Advertisement
ಶ್ರೀಕೃಷ್ಣ ಮಠದಲ್ಲಿ ಕಾರ್ಯಭಾರ ನಡೆಯುವುದೆಲ್ಲಾ ಮುಖ್ಯಪ್ರಾಣನಿಂದ ಎಂಬ ನಂಬಿಕೆ ಇದೆ. ಶ್ರೀ ಮಧ್ವಾಚಾರ್ಯರು ಸುಮಾರು 750 ವರ್ಷಗಳ ಹಿಂದೆ ಶ್ರೀಕೃಷ್ಣನ ವಿಗ್ರಹವನ್ನು ಮಾತ್ರ ಉಡುಪಿಯಲ್ಲಿ ಪ್ರತಿಷ್ಠಾಪಿಸಿದರು. ಆದರೆ ಇಲ್ಲಿನ ಮುಖ್ಯಪ್ರಾಣನನ್ನು ಆಚಾರ್ಯ ಮಧ್ವರು ಪ್ರತಿಷ್ಠಾಪಿಸಲಿಲ್ಲ. ಮಧ್ವರು ವಾಯುದೇವರ ಅವತಾರ ಎಂಬ ನಂಬಿಕೆ ಇರುವುದು ಮುಖ್ಯಪ್ರಾಣನನ್ನು ಪ್ರತಿಷ್ಠಾಪಿಸದೆ ಇರಲು ಕಾರಣವೆನ್ನಬಹುದು ಮತ್ತು ಇದಕ್ಕೆ ಪೂರಕವಾಗಿ ಒಮ್ಮೆ ಮಧ್ವರು ಪೂಜಿಸುವಾಗ ಹನುಮನಾಗಿ ರಾಮನಿಗೂ, ಭೀಮನಾಗಿ ಕೃಷ್ಣನಿಗೂ, ಮಧ್ವರಾಗಿ ವೇದವ್ಯಾಸರಿಗೂ ಪೂಜಿಸುವುದನ್ನು ತ್ರಿವಿಕ್ರಮ ಪಂಡಿತಾಚಾರ್ಯರು ಕಂಡು ಮೂರು ಅವತಾರಗಳ ಮಹಿಮೆ ತಿಳಿಸುವ ವಾಯುಸ್ತುತಿ ರಚಿಸಿದರು. ವಾಯುಸ್ತುತಿಗೆ ಇಂದಿಗೂ ಭಾರೀ ಮಹತ್ವವಿದೆ. ಮಧ್ವರ ಬಳಿಕ ಸುಮಾರು ಎರಡು ಶತಮಾನಗಳ ಬಳಿಕ ಜನಿಸಿದ ಶ್ರೀ ವಾದಿರಾಜ ಸ್ವಾಮಿಗಳು ಮುಖ್ಯಪ್ರಾಣ ಮತ್ತು ಗರುಡನನ್ನು ಪ್ರತಿಷ್ಠಾಪಿಸಿದರು.
ತಮ್ಮ ಪರ್ಯಾಯವಾದ ಬಳಿಕ 1538-39ರ ವೇಳೆ ವಿಜಯನಗರ ಸಾಮ್ರಾಜ್ಯದ ಕಡೆ ಸಂಚಾರಾರ್ಥ ವಾದಿರಾಜರು ತೆರಳುತ್ತಾರೆ. ಆಗ ರಾಜನಾಗಿದ್ದ ಅಚ್ಯುತದೇವರಾಯನ ಸಮಸ್ಯೆಗಳನ್ನು ಬಗೆಹರಿಸಿ 1541-42ರಲ್ಲಿ ಉತ್ತರ ಭಾರತ ಯಾತ್ರೆ ಕೈಗೊಂಡರು. ಆಗ ದಿಲ್ಲಿ, ಬದರಿಗೆ ಹೋದರು. ಅದೇ ವೇಳೆ ಅಯೋಧ್ಯೆಗೆ ತೆರಳಿ ಅಲ್ಲಿ ಉತVನನ ಮಾಡಿಸಿ ಹನುಮ- ಗರುಡನ ವಿಗ್ರಹವನ್ನು ತಂದು ಸುಮಾರು 1545ರ ವೇಳೆ ಪ್ರತಿಷ್ಠೆ ಮಾಡಿದರು. 1548-49ರಲ್ಲಿ ಎರಡನೆಯ ಪರ್ಯಾಯವನ್ನು ನಡೆಸಿದರು.
