Advertisement

Udupi: ಆ.1- ಸೆ.1ರವರೆಗೆ ಕೃಷ್ಣಮಠದಲ್ಲಿ ಶ್ರೀ ಕೃಷ್ಣ ಮಾಸೋತ್ಸವ

11:19 PM Jul 29, 2024 | Team Udayavani |

ಉಡುಪಿ: ಶ್ರೀ ಕೃಷ್ಣ ಮಠ, ಪರ್ಯಾಯ ಪುತ್ತಿಗೆ ಮಠದ ಆಶ್ರಯದಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿ ಹಾಗೂ ಶ್ರೀ ಕೃಷ್ಣ ಲೀಲೋತ್ಸವವನ್ನು ಸಾಂಪ್ರದಾಯಿಕವಾಗಿ ಮತ್ತು ವೈಭವ ಪೂರ್ಣವಾಗಿ ಆಚರಿಸುವ ಪ್ರಯುಕ್ತ ಆ.1ರಿಂದ ಸೆ.1ರ ವರೆಗೆ ಶ್ರೀ ಕೃಷ್ಣ ಮಾಸೋತ್ಸವ ಹಮ್ಮಿಕೊಳ್ಳಲಾಗಿದೆ ಎಂದು ಪರ್ಯಾಯ ಮಠಾಧೀಶರಾದ ಶ್ರೀಸುಗುಣೇಂದ್ರತೀರ್ಥ ಶ್ರೀಪಾದರು ನುಡಿದರು.

Advertisement

ಶ್ರೀಕೃಷ್ಣ ಮಠದ ಕನಕ ಮಂಟಪದಲ್ಲಿ ಸೋಮವಾರ ಜರಗಿದ ಸುದ್ದಿಗೋಷ್ಠಿ ಯಲ್ಲಿ ಶ್ರೀಪಾದರು ಮಾಹಿತಿ ನೀಡಿ, ಶ್ರೀ ಕೃಷ್ಣನು ಅವತರಿಸಿದ ದಿನವನ್ನು ಕೃಷ್ಣಜನ್ಮಾಷ್ಟಮಿಯಾಗಿ ಆಚರಿಸಲಾಗು ತ್ತದೆ. ಕಾರ್ಯಕ್ರಮ ವ್ಯವಸ್ಥಿತವಾಗಿ ಆಯೋಜಿಸುವ ದೃಷ್ಟಿಯಿಂದ ಸಮಿತಿ ರಚಿಸಲಾಗಿದೆ. ಆ.1ರಂದು ಗುರುಗಳಾದ ಶ್ರೀಸುಜ್ಞಾನೇಂದ್ರ ತೀರ್ಥರ ಸಂಸ್ಮರಣೆಯೊಂದಿಗೆ ಶ್ರೀ ಕೃಷ್ಣ ಮಾಸೋತ್ಸವ ಆರಂಭವಾಗಲಿದೆ. ಪ್ರತಿ ದಿನವೂ ವಿವಿಧ ಕಾರ್ಯಕ್ರಮ, ಸ್ಪರ್ಧೆ ಇರಲಿದೆ ಎಂದರು.

