ಉಡುಪಿ: ಜಿಲ್ಲೆಯಲ್ಲಿ 9,100 ಜನರಿಗೆ ಉದ್ಯೋಗಕ್ಕೆ ಅಗತ್ಯವಾದ ಕೌಶಲ ತರಬೇತಿಯನ್ನು ನೀಡುವ ಗುರಿ ಇರಿಸಿಕೊಳ್ಳಲಾಗಿದೆ. ಇದರ ಮೂರು ಪಟ್ಟು ಜನರು (27,300) ನೋಂದಣಿ ಮಾಡಿಸಿ ಕೊಳ್ಳಬಹುದು ಎಂದು ಸಚಿವ ಪ್ರಮೋದ್ ಮಧ್ವರಾಜ್ ಹೇಳಿದರು.
ಬೋರ್ಡ್ ಹೈಸ್ಕೂಲ್ ಆವರಣದಲ್ಲಿ ಸೋಮವಾರ ಕರ್ನಾಟಕ ಕೌಶಲ ಮಿಶನ್‌ನ //kaushalkar.com ವೆಬ್ ಪೋರ್ಟಲ್ ಮತ್ತು ಕೌಶಲ ತರಬೇತಿ ಆಕಾಂಕ್ಷಿತ ಯುವ ಜನರ ಆನ್‌ಲೈನ್ ನೋಂದಣಿ ಯೋಜನೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಕೌಶಲ ಹೆಚ್ಚಾದಷ್ಟೂ ಯುವಜನರ ಯಶಸ್ಸಿನ ಪ್ರಮಾಣ ಹೆಚ್ಚಿಗೆ ಆಗುತ್ತದೆ. ಇನ್ನಷ್ಟು ಹೆಚ್ಚಿನ ಗುರಿ ಅಗತ್ಯ ಕಂಡುಬಂದರೆ ಹೆಚ್ಚಿನ ಅವಕಾಶ ಕೊಡಿಸಲು ಮುಖ್ಯಮಂತ್ರಿಗಳ ಬಳಿ ಮಾತನಾಡುವೆ ಎಂದರು.
809 ಪರಿಶಿಷ್ಟ ಜಾತಿ, 452 ಪರಿಶಿಷ್ಟ ಪಂಗಡ, 1,309 ಅಲ್ಪಸಂಖ್ಯಾಕರು, ಸುಮಾರು 7,000 ಇತರರಿಗೆ ತರ ಬೇತಿ ನೀಡಲಾಗುವುದು. ಉದ್ಯೋಗ ಅವಕಾಶ ಹೆಚ್ಚಿಸಲು ಪ್ರತ್ಯೇಕ ಇಲಾಖೆ ಯನ್ನು ಮಾಡಿ ಸ್ವತಃ ಮುಖ್ಯ ಮಂತ್ರಿಗಳೇ ಇರಿಸಿಕೊಂಡಿದ್ದಾರೆಂದು ಸಚಿವ ಪ್ರಮೋದ್ ತಿಳಿಸಿದರು.
ಯುವಜನ ಸೇವೆ ಇಲಾಖೆಯಿಂದ ಮೇ 19ರಂದು ಉಡುಪಿ ಅಜ್ಜರಕಾಡಿ ನಲ್ಲಿ ಉದ್ಯೋಗ ಮೇಳ ನಡೆಯಲಿದೆ ಎಂದು ಪ್ರಮೋದ್ ತಿಳಿಸಿದರು.
ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಎಂ.ಮಹೇಶ್ವರ ರಾವ್, ನಗರಸಭಾಧ್ಯಕ್ಷೆ ಮೀನಾಕ್ಷಿ ಮಾಧವ ಬನ್ನಂಜೆ, ತಾ.ಪಂ. ಅಧ್ಯಕ್ಷೆ ನಳಿನಿ ಪ್ರದೀಪ ರಾವ್, ಉಪಾಧ್ಯಕ್ಷ ರಾಜೇಂದ್ರ ಪಂದುಬೆಟ್ಟು, ಸದಸ್ಯರಾದ ಉಮೇಶ ಶೆಟ್ಟಿ, ಗೋಪಿ ನಾಯ್ಕ, ಜಿ.ಪಂ. ಉಪಕಾರ್ಯದರ್ಶಿ ನಾಗೇಶ ರಾಯ್ಕರ್, ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ರಮಾನಂದ ನಾಯಕ್, ಪಶುಸಂಗೋಪನೆ ಇಲಾಖೆ ಉಪನಿರ್ದೇಶಕ ಡಾ| ಸರ್ವೋ ತ್ತಮ ಉಡುಪ, ಪೌರಾಯುಕ್ತ ಮಂಜು ನಾಥಯ್ಯ, ಡಿಡಿಪಿಐ ದಿವಾಕರ ಶೆಟ್ಟಿ, ಲೀಡ್ ಬ್ಯಾಂಕ್ ಪ್ರಬಂಧಕ ಫ್ರಾನ್ಸಿಸ್ ಬೋರ್ಜಿಯ, ಜಿಲ್ಲಾ ಯುವಜನ ಸೇವೆ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ಡಾ|ರೋಶನ್‌ಕುಮಾರ್ ಶೆಟ್ಟಿ ಉಪಸ್ಥಿತರಿದ್ದರು.
ಯೋಜನೆಯ ನೋಡಲ್ ಅಧಿಕಾರಿ ನಯನಾ ಸ್ವಾಗತಿಸಿ, ನರೇಗಾ ಯೋಜನೆ ಸಹಾಯಕ ನಿರ್ದೇಶಕ ಹರಿಕೃಷ್ಣ ಶಿವತ್ತಾಯ ವಂದಿಸಿದರು. ಪ್ರಶಾಂತ ಶೆಟ್ಟಿ ಹಾವಂಜೆ ಅವರು ಕಾರ್ಯಕ್ರಮ ನಿರ್ವಹಿಸಿದರು.
10 ದಿನ ಆನ್‌ಲೈನ್ ನೋಂದಣಿ
18ರಿಂದ 35 ವರ್ಷದೊಳಗಿನ ಉದ್ಯೋಗಾಕಾಂಕ್ಷಿ ಗಳು ಸೈಬರ್‌ಕೆಫೆ, ಗ್ರಾ.ಪಂ., ಸ್ವತಃ ಇಂಟರ್‌ನೆಟ್ ಸೌಲಭ್ಯವಿದ್ದರೆ ಅಲ್ಲಿಂದಲೇ ಅಥವಾ ಉಡುಪಿ ಬೋರ್ಡ್ ಹೈಸ್ಕೂಲ್ ಆವರಣದಲ್ಲಿ ತರಬೇತಿಗೆ ಹೆಸರು ನೋಂದಾಯಿಸಬಹುದು. ಆಧಾರ್ ಕಾರ್ಡ್ ಇಲ್ಲದಿದ್ದರೆ ಬೋರ್ಡ್ ಹೈಸ್ಕೂಲ್ ಆವರಣದಲ್ಲಿ ಆಧಾರ್ ಕಾರ್ಡ್ ಮಾಡಿಸಲೂ ವ್ಯವಸ್ಥೆ ಮಾಡಲಾಗಿದೆ. ಇನ್ನು ಹತ್ತು ದಿನ ಆನ್‌ಲೈನ್ ನೋಂದಣಿ ನಡೆಯಲಿದೆ.
-ಪ್ರಿಯಾಂಕ ಮೇರಿ ಫ್ರಾನ್ಸಿಸ್, ಜಿಲ್ಲಾಧಿಕಾರಿ