Related Articles
Advertisement
ಇಷ್ಟು ವಿಷಯ ಮಾತ್ರ ದಾಖಲೆಯಿಂದ ತಿಳಿಯಬಹುದಾಗಿದೆ. ಇಲ್ಲಿ ಕೇವಲ ಮೂರು ಶ್ಲೋಕಗಳಿವೆ. ಇನ್ನೂ ಹೆಚ್ಚಿನ ವಿವರಗಳು ಪರಂಪರೆಯ ರಹಸ್ಯದಿಂದ ತಿಳಿದುಬರುತ್ತವೆ. ಇದನ್ನು ಸೋದೆ ಮಠದ ಹಿಂದಿನ ಮಠಾಧಿಪತಿಗಳು ಹಿಂದಿನವರಿಂದ ಕೇಳಿದಂತೆ ಹೀಗೆ ಹೇಳುತ್ತಿದ್ದರು: ತ್ರೇತಾಯುಗದಲ್ಲಿ ದಶರಥನ ಅರಮನೆಯಲ್ಲಿ ಶ್ರೀ ರಾಮಚಂದ್ರನಿಗೆ ಪಟ್ಟಾಭಿಷೇಕವಾಗುವಾಗ ಸಿಂಹಾಸನದ ಮೆಟ್ಟಿಲಿನ ಬಲಭಾಗದಲ್ಲಿ ಹನುಮಂತ ಮತ್ತು ಎಡಭಾಗದಲ್ಲಿ ಗರುಡನ ಪ್ರತಿಮೆಗಳಿದ್ದವು. ಇದನ್ನು ದಿವ್ಯದೃಷ್ಟಿಯಿಂದ ತಿಳಿದ ವಾದಿರಾಜರು ಉತVನನ ನಡೆಸಿ ಉಡುಪಿಗೆ ತಂದು ಪ್ರತಿಷ್ಠಾಪಿಸಿದರು.
ಇದನ್ನು ಏಕೆ ತಂದು ಪ್ರತಿಷ್ಠಾಪಿಸಿದರು? ಭಗವಂತನಿಗೆ ವಿಶೇಷ ಸೇವೆ ಮಾಡಿದ ದೇವತಾ ರೂಪಗಳಿವು. ರಾಮನನ್ನು ಹನುಮಂತ ಹೊತ್ತುಕೊಂಡ ಕತೆ ರಾಮಾಯಣದಲ್ಲಿ ಕೇಳಿದ್ದೇವೆ. ಕೃಷ್ಣನಾಗಿದ್ದಾಗ ಗರುಡಾರೂಢನಾಗಿದ್ದ ಕತೆ ಕೇಳಿದ್ದೇವೆ. ಹೀಗೆ ಪ್ರಧಾನ ಕಿಂಕರ ದೇವತೆಗಳಾಗಿ ವಾದಿರಾಜರು ಪ್ರತಿಷ್ಠಾಪಿಸಿದರು. ವಾದಿರಾಜರು ಯಾವುದೋ ಒಂದು ಹನುಮ, ಗರುಡ ಪ್ರತಿಮೆ ತಂದದ್ದಲ್ಲ. ಅಯೋಧ್ಯೆಯಲ್ಲಿದ್ದ ಪ್ರತಿಮೆಯನ್ನು ತಂದು ಉತ್ತರ, ದಕ್ಷಿಣದ ಸಂಬಂಧದ ಸೇತು ನಿರ್ಮಿಸಿದರು. ಈ ಸೇತು ನಿರ್ಮಿಸಿದ್ದು ಬಹುತೇಕರಿಗೆ ಗೊತ್ತಿಲ್ಲದಿದ್ದರೂ ಉಡುಪಿ ಶ್ರೀಕೃಷ್ಣಮಠದಲ್ಲಿ ಪೇಜಾವರ ಶ್ರೀಗಳ ಮೂರನೆಯ ಪರ್ಯಾಯ ಅವಧಿಯಲ್ಲಿ (1985 ಅಕ್ಟೋಬರ್ 31, ನವೆಂಬರ್ 1) ಧರ್ಮಸಂಸದ್ ಮೂಲಕ ಅದೇ ಪಥದಲ್ಲಿ ನಿರ್ಣಯ ತಳೆಯಲಾಯಿತು. ಸ್ವಾತಂತ್ರಾé ಅನಂತರ ಅಯೋಧ್ಯೆಯಲ್ಲಿ ರಾಮ ಲಲ್ಲಾನ ವಿಗ್ರಹದ ದರ್ಶನ ಭಾಗ್ಯ ಸಾರ್ವಜನಿಕರಿಗೆ ಇರಲಿಲ್ಲ. ಆಗ ಧರ್ಮಸಂಸತ್ ತಾಲಾ ಖೋಲೋ ನಿರ್ಣಯ ಕೈಗೊಂಡಿತು. ಬಳಿಕ ರಾಜೀವ ಗಾಂಧಿಯವರು ರಾಮನ ದರ್ಶನ ಸಾರ್ವ ಜನಿಕರಿಗೆ ದೊರಕುವಂತೆ ಮಾಡಿದರು. 1992ರ ಡಿಸೆಂಬರ್‌ನಲ್ಲಿ ಅಯೋಧ್ಯಾ ಕರಸೇವೆ ನಡೆದಾಗ ಕರ್ನಾಟಕದವರೂ ಅನೇಕ ಮಂದಿ ತೆರಳಿದ್ದರು. ಪೇಜಾವರ ಶ್ರೀಗಳೂ, ಪಲಿಮಾರು ಹಿಂದಿನ ಮತ್ತು ಈಗಿನ ಶ್ರೀಗಳೂ ಸಹಿತ ಉಡುಪಿಯ ಅನೇಕ ಪೀಠಾಧಿಪತಿಗಳು ಅಯೋಧ್ಯೆಗೆ ತೆರಳಿ ಬಂಧಿತರಾಗಿದ್ದರು. 1992 ಡಿಸೆಂಬರ್ 6ರಂದು ಅಯೋಧ್ಯೆ ರಾಮಜನ್ಮಭೂಮಿ ಸ್ಥಾನದಲ್ಲಿದ್ದ ಹಳೆಯ ಕಟ್ಟಡವನ್ನು ಕೆಡವಿದಾಗ ಪರಿಸ್ಥಿತಿ ಕೈಮೀರಿತ್ತು. ಆ ಹೊತ್ತಿಗೆ ಅಲ್ಲಿದ್ದ ಮೂರ್ತಿಯನ್ನು ಕಾರ್ಯಕರ್ತರು ಕೊಂಡೊಯ್ದರು. ಮರುದಿನ ಬೆಳಗ್ಗೆ ಅದನ್ನು ಕಾರ್ಯಕರ್ತರು ವಾಪಸು ತರುವಾಗ ದಾರಿಯಲ್ಲಿ ಪೇಜಾವರ ಶ್ರೀಗಳು ಮಾತ್ರ ಅಲ್ಲಿ ಸಿಕ್ಕಿದರು. ತತ್‌ಕ್ಷಣ ತಾತ್ಕಾಲಿಕ ಮಂದಿರದಲ್ಲಿಡಬೇಕೆಂದಾಯಿತು. ಮತ್ತಾರನ್ನೂ ಕಾಲವನ್ನೂ ಕಾಯುವ ಸ್ಥಿತಿಯಲ್ಲಿರಲಿಲ್ಲ, ಎಲ್ಲೆಲ್ಲೂ ಬಿಗು ಸ್ಥಿತಿ. ಪೇಜಾವರ ಶ್ರೀಗಳಲ್ಲಿ ಕಾರ್ಯಕರ್ತರು ಕೇಳಿಕೊಂಡಂತೆ ಪೇಜಾವರ ಶ್ರೀಗಳು “ರಾಮಮಂತ್ರವ ಜಪಿಸೋ’ ಎಂಬ ದಾಸರ ಹಾಡಿನಂತೆ ರಾಮಮಂತ್ರವನ್ನು ಜಪಿಸಿ ತಾತ್ಕಾಲಿಕ ಪ್ರತಿಷ್ಠಾಪನೆ ನಡೆಸಿದರು. ಇದಕ್ಕೆ ಸಾಕ್ಷಿಯಾಗಿದ್ದವರು ವಿಶ್ವ ಹಿಂದು ಪರಿಷತ್‌ನ ಅಂತಾರಾಷ್ಟ್ರೀಯ ಕಾರ್ಯಾಧ್ಯಕ್ಷರಾಗಿದ್ದ ಅಶೋಕ್ ಸಿಂಘಾಲ್. ಸಿಂಘಾಲ್ ಕೂಡ ಈಗಿಲ್ಲ. “ಅಂದು ಗಡಿಬಿಡಿಯಲ್ಲಿ ಯಾರೂ ಇರಲಿಲ್ಲ. ಯಾರನ್ನೂ ಹುಡುಕುವ ಸ್ಥಿತಿ ಯಲ್ಲಿರಲಿಲ್ಲ. ನಾನು ಸಿಕ್ಕಿದೆ. ತತ್‌ಕ್ಷಣ ಪ್ರತಿಷ್ಠೆ ಮಾಡಿದೆ. ಬಳಿಕ ಸೈನಿಕರು ಬಂದು ಸ್ಥಳವನ್ನು ವಶಕ್ಕೆ ತೆಗೆದುಕೊಂಡರು’ ಎಂದು ಆಗಿನ ಸನ್ನಿವೇಶವನ್ನು ಪೇಜಾವರ ಶ್ರೀಗಳು ನೆನಪಿಸಿಕೊಳ್ಳುವುದುಂಟು. ಅಂದಿನಿಂದ ಇಂದಿನವರೆಗೆ ಅಯೋಧ್ಯೆಯಲ್ಲಿ ಲಕ್ಷಾಂತರ ಮಂದಿ ದೂರದಿಂದಲಾದರೂ ದರ್ಶನ ಮಾಡಿದ್ದು ಪೇಜಾವರ ಶ್ರೀಗಳ ಕರದಿಂದ ಪ್ರತಿಷ್ಠಾಪನೆಗೊಂಡ ರಾಮಲಲ್ಲಾ ವಿಗ್ರಹ ಎನ್ನುವುದು ವಿಹಿಂಪದವರಿಗೂ, ಅಯೋಧ್ಯೆ ನಿವಾಸಿಗಳಿಗೂ, ಉಡುಪಿಯ ವರಿಗೂ ಗೊತ್ತಿಲ್ಲದ ವಿಷಯ, ಇನ್ನು ಬೇರಾರಿಗೆ ಗೊತ್ತಿದ್ದೀತು? ಒಂದು ರೀತಿ ಯಲ್ಲಿ ಹೇಳುವುದಾದರೆ ವಾದಿರಾಜರು ಉಡುಪಿ ಯಲ್ಲಿ ಅಯೋಧ್ಯೆಯ ಆಂಜನೇಯ, ಗರುಡರನ್ನು ಪ್ರತಿಷ್ಠಾಪಿಸಿದರು, ಐದು ಶತಕದ ಬಳಿಕ ಉಡುಪಿಯ ಪೇಜಾವರ ಶ್ರೀಗಳು ಅಯೋಧ್ಯೆಯಲ್ಲಿ ರಾಮನನ್ನು ಪ್ರತಿಷ್ಠಾಪಿಸಿದರು.
ಈ ಉಡುಪಿ ಅಯೋಧ್ಯಾ ಸಂಬಂಧ ಮತ್ತೆ ಮುಂದುವರಿದು 2017ರ ನವೆಂಬರ್ 24ರಿಂದ 26ರವರೆಗೆ ಉಡುಪಿಯಲ್ಲಿ ಪೇಜಾವರ ಶ್ರೀಗಳ ನೇತೃತ್ವದಲ್ಲಿ ನಡೆದ ಧರ್ಮಸಂಸದ್ ಅಧಿವೇಶನದಲ್ಲಿ ಅಯೋಧ್ಯೆಯಲ್ಲಿ ಭವ್ಯ ಮಂದಿರ ನಿರ್ಮಿಸಲು ಮತ್ತೆ ನಿರ್ಣಯ ತಳೆಯಲಾಯಿತು. ಸುಮಾರು ಐದು ಶತಕಗಳ ಸಂಬಂಧ ನಮಗೆ ಗೊತ್ತಿಲ್ಲದಂತೆ ತನ್ನ ಕಾರ್ಯಾಚರಣೆ ನಡೆಸಿಕೊಂಡು, ದಾರಿ ಮಾಡಿಕೊಂಡು ಮುನ್ನಡೆಯುತ್ತಿದೆ – ಮಟಪಾಡಿ ಕುಮಾರಸ್ವಾಮಿ