ನಾಲ್ಕು ಉತ್ಸವ: ಕೃಷ್ಣ ಜನ್ಮಾಷ್ಟಮಿ ಅಂಗವಾಗಿ ಲಡ್ಡೋತ್ಸವ, ಸಾಮೂಹಿಕ ಡೋಲೋತ್ಸವ, ಕ್ರೀಡೋತ್ಸವ ಹಾಗೂ ಗೀತೋತ್ಸವ ನಡೆಯಲಿದೆ. ಕೃಷ್ಣಜನ್ಮಾಷ್ಟಮಿ ಎಂದರೆ ಲಡ್ಡು, ಉಂಡಿ, ಚಕ್ಕುಲಿಗಳು ಪ್ರಮುಖ ವಾಗಿರುತ್ತವೆ. ಲಡ್ಡು ಮಾಡಲು ಉತ್ತೇಜನ ನೀಡುವುದು ಮತ್ತು 108 ಬಗೆಯ ಲಡ್ಡುಗಳನ್ನು ಶ್ರೀಕೃಷ್ಣನಿಗೆ ಸಮರ್ಪಿಸಲಾಗುವುದು. ಡೋಲೋತ್ಸವದಲ್ಲಿ ತೊಟ್ಟಿಲೋತ್ಸವ ಇತ್ಯಾದಿಗಳು ವೈಭವದಿಂದ ನಡೆಯಲಿವೆ. ಕ್ರೀಡೋತ್ಸವದಲ್ಲಿ ಜನಪದ ಕ್ರೀಡೆಗಳು, ಹುಲಿಕುಣಿತ, ವಿವಿಧ ಸ್ಪರ್ಧೆಗಳು ನಡೆಯಲಿವೆ. ಗೀತೋತ್ಸವದಲ್ಲಿ ಭಗದ್ಗೀತೆಯ ಪಠನ ಸಹಿತವಾಗಿ ಕೋಟಿಗೀತ ಲೇಖನ ಯಜ್ಞ, ಭಗವದ್ಗೀತೆ ಸಾಮೂಹಿಕ ಗಾಯನ ಇತ್ಯಾದಿ ನಿರಂತರವಾಗಿ ನಡೆಯಲಿದೆ ಎಂದರು.

ರಾಷ್ಟ್ರೀಯ ಹಬ್ಬದಂತೆ ಆಚರಣೆ
ಶ್ರೀ ಕೃಷ್ಣ ಜನ್ಮಾಷ್ಟಮಿಯನ್ನು ರಾಷ್ಟ್ರೀಯ ಹಬ್ಬದಂತೆ ಆಚರಿಸಬೇಕು. ಶ್ರೀ ಕೃಷ್ಣಮಠದಲ್ಲಿ ಒಂದು ತಿಂಗಳು ನಿರಂತರ ಕಾರ್ಯಕ್ರಮ ರಾಜಾಂಗಣ ಹಾಗೂ ಗೀತಾ ಮಂದಿರದಲ್ಲಿ ನಡೆಯಲಿದೆ ಎಂದರು.
ಶ್ರೀ ಮಠದ ದಿವಾನ ನಾಗರಾಜ ಆಚಾರ್ಯ ಮಾತನಾಡಿ, ಆ.1ರಂದು ರಾಜಾಂಗಣದಲ್ಲಿ ಶ್ರೀ ಕೃಷ್ಣ ಮಾಸೋತ್ಸವಕ್ಕೆ ಅದಮಾರು ಮಠಾಧೀಶರಾದ ಶ್ರೀ ವಿಶ್ವಪ್ರಿಯ ತೀರ್ಥ ಶ್ರೀಪಾದರು, ಪುತ್ತಿಗೆ ಮಠಾಧೀಶರಾದ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು, ಭಂಡಾರಕೇರಿ ಮಠಾಧೀಶರಾದ ಶ್ರೀ ವಿದ್ಯೇಶತೀರ್ಥ ಶ್ರೀಪಾದರು, ಪುತ್ತಿಗೆ ಮಠದ ಕಿರಿಯ ಯತಿ ಶ್ರೀ ಸುಶ್ರೀಂದ್ರತೀರ್ಥ ಶ್ರೀಪಾದರ ದಿವ್ಯ ಉಪಸ್ಥಿತಿಯಲ್ಲಿ ನೆರವೇರಲಿದೆ ಎಂದರು.

ಶ್ರೀಮಠದ ರಮೇಶ್‌ ಭಟ್‌ ಅವರು ಕ್ರೀಡೋತ್ಸವ, ಸಾಂಸ್ಕೃತಿಕ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ನೀಡಿದರು. ಶ್ರೀ ಮಠದ ಪ್ರಸನ್ನ ಆಚಾರ್ಯ, ರಾಘವೇಂದ್ರ ಆಚಾರ್ಯ ಉಪಸ್ಥಿತರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next