Advertisement

ಉಡುಪಿ ಪೂರ್ಣಪ್ರಜ್ಞ ಕಾಲೇಜಿನ ನಿವೃತ್ತ ಪ್ರಾಚಾರ್ಯ ಡಾ||ಎಸ್.ಎಲ್.ಕರಣಿಕ್ ನಿಧನ‌

10:15 AM Mar 23, 2021 | Team Udayavani |

ಉಡುಪಿ:  ಪೂರ್ಣಪ್ರಜ್ಞ ಕಾಲೇಜಿನಲ್ಲಿ ಸುದೀರ್ಘ ಅವಧಿ ಸಸ್ಯಶಾಸ್ತ್ರ ಪ್ರಾಧ್ಯಾಪಕ, ವಿಭಾಗ ಮುಖ್ಯಸ್ಥ ಮತ್ತು ಪ್ರಾಚಾರ್ಯರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದ ಡಾ|| ಎಸ್.ಎಲ್.ಕರಣಿಕ್ (81 ವ)  ಮಂಗಳವಾರ ಮುಂಜಾನೆ ಹೃದಯಾಘಾತದಿಂದ ನಿಧನರಾಗಿದ್ದಾರೆ .

Advertisement

ಮೂಲತಃ ಕುಂದಾಪುರ ತಾಲೂಕಿನ ಸುಳ್ಸೆಯವರಾದ ಡಾ|| ಎಸ್.ಎಲ್.ಕರಣಿಕ್ ಅವರು, ನಿವೃತ್ತಿ ಬಳಿಕ ಅದಮಾರು ಮಠದ ಪೂರ್ಣಪ್ರಜ್ಞ ಶಿಕ್ಷಣ ಪ್ರತಿಷ್ಠಾನದ ಆಡಳಿತಾಧಿಕಾರಿಯಾಗಿಯೂ ಸೇವೆ ಸಲ್ಲಿಸಿದ್ದರು. ಸಸ್ಯ ಸಂಕುಲ ಸಂರಕ್ಷಣೆ ಹಾಗೂ ಪರಿಸರ ರಕ್ಷಣೆಯ ಜಾಗೃತಿ ಅಭಿಯಾನಗಳಲ್ಲಿ ಮಾರ್ಗದರ್ಶನ ನೀಡಿದ್ದರು.

ಶ್ರೀರಾಮಚಂದ್ರಾಪುರ ಮಠದ ವತಿಯಿಂದ ನಡೆದ ಭಾರತೀಯ ಗೋಯಾತ್ರೆ, ವಿಶ್ವ ಗೋ ಸಮ್ಮೇಳನ ಹಾಗೂ ಇನ್ನಿತರ ದೇಶಿ ಗೋರಕ್ಷಣೆಯ ಅಭಿಯಾನಗಳಲ್ಲಿ ಅತ್ಯಂತ ಸಕ್ರಿಯರಾಗಿ ಶ್ರಮಿಸಿದ್ದರು. ಹವ್ಯಕ ಪರಿಷತ್ ಉಡುಪಿಯ ಅಧ್ಯಕ್ಷ, ಕರಂಬಳ್ಳಿ ವಲಯ ಬ್ರಾಹ್ಮಣ ಸಮಿತಿ ಉಪಾಧ್ಯಕ್ಷ, ಕರಂಬಳ್ಳಿ ವೆಂಕಟರಮಣ ದೇವಸ್ಥಾನ ಜೀರ್ಣೋದ್ಧಾರ ಸಮಿತಿ ಉಪಾಧ್ಯಕ್ಷ, ಮಲ್ಲಂಪಳ್ಳಿ ವಿಷ್ಣುಮೂರ್ತಿ ಕ್ಷೇತ್ರಾಭಿವೃದ್ಧಿ ಸಮಿತಿ ಉಪಾಧ್ಯಕ್ಷ ಹಾಗೂ ಉಡುಪಿಯ ಪರ್ಯಾಯೋತ್ಸವಗಳಲ್ಲೂ ಪದಾಧಿಕಾರಿಯಾಗಿ ಕಾರ್ಯನಿರ್ವಹಿಸಿದ್ದರು .

ಇದನ್ನೂ ಓದಿ:ಪುತ್ತೂರು: ತರಕಾರಿ ಕೃಷಿಯ ಭೀಷ್ಮ ಧರ್ಣಪ್ಪ ಗೌಡ ಕುಂಟ್ಯಾನ ಇನ್ನಿಲ್ಲ

ಮೃತರು ಪತ್ನಿ, ಇಬ್ಬರು ಹೆಣ್ಣು ಮತ್ತು ಓರ್ವ ಪುತ್ರನನ್ನು ಅಗಲಿದ್ದಾರೆ.

Advertisement

ಡಾ|| ಎಸ್.ಎಲ್.ಕರಣಿಕ್ ಅವರ ನಿಧನಕ್ಕೆ ಅದಮಾರು ಉಭಯ ಶ್ರೀಗಳು, ಪೇಜಾವರ ಶ್ರೀಗಳು, ಶ್ರೀ ರಾಘವೇಶ್ವರ ಸ್ವಾಮೀಜಿ, ಶಾಸಕ ಕೆ ರಘುಪತಿ ಭಟ್,  ಬೈಕಾಡಿ ಸುಪ್ರಸಾದ ಶೆಟ್ಟಿ,  ಹವ್ಯಕ ಪರಿಷತ್ ಉಡುಪಿ ಕರಂಬಳ್ಳಿ ವಲಯ ಬ್ರಾಹ್ಮಣ ಸಮಿತಿ ಮೊದಲಾದವರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ .

ಮೃತರ ಪಾರ್ಥಿವ ಶರೀರವನ್ನು ಇಂದು ಮುಂಜಾನೆ 11 .30 ಕ್ಕೆ ದೊಡ್ಡಣಗುಡ್ಡೆ ವಿ ಎಮ್ ನಗರದ ಎರಡನೇ ಕ್ರಾಸ್ ನಲ್ಲಿರುವ ಅವರ ಸ್ವಗೃಹಕ್ಕೆ ತರಲಾಗುವುದು. ಅಲ್ಲಿ ಮಧ್ಯಾಹ್ನ ಸುಮಾರು 1 ಗಂಟೆಯ ತನಕ ಅಂತಿಮ ದರ್ಶನಕ್ಕೆ ಅವಕಾಶವಿದ್ದು, ಬಳಿಕ ಹುಟ್ಟೂರು ಸುಳ್ಸೆಯಲ್ಲಿ ಅಂತಿಮ ಸಂಸ್ಕಾರ ನಡೆಯಲಿದೆ ಎಂದು ಅವರ ಕುಟುಂಬಸ್ಥರು ತಿಳಿಸಿದ್ದಾರೆ .

Advertisement

Udayavani is now on Telegram. Click here to join our channel and stay updated with the latest news.

Next