Advertisement

ವಿಶ್ವದ ಅತಿ ದೊಡ್ಡ ವಿಮಾನ ಇಳಿಸಿದ ಉಡುಪಿಯ ಪೈಲಟ್‌

11:42 PM Oct 18, 2022 | Team Udayavani |

ಬೆಂಗಳೂರು: ವಿಶ್ವದ ಅತಿದೊಡ್ಡ ವಿಮಾನ ಮತ್ತು ಅತ್ಯಧಿಕ ಪ್ರಯಾಣಿಕರನ್ನು ಹೊತ್ತುತಂದು ಮೊದಲ ಬಾರಿಗೆ ಕನ್ನಡದ ನೆಲದಲ್ಲಿ ಸ್ವತಃ ಕನ್ನಡಿಗ ಪೈಲಟ್‌ವೊಬ್ಬರು ಲ್ಯಾಂಡ್‌ಮಾಡಿದ ಕ್ಷಣವದು. ಭೂಸ್ಪರ್ಶ ಮಾಡುತ್ತಿದ್ದಂತೆ ಅದರೊಳಗಿಂದ ಮೊಳಗಿದ ಉದ್ಘೋಷ (ಅನೌನ್ಸ್‌ ಮೆಂಟ್‌) ಕೂಡ ಕನ್ನಡವೇ ಆಗಿತ್ತು!

Advertisement

ಹೌದು, ಅ. 14ರಂದು ದುಬಾೖ ನಿಂದ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದ ಎಮಿರೇಟ್ಸ್‌ನ ದೈತ್ಯ ನಾಗರಿಕ ವಿಮಾನ ಎ380 ಅನ್ನು ಕನ್ನಡದ ನೆಲದಲ್ಲಿ ಮೊದಲ ಬಾರಿಗೆ ಲ್ಯಾಂಡ್‌ ಮಾಡಿದ್ದು ಕನ್ನಡಿಗ ಸಂದೀಪ್‌ ಪ್ರಭು.

ಉಡುಪಿ ಮೂಲದವರಾದ ಸಂದೀಪ್‌ ಪ್ರಭು ವಿಮಾನ ಪ್ರಯಾಣಿಕರನ್ನು ಕನ್ನಡದಲ್ಲೇ ಸ್ವಾಗತಿಸಿ ಗಮನ ಸೆಳೆದರು. ಅವರ ಕನ್ನಡ ಪ್ರೀತಿಗೆ ಸಾಮಾಜಿಕ ಜಾಲತಾಣದಲ್ಲೂ ಶ್ಲಾಘನೆ ವ್ಯಕ್ತವಾಗಿದೆ. ಅವರ ಸಹೋದರ ಸತ್ಯೇಂದ್ರ ಪ್ರಭು ಟ್ವಿಟರ್‌ನಲ್ಲಿ ವಿಶ್ವದ ಅತಿದೊಡ್ಡ ವಿಮಾನವು ಮೊದಲ ಬಾರಿಗೆ ಬೆಂಗಳೂರಿಗೆ ಬಂದಿಳಿದಿದ್ದು, ಇದನ್ನು ಒಬ್ಬ ಕನ್ನಡಿಗ ನನ್ನ ಸಹೋದರ ಸಂದೀಪ್‌ ಪ್ರಭು ಯಶಸ್ವಿಯಾಗಿ ಲ್ಯಾಂಡ್‌ ಮಾಡಿದ್ದಾರೆ. ಈ ವೇಳೆ ಪ್ರಯಾಣಿಕರನ್ನು ಕನ್ನಡದಲ್ಲೇ ಸ್ವಾಗತಿಸಿದ್ದಾರೆ. ಇದು ವೈಯಕ್ತಿಕವಾಗಿ ನನಗೆ ಮತ್ತು ಕನ್ನಡಿಗರಿಗೆ ಹೆಮ್ಮೆ ತರುವ ವಿಚಾರ. ಪ್ರಯಾಣಿಕರನ್ನು ಅಧಿಕೃತ ಮತ್ತು ವೃತ್ತಿಪರವಾಗಿ ಕನ್ನಡದಲ್ಲಿ ಸ್ವಾಗತಿಸುವ ಸಲುವಾಗಿ ಸಂಭಾಷಣೆಗೆ ತಯಾರಿ ಮಾಡಲು ಅವರು ತನ್ನ ಹೆತ್ತವರಾದ ಆರತಿ ಪ್ರಭು ಮತ್ತು ಶಿವರಾಯ ಪ್ರಭು ಅವರು ಮಾರ್ಗದರ್ಶನ ಮಾಡಿದ್ದರು ಎಂದು ಹೇಳಿಕೊಂಡಿದ್ದಾರೆ. ಇದಕ್ಕೆ ಹಲವಾರು ಜನ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಈ ವಿಮಾನ ಅ. 30ರಿಂದ ನಿತ್ಯ ದುಬಾೖಗೆ ಹೋಗಲಿದೆ ಎಂದು ಎಮಿರೇಟ್ಸ್‌ ಸಂಸ್ಥೆ ಹೇಳಿತ್ತು. ಆದರೆ 2 ವಾರ‌ ಮುಂಚಿತವಾಗಿ ಸೇವೆ ಆರಂಭಿಸಿತು.

ಉಡುಪಿಯ ಅಲೆವೂರಿನವರು
ಉಡುಪಿ: ಅಲೆವೂರು ಮೂಲದ ಪೈಲಟ್‌ ಸಂದೀಪ್‌ ಪ್ರಭು ವಿಶ್ವ ಅತೀದೊಡ್ಡ ಪ್ರಯಾಣಿಕ ವಿಮಾನ ಎಮಿರೇಟ್ಸ್‌ ಏರ್‌ಬಸ್‌ ಎ380 ಪರೀಕ್ಷಾ ರ್ಥ ಹಾರಾಟವನ್ನು ಯಶಸ್ವಿಯಾಗಿ ಮುನ್ನಡೆಸಿದ್ದಾರೆ. ಅಲೆವೂರಿನ ಮೂಲದ ಆರತಿ ಪ್ರಭು ಮತ್ತು ಡಾ| ಶಿವರಾಯ ಪ್ರಭು ದಂಪತಿಯ 2ನೇ ಪುತ್ರ ಸಂದೀಪ್‌ ಕಳೆದ 15 ವರ್ಷದಿಂದ ಪೈಲೆಟ್‌ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಮಂಗಳೂರಿನ ಸೈಂಟ್‌ ಅಲೋಶಿಯಸ್‌ನಲ್ಲಿ 7ನೇ ತರಗತಿವರೆಗೆ ಓದಿದ ಇವರು ಬಳಿಕ ಬೆಂಗಳೂರು, ಅನಂತರ ಫಿಲಿಫಿನ್ಸ್‌ ದೇಶದಲ್ಲಿ ಪೈಲಟ್‌ ತರಬೇತಿ ಪಡೆದರು. ಫ್ರಾನ್ಸ್‌ನಲ್ಲಿ ಉನ್ನತ ಕೋರ್ಸ್‌ ಪೂರೈಸಿರುವ ಇವರು, ದುಬಾೖನ ಎಮಿರೇಟ್ಸ್‌ ವಿಮಾನ ಸಂಸ್ಥೆಯಲ್ಲಿ ಕರ್ತವ್ಯಕ್ಕೆ ಸೇರಿದ್ದರು. ಇದೇ ವಿಮಾನವನ್ನು ಈ ಹಿಂದೆ ಮುಂಬಯಿ ವಿಮಾನ ನಿಲ್ದಾಣದಲ್ಲಿ ಉಶಸ್ವಿಯಾಗಿ ಲ್ಯಾಂಡಿಂಗ್‌ ಮಾಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next