Advertisement

Udupi ಪ್ರತ್ಯೇಕ ಕಳ್ಳತನ ಪ್ರಕರಣ: ಆರೋಪಿಗೆ ಶಿಕ್ಷೆ

06:33 PM Oct 21, 2023 | Team Udayavani |

ಉಡುಪಿ: ಪ್ರತ್ಯೇಕ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿ ಆರೋಪಿಗೆ ತಲಾ 6 ತಿಂಗಳ ಶಿಕ್ಷೆ ಹಾಗೂ ತಲಾ 4 ಸಾವಿರ ರೂ.ದಂಡ ವಿಧಿಸಿ ನ್ಯಾಯಾಧೀಶ ಪಿ.ಆರ್‌.ಯೋಗೀಶ್‌ ಅವರು ಅ. 21ರಂದು ತೀರ್ಪು ನೀಡಿದರು.

Advertisement

ಪ್ರಕರಣ ಒಂದರ ಆರೋಪಿ ರಾಜೇಶ ನಾಯ್ಕ 2020ರಲ್ಲಿ ಇಂದ್ರಾಳಿಯ ಪಂಚದುರ್ಗಾಪರಮೇಶ್ವರಿ ದೇವಸ್ಥಾನದ ಉತ್ತರ ಬದಿಯ ಬಾಗಿಲಿಗೆ ಹಾಕಿದ ಬೀಗವನ್ನು ಒಡೆದು ದೇವಸ್ಥಾನದ ಒಳ ಪ್ರವೇಶಿಸಿ ಗರ್ಭಗುಡಿಯ ಹೊರಗಡೆ ಇಟ್ಟಿದ್ದ ಗಣಪತಿ ದೇವರ ಕಾಣಿಕೆಯ ಹುಂಡಿಯನ್ನು ಕಬ್ಬಿಣದ ರಾಡ್‌ನಿಂದ ಕಿತ್ತು ಅದರಲ್ಲಿದ್ದ ಸುಮಾರು 10 ಸಾವಿರ ರೂ.ಕಾಣಿಕೆಯನ್ನು ಕಳ್ಳತನ ಮಾಡಿದ್ದ. ಎರಡನೇ ಪ್ರಕರಣದಲ್ಲಿ ಹಿರೇಬೆಟ್ಟು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಒಳಪಟ್ಟ 80 ಬಡಗಬೆಟ್ಟು ಉಪಕೇಂದ್ರಕ್ಕೆ ಸಂಬಂಧಿಸಿದ ವಸತಿಗೃಹದ ಹಿಂಬಾಗಿಲನ್ನು ಆರೋಪಿ ರಾಜೇಶ ನಾಯ್ಕ ತೆರೆದು ವಸತಿ ಗೃಹದ ಒಳಗೆ ಪ್ರವೇಶಿಸಿ ಗಾದ್ರೇಜ್‌ನಲ್ಲಿರುವ ಚಿನ್ನದ ಸರ ಮತ್ತು ಬೆಳ್ಳಿಯ ಕಾಲಿನ ಚೈನನ್ನು ಕಳ್ಳತನ ಮಾಡಿದ್ದ. 2020ರಲ್ಲಿ ನಡೆದಿದ್ದ ಈ ಎರಡೂ ಪ್ರಕರಣಗಳು ಮಣಿಪಾಲ ಠಾಣೆಯಲ್ಲಿ ದಾಖಲಾಗಿ ದೋಷಾರೋಪಣೆ ಪಟ್ಟಿಯನ್ನು ಸಲ್ಲಿಸಲಾಗಿತ್ತು.

ಉಡುಪಿಯ ಹೆಚ್ಚುವರಿ ಸಿಜೆ ಮತ್ತು ಎಸಿಜೆಎಂ ನ್ಯಾಯಾಲಯದಲ್ಲಿ ವಿಚಾರಣೆ ನಡೆದಿದ್ದು, ಪ್ರಥಮ ಪ್ರಕರಣದಲ್ಲಿ ಅಭಿಯೋಜನೆಯ ಪರ 11 ಸಾಕ್ಷಿದಾರರನ್ನು ಹಾಗೂ ಎರಡನೇ ಪ್ರಕರಣದಲ್ಲಿ ಅಭಿಯೋಜನೆಯ ಪರ 16 ಸಾಕ್ಷಿದಾರರನ್ನು ವಿಚಾರಣೆಗೆ ಒಳಪಡಿಸಲಾಯಿತು. ಪ್ರಕರಣದ ಸಾಕ್ಷ್ಯ ಹಾಗೂ ಪೂರಕ ಸಾಕ್ಷ್ಯ ಹಾಗೂ ವಾದ-ವಿವಾದವನ್ನು ಆಲಿಸಿ ಆರೋಪಿಯ ವಿರುದ್ಧ ಪ್ರಕರಣ ಸಾಬೀತಾಗಿದೆ ಎಂದು ತೀರ್ಮಾನಿಸಿ ಶಿಕ್ಷೆ ಪ್ರಕಟಿಸಲಾಯಿತು.

ಸರಕಾರದ ಪರವಾಗಿ ಹಿರಿಯ ಸಹಾಯಕ ಸರಕಾರಿ ಅಭಿಯೋಜಕ ಬದರೀನಾಥ್‌ ನಾಯರಿ ವಾದ ಮಂಡಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next