ಉಡುಪಿ: ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಆಶ್ರಯದಲ್ಲಿ ಉಡುಪಿ ಪತ್ರಿಕಾ ಭವನ ಸಮಿತಿಯ ಸಹಯೋಗದೊಂದಿಗೆ ಬ್ರಹ್ಮಗಿರಿಯ ಐಎಂಎ ಭವನದಲ್ಲಿ ಸೋಮವಾರ ನಡೆದ ಪತ್ರಿಕಾ ದಿನಾಚರಣೆಯಲ್ಲಿ ಹಿರಿಯ ಪತ್ರಕರ್ತರಿಗೆ ಸಮ್ಮಾನ ಹಾಗೂ ಪ್ರತಿಭಾ ಪುರಸ್ಕಾರ ನಡೆಯಿತು. ಕನ್ನಡದ ಮೊದಲ ಪತ್ರಿಕ ಮಂಗಳೂರ ಸಮಾಚಾರದ ಮೂಲ ಪ್ರತಿಯ ಅನಾವರಣ ನಡೆಯಿತು.
ಮಣಿಪಾಲ ಎಂಐಸಿಯ ಟೆವಿಶಜನ್ ಮತ್ತು ಫಿಲ್ಮ್ ಪ್ರೊಡಕ್ಷನ್ ವಿಭಾಗದ ಪ್ರೊಫೆಸರ್ ಆಫ್ ಪ್ರಾಕ್ಟೀಸ್ ಸತ್ಯಬೋಧ ಜೋಶಿ ಮಾತನಾಡಿ, ಪತ್ರಕರ್ತರು ದೊರೆತ ಅವಕಾಶವನ್ನು ಬಳಸಿಕೊಳ್ಳಬೇಕು. ನಮ್ಮ ಕೆಲಸದ ಜತೆಗೆ ಇತರರ ಸಮಸ್ಯೆಗೆ ಮಿಡಿಯುವುದು ಅತೀ ಮುಖ್ಯ. ನಮ್ಮ ಸೇವೆಯ ಮೂಲಕವೇ ಸಮಾಜವನ್ನು ತಿದ್ದುವ ಕಾರ್ಯ ಮಾಡಬಹುದಾಗಿದೆ ಎಂದರು.
ಪೊಲೀಸ್ ತನಿಖೆಯಲ್ಲಿ ಮಾಧ್ಯಮಗಳ ಪಾತ್ರದ ಕುರಿತು ಜಿಲ್ಲಾ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಎಸ್.ಟಿ.ಸಿದ್ದಲಿಂಗಪ್ಪ ಮಾತನಾಡಿ, ಮಾಧ್ಯಮಗಳು ಜನರ ಭಾವನೆಗಳ ಕಡೆ ಹೆಚ್ಚು ಗಮನ ಕೊಡದೆ ಸಾಮಾಜಿಕ ಜವಾಬ್ದಾರಿಯನ್ನು ಅರಿತು ಕೆಲಸ ಮಾಡಬೇಕಾಗಿದೆ ಎಂದರು.
ಸಂಘದ ಅಧ್ಯಕ್ಷ ರಾಜೇಶ್ ಶೆಟ್ಟಿ ಅಲೆವೂರು ಅಧ್ಯಕ್ಷತೆ ವಹಿಸಿದ್ದರು. ಐಎಂಎ ಉಡುಪಿ ಕರಾವಳಿ ಅಧ್ಯಕ್ಷೆ ಡಾ| ರಾಜಲಕ್ಷ್ಮೀ, ಬಡಗಬೆಟ್ಟು ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯ ಅಧ್ಯಕ್ಷ ಜಯಕರ ಶೆಟ್ಟಿ ಇಂದ್ರಾಳಿ, ಉಜ್ವಲ್ ಗ್ರೂಪ್‌ನ ಆಡಳಿತ ನಿರ್ದೇಶಕ ಅಜಯ್ ಪಿ.ಶೆಟ್ಟಿ ಮಾತನಾಡಿದರು.
ಎಸೆಸೆಲ್ಸಿ ಹಾಗೂ ಪಿಯುಸಿ ಪರೀಕ್ಷೆಯಲ್ಲಿ ಶೇ.80ಕ್ಕಿಂತ ಹೆಚ್ಚು ಅಂಕ ಗಳಿಸಿದ ಸಂಘದ ಸದಸ್ಯರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ವಿತರಿಸಲಾಯಿತು.
ಹಿರಿಯ ಪತ್ರಕರ್ತ ಮಂಜುನಾಥ ಶೆಣೈ ಜನ್ನಾಡಿ ಅವರಿಗೆ ಪತ್ರಿಕಾ ದಿನದ ಗೌರವ ಸಲ್ಲಿಸಲಾಯಿತು. ಉದಯವಾಣಿಯ ನಿವೃತ್ತ ಉಪಸಂಪಾದಕ ಜಯಾನಂದ ಅವರನ್ನು ಸಮ್ಮಾನಿಸಲಾಯಿತು. ಸಂಘದ ಪದಾಧಿ ಕಾರಿಗಳು ಉಪಸ್ಥಿತರಿದ್ದರು.