ಉಡುಪಿ: ಎಲ್ಲ ಧರ್ಮವನ್ನು ಸಮಾನವಾಗಿ ಕಾಣಬೇಕು ಎನ್ನುವುದು ಶ್ರೀಕೃಷ್ಣ ಗೀತೆಯಲ್ಲಿ ತಿಳಿಸಿದ್ದಾನೆ. ಧರ್ಮಗ್ರಂಥಗಳು ಮನೆಯೊಳಗೆ ಇರಬೇಕು. ಮನೆಯಿಂದ ಹೊರಗೆ ನಮ್ಮನ್ನು ಸಂವಿಧಾನ ಮುನ್ನೆಡೆಸಬೇಕು. ಸಂವಿಧಾನದ ಜತೆಗೆ ಭಗವದ್ಗೀತೆಯನ್ನು ಕೊಂಡೊಯ್ಯಲು ಯಾವುದೇ ಅಡ್ಡಿ ಆತಂಕ ಬರದು. ಸಂವಿಧಾನವನ್ನು ಪೂರ್ಣವಾಗಿ ಬಲ್ಲವರು ಇದನ್ನು ಒಪ್ಪುತ್ತಾರೆ ಎಂದು ಹೈಕೋರ್ಟ್ ನ್ಯಾಯಮೂರ್ತಿ ವಿ. ಶ್ರೀಶಾನಂದ ಅವರು ಹೇಳಿದರು.
ಶ್ರೀ ಕೃಷ್ಣ ಮಠ, ಪರ್ಯಾಯ ಶ್ರೀ ಪುತ್ತಿಗೆ ಮಠದ ವತಿಯಿಂದ ನಡೆಯುತ್ತಿರುವ ಬೃಹತ್ ಗೀತೋತ್ಸವದ ಅಂಗವಾಗಿ ರಾಜಾಂಗಣದಲ್ಲಿ ಬುಧವಾರ ನ್ಯಾಯಾಂಗದಲ್ಲಿ ಭಗವದ್ಗೀತೆಯ ಪ್ರಸ್ತುತತೆ ಎಂಬ ವಿಷಯದಲ್ಲಿ ಅವರು ಮಾತನಾಡಿದರು.
ಪಾಪಕೃತ್ಯ ಮಾಡಿದವರಿಗೆ ತೀರ್ಪು ನೀಡುವಾಗ ಕರುಣೆಗೆ ಜಾಗ ಕೊಡಬಾರದು. ತೀರ್ಪನ್ನು ತ್ರಿಕರ್ಣ ಶುದ್ಧಿಯಿಂದ ನೀಡಬೇಕು. ಅಂಧಾನುಕರಣೆ ಅಥವಾ ಅಂಧ ಅಂತಃಕರಣದಿಂದಲೂ ನೀಡಬಾರದು. ಎಲ್ಲ ಕ್ಲಿಷ್ಟ ಪರಿಸ್ಥಿತಿಯನ್ನು ಹೇಗೆ ನಿಭಾಯಿಸಬೇಕು ಎಂಬುದನ್ನು ಭಗವದ್ಗೀತೆಯಲ್ಲಿ ಉತ್ತರವಿದೆ. ಪಾಸಿಟಿವ್ ಸೈಕಾಲಾಜಿಕಲ್ ಟ್ರೀಟ್ಮೆಂಟ್ ಶ್ರೀ ಕೃಷ್ಣ ಭಗವದ್ಗೀತೆಯಲ್ಲಿ ನಮಗೆ ಉಣಬಡಿಸಿದ್ದಾನೆ ಎಂದು ವಿಶ್ಲೇಷಿಸಿದರು.
