Advertisement

ನಾಳೆ ಬಾಳೆ ಮುಹೂರ್ತ: ಐದನೇ ಶತಮಾನದತ್ತ ಉಡುಪಿ ಪರ್ಯಾಯ

12:44 AM Nov 29, 2020 | mahesh |

ಉಡುಪಿ: ಶ್ರೀಕೃಷ್ಣ ಮಠದಲ್ಲಿ ಶ್ರೀ ಕೃಷ್ಣಾಪುರ ಮಠದ ಶ್ರೀ ವಿದ್ಯಾಸಾಗರತೀರ್ಥ ಶ್ರೀಪಾದರ ಪರ್ಯಾಯ ಪೂರ್ವಭಾವಿ ಬಾಳೆ ಮುಹೂರ್ತವು ನ. 30ರಂದು ನಡೆಯಲಿದ್ದು, ದ್ವೆವಾರ್ಷಿಕ ಪರ್ಯಾಯ ಪೂಜಾ ಪದ್ಧತಿಯಲ್ಲಿ ಇದು 4ನೇ ಶತ ಮಾನದ ಕೊನೆಯ ಘಟ್ಟ ಮತ್ತು 5ನೇ ಶತಮಾನದ ಆದಿ ಭಾಗದ ತಿರುವಿನ ಸಂಕ್ರಮಣ ಕಾಲದ್ದು ಎನಿಸಲಿದೆ.

Advertisement

ಮಧ್ವಾಚಾರ್ಯ ಪ್ರತಿಷ್ಠಾಪಿತ ಶ್ರೀಕೃಷ್ಣನನ್ನು ಪೂಜಿಸಲು ವಾದಿರಾಜ ಸ್ವಾಮಿಗಳು ಹಾಕಿಕೊಟ್ಟ ಪರಂಪರೆ ಈಗ ಅತಿ ಮಹತ್ವದ ಘಟ್ಟದಲ್ಲಿದೆ. ಮಧ್ವಾಚಾರ್ಯರು (1238 - 1317) ಜೀವಿತದ ಕೊನೆಯ ಭಾಗ ದಲ್ಲಿ ಶ್ರೀಕೃಷ್ಣನನ್ನು ಪ್ರತಿಷ್ಠಾಪಿಸಿದರೆಂಬ ನಂಬಿಕೆ ಇದೆ. ಇದರ ಪ್ರಕಾರ 1300ರ ಬಳಿಕ ಪ್ರತಿಷ್ಠಾಪನೆ ನಡೆದಿದೆ. ಅವರು ಎರಡು ತಿಂಗಳ ಪರ್ಯಾಯ ಕ್ರಮ ವನ್ನು ಸೂಚಿಸಿದ್ದರು. 200 ವರ್ಷಗಳ ಬಳಿಕ ಜನ್ಮತಾಳಿದ ವಾದಿರಾಜರು (1481-1601) ಎರಡು ವರ್ಷಗಳ ಪರ್ಯಾಯ ಆರಂಭಿಸಿದರು. ವಾದಿರಾಜರಿಗೆ 8 ವರ್ಷವಾಗುವಾಗ 1489ರಲ್ಲಿ ಸೋದೆ ಮಠದ ಉತ್ತರಾಧಿಕಾರಿಯಾಗಿ ಸನ್ಯಾಸಾಶ್ರಮವಾಯಿತು. 1518ರಲ್ಲಿ ಗುರು ಶ್ರೀ ವಾಗೀಶತೀರ್ಥರು ನಿರ್ಯಾಣ ಹೊಂದಿದರು. 37ನೇ ವಯಸ್ಸಿನಲ್ಲಿ ಮಠಾಧಿಪತಿಯಾದರು. 1518ರಿಂದ 1522ರ ವರೆಗೆ ಎರಡು ತಿಂಗಳ ಮೂರು ಪರ್ಯಾಯ ಪೂಜೆಯನ್ನು ನಡೆಸಿದ ವಾದಿರಾಜರು 1522ರಲ್ಲಿ ದ್ವೆ„ವಾರ್ಷಿಕ ಪರ್ಯಾಯ ಪೂಜೆ ಕ್ರಮ ಆರಂಭಿಸಿದರು. ಇದು ಆರಂಭವಾಗುವುದು ಪಲಿಮಾರು ಮಠದಿಂದ. ಅನಂತರ ಅದಮಾರು, ಕೃಷ್ಣಾಪುರ, ಪುತ್ತಿಗೆ, ಶೀರೂರು, ಸೋದೆ, ಕಾಣಿಯೂರು, ಪೇಜಾವರ ಮಠದಲ್ಲಿ ಪರ್ಯಾಯ ಚಕ್ರ ಕೊನೆಗೊಳ್ಳುವುದು.

