ಉಡುಪಿ: ಅಯೋಧ್ಯೆ ಶ್ರೀ ರಾಮಮಂದಿರ ನಿರ್ಮಾಣ ಟ್ರಸ್ಟ್‌ನ ವಿಶ್ವಸ್ತರೂ ಆಗಿರುವ ಶ್ರೀ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರ ಷಷ್ಟ್ಯಬ್ದ ಪ್ರಯುಕ್ತ ದಿಲ್ಲಿಯಲ್ಲಿ ಅಭಿಮಾನಿಗಳು ಮತ್ತು ಶಿಷ್ಯರು ಸಂಯೋಜಿಸಿರುವ ಮೂರು ದಿನಗಳ ಪ್ರಸನ್ನಾಭಿವಂದನಮ್ ಅಭಿವಂದನ ಕಾರ್ಯಕ್ರಮಕ್ಕೆ ಸೋಮವಾರ ಚಾಲನೆ ದೊರೆತಿದೆ.
ಕೇಂದ್ರ ಸರಕಾರದ ಭಾರತೀಯ ಭಾಷಾ ಅಧ್ಯಯನ ಸಮಿತಿ ಅಧ್ಯಕ್ಷ ಪ್ರೊ| ಚ.ಮೂ. ಕೃಷ್ಣಶಾಸ್ತ್ರೀಗಳು ಉದ್ಘಾಟಿಸಿದರು.
ವಿಶ್ವ ಹಿಂದೂ ಪರಿಷತ್ತಿನ ಅಂತಾರಾಷ್ಟ್ರೀಯ ಕಾರ್ಯಾಧ್ಯಕ್ಷ ಡಾ| ಆಲೋಕ್ ಕುಮಾರ್, ಉದ್ಯಮಿ ರಮೇಶ್ ವಿಗ್, ಗುವಾಹಟಿಯ ಕುಮಾರ ಭಾಸ್ಕರ ವರ್ಮ, ಸಂಸ್ಕೃತ ಮತ್ತು ಪುರಾತನ ಅಧ್ಯಯನ ವಿ.ವಿ. ಕುಲಪತಿ ಡಾ| ಪ್ರಹ್ಲಾದ್ ಜೋಶಿ, ಪೂರ್ಣಪ್ರಜ್ಞ ಸಂಶೋಧನ ಕೇಂದ್ರದ ನಿರ್ದೇಶಕ ಡಾ|ಎ.ವಿ. ನಾಗಸಂಪಿಗೆ, ಲಾಲ್ ಬಹದ್ದೂರ್ ಶಾಸ್ತ್ರೀ ಸಂಸ್ಕೃತ ವಿ.ವಿ. ಕುಲಪತಿ ಡಾ| ಮುರಲಿಮನೋಹರ ಪಾಠಕ್, ಶಶಾಂಕ್ ಭಟ್, ದಿಲ್ಲಿ ಪೇಜಾವರ ಮಠದ ಪ್ರಧಾನ ವ್ಯವಸ್ಥಾಪಕ ಮತ್ತು ಗುರುಕುಲದ ಪ್ರಾಚಾರ್ಯ ವಿ| ವಿಟ್ಠೋಬಾಚಾರ್ಯ, ವಿ| ಆನಂದತೀರ್ಥಾಚಾರ್ಯ ಸದಾಶಿವ ಭಟ್, ಡಿ.ಪಿ. ಅನಂತ್, ದಿಲ್ಲಿ ವಿಹಿಂಪ ಪ್ರಾಂತ ಕಾರ್ಯದರ್ಶಿ ಸುರೇಂದ್ರ ಗುಪ್ತಾ, ಪೇಜಾವರ ಮಠದ ಸಿಇಒ ಸುಬ್ರಹ್ಮಣ್ಯ ಭಟ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು. ಕೇಂದ್ರೀಯ ಸಂಸ್ಕೃತ ವಿ.ವಿ. ಕುಲಪತಿ ಡಾ| ಶ್ರೀನಿವಾಸಾಚಾರ್ಯ ವರಖೇಡಿ ಪ್ರಸ್ತಾವನೆಗೈದು ಸ್ವಾಗತಿಸಿದರು.
ವಿ| ನಾರಾಯಣಾಚಾರ್ಯ ನಿರ್ವಹಿಸಿ, ಅಶುತೋಷ್ ತಿವಾರಿ ವೇದಘೋಷ ಗೈದರು.
ಶ್ರೀಹರಿ ಭಟ್, ನವನೀತ್ ಕಠಾನಾ ಮೊದಲಾದವರ ಸಂಯೋಜನೆಯಲ್ಲಿ ಶ್ರೀಗಳನ್ನು ಶೋಭಾಯಾತ್ರೆಯ ಮೂಲಕ ಬರಮಾಡಿಕೊಳ್ಳಲಾಯಿತು. ಮಠದ ಆವರಣದಲ್ಲಿ ಶ್ರೀಗಳು ಮತ್ತು ಗಣ್ಯರು ಸಸಿ ನೆಟ್ಟರು.
ಇಂದು ಸಂಸ್ಕೃತ ವಿಚಾರಗೋಷ್ಠಿ
ಸಮಾರಂಭದ ಅಂಗವಾಗಿ ಮಂಗಳ ವಾರ ಕೇಂದ್ರೀಯ ಸಂಸ್ಕೃತ ವಿ.ವಿ. ಭಗವದ್ಗೀತಾ ಜೀವನ್ಮಾರ್ಗದರ್ಶಿನಿ ಎಂಬ ವಿಷಯದಲ್ಲಿ ವಿಚಾರಗೋಷ್ಠಿ ನಡೆಯಲಿದೆ.