Advertisement

ನೀರಿನ ಮಿತ ಬಳಕೆಗೆ ಉಡುಪಿ ನಗರಸಭೆ ಸೂಚನೆ

12:31 PM Oct 05, 2017 | Team Udayavani |

ಉಡುಪಿ: ಮಳೆಯ ಪ್ರಮಾಣ ವರ್ಷದಿಂದ ವರ್ಷಕ್ಕೆ ಕಡಿಮೆಯಾಗುತ್ತಿರುವುದರಿಂದ ಜಲಮೂಲಗಳು ಬರಿದಾಗುತ್ತವೆ. ಕುಡಿಯುವ ನೀರಿನ ಬೇಡಿಕೆ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಉಡುಪಿ ನಗರದ 35 ವಾರ್ಡುಗಳಲ್ಲಿ ಸಮಾನ ಒತ್ತಡದಲ್ಲಿ ಏಕಕಾಲದಲ್ಲಿ ನೀರು ಪೂರೈಕೆ ಕಷ್ಟ ಸಾಧ್ಯವಾಗುತ್ತಿರುವುದರಿಂದ 35 ವಾರ್ಡುಗಳನ್ನು 3ರಿಂದ 6 ವಲಯಗಳನ್ನಾಗಿ ವಿಂಗಡಿಸಿಗೊಂಡು ನಿಗದಿತ ಸಮಯದಲ್ಲಿ ನೀರನ್ನು ಸರಬರಾಜು ಮಾಡುವುದು ಅನಿವಾರ್ಯವಾಗಿದೆ. ಸಾರ್ವಜನಿಕರು ಶುದ್ಧೀಕರಿಸಿದ ಕುಡಿಯುವ ನೀರನ್ನು ಅನ್ಯ ಉದ್ದೇಶಕ್ಕೆ ಬಳಸದೆ ಕುಡಿಯಲು ಮಾತ್ರ ಬಳಸಿ ನಗರಸಭೆಯೊಂದಿಗೆ ಸಹಕರಿಸುವಂತೆ ಅಧ್ಯಕ್ಷರು ಮತ್ತು ಪೌರಾಯುಕ್ತರು ಕೋರಿದ್ದಾರೆ.

Advertisement

ಬಜೆಯಲ್ಲಿನ ನೀರು ಶುದ್ಧೀಕರಣ ಘಟಕದಿಂದ ನಗರ ಮತ್ತು ನಾಲ್ಕು ಗ್ರಾ.ಪಂ.ಗಳಿಗೆ ನೀರು ಪೂರೈಸಬೇಕಾಗಿದೆ. ಇವುಗಳಿಗೆ ಕನಿಷ್ಠ 30 ದಶಲಕ್ಷ ಲೀಟರ್‌ ನೀರಿನ ಬೇಡಿಕೆ ಇರುತ್ತದೆ. ಆದರೆ ಗರಿಷ್ಠ 24 ದಶಲಕ್ಷ ಲೀಟರ್‌ ನೀರನ್ನು ಪೂರೈಸಬಹುದಾಗಿದೆ.

2013-14ನೇ ಸಾಲಿನಲ್ಲಿ 16,800 ಸಂಪರ್ಕಗಳಿಗೆ ದಿನಂಪ್ರತಿ ಸರಿ ಸುಮಾರು 6ರಿಂದ 8 ಗಂಟೆಗಳ ಕಾಲ (ಎತ್ತರದ ಪ್ರದೇಶಗಳಿಗೆ) ಮತ್ತು 12ರಿಂದ 16 ಗಂಟೆಗಳ ಕಾಲ ತಗ್ಗು ಪ್ರದೇಶಗಳಲ್ಲಿ ನೀರು ಸರಬರಾಜು ಮಾಡಲು ಸಾಧ್ಯವಾಗುತ್ತಿತ್ತು. ಆದರೆ ಕಳೆದ ನಾಲ್ಕು ವರ್ಷಗಳಲ್ಲಿ 2,500 ಹೊಸ ಸಂಪರ್ಕಗಳು ಸೇರ್ಪಡೆಯಾಗಿವೆ.

ವಾರಾಹಿ ಯೋಜನೆಗೆ ಡಿಪಿಆರ್‌ 
ಮುಂದಿನ ದಿನಗಳಲ್ಲಿ ನೀರಿನ ಬೇಡಿಕೆ ಇನ್ನೂ ಹೆಚ್ಚುವುದರಿಂದ ಮತ್ತು ಇದಕ್ಕೆ ಶಾಶ್ವತ ಪರಿಹಾರಕ್ಕೆ ಸಚಿವ ಪ್ರಮೋದ್‌ ಮಧ್ವರಾಜ್‌ ಅವರ ಪ್ರಯತ್ನದಿಂದ ಉಡುಪಿ ನಗರಕ್ಕೆ ವಾರಾಹಿ ನದಿಯಿಂದ ನೀರನ್ನು ತಂದು ನಗರದಲ್ಲಿ 24 ಗಂಟೆಗಳ ಕಾಲವೂ ನೀರು ಸರಬರಾಜು ಮಾಡಲು 270 ಕೋ.ರೂ. ಮೊತ್ತವನ್ನು ಸರಕಾರ ಮೀಸಲಿರಿಸಿದೆ. ಇದರ ಸಮಗ್ರ ವಿಸ್ತೃತ ಯೋಜನೆಯೂ (ಡಿಪಿಆರ್‌) ಸಿದ್ಧವಾಗಿದ್ದು, ಎಡಿಬಿಯಿಂದ ಮಂಜೂರಾತಿ ಪಡೆದು ಆದಷ್ಟು ಬೇಗ ಕಾರ್ಯಗತಗೊಳಿಸಲು ನಗರಸಭೆ ಕ್ರಮ ವಹಿಸುತ್ತಿದೆ ಎಂದು ನಗರಸಭೆ ಪ್ರಕಟನೆ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next