ಮುಂದಿನದು 251ನೇ ಪರ್ಯಾಯ
1522ರಿಂದ ಆರಂಭಗೊಂಡ ಈ ಪರ್ಯಾಯ ಪೂಜಾ ಪದ್ಧತಿಗೆ 16 ವರ್ಷಗಳ 31 ಚಕ್ರಗಳು ಉರುಳಿವೆ. ಈಗ ನಡೆಯುತ್ತಿರುವುದು 250ನೇ ಪರ್ಯಾಯವಾಗಿದ್ದು, 32ನೇ ಪರ್ಯಾಯ ಚಕ್ರದಲ್ಲಿ 2ನೇಯದು. ಇದು ಅದಮಾರು ಮಠದಿಂದ ನಡೆಯುತ್ತಿದೆ. ಹೀಗೆ ಈಗ ನಡೆಯು
ತ್ತಿ ರುವುದು 499ನೇ ವರ್ಷ. 2021ರ ಜನವರಿ 18ರಂದು 500ನೇ ವರ್ಷ ಆರಂಭ‌ವಾಗುತ್ತದೆ. 2022ರ ಜನವರಿ 18ರಂದು ಪರ್ಯಾಯ ಪೂಜಾ ಸರದಿಯನ್ನು ನಿರ್ವಹಿಸುವವರು ಕೃಷ್ಣಾಪುರ ಮಠದ ಶ್ರೀ ವಿದ್ಯಾಸಾಗರತೀರ್ಥ ಶ್ರೀಪಾದರು. ಅಂದು ಐತಿಹಾಸಿಕವಾದ 501ನೇ ವರ್ಷ ಆರಂಭಗೊಳ್ಳುತ್ತದೆ ಮತ್ತು 251ನೇ ಪರ್ಯಾಯೋತ್ಸವವಾಗಿದೆ. ಹೀಗೆ ಒಂದು ಶತಮಾನದ ಚಕ್ರ ಕೊನೆ ಗೊಂಡು ಇನ್ನೊಂದು ಶತಮಾನದ ಆರಂಭಕ್ಕೆ ನಾಂದಿ ಯಾಗುವ ಅಪೂರ್ವ ಘಳಿಗೆ.

ಅಪೂರ್ವ ಅವಕಾಶವೆಂಬ ಹರ್ಷ
5ನೇ ಶತಮಾನದ ಪೂಜೆ ಆರಂಭವಾಗುವ ಕುರಿತು ಶ್ರೀ ವಿದ್ಯಾಸಾಗರ ತೀರ್ಥರಲ್ಲಿ ಕೇಳಿದಾಗ, ಸದಾ ಗಂಭೀರ ಮುಖಮುದ್ರೆಯ ಮುಖದಲ್ಲಿ ಒಂದು ಕಿರುನಗೆ ಬೀರಿ ಹೀಗೆಂದರು: “ಇದೊಂದು ಅಪೂರ್ವ ಅವಕಾಶ, ಹೊಣೆಗಾರಿಕೆಯೂ ಸಹ. ಪ್ರಾಚೀನ ಸಂಪ್ರದಾಯ ಎಂಬುದು ಸಿದ್ಧವಾಗುತ್ತದೆ. ಈ ಅಪೂರ್ವ ಘಳಿಗೆಯನ್ನು ಸ್ಮರಣೀಯವಾಗಿಸಲು ಕಾರ್ಯಕ್ರಮವನ್ನು ಆಯೋಜಿಸಲು ಯತ್ನಿಸುತ್ತೇವೆ’.

ಕೃಷ್ಣಾಪುರ ಶ್ರೀಗಳಿಗೆ ಒಲಿದ ಯೋಗ
ಶ್ರೀ ವಿದ್ಯಾಸಾಗರತೀರ್ಥರು 4ನೇ ಬಾರಿಗೆ ಸರ್ವಜ್ಞ ಪೀಠಾರೋಹಣ ಮಾಡುತ್ತಿದ್ದಾರೆ. 1974-75, 1990-91, 2006-07ರಲ್ಲಿ 3 ಬಾರಿ ಪರ್ಯಾಯ ಪೂಜೆ ನಿರ್ವಹಿಸಿದ್ದು 2022-23ರ ಅವಧಿಗೆ ಪೂಜಾ ಕೈಂಕರ್ಯ ನಿರ್ವಹಿಸಲಿದ್ದಾರೆ. ಆಶ್ರಮ ಜ್ಯೇಷ್ಠರಾಗಿದ್ದ ಪೇಜಾವರ ಶ್ರೀ ವಿಶ್ವೇಶತೀರ್ಥರು 2019ರ ಡಿ. 29ರಂದು ನಿರ್ಯಾಣರಾದ ಬಳಿಕ, 501ನೆಯ ವರ್ಷದ ಐತಿಹಾಸಿಕ ಕಾಲಘಟ್ಟ ಬರುವಾಗ
ಶ್ರೀ ವಿದ್ಯಾಸಾಗರತೀರ್ಥರೇ ಆಶ್ರಮ ಜ್ಯೇಷ್ಠರಾಗಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next