Advertisement

ಉಡುಪಿ ಕೃಷ್ಣ ಮಠದ ನಿರ್ವಹಣೆಗೆ ಕೋ.ರೂ. ಸಾಲ ಪ್ರಸ್ತಾವ

12:15 PM Aug 30, 2020 | sudhir |

ಉಡುಪಿ: ಕೋವಿಡ್ ಕಾರಣದ ಬಂದ್‌ನಿಂದ ಶ್ರೀಕೃಷ್ಣ ಮಠದ ಆರ್ಥಿಕ ಆದಾಯ ಸಂಪೂರ್ಣ ನಿಲುಗಡೆಯಾಗಿದೆ. ಇದೀಗ ಶ್ರೀಕೃಷ್ಣ ಮಠದ ನಿರ್ವಹಣೆಗಾಗಿ 1 ಕೋ.ರೂ. ಸಾಲಕ್ಕೆ ಬ್ಯಾಂಕ್‌ ಪ್ರಸ್ತಾವನೆ ಸಲ್ಲಿಸಲಾಗಿದೆ.

Advertisement

ಶ್ರೀಕೃಷ್ಣ ಮಠದಲ್ಲಿ ಸುಮಾರು 300 ಜನರು ಸಿಬಂದಿ ಇದ್ದಾರೆ. ಸುಮಾರು 150 ಜನರು ಪ್ರಸ್ತುತ ಕೆಲಸ ಮಾಡುತ್ತಿದ್ದು 150 ಜನರು ಮನೆಯಲ್ಲಿದ್ದಾರೆ. ಅವರಿಗೆ ವೇತನ ಬಟವಾಡೆ ಮಾಡಲಾಗುತ್ತಿದೆ. ನಿತ್ಯ 300 ಜನರು ಊಟ ಮಾಡುವಷ್ಟು ನೈವೇದ್ಯ, 100 ತೆಂಗಿನ ಕಾಯಿ, ಎರಡು ಡಬ್ಬಿ ತುಪ್ಪ, ಒಂದು ಡಬ್ಬಿ ಎಳ್ಳೆಣ್ಣೆ (ಮಾರುಕಟ್ಟೆಯಲ್ಲಿ ಸಿಗುವ ಎಳ್ಳೆಣ್ಣೆ ಅಲ್ಲ, ಪರಿಶುದ್ಧತೆಗಾಗಿ ಹೇಳಿಸಿ ಮಾಡಿಸಿರುವುದು), ವಿದ್ಯುತ್‌ ಬಿಲ್‌ (ತಿಂಗಳಿಗೆ 1ರಿಂದ 1.5 ಲ.ರೂ.), ಗೋಶಾಲೆ ಇತ್ಯಾದಿ ಖರ್ಚು ನಿರ್ವಹಣೆ ಆಗಬೇಕಾಗಿದೆ. ನಿತ್ಯ ಸುಮಾರು 1ರಿಂದ 1.25 ಲ.ರೂ.ನಂತೆ ಖರ್ಚು ಬರುತ್ತಿದೆ. ತಿಂಗಳಿಗೆ ಸುಮಾರು 30-40 ಲ.ರೂ. ಖರ್ಚಾಗುತ್ತಿದೆ.

ಮಾ. 22ರಿಂದ ಮಠಕ್ಕೆ ಭಕ್ತರ ಪ್ರವೇಶವಿಲ್ಲ. ಒಟ್ಟು ಐದು ತಿಂಗಳು ಭಕ್ತರಿಂದ ಬರುವ ಆದಾಯ ನಿಂತುಹೋಗಿದೆ. ಆದರೆ ಈ ಅವಧಿಯಲ್ಲಿ ಕನಿಷ್ಠ 1.5 ಕೋ.ರೂ. ಖರ್ಚು ಬಂದಿದೆ. ಈಗಾಗಲೇ ಅದಮಾರು ಮಠದಿಂದ 60 ಲ.ರೂ. ಪಡೆದುಕೊಳ್ಳಲಾಗಿದೆ. ಇದನ್ನು ಸಾಧ್ಯವಾದರೆ ಮಾತ್ರ ಹಿಂದಿರುಗಿಸಬಹುದು. ಬ್ಯಾಂಕ್‌ನಲ್ಲಿ ಮಾಡಿದ ಸಾಲವನ್ನು ಶ್ರೀಕೃಷ್ಣ ಮಠದಲ್ಲಿ ಆದಾಯ ಬಾರದೆ ಇದ್ದರೂ ಅದಮಾರು ಮಠದಿಂದ ತೀರಿಸಲೇಬೇಕು.

ಶ್ರೀಕೃಷ್ಣ ಮಠವಲ್ಲದೆ ಅದಮಾರು ಮಠದಲ್ಲಿಯೂ ಸಿಬಂದಿಗಳ ಆಹಾರದ ಖರ್ಚು ಹೊರತುಪಡಿಸಿ ತಿಂಗಳಿಗೆ 6 ಲ.ರೂ. ಖರ್ಚು ಬರುತ್ತಿದೆ. ಇದಲ್ಲದೆ ಅದಮಾರು ಮೂಲಮಠ, ಮಣಿಪುರ ಮಠ, ಉದ್ಯಾವರದ ಕುದ್ರುತೋಟದಲ್ಲಿರುವ ಗೋಶಾಲೆ, ಸಿಬಂದಿ ಖರ್ಚು ಬೇರೆ ಎಂದು ಶ್ರೀಕೃಷ್ಣ ಮಠದ ವ್ಯವಸ್ಥಾಪಕ ಗೋವಿಂದರಾಜ್‌ ತಿಳಿಸಿದ್ದಾರೆ.

ಸ್ವಾಮೀಜಿಯವರಿಗೆ ಬಹಳ ಕಾಣಿಕೆ ಬರುತ್ತದೆ ಎಂಬ ತಪ್ಪು ಕಲ್ಪನೆ ಇದೆ. ಯಾವುದೇ ಶ್ರೀಗಳಿರಲಿ ಒಂದೂರಿಂದ ಒಂದೂರಿಗೆ ಹೋಗಿ ಬರಲು ಬಹಳಷ್ಟು ಖರ್ಚು ತಗಲುತ್ತದೆ. ಸಿಬಂದಿ ನಿರ್ವಹಣೆ ವೆಚ್ಚ ಬೇರೆ. ಪ್ರಸ್ತುತ ಶ್ರೀಕೃಷ್ಣ ಮಠದ ನಿರ್ವಹಣೆಗಾಗಿ ಎರಡು ಬ್ಯಾಂಕ್‌ಗಳಿಂದ 1 ಕೋ.ರೂ. ಸಾಲ ಕೇಳಿದ್ದೇವೆ. ಈಗಾಗಲೇ 15 ಲ.ರೂ. ಕೊಟ್ಟಿದ್ದಾರೆ.
– ಶ್ರೀ ಈಶಪ್ರಿಯತೀರ್ಥ ಶ್ರೀಪಾದರು, ಪರ್ಯಾಯ ಶ್ರೀ ಅದಮಾರು ಮಠ.

Advertisement
Advertisement

Udayavani is now on Telegram. Click here to join our channel and stay updated with the latest news.

Next