಗುವ ಸಾಧ್ಯತೆಯಿದೆ. ಈ ಸಂಬಂಧ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಿಂದ ಪ್ರಸ್ತಾವನೆಯನ್ನು ಸರಕಾರಕ್ಕೆ ಸಲ್ಲಿಸಲಾಗಿದೆ. ಅಜ್ಜರಕಾಡು ಪರಿಸರದಲ್ಲಿ ಐದು ಕೋ.ರೂ. ವೆಚ್ಚದಲ್ಲಿ ಒಂದು ಹಾಸ್ಟೆಲ್‌, ಕುಂದಾಪುರ ಹಾಗೂ ಬ್ರಹ್ಮಾವರ ತಾಲೂಕಿನಲ್ಲಿ ತಲಾ ಒಂದೊಂದು ಹಾಸ್ಟೆಲ್‌ಗೆ ಅನುಮತಿ ಸಿಗುವ ಸಾಧ್ಯತೆಯಿದೆ. ಬ್ರಹ್ಮಾವರ ಹಾಗೂ ಕುಂದಾಪುರದಲ್ಲೂ ಹಾಸ್ಟೆಲ್‌ ನಿರ್ಮಾಣಕ್ಕೆ ಬೇಕಾದ ಜಾಗವನ್ನು ಗುರುತಿಸಲಾಗಿದೆ ಎಂದು ಹೇಳಲಾಗುತ್ತಿದೆ.

ಉಡುಪಿಯ ಅಜ್ಜರಕಾಡು  ಪರಿಸರದಲ್ಲಿ ಐದು ಕೋಟಿ  ರೂ. ವೆಚ್ಚದಲ್ಲಿ ಮೆಟ್ರಿಕ್‌ ಅನಂತರ ವಿದ್ಯಾರ್ಥಿನಿಯರಿಗೆ ಹಾಸ್ಟೆಲ್‌ ನಿರ್ಮಾಣ ಮಾಡಲಿದ್ದೇವೆ. ಇದರಿಂದ ಜಿಲ್ಲೆಯ ಬಡ ಕುಟುಂಬದ ವಿದ್ಯಾರ್ಥಿನಿಯರಿಗೆ ಇನ್ನಷ್ಟು ಅನುಕೂಲವಾಗಲಿದೆ. -ಕೋಟ ಶ್ರೀನಿವಾಸ ಪೂಜಾರಿ, ಸಮಾಜ ಕಲ್ಯಾಣ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಚಿವ

ಉಡುಪಿ ನಗರ ವ್ಯಾಪ್ತಿಯಲ್ಲಿ  ಇಲಾಖೆಯ ಜಮೀನು ಇರುವುದರಿಂದ ಬಹುಮಹಡಿ ಕಟ್ಟಡದ ಮಾದರಿಯಲ್ಲಿ ಹಾಸ್ಟೆಲ್‌ ನಿರ್ಮಾಣಕ್ಕೆ ಪ್ರಸ್ತಾವನೆ ಕಳುಹಿಸದ್ದೇವೆ. ಇಲಾಖೆಯಿಂದ ನೂತನವಾಗಿ ನಿರ್ಮಾಣವಾಗಲಿರುವ ಹಾಸ್ಟೆಲ್‌ಗೆದಾನಿಗಳ ಸಹಕಾರವನ್ನು ಇದಕ್ಕೆ ಪಡೆಯುವ ಸಾಧ್ಯತೆಯಿದೆ.  -ದೇವೀಂದ್ರ ಬಿರಾದಾರ, ಜಿಲ್ಲಾ ಅಧಿಕಾರಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ. 

-ರಾಜು ಖಾರ್ವಿ ಕೊಡೇರಿ

Advertisement

Udayavani is now on Telegram. Click here to join our channel and stay updated with the latest news.

Next