ಸಿನೆಮಾ, ಧಾರಾವಾಹಿಗಳು ನಮ್ಮ ನ್ಯಾಯಾಲಯ, ಪೊಲೀಸ್ ವ್ಯವಸ್ಥೆಯನ್ನು ತಪ್ಪಾಗಿಸಿ ಬಿಂಬಿಸಿದೆ, ಇದಕ್ಕೂ ಹೆಚ್ಚಾಗಿ ಬಹು ಜನರ ಧರ್ಮವನ್ನು ಸರಿಪಡಿಸುತ್ತೇವೆ ಎನ್ನುತ್ತಾಲೇ ಇನ್ನಷ್ಟು ತಪ್ಪಾಗಿ ತೋರಿಸಲಾಗುತ್ತಿದೆ. ನ್ಯಾಯಾಲಯದಲ್ಲಿ ಭಗವದ್ಗೀತೆ ಮೇಲೆ ಪ್ರಮಾಣ ಮಾಡುವ ಸನ್ನಿವೇಶ ಸದಾ ಬರುವುದಿಲ್ಲ. ಅದು ಒಂದು ಭಾಗವಾಗಿ ಕಾಣಸಿಗುತ್ತದೆ. ಪಾಪ ಕರ್ಮ ಮಾಡಿದವನಿಗೂ ಭವಿಷ್ಯವಿದೆ. ಹಾಗಂತ ಅಂತಃಕರ್ಣ ಮರೆತು ತೀರ್ಪು ನೀಡುವುದಲ್ಲ ಎಂದರು.
ಭಗವದ್ಗೀತೆ ಎಲ್ಲ ರೀತಿಯ ಖಿನ್ನತೆಗೆ ಭಗವದ್ಗೀತೆಯಲ್ಲಿ ಪರಿಹಾರದ ಉತ್ತರವಿದೆ. ಗೀತೆ ಒಂದು ರೀತಿಯಲ್ಲಿ ಯುನಿವರ್ಸಲ್ ಚಾರ್ಜರ್ ಇದ್ದಂತೆ. ಎಲ್ಲದಕ್ಕೂ ಅನ್ವಯಿಸಿ ಪರಿಹಾರ ಕಂಡುಕೊಳ್ಳಬಹುದು ಎಂದು ಹೇಳಿದರು.
ವಕೀಲ ಚಿರಂಜೀವಿ ಭಟ್, ಪತ್ರಕರ್ತೆ ಶೋಭಾ ಎಂ.ಸಿ. ಮಳವಳ್ಳಿ ಸಂವಾದ ನಡೆಸಿಕೊಟ್ಟರು.
ನ್ಯಾ| ವಿ.ಶ್ರೀಶಾನಂದ ಅವರಿಗೆ ಪುತ್ತಿಗೆ ಮಠಾ ಧೀಶರಾದ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು, ಕಿರಿಯ ಯತಿ ಶ್ರೀ ಸುಶ್ರೀಂದ್ರತೀರ್ಥರು ಶ್ರೀ ಕೃಷ್ಣಾನುಗ್ರಹ ಪ್ರಶಸ್ತಿ ನೀಡಿ ಅನುಗ್ರಹಿಸಿದರು.
ಐದು ಗಂಟೆಯಲ್ಲಿ ಗೀತೆ ಬರೆದ
ಐದು ಗಂಟೆಯಲ್ಲಿ ಭಗವದ್ಗೀತೆಯ ಎಲ್ಲ ಶ್ಲೋಕಗಳನ್ನು ರಾಜಾಂಗಣದಲ್ಲೇ ಕೂತು ಬರೆದ ಸುಶಾಂತ್ ಬ್ರಹ್ಮಾವರ ಅವರನ್ನು ಶ್ರೀಪಾದರು ಗೌರವಿಸಿದರು.
ಮಹಿತೋಷ್ ಆಚಾರ್ಯ ಸ್ವಾಗತಿಸಿ ನಿರೂಪಿಸಿದರು.
