Advertisement

Udupi: ಬೀದಿ ನಾಯಿಗಳಿಗೆ 29.13 ಲಕ್ಷ ರೂ. ವೆಚ್ಚ!

02:29 PM Jan 03, 2025 | Team Udayavani |

ಉಡುಪಿ: ಅಭಿವೃದ್ಧಿ ಹೊಂದುತ್ತಿರುವ ನಗರದಲ್ಲಿ ಬೀದಿ ನಾಯಿಗಳ ಉಪಟಳವೂ ಅಷ್ಟೇ ವೇಗದಲ್ಲಿ ಹೆಚ್ಚುತ್ತಿದೆ. ಈ ನಡುವೆ, ಬೀದಿನಾಯಿಗಳ ಆರೈಕೆಗೆಂದೇ ನಗರಸಭೆಯು ದೊಡ್ಡ ಮೊತ್ತವನ್ನು ಬಳಸುತ್ತಿರುವುದು ಕಂಡುಬಂದಿದೆ. ಕಳೆದ ಮೂರು ವರ್ಷಗಳಲ್ಲಿ 29,13,800 ರೂ. ವೆಚ್ಚ ಮಾಡಲಾಗಿದೆ.

Advertisement

ಮೂರು ವರ್ಷಗಳಲ್ಲಿ 1,714 ಬೀದಿ ನಾಯಿಗಳಿಗೆ ಸಂತಾನ ನಿಯಂತ್ರಣ (ಎಬಿಸಿ) ಹಾಗೂ ಆ್ಯಂಟಿವೈರಲ್‌ ಡ್ರಗ್ಸ್‌ (ಎಆರ್‌ವಿ) ನೀಡಲಾಗಿದೆ. ಸಂತಾನಶಕ್ತಿಹರಣ ಶಸ್ತ್ರಚಿಕಿತ್ಸೆಗೆ ತಲಾ 1,450 ರೂ.ನಂತೆ 24.85 ಲಕ್ಷ ರೂ. ಮತ್ತು ಎಆರ್‌ವಿಗೆ ತಲಾ 250 ರೂ. 4.28 ಲಕ್ಷ ರೂ. ಖರ್ಚು ಮಾಡಲಾಗಿದೆ.

ಇನ್ನೂ ಉಳಿದ 1,186 ಬೀದಿ ನಾಯಿಗಳಿಗೆ ಸಂತಾನ ನಿಯಂತ್ರಣ ಚಿಕಿತ್ಸೆ ಹಾಗೂ ಎಆರ್‌ವಿ ಮಾಡಲು ಬಾಕಿ ಉಳಿದಿದೆ. ಇದಕ್ಕೆ ತಗಲುವ ಅಂದಾಜು ಖರ್ಚು 19.69 ಲಕ್ಷ ರೂ.ಉಳಿದ ನಾಯಿಗಳ ಸಂತಾನ ನಿಯಂತ್ರಣ ಮತ್ತು ಲಸಿಕೆ ನೀಡಿಕೆಗೆ ಕೆಟಿಪಿಪಿ ಮೂಲಕ ಟೆಂಡರ್‌ ಕರೆಯಲು ಮಂಜೂರಾತಿ ಹಾಗೂ ತಗಲುವ ವೆಚ್ಚವನ್ನು ನಗರಸಭಾ ನಿಧಿಯಿಂದ ಭರಿಸಲು ಆಡಳಿತಾತ್ಮಕ ಅನುಮೋದನೆ ಸಿಗಬೇಕಿದೆ.

ಎಲ್ಲ ಕಡೆ ಆಹಾರ ಹಾಕುವಂತಿಲ್ಲ
ಪ್ರಸ್ತುತ ನಗರದಲ್ಲಿ ಬೀದಿ ನಾಯಿಗಳಿಗೆ ಊಟ ಹಾಕುವವರ ಸಂಖ್ಯೆ ಹೆಚ್ಚಾಗಿದ್ದು, ಇದರಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ. ಈ ಬಗ್ಗೆ ನಗರಸಭೆಗೆ ಈಗಾಗಲೇ ಸಾಕಷ್ಟು ದೂರುಗಳು ಬಂದಿವೆ. ನಿಯಮ ಪ್ರಕಾರ, ನಗರಸಭೆ ನಿಗದಿಪಡಿಸಿದ ನಿರ್ದಿಷ್ಟ ಪ್ರದೇಶದಲ್ಲಿ ಮಾತ್ರ ಆಹಾರ ನೀಡಬೇಕು ಹಾಗೂ ನಗರಸಭೆ ಯಲ್ಲಿ ನೋಂದಾಯಿಸಿಕೊಂಡು ಅನುಮತಿ ಪಡೆಯಬೇಕು. ಜತೆಗೆ ನಾಯಿ ಸಾಕಲೂ ನಗರದಸಭೆ ಅನುಮತಿ ಪಡೆಯಬೇಕು.