ಭಗವದ್ಗೀತೆ ಜಡ್ಜ್ಮೆಂಟ್ ಗ್ರಂಥ: ಪುತ್ತಿಗೆ ಶ್ರೀ
ಪುತ್ತಿಗೆ ಮಠಾಧೀಶರಾದ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು ಅನುಗ್ರಹಿಸಿ, ಭಗವದ್ಗೀತೆ ಆಧಾರದಲ್ಲಿ ಏನೇ ತೀರ್ಮಾನ ತೆಗೆದುಕೊಂಡರೂ ಅದು ಶ್ರೇಷ್ಠ, ಸಮರ್ಥವಾಗಿರುವುದು. ಪ್ರತಿಯೊಬ್ಬರು ತೀರ್ಮಾನ ತೆಗೆದುಕೊಳ್ಳುವಾಗಲೇ ಎಡುವುದು. ಜೀವನ ತೀರ್ಪು, ತೀರ್ಮಾನಗಳ ಸರಮಾಲೆಯಾಗಿದೆ. ತೀರ್ಮಾನ ತೆಗೆದುಕೊಳ್ಳಲು ಇರುವ ಆಧಾರವೇ ಭಗವದ್ಗೀತೆ. ಧರ್ಮ, ಸತ್ಯ ಇತ್ಯಾದಿಗಳನ್ನು ಏನು ಎಂಬುದು ತೀರ್ಮಾನ ಮಾಡುವುದು ಕಷ್ಟ. ಎಲ್ಲದಕ್ಕೂ ಆದರ್ಶಪ್ರಾಯ ಭಗವದ್ಗೀತೆ. ಹೀಗಾಗಿಯೇ ಇದು ಜಡ್ಜಮೆಂಟ್ ಗ್ರಂಥ ಎಂದರು.
ಆತ್ಮ ಸಾಕ್ಷಿಯೇ ಅಂತಿಮ ಸತ್ಯ. ಆತ್ಮಸಾಕ್ಷಿ ಕೊಂದವರಿಗೆ ಸತ್ಯ ಹಾಗೂ ಧರ್ಮದ ಬಾಗಿಲು ಮುಚ್ಚಿದ್ದಂತೆ. ಆತ್ಮಸಾಕ್ಷಿಗೆ ಬೆಲೆ ಕೊಟ್ಟಾಗ ಮಾತ್ರ ಅದು ಸದಾ ಜಾಗೃತವಾಗಿರುತ್ತದೆ. ಆತ್ಮಸಾಕ್ಷಿಯಲ್ಲಿ ಭಗವಂತ ಇದ್ದಾನೆ. ಭಗವಂತ ಮತ್ತು ಆತ್ಮಸಾಕ್ಷಿಯೇ ಸತ್ಯದ ಆಧಾರ. ದೇವರು, ಧರ್ಮ, ಸಂಸ್ಕೃತಿಯ ಪರಿಜ್ಞಾನ ನ್ಯಾಯಾಧಿಧೀಶರಿಗೆ ಇರಬೇಕು. ಸಂಕೀರ್ಣ ಹಾಗೂ ಕ್ಲಿಷ್ಟವಾದ ಪ್ರಸ್ತುತ ಪರಿಸ್ಥಿತಿಯಲ್ಲಿ ನಾವಿದ್ದೇವೆ. ನ್ಯಾಯಂಗ ಒಂದೇ ಭರವಸೆ. ರಾಜಕೀಯ ಸೇರಿ ಬೇರೆಲ್ಲ ಕ್ಷೇತ್ರ ಹೊಲಸು ಎದ್ದಿದ್ದೆ. ನ್ಯಾಯಾಂಗ ಸರಿಯಾಗಿದ್ದರೆ ಉಳಿದೆಲ್ಲ ಕ್ಷೇತ್ರ ಸರಿ ಮಾಡಲು ಸಾಧ್ಯ ಎಂದು ಹೇಳಿದರು.
ಬೃಹತ್ ಗೀತೋತ್ಸವದ ಅಂಗವಾಗಿ ಡಿ.26ರ ಸಂಜೆ 5.30ಕ್ಕೆ ರಾಜಾಂಗಣದಲ್ಲಿ ಚಿತ್ರಕಲೆ ಮತ್ತು ಭಗವದ್ಗೀತೆ ಕುರಿತು ಕಲಾವಿದ ಗಂಜೀಫ ರಘುಪತಿ ಭಟ್ ಉಪನ್ಯಾಸ ನೀಡಲಿದ್ದಾರೆ.