ಎಬಿಸಿ ಕೇಂದ್ರಗಳ ಕೊರತೆ
ಜಿಲ್ಲೆಯಲ್ಲಿ ಪೂರ್ಣ ಪ್ರಮಾಣದಲ್ಲಿ ಅನಿಮಲ್‌ ಬರ್ತ್‌ ಕಂಟ್ರೋಲ್‌(ಎಬಿಸಿ) ಇಲ್ಲದ ಕಾರಣ ಬೀದಿ ಶ್ವಾನಗಳನ್ನು ನಿಯಂತ್ರಿಸುವುದೇ ಕಷ್ಟಕರವಾಗುತ್ತಿದೆ. ಎಲ್ಲ ಜಿಲ್ಲೆ ಹಾಗೂ ತಾಲೂಕು ಕೇಂದ್ರಗಳಲ್ಲಿ ಎಬಿಸಿ ಸ್ಥಾಪನೆ ಮಾಡಬೇಕೆಂಬ ಬಗ್ಗೆ ಸುಪ್ರಿಂ ಕೋರ್ಟ್‌ ಆದೇಶವಿದ್ದರೂ ಅದು ಬಿಬಿಎಂಪಿ ವ್ಯಾಪ್ತಿಯಲ್ಲಿ ಮಾತ್ರ ಪಾಲನೆಯಾಗುತ್ತಿದೆ. ಪ್ರಸ್ತುತ ಕೆಲವೊಂದು ಪ್ರಾಣಿದಯಾ ಸಂಘಗಳ ಮೂಲಕ ಬೀದಿ ನಾಯಿಗಳಿಗೆ ಶಸ್ತ್ರ ಚಿಕಿತ್ಸೆ ಮಾಡಲಾಗುತ್ತಿದೆ.

Advertisement

ರಾತ್ರಿ ಸಂಚಾರ ಕಷ್ಟಕರ
ಉಡುಪಿ, ಮಣಿಪಾಲ ಸಹಿತ ನಗರದ ಪ್ರಮುಖ ಭಾಗಗಳಲ್ಲಿ ರಾತ್ರಿ ಹೊತ್ತು ಓಡಾಟ ಮಾಡುವುದೂ ಕಷ್ಟಕರ ಎಂಬಂತಹ ಸ್ಥಿತಿ ಎದುರಾಗಿದೆ. ಕೆಲವೊಬ್ಬರು ಶ್ವಾನಗಳಿಗೆ ಆಹಾರ ನೀಡುತ್ತಿದ್ದು, ಈ ಕಾರಣಕ್ಕೆ ಎಲ್ಲರಿಂದಲೂ ಶ್ವಾನಗಳು ಆಹಾರವನ್ನೇ ನಿರೀಕ್ಷೆ ಮಾಡಿಕೊಂಡಿರುವ ಕಾರಣ ಬೆನ್ನ ಹಿಂದೆ ಬರುವುದು ಸಹಿತ ಭಯದ ಸನ್ನಿವೇಶವನ್ನು ಉಂಟು ಮಾಡುತ್ತಿವೆ. ಕೆಲಸದಿಂದ ಬರುವಾಗ ವಿಳಂಬವಾಗುತ್ತಿದ್ದು, ನಾಯಿ ಕಾಟದಿಂದಾಗಿ ಆಟೋರಿಕ್ಷಾದಲ್ಲಿಯೇ ಮನೆಯವರೆಗೆ ಬರುವಂತಹ ಸ್ಥಿತಿ ಎದುರಾಗಿದೆ ಎನ್ನುತ್ತಾರೆ ಮಣಿಪಾಲದ ನಿವಾಸಿ ದೇವಿಕಾ.

ಸ್ಥಳಾಂತರ ಮಾಡುವಂತಿಲ್ಲ
ಬೀದಿನಾಯಿಗಳ ಉಪಟಳ ಕಂಡುಬಂದರೆ ಸಾರ್ವಜನಿಕರು ನಗರಸಭೆಗೆ ದೂರು ನೀಡಬಹುದು. ಆದರೆ ಅವುಗಳ ಆರೈಕೆ, ಸಂತಾನಶಕ್ತಿಹರಣ ಶಸ್ತ್ರಚಿಕಿತ್ಸೆ, ಲಸಿಕೆ ಹೊರತುಪಡಿಸಿ ಉಳಿದಂತೆ ಏನೂ ಮಾಡಲಾಗದ ಸ್ಥಿತಿಯಿದೆ. ನಿಯಮಾನುಸಾರ ಎಲ್ಲ ರೀತಿಯ ಚಿಕಿತ್ಸೆಗಳನ್ನು ನೀಡಿ ಯಾವ ಭಾಗದಿಂದ ತರಲಾಗಿದೆ ಅಲ್ಲಿಗೆ ತಂದು ಬಿಡಬೇಕು. ಲಸಿಕೆ ನೀಡುವ ಸಂದರ್ಭದಲ್ಲಿಯೂ ನಾಯಿಗಳು ಕಚ್ಚಿದ ಹಲವಾರು ಘಟನೆಗಳು ನಡೆದಿವೆ. ಈ ಕಾರಣಕ್ಕೆ ಲಸಿಕೆ ನೀಡಲೂ ಸಿಬಂದಿ ಕೊರತೆ ಉಂಟಾಗಿದೆ.

ಸೂಕ್ತ ಕ್ರಮ
ಜಿಲ್ಲೆಯಲ್ಲಿ ಪೂರ್ಣ ಪ್ರಮಾಣದಲ್ಲಿ ಎಬಿಸಿ ಕೇಂದ್ರಗಳನ್ನು ನಿರ್ಮಿಸಿದರೆ ಬಹಳಷ್ಟು ಅನುಕೂಲವಾಗಲಿದೆ. ಬೀದಿನಾಯಿಗಳ ಬಗ್ಗೆ ದೂರುಗಳಿದ್ದರೆ ನಗರಸಭೆಯನ್ನು ಸಂಪರ್ಕ ಮಾಡಬಹುದು. ಇಲಾಖೆಯ ವತಿಯಿಂದ ಅವುಗಳ ಆರೈಕೆಗೆ ಎಲ್ಲ ರೀತಿಯ ಕ್ರಮ ಕೈಗೊಳ್ಳಲಾಗುತ್ತಿದೆ.
-ಡಾ| ರೆಡ್ಡಪ್ಪ, ಸಹಾಯಕ ನಿರ್ದೇಶಕ, ಪಶುಸಂಗೋಪನ ಇಲಾಖೆ

Advertisement

Udayavani is now on Telegram. Click here to join our channel and stay updated with the latest news.

Next